ಸರಿತಪ್ಪರಿಮೆ, morality

ಬದುಕು ಮತ್ತು ನೈತಿಕತೆಯ ತಿಳಿವಳಿಕೆ

.

ಸರಿತಪ್ಪರಿಮೆ, morality

ಮನುಶ್ಯ ಜಗತ್ತಿನ ಎಲ್ಲ ಜೀವಿಗಳಿಗಿಂತ ಬಿನ್ನ, ಏಕೆಂದರೆ ಆತನಿಗೆ ಆಲೋಚನ ಶಕ್ತಿ ಇದೆ. ಮನುಶ್ಯ ಎಂದರೆ ಕಾಮ,ಕ್ರೋದ, ಮದ, ಮತ್ಸರವನ್ನು ತುಂಬಿಕೊಂಡ ಗಡಿಗೆ. ಮಾನವ ಎಂದರೇನೆ ಮಾನವೀಯತೆಯ ಸೆಲೆ, ಕರುಣಾಮೂರ‍್ತಿ, ಸಹಜೀವನ, ಸಹಬಾಳ್ವೆ, ಹೊಂದಾಣಿಕೆ ಸಮಾದಾನ, ಸಮನ್ವಯತೆ, ಸಹಕಾರ, ಸರಳತೆ ಇವೆಲ್ಲ ಅವನಲ್ಲಿ ಹಾಸುಹೊಕ್ಕಾಗಿ ಇರಬೇಕಿತ್ತು.

ಆದರೆ…. ಅದು ಕಾಣುತ್ತಿಲ್ಲ….! ಇದು ಯಾಕೆ ಹೀಗೆ ಎಂದು ಕಾರಣ ಹುಡುಕುತ್ತಾ ಹೋದರೆ ಹಲವಾರು ಕಾರಣಗಳು ಗೋಚರಿಸುತ್ತವೆ. ಆತನ ಸುತ್ತಲಿನ ಪರಿಸರ, ಆತನ ಒಡನಾಡಿಗಳು, ಆತನ ಹುಟ್ಟುಗುಣ, ನೈತಿಕ ಮಾರ‍್ಗದರ‍್ಶನದ ಕೊರತೆ. ಮತ್ತಶ್ಟು, ಮಗದಶ್ಟು, ಕಡೆಗೆ ಎಲ್ಲವೂ ನನಗೆ ಇರಲಿ ಎಂಬ ಅತಿಯಾದ ಲಾಲಸೆ, ಮನುಶ್ಯರ ನಡುವೆ ಜಾತಿ, ದರ‍್ಮ, ಮತ, ಪಂತಗಳ ದೊಡ್ಡ ಕಂದಕ – ಹೀಗೆ ಪಟ್ಟಿ ಮಾಡುತ್ತ ಹೋದರೆ ಇಂತ ನೂರಾರು ಕಾರಣಗಳು ಮನುಶ್ಯನು ತನ್ನ ಹಿತವನಶ್ಟೇ ಕೇಂದ್ರಿಕ್ರುತಗೊಳಿಸಿಕೊಂಡು ಅವನನ್ನು ಲಾಲಸಿಯಾಗುವಂತೆ ಮಾಡಿವೆ ಎನ್ನಬಹುದು. ಸರಿಯಾದ ಮಾರ‍್ಗದರ‍್ಶನ ಮತ್ತು ನೈತಿಕ ಹೊಣೆಹೊತ್ತು ಸಮಾಜವನ್ನು ಮುನ್ನಡೆಸುವ ನಿಸ್ವಾರ‍್ತ, ಸಮರ‍್ಪಣ ಮನೋಬಾವದ ನಾಯಕರ ಕೊರತೆಯಿಂದ ಸಮುದಾಯದ ಒಟ್ಟುಗೂಡುವಿಕೆ ಸಾದ್ಯವಾಗದೇ ವಿಪಲವಾಗಿದೆ. ಸ್ವಾರ‍್ತ ಎಲ್ಲ ಕಡೆ ತಾಂಡವವಾಡುತ್ತಿದೆ.

ನೈತಿಕ ಪ್ರಗ್ನೆ ಅದಹಪತನಗೊಂಡು, ನಾನೇ ಸರಿ ಎಂಬ ಅಹಂನ ಪೊರೆ ಇಡಿ ದೇಹಕ್ಕೆ ಆವರಿಸಿದಾಗ ಮನುಶ್ಯ ಲಾಲಸಿಗನಾಗಿ ಅತೀ ಸ್ವಾರ‍್ತಿಯಾಗಿ ಬಿಡುತ್ತಾನೆ. ಅತಿಯಾಗಿ ಶೇಕರಿಸಿಡುವ ಗೀಳು ಹತ್ತಿಕೊಳ್ಳುತ್ತದೆ. ದಾನ ದರ‍್ಮ ಮರೆತೇ ಬಿಡುತ್ತಾನೆ. ಇರುವುದನ್ನು ಅನುಬವಿಸುವ ಬರದಲ್ಲಿ ಮುಂದೊಂದು ದಿನ ನನಗೆ ಸಾವಿದೆ ಎಂಬುದನ್ನು ಮರೆತು ಸ್ವೇಚ್ಚಾಚಾರಿಯಾಗಿ ಬಿಡುತ್ತಾನೆ. ಈ ಪ್ರಾಪಂಚಿಕ ವಿಶಯಗಳ ಅನುಬವಿಸುವಿಕೆಯಲ್ಲಿ ಮೈಮರೆತು, ಎಲ್ಲ ಜೀವಿಗಳಿಗೆ ಇರುವ ಹಾಗೆ ನನಗೂ ಸಾವಿದೆ ಎಂಬ ವಿಚಾರವನ್ನೆ ಮರೆತು ಅತೀ ಲಾಲಸಿಗನಾಗುತ್ತಾನೆ. ಅತೀ ಸ್ವಾರ‍್ತಿಯಾಗಿ ಬಿಡುತ್ತಾನೆ.

ಮನುಶ್ಯನ ಇಂತಹ ಮನೋಸ್ತಿತಿಗೆ ಮದ್ದು ಅರೆಯಬೇಕೆಂದರೆ ಚಿಕ್ಕಂದಿನಿಂದಲೇ, ವಿದ್ಯಾರ‍್ತಿ ದೆಸೆಯಲ್ಲಿಯೇ ನೀತಿ ಪಾಟವನ್ನು ಕಡ್ಡಾಯವಾಗಿ ಬೋದಿಸಿ ನೈತಿಕ ಪ್ರಗ್ನೆಯನ್ನು ಮೂಡಿಸಿ ವಾಸ್ತವದಲ್ಲಿ ಬದಕುವಂತೆ, ಮನುಶ್ಯರಾಗಿ ಜೀವಿಸುವಂತೆ ಪ್ರೇರೇಪಿಸುವುದು. ಹೀಗೆ ಮಾಡುವುದರಿಂದ ಮನುಶ್ಯನು ಸಾವನ್ನು ಒಪ್ಪಿಕೊಂಡು, ಲಾಲಸಿಯಾಗುವ ಮನಸ್ತಿತಿಯನ್ನು ತಗ್ಗಿಸಿಕೊಳ್ಳುವ ಸಾದ್ಯತೆ ಇರುತ್ತದೆ. ಆಗ ಮನುಶ್ಯನು, ‘ಎಲ್ಲ ಜೀವಿಗಳಿಗಿರುವಂತೆ ನಮಗೂ ಸಾವೆಂಬುದು ಕಟ್ಟಿಟ್ಟ ಬುತ್ತಿ’ ಎಂದರಿತು ನೈತಿಕ ಚೌಕಟ್ಟಿನಲ್ಲಿ ಬದುಕುವ ಪ್ರಯತ್ನ ಮಾಡುತ್ತಾನೆ ಮತ್ತು ಸಾಮರಸ್ಯದ ಸಮಾಜ ಕೂಡ ಸಾದ್ಯವಾಗುವುದು.

( ಚಿತ್ರಸೆಲೆ : glasgowguardian.co.uk )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: