ಜೀವನದ ಲೆಕ್ಕ, ಇರಲಿ ಪಕ್ಕಾ

– ವೆಂಕಟೇಶ ಚಾಗಿ.

life, happy, sad, ಬದುಕು, ನಗು. ಅಳು

ಜೀವನದಲ್ಲಿ ನಾವು ಹಲವಾರು ಕೆಲಸಗಳಲ್ಲಿ ಲೆಕ್ಕ ಹಾಕುತ್ತೇವೆ. ನಮ್ಮ ಲೆಕ್ಕ ಪಕ್ಕಾ ಆಗಿದ್ದಾಗ ಅಂದರೆ ಸರಿಯಾಗಿ ಇದ್ದಾಗ ಮಾತ್ರ ಆ ಕೆಲಸ ಯಶಸ್ವಿಯಾಗುತ್ತದೆ. ಲೆಕ್ಕದಲ್ಲಿ ಏನಾದರೂ ಏರುಪೇರಾದಲ್ಲಿ ಅತವಾ ಲೆಕ್ಕ ತಪ್ಪಿದಲ್ಲಿ ಆ ಕೆಲಸ ಪೂರ‍್ಣವಾಗುವುದಿಲ್ಲ. ನಮಗೆ ನಶ್ಟವನ್ನು ನೋವನ್ನು ತಂದುಕೊಡುತ್ತದೆ. ನಮ್ಮ ಕರ‍್ಚುವೆಚ್ಚಗಳು ಆದಾಯಕ್ಕನುಗುಣವಾಗಿ ಸರಿದೂಗಬೇಕಾಗುತ್ತದೆ. ಆದಾಯಕ್ಕಿಂತ ಹೆಚ್ಚು ಕರ‍್ಚುವೆಚ್ಚಗಳು ಆದಲ್ಲಿ ಸಾಲಗಾರರಾಗಬೇಕಾಗುತ್ತದೆ. ಲೆಕ್ಕವನ್ನು ತಪ್ಪಿದಲ್ಲಿ ಅದರಿಂದ ಆಗುವ ನಶ್ಟಕ್ಕೆ ನಾವೇ ಹೊಣೆಗಾರರಾಗುತ್ತೇವೆ. ವ್ಯವಹಾರದ ಲೆಕ್ಕದಲ್ಲಿ ಯಾವುದೇ ತಪ್ಪು ಇರದಿದ್ದಲ್ಲಿ, ಕರ‍್ಚುವೆಚ್ಚಗಳು ನಮಗೆ ತ್ರುಪ್ತಿ ನೀಡಿದಲ್ಲಿ ಆ ಕೆಲಸವನ್ನು ನಾವು ಮಾಡಿದ್ದಕ್ಕೂ ಸಾರ‍್ತಕವಾಗುತ್ತದೆ. ಹಾಗಾದರೆ ಲೆಕ್ಕಕ್ಕೆ ಎಶ್ಟೊಂದು ಮಹತ್ವ ಇದೆ ಅಲ್ಲವೇ?

ಲೆಕ್ಕ ಎನ್ನುವುದು ಕೇವಲ ವ್ಯವಹಾರಗಳಿಗೆ ಮಾತ್ರ ಸೀಮಿತವಾಗಿಲ್ಲ. ಜೀವನಕ್ಕೊಂದು ಲೆಕ್ಕವಿದೆ. ಬೂಮಿಯ ಮೇಲೆ ಹುಟ್ಟಿದ ಕ್ಶಣದಿಂದ ನಮ್ಮ ಲೆಕ್ಕ ಆರಂಬವಾಗುತ್ತದೆ. ನಮ್ಮ ಜೀವಿತಾವದಿ, ನಮ್ಮ ಆದಾಯ ಹೀಗೆ… ಈ ಅವದಿಯಲ್ಲಿ ನಾವು ಕೈಗೊಳ್ಳುವ ಕೆಲಸ ಕಾರ‍್ಯಗಳೇ ಕರ‍್ಚುವೆಚ್ಚಗಳು. ಲೆಕ್ಕ ಕೊನೆಗೊಳ್ಳುವುದು ಸಾವು ಎಂಬ ಪೂರ‍್ಣವಿರಾಮ ಬಿದ್ದಾಗಲೇ. ಅಂದಮೇಲೆ ಈ ಜೀವನದ ಲೆಕ್ಕವು ಪಕ್ಕಾ ಆಗಬೇಕಾದುದು ಸ್ಪಶ್ಟ. ಬೇರೆ ಯಾವುದೇ ಲೆಕ್ಕ ತಪ್ಪಿದರೂ, ಜೀವನದ ಲೆಕ್ಕ ತಪ್ಪಬಾರದು. ಏಕೆಂದರೆ ಈ ಲೆಕ್ಕ ಮಹತ್ವದ್ದು. ಒಮ್ಮೆ ಲೆಕ್ಕ ಮುಗಿಯಿತೆಂದರೆ ಮತ್ತೆ ಅದೇ ಲೆಕ್ಕವನ್ನು ಮರಳಿ ಮಾಡಲು ಸಾದ್ಯವೇ ಇಲ್ಲ. ಲೆಕ್ಕ ಅದೆಶ್ಟು ಕಟಿಣ ಅನಿಸಿದರೂ ಅದನ್ನು ಸರಳಗೊಳಿಸುವುದು, ಪೂರ‍್ಣಗೊಳಿಸುವುದು ನಮ್ಮ ಕೈಯಲ್ಲಿದೆ.

ಜೀವನದ ಲೆಕ್ಕದಲ್ಲಿ ನಮ್ಮ ಬದುಕಿನ ಸುಕ-ದುಕ್ಕಗಳು ಅಡಗಿವೆ. ನಾವು ಮಾಡುವ ಸಹಾಯ-ಸಹಕಾರ, ಅವಲಂಬನೆ, ಗಳಿಕೆ, ಸಾದನೆ, ಕಶ್ಟ ಎಲ್ಲವೂ ಲೆಕ್ಕದಲ್ಲಿ ಪರಿಗಣಿಸಲ್ಪಡುತ್ತವೆ. ಯಾವುದನ್ನೂ ಕಡೆಗಣಿಸುವಂತಿಲ್ಲ. ಕಡೆಗಣಿಸಲು ಸಾದ್ಯವೂ ಇಲ್ಲ. ನಮ್ಮ ಲೆಕ್ಕವನ್ನು ಯಾರು ಆರಂಬ ಮಾಡಿದವರು ಅಂತನೂ ಗೊತ್ತಿಲ್ಲ. ಲೆಕ್ಕ ಮಾತ್ರ ನಮ್ಮ ಬದುಕೇ ಆಗಿದೆ. ನಮ್ಮ ಬದುಕಿನ ಲೆಕ್ಕ ಸರಳವಾಗಿ ಮುನ್ನಡೆದುಕೊಂಡು ಹೋಗಬೇಕಾದರೆ ಲೆಕ್ಕಕ್ಕೆ ಬೇಕಾದ ಕೂಡಿಸುವ, ಕಳೆಯುವ, ಗುಣಿಸುವ, ಬಾಗಿಸುವ ಅಂಶಗಳು ನಮಗೆ ಗೊತ್ತಿರುವುದು ಅವಶ್ಯ. ಇಲ್ಲಿ ಕೂಡಿಸುವ ಎಂದರೆ ನಮ್ಮ ಸಂತೋಶದ ಕ್ಶಣಗಳನ್ನು ಕೂಡಿಸುವುದು ಎಂದಾದರೆ, ಕಳೆಯುವುದು ಎಂದರೆ ದುಕ್ಕದ ಕ್ಶಣಗಳನ್ನು ಮರೆಯುವುದು ಎಂದಾಗಬಹುದು. ಗುಣಿಸುವುದು ಎಂದರೆ ನಮ್ಮ ಕಾರ‍್ಯಸಾದನೆಗಳ ಪ್ರಗತಿ ಎನ್ನಬಹುದು. ಬಾಗಿಸುವುದು ಎಂದರೆ ಹಂಚುವಿಕೆ ಎಂದು ಹೇಳಬಹುದು. ಕುಶಿಯನ್ನು, ಸಂತೋಶವನ್ನು ನಮ್ಮ ದುಡಿಮೆಯ ಗಳಿಕೆಯನ್ನು ಮತ್ತೊಬ್ಬರಿಗೆ ಹಂಚುವುದು ಎಂದು ಕೂಡಾ ಹೇಳಬಹುದು.

ಅಂದಮೇಲೆ ಬದುಕಿನ ಲೆಕ್ಕದಲ್ಲಿ ಲೆಕ್ಕಕ್ಕೆ ಸಂಬಂದಿಸಿದ ಎಲ್ಲ ಕ್ರಿಯೆಗಳೂ ಒಳಗೊಂಡಿವೆ ಅಲ್ಲವೇ. ಯಾವುದೇ ಕ್ರಿಯೆಯಲ್ಲಿ ಸ್ವಲ್ಪ ಏರುಪೇರಾದರೂ ಜೀವನ ಮುಂದೆ ಸಾಗುವುದಿಲ್ಲ .ಜೀವನದ ಲೆಕ್ಕ ಅಲ್ಲಿಗೆ ಕೊನೆಯಾಗುತ್ತದೆ. ನಮ್ಮ ಬದುಕಿನ ಪ್ರತಿ ಹಂತದಲ್ಲಿ ಪಕ್ಕಾ ಆಗಿರಬೇಕು ಅಂದಾಗ ಮಾತ್ರ ನಮ್ಮ ಬದುಕು ಸಾರ‍್ತಕತೆಯನ್ನು ಪಡೆಯುತ್ತದೆ.

(ಚಿತ್ರ ಸೆಲೆ: wikimedia.org)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.