ಕ್ಯಾಮೆರಾ ಎಂದರೇನು?

– ಸಂದೀಪ ಔದಿ.

ಕ್ಯಾಮೆರಾ Camera

ಕ್ಯಾಮೆರಾ ಅಬ್ಸ್ ಕುರ(camera obscura). ಇದೊಂದು ಲ್ಯಾಟಿನ್ ಪದ. ಇಂದು ನಮ್ಮೆಲ್ಲರ ಬಾಯಲ್ಲಿ ಕ್ಯಾಮೆರಾ ಆಗಿ ಉಳಿದುಕೊಂಡಿದೆ. ಕತ್ತಲೆ ಕೋಣೆಯಿಂದ ಇಂದಿನ ಡಿಎಸ್‍ಎಲ್‍ಆರ್ ಹಾಗೂ ಮೊಬೈಲ್ ಕ್ಯಾಮೆರಾದವರೆಗಿನ ಪಯಣವೇ ಒಂದು ಸೋಜಿಗ. ಮಾನವನ ಬಾವನ ಲೋಕಕ್ಕೆ ಅತಿ ಹತ್ತಿರವಾದ ಆವಿಶ್ಕಾರಗಳಲ್ಲಿ ಕ್ಯಾಮೆರಾ ಕೂಡ ಒಂದು. ನಮ್ಮ ಕಣ್ಣು ಮಾಡುವ ಕೆಲಸದಿಂದ ಸ್ಪೂರ‍್ತಿ ಪಡೆದು ಕ್ಯಾಮೆರಾ ಮಾಡಲಾಗಿದೆಯೆಂಬುದು ಪ್ರತೀತಿ. ಜೋಸೆಪ್ ನಿಸೆಪೋರ್ ನಿಪ್ಸ್ (Joseph Nicéphore Niépce) ಎಂಬ ಪ್ರೆಂಚ್ ಅನ್ವೇಶಕನ ಕೊಡುಗೆಯೇ ಈ ಕ್ಯಾಮೆರಾ. ಆದರೆ ಕ್ಯಾಮೆರಾ ಹೋಲುವ ಸಾದನದ ಬಗ್ಗೆ ಕ್ರಿ.ಶ. 1021 ರಲ್ಲೇ ಇರಾಕಿನ ವಿಜ್ನಾನಿಯೊಬ್ಬ ನಮೂದಿಸಿದ ದಾಕಲೆಗಳಿವೆ.

ನಮ್ಮ ಸುತ್ತಣದ ಒಂದು ಸನ್ನಿವೇಶ, ಜೀವಿ ಇಲ್ಲವೇ ಸ್ತಿರ ವಸ್ತುವು ಹೇಗೆ ನಮ್ಮ ಕಣ್ಣಿಗೆ ಕಾಣುವುದೋ ಹಾಗೆಯೇ ಚಿತ್ರದ ರೂಪದಲ್ಲಿ ಒಂದು ಪರದೆಯ ಮೇಲೆ ಮೂಡಿಸಲು ಸಹಕರಿಸುವ ಎಣಿಯೇ(device) ಕ್ಯಾಮೆರಾ. ಗಾಜು(ಲೆನ್ಸ್), ಪರದೆ(ಪಿಲ್ಮ್) ಹಾಗೂ ಕ್ಯಾಮೆರಾದ ಯಾಂತ್ರಿಕ ಮೈ ಎಲ್ಲಾ ಸೇರಿ ಒಂದು ಚಿತ್ರವನ್ನು ಸೆರೆಹಿಡಿಯಲು ನೆರವಾಗುತ್ತವೆ. ಈ ಮೂರರ ತಿಳುವಳಿಕೆ ಹಾಗೂ ಬಳಸುವಿಕೆಯ ಮೇಲೆ ಚಿತ್ರದ ಮಟ್ಟ ಅವಲಂಬಿಸಿದೆ. ಉಳಿದಂತೆ ಪೋಟೋಗ್ರಾಪರ್ ಕಲಾತ್ಮಕತೆ ಹಾಗೂ ಕೈಚಳಕ ಚಿತ್ರದ ಅಂದ ಚಂದ ಹೆಚ್ಚಿಸುವಲ್ಲಿ ಸಹಕಾರಿಯಾಗಿರುತ್ತೆ ಎಂಬುದು ನನ್ನ ಅನಿಸಿಕೆ.

ಕ್ಯಾಮೆರಾವನ್ನು ಮೂಲವಾಗಿ ಎರಡು ಪ್ರಕಾರಗಳಲ್ಲಿ ವಿಂಗಡಿಸಬಹುದು.

1. ಅನಲಾಗ್ ಕ್ಯಾಮೆರಾ
2. ಡಿಜಿಟಲ್ ಕ್ಯಾಮೆರಾ

ಅನಲಾಗ್ ಕ್ಯಾಮೆರಾ: ಸರಿ ಸುಮಾರು 20-25 ವರುಶಗಳ ಹಿಂದೆ ನಾವು ಪೋಟೋ ಸ್ಟುಡಿಯೋಗಳಿಗೆ ಹೋಗಿದ್ದಾಗ ಈ ಬಗೆಯ ಕ್ಯಾಮೆರಾವನ್ನು ಗಮನಿಸಿದ್ದಿರಬಹುದು. ಇನ್ನು ಎರಡು ದಿನ ಬಿಟ್ಟು ಚಿತ್ರ ಸಿಗುತ್ತೆ ಎಂಬ ಉತ್ತರ ಮಾಮೂಲಿ. ಚಿತ್ರದ ಜೊತೆ ಕೆಲ ಕಪ್ಪು ಬಣ್ಣದ ಪರದೆ(ಪಿಲಂ ನೆಗೇಟಿವ್ಸ್)ಗಳನ್ನು ಕೊಡುತ್ತಿದ್ದರು. ಅದರಲ್ಲಿ ಚಿತ್ರದ ರೂಪ ಅತವಾ ಬೆಳಕು ತಿರುವುಮುರುವು ಆಗಿರುತ್ತಿತ್ತು. ಅನಲಾಗ್ ಯುಗದಲ್ಲಿ ಪರದೆ(ರೋಲ್) ಮೂಲಕ ಚಿತ್ರವನ್ನು ಸೆರೆಹಿಡಿಯಲಾಗುತಿತ್ತು. ಬೆಳಕು, ಗಾಜು, ಕ್ಯಾಮೆರಾ ಪರದೆಯ ವಿಸ್ತಾರ (ಸಾಮಾನ್ಯವಾಗಿ 35ಎಂಎಂ) ಹಾಗೂ ಪೋಟೋಗ್ರಾಪರ್ ಕೈಚಳಕ ಪ್ರಮುಕ ಪಾತ್ರದಾರಿಗಳಾಗಿದ್ದವು. ಐಎಸ್‍ಓ, ಎಕ್ಸ್ಪೋಜರ್‍ಗಳ ಮೇಲೆ ಹತೋಟಿ ತೀರಾ ಕಡಿಮೆ.

ಅನಲಾಗ್ ಕ್ಯಾಮೆರಾ

ಡಿಜಿಟಲ್ ಕ್ಯಾಮೆರಾ: ಇದು ಡಿಜಿಟಲ್ ಜಗತ್ತಿನ ಆವಿಶ್ಕಾರ. ಸರಳವಾಗಿ ಹೇಳುವುದಾದರೆ, ಇಲೆಕ್ಟ್ರಾನಿಕ್ ಸಾದನದ ಮೂಲಕ ಚಿತ್ರಗಳನ್ನು ಸೆರೆಹಿಡಿಯುವುದು. ಇದರಲ್ಲೂ ಅನೇಕ ಬಗೆಗಳಿವೆ ಟಿಎಲ್‍ಆರ್ (TLR), ರೇಂಜ್ ಪೈಂಡರ್ (Range finder), ಪಾಯಿಂಟ್ ಅಂಡ್ ಶೂಟ್, ಡಿಎಸ್‍‍ಎಲ್‍ಆರ್ (DSLR), ಮಿರರ್ ಲೆಸ್ (Mirror less).

ಪೋಟೋಗ್ರಪಿಗೆ ಗೊತ್ತಿರಬೇಕಾದ ಕೆಲವು ಸಂಗತಿಗಳು

ಎಕ್ಸ್ ಪೋಸರ್ (Exposure): ಪೋಟೋಗ್ರಾಪರ್ ಒಂದು ವಸ್ತು ಅತವಾ ನೋಟವು ಹೊರಸೂಸುವ ಬೆಳಕನ್ನು ಚಿತ್ರದ ಮೂಲಕ ಸೆರೆಹಿಡಿಯುತ್ತಾನೆ. ಅತಿಯಾದ ಬೆಳಕು, ಚಿತ್ರವನ್ನು ತೀರಾ ಬೆಳ್ಳಗಾಗಿಸುತ್ತೆ, ಅದೇ ರೀತಿ ಕಡಿಮೆ ಬೆಳಕು ಕಪ್ಪಾಗಿಸುತ್ತೆ. ಕ್ಯಾಮೆರಾ ಸೆನ್ಸರ್ ಇಲ್ಲವೇ ಪರದೆಯ ಮೇಲೆ ಬೆಳಕು ಎಶ್ಟು ಪ್ರಮಾಣದಲ್ಲಿ ಬೀಳಬೇಕು ಎಂಬುದನ್ನು ಎಕ್ಸ್ ಪೋಸರ್ ಆಯ್ಕೆಯ ಮೂಲಕ ತೀರ‍್ಮಾನಿಸಬಹುದು. ಸರಿ ಪ್ರಮಾಣದ ಬೆಳಕಿನ ಸಂಗ್ರಹಕ್ಕೆ ಕೆಳಗೆ ನೀಡಿರುವ 3 ಅಂಶಗಳು ಗಮನದಲ್ಲಿರಬೇಕು.

1. ಕಿಂಡಿ (Aperture ): ಬೆಳಕಿನ ಒಳಹರಿವಿನ ಪ್ರಮಾಣವನ್ನು ನಿಯಂತ್ರಿಸುವ ಕಿಂಡಿ. ಸಾಮಾನ್ಯವಾಗಿ f /2. 8 …. f /22 ಎಂದೂ ನಮೂದಿಸಲಾಗುತ್ತೆ. ಸರಳವಾಗಿ ಹೇಳುವುದಾದರೆ ಕಿಂಡಿಯ ಅಂಕಿ ಕಡಿಮೆಯಿದ್ದರೆ ಅದು ಕಿಂಡಿಯನ್ನು ದೊಡ್ಡದಾಗಿ ತೆರೆದಿಟ್ಟು ಹೆಚ್ಚು ಬೆಳಕು ಒಳಬರುವಂತೆ ಮಾಡುತ್ತದೆ. ಹಾಗೆಯೇ, ಕಿಂಡಿಯ ಅಂಕಿ ಹೆಚ್ಚಿದ್ದರೆ ಅದು ಕಿಂಡಿಯನ್ನು ಚಿಕ್ಕದಾಗಿ ತೆರೆದಿಟ್ಟು ಕಡಿಮೆ ಬೆಳಕನ್ನು ಒಳಬಿಟ್ಟುಕೊಳ್ಳುತ್ತದೆ. ಕೆಳಗಿನ ಚಿತ್ರವನ್ನು ಗಮನಿಸಿ.

2. ಕದ ಬಿರುಸು (Shutter Speed ): ಕ್ಯಾಮೆರಾದ ಗಾಜಿನ (lens) ಮೇಲೆ ಎಶ್ಟು ಹೊತ್ತು ಬೆಳಕನ್ನ ಗ್ರಹಿಸಲು ಅವಕಾಶ ಕಲ್ಪಿಸಲಾಗುತ್ತದೆ ಎಂಬುದನ್ನು ಕದ ಬಿರುಸು ತೀರ‍್ಮಾನಿಸುತ್ತದೆ. ಸಾಮಾನ್ಯವಾಗಿ ಇದನ್ನು 1/4 ಸೆಕೆಂಡ್ …. 1/250, 1/4000 ಸೆಕೆಂಡ್‍ಗಳಲ್ಲಿ ನಮೂದಿಸಲಾಗಿರುತ್ತೆ.

ಕದ ಬಿರುಸಿನ ಅಂಕಿ 1/4000 ಆಗಿದ್ದರೆ ಆಗ ಬೆಳಕು ಕಡಿಮೆ ಹೊತ್ತು ಗಾಜಿನ ಮೇಲೆ ಬೀಳುತ್ತದೆ. ಒಂದು ವೇಳೆ ಕದ ಬಿರುಸಿನ ಅಂಕಿ 1/4 ಆಗಿದ್ದರೆ ಆಗ ಹೆಚ್ಚಿನ ಹೊತ್ತು ಬೆಳಕು ಗಾಜಿನ ಮೇಲೆ ಬೀಳುತ್ತದೆ. ಕೆಳಗಿನ ಚಿತ್ರವನ್ನ ಗಮನಿಸಿ.

ಸಾಮಾನ್ಯವಾಗಿ ಹೊರಾಂಗಣದಲ್ಲಿ ಬೆಳಕಿನ ಪ್ರಮಾಣ ಜಾಸ್ತಿ ಇರುವಾಗ ಕದ ಬಿರುಸು ಜಾಸ್ತಿ ಇರಬೇಕು.

3. ಐಎಸ್‍ಓ(ISO): ಐಎಸ್‍ಓ ಸೆಟ್ಟಿಂಗ್ ಮೂಲಕ ಚಿತ್ರದ ಹೊಳಪನ್ನು (ಬೆಳಕಿನ ಪ್ರಮಾಣ) ನಿಯಂತ್ರಿಸಬಹುದು. ಕ್ಯಾಮೆರಾಗಳಲ್ಲಿ ಐಎಸ್‍ಓ 100 ರಿಂದ ಐಎಸ್‍ಓ 6400 ಎಂದು ಬರೆದಿರುತ್ತೆ. ಕಡಿಮೆ ಐಎಸ್‍ಓ ಅಂಕಿ ಇದ್ದರೆ ಕಡಿಮೆ ಹೊಳಪು. ಐಎಸ್‍ಒ ಅಂಕಿ ಹೆಚ್ಚಿಸಿದಂತೆ ಚಿತ್ರದ ಹೊಳಪೇನೋ ಹೆಚ್ಚಾಗುತ್ತೆ, ಆದರೆ ಚಿತ್ರದ ಗುಣಮಟ್ಟ ಕಡಿಮೆಯಾಗಿಬಿಡುತ್ತದೆ.

ಒಂದು ನೋಟವನ್ನು ಸೆರೆಹಿಡಿಯಲು ಕದ(shutter) ಗುಂಡಿ ಒತ್ತಿದಾಗ –
1. ಎಕ್ಸ್ ಪೋಸರ್ ಸೆಟ್ಟಿಂಗ್ ಅಂಕಿಗಳನ್ನ ಪರಿಗಣಿಸಿ ನೋಟದ ಬೆಳಕನ್ನ ಸೆರೆಹಿಡಿಯಲಾಗುತ್ತದೆ.
2. ಕದವು ನಿಗದಿತ ಸಮಯದವೆರೆಗೆ ಬೆಳಕಿನ ಸಂಗ್ರಹಕ್ಕೆ ತೆರೆದುಕೊಂಡಿರುತ್ತೆ .
3. ಕದ ಮುಚ್ಚಿದ ಕೂಡಲೇ, ಕ್ಯಾಮೆರಾ ಅರಿವುಕವು ಪಿಕ್ಸೆಲ್(pixel)ನಿಂದ ಬಣ್ಣ ಹಾಗೂ ಬೆಳಕಿನ ಪ್ರಮಾಣವನ್ನು ಅರಿತುಕೊಂಡು ನಮಗೆ ಬೇಕಾದ ಚಿತ್ರವನ್ನು ಮೂಡಿಸುತ್ತದೆ.

ಪೋಟೋಗ್ರಪಿಯಲ್ಲಿ ಬಲು ಆಸಕ್ತಿ ಇದ್ದಲ್ಲಿ, ನಿಮ್ಮ ಕ್ಯಾಮೆರಾ ಕೈಪಿಡಿ ಓದಿ ಮತ್ತು ಆಟೋ ಮೋಡ್ ಬದಲು ಬೇರೆ ಆಯ್ಕೆಗಳತ್ತ ಗಮನಹರಿಸಿ. ಕ್ಯಾಮೆರಾ ಕುರಿತ ಹೆಚ್ಚಿನ ವಿವರಗಳನ್ನು ಮುಂದಿನ ಬರಹಗಳಲ್ಲಿ ತಿಳಿಸಲಾಗುವುದು.

(ಚಿತ್ರ ಸೆಲೆ: wikimedia, pixabay)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks