ಮಳೆಗಾಲದ ಒಂದು ನೆನಪು
– ವೆಂಕಟೇಶ ಚಾಗಿ.
ಮೂರು ನಾಲ್ಕು ದಿನಗಳ ಕಾಲ ನಿರಂತರವಾಗಿ ಮಳೆ ಬೀಳುವ ಕಾಲ ಆಗ. ಈಗ ಅಂತಹ ಮಳೆಯನ್ನು ಇತ್ತೀಚೆಗೆ ನಮ್ಮ ಊರಿನಲ್ಲಿ ಕಂಡಿಲ್ಲ. ಆ ಮಳೆಯಲ್ಲೂ ನಾನು, ನನ್ನ ಸ್ನೇಹಿತರೆಲ್ಲ ಸುಮಾರು ಎರಡು ಕಿಲೋಮೀಟರ್ ಗಳಶ್ಟು ದೂರದಲ್ಲಿರುವ ಹಿರಿಯ ಪ್ರಾತಮಿಕ ಶಾಲೆಗೆ ಹೋಗುತ್ತಿದ್ದೆವು. ಈಗಿನಂತೆ ಕೊಡೆ, ಸ್ಕೂಲ್ ಬ್ಯಾಗ್ ನಮಗಿದ್ದಿಲ್ಲ. ಪುಸ್ತಕಗಳನ್ನು ಹೊಲಕ್ಕೆ ಬಿತ್ತಲು ತಂದ ಬೀಜದ ಚೀಲಗಳಲ್ಲಿ ತುಂಬಿಕೊಂಡು, ಎಂತಹ ಮಳೆ ಬಂದರೂ ಪುಸ್ತಕಗಳು ನೆನೆಯದಂತೆ ಜಾಗರೂಕತೆಯಿಂದ ತೆಗೆದುಕೊಂಡು ಹೋಗುತ್ತಿದ್ದೆವು. ಜೊತೆಗೆ ಗೋಣಿ ಚೀಲದ ರೀತಿಯ ಪ್ಲಾಸ್ಟಿಕ್ ಚೀಲವೊಂದನ್ನು ಜೊತೆಯಲ್ಲಿ ಒಯ್ಯುವುದು ಮಳೆಗಾಲದಲ್ಲಿ ಸಾಮಾನ್ಯವಾಗಿತ್ತು. ಶಾಲೆಗೆ ಹೋಗುವ ಅತವಾ ಶಾಲೆಯಿಂದ ಬರುವ ಸಮಯದಲ್ಲಿ ಮಳೆ ಬಂದರೆ ನಮಗೆ ತುಂಬಾ ಕುಶಿ. ಹೊಲಗದ್ದೆಗಳ ಬದುಗಳಲ್ಲಿನ ಕಾಲುದಾರಿಯಲ್ಲಿ, ಸಣ್ಣ ಕಾಡಿನ ನಡುವೆ, ನದಿಯ ದಂಡೆಯ ಮೇಲೆ ಸಾಗುತ್ತಾ ಮನೆ ಸೇರುತ್ತಿದ್ದ ನಮಗೆ ಕುಶಿಯೋ ಕುಶಿ.
ನಾವೆಂದೂ “ರೇನ್ ರೇನ್ ಗೋ ಅವೇ” ಎಂದು ಹೇಳಿದವರಲ್ಲ. ಮಳೆ ಬರುವ ಮುನ್ಸೂಚನೆ ಕಂಡರೆ ಸಾಕು ಎಲ್ಲ ಮಕ್ಕಳು ಸೇರಿ ಹಾಡುವ ಒಂದೇ ಹಾಡು
“ಬಾರೋ ಬಾರೋ ಮಳೆರಾಯ
ಹುಯ್ಯೋ ಹುಯ್ಯೋ ಮಳೆರಾಯಗುಡು ಗುಡು ಮುತ್ಯ ಬಂದಾನ
ರಪ ರಪ ಮಳೆಯನು ತಂದಾನ”
ಹೀಗೆ ಹಲವಾರು ಮಳೆಯ ಹಾಡುಗಳನ್ನು ಸಲೀಸಾಗಿ ಎಲ್ಲರೂ ಹಾಡುತ್ತಾ ಸಂಬ್ರಮಿಸುತ್ತಿದ್ದೆವು. ಮಳೆ ನೀರು ಹರಿಯುವ ತೊರೆಗಳಲ್ಲಿ ಮೊದಲೇ ತಯಾರಿಸಿಕೊಂಡು ಬಂದಿದ್ದ ಕಾಗದದ ದೋಣಿಗಳನ್ನು ಬಿಡುವುದು ಒಂದು ಆಟವೇ ಸರಿ. ಅಲ್ಲಿ ನಿಲ್ಲುತ್ತಿದ್ದ ನೀರಿನ ಗುಂಡಿಗಳಲ್ಲಿ ಜಿಗಿಯವುದೆಂದರೆ ಕುಶಿಯೋ ಕುಶಿ. ದೊಡ್ಡ ಗುಂಡಿಗಳಿದ್ದರೆ 4-5 ಕಲ್ಲುಗಳನ್ನು ಎಸೆದು ಬರುವವರೆಗೂ ಸಮಾದಾನವಾಗದು. ಅಲ್ಲಲ್ಲಿ ಒಟಗುಡುವ ಕಪ್ಪೆಗಳಿಗೆ ನನ್ನದೊಂದು ದೊಡ್ಡ ಕಾಟ. ಮಳೆಯಲ್ಲೂ ಕೂಡಾ ಇಂತಹ ಮೋಜಿನ ಆಟಗಳನ್ನು ಆಡದೇ ಇರುತ್ತಿರಲಿಲ್ಲ. ಅಶ್ಟೊಂದು ಸಂಬ್ರಮ ಮಳೆ ಅಂದರೆ. ಮಳೆಯಲ್ಲಿ ನೆನೆದರೂ ನೆಗಡಿ ಜ್ವರ ಬಂದ ಸಂದರ‍್ಬಗಳೇ ಕಡಿಮೆ.
ಒಮ್ಮೆಯಂತೂ ಶಾಲೆ ಬಿಟ್ಟ ಗಳಿಗೆಯಿಂದ ಪ್ರಾರಂಬವಾದ ಮಳೆ, ನಾವು ಮನೆ ತಲುಪುವವರೆಗೂ ಹಾಗೆಯೇ ಸುರಿಯುತ್ತಿತ್ತು. ಅದೇ ಮಳೆಯಲ್ಲಿ ನಾನು ನೆನೆದುಕೊಂಡು ಬಂದು ಮನೆ ಸೇರಿದ್ದು ಈಗಲೂ ಮರೆಯಲು ಸಾದ್ಯವಿಲ್ಲ. ಮಳೆಯಲ್ಲಿಯೇ ಹೊಲ ಗದ್ದೆಯ ಕೆಲಸಗಳನ್ನು ಮಾಡುತ್ತಿದ್ದ ಜನರನ್ನು ಕಂಡುತುಂಬಾ ಕುಶಿಯಾಗುತ್ತಿತ್ತು. ಮನೆಗೆ ಬಂದ ನಂತರ ಅಮ್ಮ ಮಾಡಿದ ಬಿಸಿ ಬಿಸಿ ಚಹಾ ಕುಡಿದು ಮಳೆಯ ತಂಪಿನಲಿ ಬೆಚ್ಚಗೆ ಓದುತ್ತಾ ಕುಳಿತರೆ ತಂದೆ ತಾಯಂದಿರಿಗೆ ಅದೆಶ್ಟು ಆನಂದ. ಮಳೆಯ ಅಂದಿನ ನೆನಪುಗಳನ್ನು ನೆನಪಿಸಿಕೊಂಡರೆ ಮೈ ರೋಮಾಂಚನಗೊಳ್ಳುತ್ತದೆ.
ಮದುರ ನೆನಪುಗಳನ್ನು ಹೊತ್ತು ತರುವ ಹಾಗೂ ನೀಡುವ ಮಳೆಯೇ ನಿನಗಿದೋ ನನ್ನ ಪ್ರಣಾಮ 🙂
( ಚಿತ್ರ ಸೆಲೆ: ndtv.com )
ಇತ್ತೀಚಿನ ಅನಿಸಿಕೆಗಳು