ಮಕ್ಕಳ ಕತೆ: ಗುರುಗಳ ಮಹಿಮೆ

– ವೆಂಕಟೇಶ ಚಾಗಿ.

teacher ಗುರುಗಳು

ಗಣಗಾಪುರ ಎಂಬ ಊರಿನಲ್ಲಿ ಬಂಗಾರಪ್ಪ ಎಂಬ ವ್ಯಾಪಾರಿ ಇದ್ದನು. ವ್ಯಾಪಾರ ಹಾಗೂ ಊರಿನ ಜನರಿಗೆ ಸಾಲ ನೀಡುವುದು ಅವನ ನಿತ್ಯ ಕಾಯಕವಾಗಿತ್ತು. ಜನರಿಗೆ ತನ್ನ ಮಾತುಗಳಿಂದ ಮರಳು ಮಾಡಿ ಮೋಸದಿಂದ ವ್ಯಾಪಾರ ಮಾಡುವುದು ಹಾಗೂ ಹೆಚ್ಚಿನ ಬಡ್ಡಿಗೆ ಸಾಲವನ್ನು ನೀಡುವುದು ಅವನ ಕಸುಬಾಗಿತ್ತು. ಬಡ್ಡಿಗೆ ಬಡ್ಡಿ ಸೇರಿಸಿ ಸಾಲವನ್ನು ಮರಳಿ ಪಡೆಯುತ್ತಿದ್ದ ಕೆಲಸಕ್ಕೆ ಊರು ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಪ್ರಸಿದ್ದಿಯಾಗಿದ್ದನು. ಅವನನ್ನು ಬಡ್ಡಿ ಬಂಗಾರಪ್ಪ ಅಂತಲೇ ಕರೆಯುತ್ತಿದ್ದರು . ಅವನ ಎದುರುಗಡೆ ಮರ‍್ಯಾದೆ ಕೊಟ್ಟು ಮಾತನಾಡುತ್ತಿದ್ದ ಜನರು, ಅವನ ಹಿಂದೆ ಅವನ ಮೋಸದ ಬಗ್ಗೆ ಮಾತನಾಡುತ್ತಾ ಬಯ್ಯುತ್ತಿದ್ದರು.

ಬಡ್ಡಿ ಬಂಗಾರಪ್ಪನಿಗೆ ಒಬ್ಬನೇ ಒಬ್ಬ ಮಗನಿದ್ದ. ಅವನ ಹೆಸರು ಬೆಳ್ಳಿಯಪ್ಪ ತುಂಬಾ ಸೋಮಾರಿ. ಎಲ್ಲರೊಂದಿಗೂ ಜಗಳವಾಡುವ ಗುಣ. ಒಬ್ಬನೇ ಮಗನೆಂದು ಬಂಗಾರಪ್ಪ ಅವನನ್ನು ಮುದ್ದಿನಿಂದ ಬೆಳೆಸುತ್ತಿದ್ದ. ನಾನಾ ಬಗೆಯ ತಿನಿಸುಗಳನ್ನು, ಬಗೆಬಗೆಯ ಆಟಿಕೆಗಳನ್ನು ಬಟ್ಟೆಗಳನ್ನು ಕೊಡಿಸುತ್ತಿದ್ದನು. ಬೆಳ್ಳಿಯಪ್ಪನಿಗೆ ತಾನೊಬ್ಬ ಶ್ರೀಮಂತನ ಮಗನೆಂಬ ಅಹಂಕಾರ ಚಿಕ್ಕ ವಯಸ್ಸಿನಲ್ಲಿಯೇ ಬಂದುಬಿಟ್ಟಿತ್ತು.

ಒಂದು ದಿನ ಬೆಳ್ಳಿಯಪ್ಪ ಶಾಲೆಯಿಂದ ಬರುವಾಗ ಅಳುತ್ತಾ ಬಂದನು. ಬಡ್ಡಿ ಬಂಗಾರಪ್ಪನಿಗೆ ತನ್ನ ಮಗ ಅಳುತ್ತಿರುವುದನ್ನು ಕಂಡು, “ಮಗನೇ, ಯಾಕೆ ಅಳ್ತಿದ್ದೀ? ಯಾರಾದರೂ ನಿನಗೆ ಹೊಡೆದರಾ? ಅತವಾ ಬೈದರಾ? ಅವರ ಹೆಸರು ಹೇಳು. ಅವರಿಗೆ ಚೆನ್ನಾಗಿ ಪಾಟ ಕಲಿಸ್ತೀನಿ” ಅಂತ ಅಂದನು. ಅದಕ್ಕೆ ಮಗ ಬೆಳ್ಳಿಯಪ್ಪ ಅಳುತ್ತಾ “ಶಾಲೆಯಲ್ಲಿ ಗುರುಗಳು ನನಗೆ ಹೊಡೆದರು” ಎಂದು ಜೋರಾಗಿ ಅಳತೊಡಗಿದನು. ಮಗನ ಮೇಲಿನ ಅಪಾರ ಪ್ರೀತಿಯಿಂದ ಬಡ್ಡಿ ಬಂಗಾರಪ್ಪ ಬಾ “ಶಾಲೆಗೆ ಹೋಗೋಣ ಗುರುಗಳಿಗೆ ಬುದ್ದಿ ಕಲಿಸೋಣ” ಎಂದು ನೇರವಾಗಿ ಶಾಲೆಗೆ ಹೋದರು. ಶಿಕ್ಶಕರ ಬಳಿ ಜಗಳವಾಡಿ “ನನ್ನ ಮಗನನ್ನು ಮುಟ್ಟಿದರೆ ಮುಂದಿನ ದಿನಗಳು ನಿಮಗೆ ಸರಿಯಾಗಿರುವುದಿಲ್ಲ” ಎಂದು ಗದರಿಸಿದನು. ಶಿಕ್ಶಕರು ಬೆಳ್ಳಿಯಪ್ಪನ ದುರ‍್ಗುಣಗಳ ಬಗ್ಗೆ ಹೇಳಿದರೂ ಅರ‍್ತಮಾಡಿಕೊಳ್ಳದ ಬೆಳ್ಳಿಯಪ್ಪನ ವರ‍್ತನೆಯಿಂದ ಬೇಸತ್ತ ಶಾಲೆಯ ಗುರುಗಳು ಬೆಳ್ಳಿಯಪ್ಪನ ತಂಟೆಗೆ ಹೋಗಲಿಲ್ಲ . ಬೆಳ್ಳಿಯಪ್ಪ ತನ್ನನ್ನು ಎದುರಿಸುವವರು, ತನಗೆ ಬಯ್ಯುವವರು ಯಾರು ಇಲ್ಲವೆಂದು ಮತ್ತಶ್ಟು ಅಹಂಕಾರ ಬೆಳೆಸಿಕೊಂಡನು. ಇತರ ಮಕ್ಕಳಿಗೆ ಹಿಂಸಿಸುವುದು, ಸುಳ್ಳು ಹೇಳುವುದು, ಮಕ್ಕಳ ಸಾಮಗ್ರಿಗಳನ್ನು ಕದಿಯುವುದು, ಮಕ್ಕಳಿಗೆ ಬಯ್ಯುವುದು ಹೀಗೆ ಹಲವಾರು ಕೆಟ್ಟ ಚಟಗಳನ್ನು ಬೆಳೆಸಿಕೊಂಡನು. ಊರಿನ ಜನರು ಹಾಗೂ ಮಕ್ಕಳ ಪಾಲಕರು ಬಡ್ಡಿ ಬಂಗಾರಪ್ಪನಿಗೆ ದೂರು ನೀಡಿದರೂ ಬಡ್ಡಿ ಬಂಗಾರಪ್ಪ ತನ್ನ ಮಗನದ್ದೇನೂ ತಪ್ಪಿಲ್ಲ. ವಿನಾಕಾರಣ ತನ್ನ ಮಗನ ಮೇಲೆ ದೂರಲಾಗುತ್ತಿದೆ ಎಂದು ವಾದಿಸತೊಡಗಿದನು.

ಒಂದು ದಿನ ಬಡ್ಡಿ ಬಂಗಾರಪ್ಪ ಯಾವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಬೇಕಾದ ಪ್ರಸಂಗ ಬಂದಿತು. ಸಿದ್ದವಾಗಿ ಮನೆಯಿಂದ ಹೊರಟು ಸ್ವಲ್ಪ ದೂರ ತೆರಳಿದಾಗ ತನ್ನ ಕಜಾನೆಯ ಬೀಗದ ಕೈಯನ್ನು ಮನೆಯಲ್ಲಿ ಬಿಟ್ಟು ಬಂದಿದ್ದನ್ನು ನೆನಪಿಸಿಕೊಂಡು ಮತ್ತೆ ಮನೆಗೆ ಹಿಂದಿರುಗಿದ. ಇತ್ತ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡು ಬಡ್ಡಿ ಬಂಗಾರಪ್ಪನ ಕಜಾನೆಯಿಂದ ಅವನ ಮಗನೇ ಹಣ ಕದಿಯುತ್ತಿದ್ದ. ಇದನ್ನು ಕಂಡ ಬಡ್ಡಿ ಬಂಗಾರಪ್ಪ ತನ್ನ ಮಗನನ್ನು ಗದರಿಸಿದಾಗ ಮಗನೇ ತಂದೆಗೆ ಬೈಯತೊಡಗಿದ. ಮಗನ ದುರ‍್ನಡತೆಯನ್ನು ಕಂಡು ಬಡ್ಡಿ ಬಂಗಾರಪ್ಪನ ಮನಸ್ಸಿಗೆ ನೋವುಂಟಾಯಿತು. ತಾನು ಬೆಳೆಸಿದ ಮಗನೇ ತನಗೆ ಎದುರು ಮಾತನಾಡುತ್ತಿರುವುದು ಬಂಗಾರಪ್ಪನಿಗೆ ಬಹಳಶ್ಟು ನೋವುಂಟು ಮಾಡಿತು.

ಅಂದು ಶಾಲೆಯ ಗುರುಗಳು ಇವನ ತಪ್ಪಿಗೆ ಶಿಕ್ಶೆ ನೀಡಿದಾಗ ನಾನು ನನ್ನ ಮಗನ ಪರ ವಹಿಸಿಕೊಂಡು ಮಾತನಾಡಿ ಗುರುಗಳನ್ನು ಹೀಯಾಳಿಸಿದ್ದೆ. ಇಂದು ನನ್ನ ಮಗ ದುರ‍್ನಡತೆಗಳನ್ನು ಹೊಂದಿದ್ದಾನೆ. ಹೀಗೆಯೇ ಮುಂದುವರೆದರೆ ಸಮಾಜಕ್ಕೆ ನನ್ನ ಮಗ ಒಬ್ಬ ಕೆಟ್ಟ ವ್ಯಕ್ತಿಯಾಗುತ್ತಾನೆ. ಎಂದು ಮನಸ್ಸಿನಲ್ಲೇ ಅಂದುಕೊಂಡ. ಈಗಲೇ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದು ನಿರ‍್ದಾರ ಮಾಡಿ, ತಪ್ಪಿನ ಅರಿವಾಗಿ ಮಗನನ್ನು ನೇರವಾಗಿ ಶಾಲಾ ಗುರುಗಳ ಬಳಿ ಕರೆದುಕೊಂಡು ಬಂದು, ಹಿಂದೆ ತಾನು ತೋರಿದ ವರ‍್ತನೆಗೆ ಕ್ಶಮೆ ಕೋರುತ್ತಾನೆ. ನನ್ನ ಮಗನನ್ನು ಸನ್ಮಾರ‍್ಗದತ್ತ ಕೊಂಡೊಯ್ದು ಅವನಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸಿ” ಎಂದು ಅಂಗಲಾಚುತ್ತಾನೆ. ಅದರಂತೆ ಶಾಲೆಯ ಗುರುಗಳು ಬೆಳ್ಳಿಯಪ್ಪನನ್ನು ಕಾಲಕ್ರಮೇಣ ಉತ್ತಮ ವಿದ್ಯಾರ‍್ತಿಯನ್ನಾಗಿಸುತ್ತಾರೆ. ಬೆಳ್ಳಿಯಪ್ಪ ಬರುಬರುತ್ತಾ ತನ್ನ ಕೆಟ್ಟ ಗುಣಗಳನ್ನು ಕಡಿಮೆಗೊಳಿಸುತ್ತಾ ಒಳ್ಳೆಯ ಗುಣಗಳನ್ನು ಗುರುಗಳ ಮಾರ‍್ಗದರ‍್ಶನದಲ್ಲಿ ರೂಡಿಸಿಕೊಳ್ಳುತ್ತಾನೆ. ಬಂಗಾರಪ್ಪನೂ ಸಹ ಮನೆಯಲ್ಲಿ ಹಾಗೂ ಸಮಾಜದಲ್ಲಿ ಒಳ್ಳೆಯ ನೀತಿ ರೀತಿಯಲ್ಲಿ ನಡೆಯುತ್ತಾ ಸಮಾಜದಲ್ಲಿ ಒಬ್ಬ ಗೌರವಾನ್ವಿತ ವ್ಯಕ್ತಿಯಾಗುತ್ತಾನೆ. ಬೆಳ್ಳಿಯಪ್ಪ ಗುರುಗಳ ಬಳಿ ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ನೆಚ್ಚಿನ ವಿದ್ಯಾರ‍್ತಿ ಆಗುತ್ತಾನೆ. ಇಂತಹ ಬದಲಾವಣೆಯನ್ನು ಕಂಡ ಊರಿನ ಜನರು ಶಾಲಾ ಗುರುಗಳಿಗೆ ಗೌರವಿಸುವುದನ್ನು ರೂಡಿಸಿಕೊಳ್ಳುತ್ತಾರೆ.

(ಚಿತ್ರ ಸೆಲೆ: publicdomainvectors.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications