ಹೆಬ್ಬೆರಳಾಕಾರದ ನಡುಗಡ್ಡೆ

– ಕೆ.ವಿ. ಶಶಿದರ.

ಹೆಬ್ಬೆರಳು, ನಡುಗಡ್ಡೆ, ಬಾಲ್ಜೆನಕ್

ಹೆಬ್ಬೆರೆಳು ಕೈಬೆರಳುಗಳಲ್ಲಿ ಅತ್ಯಂತ ಅವಶ್ಯ ಬೆರಳು. ಇದಿಲ್ಲದೆ ಕೆಲಸಗಳನ್ನು ಸಹಜವಾಗಿ ಮಾಡಲು ಸಾದ್ಯವಿಲ್ಲ. ಹೆಬ್ಬೆರಳನ್ನು ಗುರು ಕಾಣಿಕೆಯಾಗಿ ದ್ರೋಣಾಚಾರ‍್ಯರಿಗೆ ನೀಡಿದ ಏಕಲವ್ಯ ಇದೇ ಕಾರಣಕ್ಕಾಗಿ ತಾನು ಸಿದ್ದಿಸಿಕೊಂಡಿದ್ದ ಬಿಲ್ಲು ವಿದ್ಯೆಯನ್ನು ಉಪಯೋಗಿಸಲಾರನಾದ. ಕೈಯ ಹೆಬ್ಬೆರಳಿನ ಅತಿ ಹೆಚ್ಚು ಉಪಯೋಗವಾಗುವುದು ಅನರಕ್ಶರಸ್ತರಲ್ಲಿ. ಯಾವುದೇ ದಾಕಲೆಗಳಿಗೆ ಸಹಿ ಮಾಡಲು ಬಾರದವರ ಬಳಿ ಎಡಗೈ ಹೆಬ್ಬೆಟ್ಟಿನ ಗುರುತು ಪಡೆಯುವುದು ಸಹಜ. ಹೆಬ್ಬೆಟ್ಟಿನ ಮೇಲಿರುವ ಗೆರೆಗಳು ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆ ಆಗಿರುತ್ತವೆ. ಯಾವ ಇಬ್ಬರ ಹೆಬ್ಬೆಟ್ಟಿನ ಗುರುತು ಒಂದೇ ಇರುವುದಿಲ್ಲ. ಈ ಗೆರೆಗಳ ಸಹಾಯದಿಂದಲೇ ಸಹಿಯನ್ನು ಗುರುತಿಸಲು ಸಾದ್ಯ.

ಹೆಬ್ಬೆಟ್ಟಿನಲ್ಲಿ ಅನೇಕ ಗೆರೆಗಳಿರುತ್ತವೆ. ಎಲ್ಲಿ ಪ್ರಾರಂಬವಾಗಿ ಎಲ್ಲಿಗೆ ಮುಗಿಯುತ್ತದೋ ದೇವರೇ ಬಲ್ಲ. ಹಾಗೆ ಗೋಡೆಗಳನ್ನು ಕಟ್ಟಿ ಆಕಾಶದಿಂದ ಅದರ ಬಿಂಬವನ್ನು ಸೆರೆ ಹಿಡಿದರೆ, ಯಾವ ರೀತಿಯಲ್ಲಿ ಇರುತ್ತದೆ? ಅದರಲ್ಲೂ ಬೂಪ್ರದೇಶ ಹೆಬ್ಬೆರಳಿನ ಆಕಾರದಲ್ಲಿ ಇದ್ದರೆ? ಆಹಾ….ಎಶ್ಟು ಸೊಗಸು! ಇಂತಹುದೊಂದು ನಡುಗಡ್ಡೆ ಕ್ರೊಯೇಶಿಯಾದಲ್ಲಿದೆ!

ಕ್ರೊಯೇಶಿಯಾ ದೇಶದ ದಕ್ಶಿಣದಲ್ಲಿರುವ ಡಲ್ಮಾಟಿಯನ್ ಕರಾವಳಿಯ ಮುಂದಿರುವ ಸಿಬೆನಿಕ್ ದ್ವೀಪ ಸಮೂಹದಲ್ಲಿನ ಒಂದು ಪುಟ್ಟ ನಡುಗಡ್ಡೆ ಬಾಲ್ಜೆನಕ್(Baljenac). ಇದರ ಮೇಲ್ಮೈ ಕೇವಲ 0.14 ಚದರ ಕಿಲೋಮೀಟರ್ ಇದ್ದು, 1431 ಮೀಟರ‍್‌ಗಳಶ್ಟು ಕರಾವಳಿ ಪ್ರದೇಶವನ್ನು ಹೊಂದಿದೆ. ಈಗ ಇಲ್ಲಿ ಜನವಸತಿಯಿಲ್ಲ. ಹಾಗಾದರೂ ಏನಿದರ ವಿಶೇಶತೆ? ಎನಿಸದಿರುವುದಿಲ್ಲ. ತೇಟ್ ಹೆಬ್ಬೆರಳಿನ ಆಕಾರದಲ್ಲಿರುವ ಈ ದ್ವೀಪದ ಮೇಲಿರುವ ಹಲವು ಪುಟ್ಟ ಪುಟ್ಟ ಗೋಡೆಗಳು ಬೆರಳ ಮೇಲಿನ ಗೆರೆಯಂತೆಯೇ ಕಾಣುತ್ತವೆ.

ಕ್ರೊಯೇಶಿಯಾ 79 ದೊಡ್ಡ ನಡುಗಡ್ಡೆಗಳು(islands), 500ಕ್ಕಿಂತಾ ಹೆಚ್ಚು ಪುಟ್ಟ ಪುಟ್ಟ ನಡುಗಡ್ಡೆಗಳು ಮತ್ತು 642 ಸಣ್ಣ ಕಲ್ಲಿನ ಶಿಕರಗಳನ್ನು ಹೊಂದಿರುವ ದೇಶ. ಇವೆಲ್ಲಾ ಹರಡಿರುವುದು 3,300 ಚದರ ಕಿಲೋಮೀಟರ್ ವಿಸ್ತಾರದ ಪ್ರದೇಶದಲ್ಲಿ. ಈ ದ್ವೀಪ ಸಮೂಹದಲ್ಲಿ ಬಾಲ್ಜೆನಕ್ ನಡುಗಡ್ಡೆ ಸಹ ಒಂದು.

16 ಮತ್ತು 17ನೇ ಶತಮಾನದಲ್ಲಿ ಒಟ್ಟೋಮನ್ ವಿಜಯದ ಸಮಯದಲ್ಲಿ ಈ ದ್ವೀಪವು ಕ್ರೈಸ್ತರ ಆಶ್ರಯತಾಣವಾಗಿತ್ತು. ಅವರುಗಳು ತಮ್ಮನ್ನು ಶತ್ರುಗಳಿಂದ ರಕ್ಶಿಸಿಕೊಳ್ಳಲು ಕಲ್ಲುಗಳ ಗೋಡೆಯನ್ನು ಸುತ್ತಲೂ ನಿರ‍್ಮಿಸಿಕೊಂಡರು. ಈ ಗೋಡೆಗಳ ವಿಶೇಶತೆಯೆಂದರೆ ಕಲ್ಲುಗಳನ್ನು ಒಂದರ ಮೇಲೊಂದು ಹಾಗೆ ಸುಮ್ಮನೆ ಜೋಡಿಸಿರುವುದು. ಅವುಗಳನ್ನು ಹಿಡಿದಿಡಲು ಸಿಮೆಂಟ್, ಗಾರೆಯಾಗಲಿ ಅತವಾ ಯಾವುದೇ ರೀತಿಯ ಅಂಟನ್ನು ಬಳಸಿಲ್ಲ ಎನ್ನುವುದು. ನಂತರದ ದಿನಗಳಲ್ಲಿ ಹತ್ತಿರದ ಕಪ್ರಿಜೆ ದ್ವೀಪದ ಜನರು ತಮ್ಮ ಕ್ರುಶಿ ಬೆಳೆಗಳ ಸಂರಕ್ಶಣೆಗೆ ಇದನ್ನು ಬಳಸಿಕೊಂಡರು. ಆಲೀವ್ ತೋಟಗಳನ್ನು ದ್ರಾಕ್ಶಿ ತೋಟಗಳಿಂದ ಬೇರ‍್ಪಡಿಸಲು ಇನ್ನೂ ಹೆಚ್ಚಿನ ಗೋಡೆಗಳ ನಿರ‍್ಮಾಣ ಪ್ರಾರಂಬಿಸಿದರು. ಗೋಡೆಗಳ ನಿರ‍್ಮಾಣ ಪ್ರಾರಂಬವಾದ ಕೆಲವೇ ವರ‍್ಶಗಳಲ್ಲಿ 27.357 ಕಿಮಿ ಉದ್ದದ ಸಣ್ಣ ಸಣ್ಣ ಬಾಗಗಳು ಏರ‍್ಪಟ್ಟವು. ಜೇಡನ ಬಲೆಯಂತೆ ಕಾಣುವ ಇದು, ಕುತೂಹಲಕಾರಿಯಾಗಿದ್ದ ಕಾರಣ ಸಾಕಶ್ಟು ಪ್ರವಾಸಿಗರನ್ನು ತನ್ನತ್ತ ಆಕರ‍್ಶಿಸಿತು.

ವಿಶ್ವದಲ್ಲಿ ಈ ರೀತಿಯಲ್ಲಿ ತಮ್ಮ ತಮ್ಮ ಸರಹದ್ದನ್ನು ಅದ್ಬುತ ಗೋಡೆಗಳಿಂದ ಬೇರ‍್ಪಡಿಸಿಕೊಂಡಿರುವ ದ್ವೀಪ ಕ್ರೊಯೇಶಿಯಾದ ಬಾಲ್ಜೆನಕ್ ಒಂದೇ ಅಲ್ಲ. ಇಂತಹವುಗಳನ್ನು ಐರ‍್ಲೆಂಡ್ ಮತ್ತು ಸ್ಕಾಟ್ಲೆಂಡ್ ದೇಶಗಳಲ್ಲೂ ಕಾಣಬಹುದು. ಆದರೆ ಇಲ್ಲಿ ತೋಟದ ಬೌಂಡರಿಗಳನ್ನು ಗುರುತಿಸಲು, ಕೆಳಮಟ್ಟದಲ್ಲಿ ಸಣ್ಣ ಸಣ್ಣ ಗೋಡೆಗಳನ್ನು ಬಳಸಿದ್ದಾರೆ. ಇವೆರಡೂ ಕ್ರೊಯೇಶಿಯಾದ ಬಾಲ್ಜೆನಕ್ ದ್ವೀಪಕ್ಕಿಂತ ಸಾಕಶ್ಟು ದೊಡ್ಡದು ಹಾಗೂ ಸಾಕಶ್ಟು ಓರೆಕೋರೆಗಳನ್ನು ಹೊಂದಿದೆ. ಬಾಲ್ಜೆನಕ್ ಅತ್ಯಂತ ಪುಟ್ಟ ದ್ವೀಪವಾಗಿದ್ದು, ಹೆಬ್ಬೆರಳಿನ ಆಕಾರ ಹೊಂದಿರುವ ಕಾರಣ, ಪ್ರಸಿದ್ದಿಗೆ ಬಂದಿದೆ ಹಾಗೂ ಪ್ರವಾಸಿಗರ ಆಕರ‍್ಶಣೆಯ ಕೇಂದ್ರ ಬಿಂದುವಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: amusingplanet.com, interestingengineering.com, elitereaders.com)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.