ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು
– ವೆಂಕಟೇಶ ಚಾಗಿ.
ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ, ಕಶ್ಟವನ್ನೂ ಬಯಸುವುದಿಲ್ಲ. ಸುಕದೊಂದಿಗೆ ಕಶ್ಟವೂ ಅದನ್ನು ಹಿಂಬಾಲಿಸಿಕೊಂಡು ಬರುತ್ತದೆ. ಸುಕವನ್ನಶ್ಟೇ ಸ್ವೀಕರಿಸಿ ಕಶ್ಟವನ್ನು ದೂರ ತಳ್ಳಲು ಸಾದ್ಯವೇ ಇಲ್ಲ. ನೋವು-ನಲಿವು ಎರಡನ್ನೂ ಸಮನಾಗಿ ಕಂಡು, ಬದುಕಿ ತೋರಿಸುವುದು ನಮ್ಮ ಕೈಯಲ್ಲಿದೆ.
ಬದುಕನ್ನು ಸದಾ ಹಸಿರಾಗಿರಿಸಲು ಹತ್ತು ಸೂತ್ರಗಳು
- ಬದುಕಿನಲ್ಲಿ ಕಶ್ಟ-ಸುಕಗಳು ಸಹಜ ಎಂಬ ಸತ್ಯ ಮೊದಲು ಅರಿತಿರಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಕಶ್ಟಗಳು ಬಂದಾಗ ಕುಗ್ಗದೆ, ಸುಕ ಬಂದಾಗ ಹಿಗ್ಗದೆ ಬದುಕುವುದನ್ನ ಕಲಿಯಬೇಕು.
- ಬದುಕಿನಲ್ಲಿ ನಾಳಿನ ಹೊಸತನಕ್ಕೆ ಇಂದು ಶ್ರಮ ಪಡಬೇಕಾಗಿರುವುದು ಅನಿವಾರ‍್ಯ. ಶ್ರಮದಲ್ಲಿಯೂ ಸಂತಸದ ಅನುಬವ ಕಾಣುವಂತಹ ಮನೋಬಾವ ಬೆಳೆಸಿಕೊಳ್ಳಬೇಕು.
- ಬದುಕನ್ನು ಹಸಿರಾಗಿಸಿಕೊಂಡವರ ಜೀವನ ನಮಗೆ ನಿದರ‍್ಶನವಾಗಲಿ. ಬದುಕಿನ ಅರ‍್ತವನ್ನು ಕಂಡುಕೊಂಡವರ ನುಡಿಗಳು ನಮ್ಮ ಬದುಕಿಗೆ ದಾರಿದೀಪವಾಗಲಿ. ಅದರೊಂದಿಗೆ ಅವರು ಅನುಬವಿಸಿದ ಕಶ್ಟಗಳೂ ನಮ್ಮ ಗಮನಕ್ಕೆ ಬರಲಿ.
- ಬದುಕಿನಲ್ಲಿ ಬರುವುದೆಲ್ಲವನ್ನೂ ಸಂತೋಶದಿಂದ ಸ್ವೀಕರಿಸಿ, ಪಾಲಿಗೆ ಬಂದದ್ದು ಪಂಚಾಮ್ರುತ ಎಂದುಕೊಳ್ಳಬೇಕು. ಹರಿಯುವ ನದಿಗೆ ಮೈದಾನವೂ ಎದುರಾಗಬಹುದು, ಬೆಟ್ಟ ಗುಡ್ಡಗಳೂ ಎದುರಾಗಬಹುದು. ಆದರೆ ನದಿ ಎಂದಿಗೂ ಹಿಂದಕ್ಕೆ ಹರಿಯುವುದಿಲ್ಲ. ಮುನ್ನಡೆಯುವುದೊಂದೇ ಅದರ ಗುರಿ. ಇದೇ ಗುರಿ ನಮ್ಮ ಬದುಕಿಗಿರಬೇಕು.
- ಬದುಕಿನಲ್ಲಿ ಕೆಟ್ಟದ್ದನ್ನು ಆದಶ್ಟು ದೂರವಿಡಬೇಕು. ಕೆಟ್ಟ ಸ್ನೇಹ, ಕೆಟ್ಟ ಚಟ, ಕೆಟ್ಟ ವಿಚಾರ… ಹೀಗೆ ಕೆಟ್ಟ ವಿಶಯಗಳಿಂದ ದೂರವಿದ್ದಾಗ ಬದುಕು ಹಸನಾಗಿರುತ್ತದೆ.
- ಸದಾ ಒಳಿತನ್ನೇ ಬಯಸುವ ಮನಸ್ಸು ಬದುಕಿಗಿರಬೇಕು. ಒಳಿತನ್ನೇ ಹರಡಿಸಿ, ಒಳಿತನ್ನೇ ಚಿಂತಿಸಿ. ಒಳಿತನ್ನು ಗೌರವಿಸಿ, ಒಳಿತಿಗಾಗಿ ಶ್ರಮಿಸಿ. ಒಳಿತಿನ ಸುಗಂದವನ್ನು ಎಲ್ಲೆಡೆಯೂ ಪಸರಿಸಿ.
- ಬದುಕಿನಲ್ಲಿ ಹಿಂದೆ ನಡೆದ ತಪ್ಪುಗಳ ಬಗ್ಗೆ ಎಚ್ಚರವಿರಲಿ. ಮರಳಿ ಅದೇ ತಪ್ಪುಗಳನ್ನು ಮಾಡಿ ಪಶ್ಚಾತ್ತಾಪ ಪಡದಿರಿ. ಬೇರೆಯವರಿಗೂ ಅವರ ತಪ್ಪುಗಳನ್ನು ಅವರ ಅರಿವಿಗೆ ತನ್ನಿ. ಇದರಿಂದ ಮುಂದಿನ ದಿನಗಳಲ್ಲಿ ಬದುಕಿನಲ್ಲಿ ಎದುರಾಗಬಹುದಾದ ಹಲವಾರು ತಪ್ಪುಗಳನ್ನು ತಡೆಯಬಹುದು.
- ಬದುಕಿನ ಕುಶಿಗಳನ್ನು ಗುರುತಿಸಿಟ್ಟುಕೊಳ್ಳಿ. ಸಮಯ ಸಿಕ್ಕಾಗ ಮನನ ಮಾಡಿಕೊಳ್ಳಿ. ಇವು ಮುಂದಿನ ಬದುಕಿಗೆ ಚೈತನ್ಯ ನೀಡಬಹುದು, ಹಾಗೆಯೇ ಇವು ದಾರಿದೀಪಗಳು ಕೂಡ.
- ಇತರರ ಕಶ್ಟದಲ್ಲಿ ನೆರವಾಗಿ. ಸಹಾಯ-ಸಹಕಾರದ ಮನೋಬಾವ ತುಂಬಾ ಒಳ್ಳೆಯದು. ಇದು ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ. ಅಲ್ಲದೆ ಸಂಬಂದಗಳನ್ನು ಗಟ್ಟಿಗೊಳಿಸುತ್ತದೆ. ಮುಂದೊಂದು ದಿನ ಅದೇ ಸಲಹೆ-ಸೂಚನೆ, ಸಹಕಾರ ನಿಮಗೂ ಬೇಕಾಗಬಹುದು.
- ಬದುಕಿಗೆ ಕಾಲಕಾಲಕ್ಕೆ ಏನೇನು ಕೊಡಬೇಕೋ ಅದನ್ನು ಕೊಟ್ಟುಬಿಡಿ. ಬಾಲ್ಯ, ಯೌವನ, ಮುಪ್ಪು ಹೀಗೆ ಆಯಾ ಹಂತಗಳಲ್ಲಿ ಸಿಗಬೇಕಾದ್ದನ್ನು ತಪ್ಪಿಸದಿರಿ. ಮುಂದೊಂದು ದಿನ ಅದೇ ಬದುಕಲ್ಲಿ ಕೊರಗಾಗಬಾರದು, ಅಲ್ಲವೇ?
ಒಮ್ಮೆ ಕಳೆದುಹೋದ ಬದುಕು ಮತ್ತೆ ತರುವಂತಹದಲ್ಲ; ಮತ್ತೆ ಬರುವಂತಹದೂ ಅಲ್ಲ. ಕಳೆದುಹೋದ ಬದುಕಿಗೆ ಹಿಂದಿರುಗಲೂ ಸಾದ್ಯವಿಲ್ಲ. ಅದನ್ನು ಇರುವಶ್ಟು ದಿನ ಅನುಬವಿಸಬೇಕಶ್ಟೆ. ಅದು ಹೇಗೆ ಎಂಬುದು ನಮ್ಮ ಕೈಯಲ್ಲಿದೆ. ಬದುಕಿ, ಬದುಕಲು ಬಿಡಿ, ಬದುಕನ್ನು ಹಸಿರಾಗಿಸಿ.
(ಚಿತ್ರ ಸೆಲೆ: wikimedia.org)
ಮತ್ತೆ ಮತ್ತೆ ಓದಿದಂತೆಲ್ಲಾ ಮನಸ್ಸಿಗೆ ಹೊಸ ಬಗೆಯ ಅರಿವನ್ನು ಮೂಡಿಸುವಂತಿದೆ ಈ ಬರಹ.