ಟಿಬೆಲೆ – ಬಣ್ಣ ಬಳಿದಿರುವ ಮಣ್ಣಿನ ಮನೆಗಳು

– ಕೆ.ವಿ.ಶಶಿದರ.

ಟಿಬಿಲೆ ಮಣ್ಣಿನ ಮನೆ, mud house

ಪಶ್ಚಿಮ ಆಪ್ರಿಕಾದಲ್ಲಿನ ಪುಟ್ಟ ದೇಶ ಬುರ‍್ಕಿನಾ ಪಾಸೋದ ನೈರುತ್ಯ ಬಾಗದಲ್ಲಿರುವ ಒಂದು ಪುಟ್ಟ ಹಳ್ಳಿಯ ಹೆಸರು ಟಿಬೆಲೆ ಎಂದು. ಈ ಹಳ್ಳಿಯ ವಿಸ್ತೀರ‍್ಣ ಕೇವಲ 1.2 ಹೆಕ್ಟೇರುಗಳು. ಟಿಬೆಲೆ ಹೆಸರುವಾಸಿಯಾಗಿರುವುದು ಅಲ್ಲಿನ ‘ಸುಕಾಲಾ’ ಅತವಾ ಬಣ್ಣಗಳಿಂದ ತುಂಬಿದ, ಕಿಟಕಿಗಳಿಲ್ಲದ ಸಾಂಪ್ರದಾಯಿಕ ಮನೆಗಳಿಗೆ. ಇದರಲ್ಲಿ ಕಸ್ಸೇನಾ ಜನರು ವಾಸಿಸುತ್ತಾರೆ. ಕಸ್ಸೆನಾ ಜನಾಂಗೀಯ ಗುಂಪು ಇಲ್ಲಿನ ಜನಾಂಗಗಳಲ್ಲಿ ಅತ್ಯಂತ ಹಳೆಯದು. ಇವರು 15ನೇ ಶತಮಾನದಲ್ಲೆ ಇಲ್ಲಿ ಬಂದು ನೆಲೆಸಿದರು.

ನೈಸರ‍್ಗಿಕ ಸಂಪನ್ಮೂಲಗಳನ್ನು ಬಳಸಿ ತಮ್ಮ ಶ್ರೀಮಂತ ಸಂಸ್ಕ್ರುತಿಯನ್ನು ವಿಶ್ವಕ್ಕೆ ಪರಿಚಯಿಸುವಲ್ಲಿ ಕಸ್ಸೆನಾ ಜನಾಂಗದವರು ಗೆದ್ದಿದ್ದಾರೆ ಹಾಗೂ ಉತ್ತಮ ಉದಾಹರಣೆಯಾಗಿದ್ದಾರೆ. ತಮ್ಮ ಮನೆಯ ಗೋಡೆಗಳ ಹೊರಬಾಗವನ್ನು ಬಣ್ಣ ಬಣ್ಣದ ಮಣ್ಣು ಮತ್ತು ಸೀಮೆ ಸುಣ್ಣವನ್ನು ಬಳಸಿ ಅಲಂಕರಿಸಿದ್ದಾರೆ.

ಮನೆಗಳನ್ನು ಕಟ್ಟುವ ಕೆಲಸ ಗಂಡಸರಿಗೆ ಮೀಸಲು. ಕಟ್ಟಿದ ಮನೆಯನ್ನು ಅಲಂಕರಿಸುವುದು ಹೆಂಗಸರು. ವಿಬಿನ್ನ ಬಣ್ಣದ ಕಲ್ಲುಗಳನ್ನು ಪುಡಿಮಾಡಿ ಅದರೊಂದಿಗೆ ಬಣ್ಣ ಬಣ್ಣದ ಜೇಡಿಮಣ್ಣು ಮತ್ತು ನೀರನ್ನು ಸೇರಿಸಿ ಹೆಂಗಸರು ತಮಗೆ ಬೇಕಾದ ಬಣ್ಣವನ್ನು ತಯಾರಿಸುತ್ತಾರೆ. ಅದನ್ನೇ ಮನೆಗಳನ್ನು ಅಲಂಕರಿಸಲು ಅವರು ಬಳಸುವುದು.

ಬಣ್ಣಕ್ಕಾಗಿ ನೈಸರ‍್ಗಿಕವಾಗಿ ದೊರೆಯುವ ವಸ್ತುವನ್ನು ಮಾತ್ರ ಉಪಯೋಗಿಸಿದ್ದು ಇಲ್ಲಿನ ವಿಶೇಶ

ಅತ್ಯಂತ ನಿಕರವಾದ ಮತ್ತು ಸೂಕ್ಶ್ಮ ಜಾನಪದ ವಿನ್ಯಾಸಗಳಿಂದ ಮನೆಗಳು ಅಲಂಕ್ರುತಗೊಂಡಿವೆ. ಪ್ರತಿ ಮನೆಯೂ ವಿವರಣಾತ್ಮಕ ರೇಕಾಚಿತ್ರಗಳನ್ನು ಹೊಂದಿದೆ. ಮನೆಗಳನ್ನು ಸಿಂಗಾರ ಮಾಡುವುದು ಕಸ್ಸೆನಾದ ಮತ್ತೊಂದು ಜನಾಂಗ ಗುರ್ ಬಾಶೆ ಮಾತನಾಡುವ ಗುರುನ್ಸಿ ಹೆಂಗಸರ ಕೆಲಸ. ಈ ಸಂಪ್ರದಾಯ ಬಹಳ ಹಳೆಯದಾಗಿದ್ದು 16ನೇ ಶತಮಾನದಿಂದ ರೂಡಿಯಲ್ಲಿದೆ. ಮನೆಗಳ ಅಲಂಕಾರಕ್ಕೆ ಬಳಸಲಾಗುವ ಬಣ್ಣ ಸಾಮಾನ್ಯವಾಗಿ ಕೆಂಪು, ಬಿಳಿ ಮತ್ತು ಕಪ್ಪು. ಈ ಬಣ್ಣಗಳ ಮೂಲ ಕ್ರಮವಾಗಿ ಜೇಡಿಮಣ್ಣು, ಬಿಳಿಜೇಡಿಮಣ್ಣು ಮತ್ತು ಕಲ್ಲಿದ್ದಲು.

ನೋಡುಗರ ಮನದ ಮೇಲೆ ಅಚ್ಚಳಿಯದ ಚಾಪನ್ನು ಮೂಡಿಸುವ ಮನೆಯ ಗೋಡೆಗಳ ಅಲಂಕಾರ ವಿಶಿಶ್ಟವಾದುದು. ಪ್ರತಿಯೊಂದು ಮನೆ ಮತ್ತು ಗೋಡೆಗಳ ಅಲಂಕಾರಕ್ಕೆ ಸ್ತಳೀಯರು ತೀವ್ರ ಕಾಳಜಿಯನ್ನು ವಹಿಸಿ ಕೈಯಿಂದಲೇ ಚಿತ್ರಿಸಿದ್ದಾರೆ. ಗೋಡೆಯನ್ನು ಅಲಂಕರಿಸುವ ಪ್ರಕ್ರಿಯೆ ಹಲವಾರು ದಿನಗಳ, ಕೆಲವೊಮ್ಮೆ ತಿಂಗಳುಗಳ ಕೆಲಸ. ಗೋಡೆಗಳನ್ನು ಆವರಿಸಿರುವ ಜಿಯೋಮೆಟ್ರಿಕಲ್ ಆಕಾರಗಳು ಪ್ರಾರಂಬದಲ್ಲಿ ಬವ್ಯವಾದ ಹಸಿ ಚಿತ್ರಗಳಾಗಿ ಕಂಡುಬರುತ್ತವೆ. ಇದಕ್ಕೆ ಮೂಲ ಕಾರಣ ಬಳಸಿರುವ ನೈಸರ‍್ಗಿಕ ವಸ್ತುಗಳು. ಚಿತ್ರ ರಚನೆಯ ನಂತರ ಅದನ್ನು ಹೊಳಪಿಸುವ ಕಾರ‍್ಯ ನಡೆಯುತ್ತದೆ. ಅಕೇಶಿಯಾ ಎಲೆಗಳಿಂದ ತಯಾರಿಸಿದ ನೈಸರ‍್ಗಿಕ ಮೆರುಗನ್ನು ಇದರ ಮೇಲೆ ಸಿಂಪಡಿಸುತ್ತಾರೆ. ಚಿತ್ರಗಳು ಒಣಗಲು ಸಾಕಶ್ಟು ಸಮಯ ಬೇಕು.

ಟಿಬಿಲೆ ಮಣ್ಣಿನ ಮನೆ, mud house

ಗೋಡೆಗಳನ್ನು ಅಲಂಕರಿಸಲು ಪೂರ‍್ವಜರು ಬಳಸುತ್ತಿದ್ದ ಚಿಹ್ನೆಗಳು ಮತ್ತು ಪ್ರಾಣಿಗಳ ಚಿತ್ರಗಳನ್ನು ಹೆಚ್ಚಾಗಿ ಉಪಯೋಗಿಸಿರುವುದನ್ನು ಇಲ್ಲಿ ಕಾಣಬಹುದು. ಪ್ರತಿ ಚಿತ್ರವೂ ಶತಮಾನಗಳಶ್ಟು ಹಳೆಯದಾದ ರಹಸ್ಯಗಳನ್ನು ಹೊಂದಿರುವಂತೆ ಕಾಣುವುದರಿಂದ ಇಡೀ ಹಳ್ಳಿ ಪಾರಮಾರ‍್ತಿಕ ಸ್ತಳದಂತೆ ಬಾಸವಾಗುತ್ತದೆ.

ಈ ಅಲಂಕಾರಿಕ ಹಳ್ಳಿಯ ಮತ್ತೊಂದು ಪ್ರಮುಕ ಆಕರ‍್ಶಣೆಯೆಂದರೆ ಇಲ್ಲಿ ಬಿಡಿಸಲಾಗಿರುವ ಎಲ್ಲಾ ಬಣ್ಣದ ಚಿತ್ರಗಳೂ ಅನನ್ಯವಾಗಿವೆ ಹಾಗೂ ಎಲ್ಲಿಯೂ ಪುನರಾವರ‍್ತನೆಯಾಗಿಲ್ಲ ಎಂಬುದು. ಇದು ನಿಜವಾಗಿಯೂ ಪ್ರಶಂಸನೀಯ. ಆಪ್ರಿಕನ್ ಜನರ ಸಂಪ್ರದಾಯ ಮತ್ತು ವಿಸ್ತಾರವಾದ ಸಂಸ್ಕ್ರುತಿಗೆ ಹಿಡಿದ ಕನ್ನಡಿ.

ಇಲ್ಲಿರುವ ಮನೆಗಳಿಗೆ ಕಿಟಕಿಗಳಿಲ್ಲ!

ಟಿಬೆಲೆಯ ಮನೆಗಳನ್ನು ಎರಡು ಪ್ರಮುಕ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಟ್ಟಲಾಗಿದೆ. ಹವಾಮಾನದ ವೈಪರಿತ್ಯವನ್ನು ತಡೆಯುವ ಶಕ್ತಿ ಹಾಗೂ ಸಂಬಾವ್ಯ ಶತ್ರುಗಳಿಂದ ರಕ್ಶಣೆ. ಇದಕ್ಕೆ ಪೂರಕವಾಗಿ ಈ ಮನೆಗಳಿಗೆ ಚಿಕ್ಕ ಚಿಕ್ಕ ಬಾಗಿಲುಗಳನ್ನು ಮಾತ್ರ ಇಡಲಾಗಿದೆ. ಕಿಟಕಿಗಳಿಗೆ ಇಲ್ಲಿ ಅವಕಾಶವಿಲ್ಲ.

ವಿಶ್ವವೇ ಕಂಡಂತೆ ಆಪ್ರಿಕನ್ ವಾಸ್ತುಶೈಲಿ ನಿಸರ‍್ಗಕ್ಕೆ ಬಲು ಹತ್ತಿರ. ಮನೆಗಳನ್ನು ಕಟ್ಟುವಾಗ ನಿವೇಶನದಲ್ಲಿ ದೊರೆಯುವ ಹೇರಳವಾದ ಸಂಪನ್ಮೂಲಗಳನ್ನು ಅನಂತವಾಗಿ ಬಳಸಿಕೊಳ್ಳಲಾಗಿದೆ. ಮನೆ ಕಟ್ಟಿದ ಬಳಿಕ ಅದರಲ್ಲಿ ವಾಸಿಸಲು ಬಯಸುವ ವ್ಯಕ್ತಿ ಒಳ ಹೋಗದೆ ಎರಡು ದಿನಗಳ ಕಾಲ ಕಾಯುವುದು ಸಂಪ್ರದಾಯ. ಇದರ ಹಿಂದೆ ಅವರದೊಂದು ನಂಬಿಕೆ ಇದೆ. ಈ ಎರಡು ದಿನಗಳಲ್ಲಿ ಹಲ್ಲಿ ಮನೆಯನ್ನು ಪ್ರವೇಶಿಸಬೇಕು. ಹಾಗದಲ್ಲಿ ಮಾತ್ರ ಇದು ವಾಸ ಯೋಗ್ಯ ಮನೆ. ಬಳಿಕವೇ ಮನೆಯ ಮಾಲೀಕನಿಗೆ ಅದರಲ್ಲಿ ಪ್ರವೇಶ. ಹಲ್ಲಿ ಪ್ರವೇಶ ಮಾಡದೇ ಹೋದಲ್ಲಿ ಮುಲಾಜಿಲ್ಲದೆ ಮನೆಯನ್ನು ಕೆಡವಿ ಮತ್ತೊಂದನ್ನು ಕಟ್ಟುವುದೊಂದೇ ಮಾಲೀಕನಿಗೆ ಉಳಿದ ದಾರಿ.

ಈ ಪುಟ್ಟ ಹಳ್ಳಿಗೆ ತನ್ನ ಮನೆಯ ರಚನೆಗಳನ್ನು ಉಳಿಸಿಕೊಳ್ಳುವುದು ಒಂದು ಮಹತ್ತರ ಸವಾಲು. ಇದಕ್ಕೆ ಕಾರಣ ಮನೆಗಳನ್ನು ಕಾಪಾಡಲು ಬೇಕಿರುವ ಹಣವನ್ನು ಹೊಂದಿಸುವುದು. ಅದಕ್ಕಾಗಿ ಅವರು ಕಂಡುಕೊಂಡ ದಾರಿ ಎಂದರೆ ಈ ಹಳ್ಳಿಯನ್ನು ಸಾಂಸ್ಕ್ರುತಿಕ ಪ್ರವಾಸೋದ್ಯಮ ತಾಣವನ್ನಾಗಿ ಅಬಿವ್ರುದ್ದಿ ಪಡಿಸುವುದು. ಈಗ ಎಲ್ಲರ ಚಿತ್ತ ಅದರತ್ತ.

(ಮಾಹಿತಿ ಸೆಲೆ: thevintagenews.comunusualplaces.org, amusingplanet.com )
(ಚಿತ್ರ ಸೆಲೆ: wiki/burkina faso , wiki/tiebele)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: