ಜೋಳದ ಕಡುಬಿನ ಜೊತೆ ಹಸಿಮೆಣಸಿನಕಾಯಿ ಮತ್ತು ಪುಂಡಿ ಚಟ್ನಿ

– ಸವಿತಾ.

ಜೋಳದ ಕಡುಬು Jolada Kadubu

ಜೋಳದ ಕಡುಬನ್ನು ಮಾಡುವ ಬಗೆ

ಬೇಕಾಗುವ ಪದಾರ‍್ತಗಳು

ಜೋಳದ ಹಿಟ್ಟು ಒಂದು ಬಟ್ಟಲು
ಅಂದಾಜು ಅರ‍್ದ ಬಟ್ಟಲು ನೀರು
ಸ್ವಲ್ಪ ಉಪ್ಪು

ಮಾಡುವ ಬಗೆ

ನೀರು ಕುದಿಸಿ ಅದಕ್ಕೆ ಹಿಡಿಯುವಶ್ಟು ಹಿಟ್ಟು ಸೇರಿಸಿ ತಿರುಗಿಸಿ ಮುದ್ದೆಯ ಹಾಗೆ ಮಾಡಿಕೊಳ್ಳಿ.
ಸ್ವಲ್ಪ ಹೊತ್ತು ಆರಲು ಬಿಟ್ಟು, ಸ್ವಲ್ಪ ಕೈಗೆ ಎಣ್ಣೆ ಹಚ್ಚಿ, ಪೇಡಾ ಅಳತೆಗೆ ಉಂಡೆ ಮಾಡಿ ಚಪ್ಪಟೆ ಮಾಡಿ ಇಟ್ಟುಕೊಳ್ಳಿ.

ಒಂದು ಪಾತ್ರೆಗೆ ಎಣ್ಣೆ ಹಚ್ಚಿ ಹಿಟ್ಟಿನ ಕಡುಬನ್ನು ಇಟ್ಟು ಕುಕ್ಕರಿನಲ್ಲಿ ಬೇಯಿಸಿ ತೆಗೆಯಿರಿ (ಬೇಯಿಸಲು ಇಡ್ಲಿ ಪಾತ್ರೆಯನ್ನು ಬಳಸಬಹುದು).

ಒಂದು ಅಗಲವಾದ ಪಾತ್ರೆಯಲ್ಲಿ ನೀರನ್ನು ಕುದಿಸಿ, ಸ್ಟೀಲ್ ಜರಡಿಗೆ ಸ್ವಲ್ಪ ಎಣ್ಣೆ ಹಚ್ಚಿ, ಬೇಯಿಸಿದ ಹಿಟ್ಟಿನ ಉಂಡೆ ಇಟ್ಟುಕೊಂಡು ಮೇಲೆ ಒಂದು ಮುಚ್ಚಳ ಮುಚ್ಚಿ 3-4 ನಿಮಿಶ ಬೇಯಿಸಿ ತೆಗೆಯಿರಿ. ಆಗ ಜೋಳದ ಕಡುಬು ತಯಾರಾಗುತ್ತದೆ.

ಹಸಿಮೆಣಸಿನಕಾಯಿ ಚಟ್ನಿಯನ್ನು ಮಾಡುವ ಬಗೆ

ಬೇಕಾಗುವ ಪದಾರ‍್ತಗಳು

15 — ಹಸಿ ಮೆಣಸಿನಕಾಯಿ
1 ಚಮಚ — ಎಣ್ಣೆ
4 — ಬೆಳ್ಳುಳ್ಳಿ ಎಸಳು
1/2 ಚಮಚ — ಜೀರಿಗೆ
5-6 — ಕರಿಬೇವು
ರುಚಿಗೆ ತಕ್ಕಶ್ಟು ಉಪ್ಪು
2 ಚಮಚ — ಹುಣಸೆ ರಸ
2 ಚಮಚ — ಬೆಲ್ಲ

ಮಾಡುವ ಬಗೆ

ಹಸಿ ಮೆಣಸಿನಕಾಯಿಗೆ ಕಾಲು ಬಟ್ಟಲು ನೀರು ಹಾಕಿ ಕುದಿಸಿ ಇಳಿಸಿ. ಬಳಿಕ ಉರುಟು ಉರುಟಾಗಿ ಕಲ್ಲಿನಲ್ಲಿ ಅರೆದು ಇಟ್ಟುಕೊಳ್ಳಿ. ಎಣ್ಣೆ ಬಿಸಿಮಾಡಿ, ಸಾಸಿವೆ, ಜೀರಿಗೆ, ಕರಿಬೇವು, ಕತ್ತರಿಸಿದ ಬೆಳ್ಳುಳ್ಳಿ ಎಸಳು ಹಾಕಿ. ಅರೆದ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿದು ಕೆಳಗಿಳಿಸಿ. ಉಪ್ಪು, ಹುಣಸೆ ರಸ, ಬೆಲ್ಲ ಸೇರಿಸಿದರೆ ಇದು ಜೋಳದ ಕಡುಬಿನ ಜೊತೆ ಸವಿಯಲು ಸಿದ್ದ.

ಪುಂಡಿ ಚಟ್ನಿಯನ್ನು ಮಾಡುವ ಬಗೆ

ಬೇಕಾಗುವ ಪದಾರ‍್ತಗಳು

1 ಬಟ್ಟಲು — ಪುಂಡಿ ಸೊಪ್ಪು
4 — ಬೆಳ್ಳುಳ್ಳಿ ಏಸಳು
1/2 ಚಮಚ — ಜೀರಿಗೆ
1/2 ಚಮಚ — ಸಾಸಿವೆ
2-3 ಹಸಿ ಮೆಣಸಿನಕಾಯಿ
ಸ್ವಲ್ಪ ಉಪ್ಪು, ಅರಿಶಿನ
1 ಚಮಚ — ಎಣ್ಣೆ

ಮಾಡುವ ಬಗೆ

ಸ್ವಲ್ಪ ಎಣ್ಣೆ ಹಾಕಿ, ಪುಂಡಿ ಸೊಪ್ಪು, ಹಸಿ ಮೆಣಸಿನಕಾಯಿ ಹುರಿದು ತೆಗೆದಿಟ್ಟು ಕೊಳ್ಳಿ. ಸ್ವಲ್ಪ ಎಣ್ಣೆ ಬಿಸಿಮಾಡಿ. ಸಾಸಿವೆ, ಜೀರಿಗೆ, ಕತ್ತರಿಸಿದ ಬೆಳ್ಳುಳ್ಳಿ ಹಾಕಿ ಒಗ್ಗರಣೆ ಕೊಡಿ. ಪುಂಡಿ ಸೊಪ್ಪು, ಹಸಿ ಮೆಣಸಿನಕಾಯಿ ಸ್ವಲ್ಪ ಮಿಕ್ಸರ್ ನಲ್ಲಿ ರುಬ್ಬಿ ಒಗ್ಗರಣೆಗೆ ಸೇರಿಸಿಕೊಳ್ಳಿ. ಆಮೇಲೆ ಉಪ್ಪು, ಅರಿಶಿನ ಸೇರಿಸಿ ಕಲಸಿ. ಈಗ ಪುಂಡಿ ಸೊಪ್ಪಿನ ಚಟ್ನಿ ಜೋಳದ ಕಡುಬಿನ ಜೊತೆ ಸವಿಯಲು ಸಿದ್ದ.

(ಚಿತ್ರ ಸೆಲೆ:  ಸವಿತಾ.)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: