ಶಾವಿಗೆಯೆನ್ನಿ ನ್ಯೂಡಲ್ ಎನ್ನಿ

– ಮಾರಿಸನ್ ಮನೋಹರ್.

shavige, ಶಾವಿಗೆ, noodles

ಅಲ್ಯೂಮಿನಿಯಂ ಡಬ್ಬದಲ್ಲಿ ಐದಾರು ಸೇರು ಗೋದಿ ಇಟ್ಟುಕೊಂಡು, ಜೊತೆಯಲ್ಲಿದ್ದ ಚಿಕ್ಕ ಹುಡುಗ ಇಲ್ಲವೇ ಹುಡುಗಿಯ ಕಯ್ಯಲ್ಲಿ ಉಪ್ಪಿನ ಪುಡಿ, ಚಾ ಕಪ್ಪಿನಲ್ಲಿ ಸಿಹಿ ಎಣ್ಣೆ ಮತ್ತು ಮೂರ‍್ಕಾಲ್ಕು ಹಳೇ ಸೀರೆ ತೆಗೆದುಕೊಂಡು ಹೊರಟರೆ ಶಾವಿಗೆ ಮಾಡುವ ಗಿರಣಿಗೆ ಹೋಗುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಾಗುತ್ತಿತ್ತು. ಬಡಗಣ ಕರ‍್ನಾಟಕದಲ್ಲಿ ತಿನ್ನುವ ವೆಜಿಟೇಬಲ್ ಎಣ್ಣೆಗೆ ಸೈಎಣ್ಣೆ, ಸಿಹಿಎಣ್ಣೆ ಅಂತ ಕರೆಯುತ್ತಾರೆ. ಇದೇನೂ ಸಿಹಿಯಿರುವ ಎಣ್ಣೆಯಲ್ಲ! ಶಾವಿಗೆ ಮಶಿನಿದ್ದ ಗಿರಣಿಗೆ ಬೇಸಿಗೆಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡು! ಜನರಲ್ಲಾಗಿ ಕಾರ ಕುಟ್ಟುವ ಮಶಿನು ಇಟ್ಟವರು ಶಾವಿಗೆ ಮಶಿನ್ ಕೂಡ ಇಟ್ಟಿರುತ್ತಿದ್ದರು. ಗಿರಣಿಗೆ ಹೋಗಿ ಗೋದಿ ಮೊದಲು ಬೀಸಿ ಅದನ್ನು ಸ್ವಲ್ಪ ಸ್ವಲ್ಪ ನೀರಿನೊಂದಿಗೆ ಕಲಸುತ್ತಿದ್ದರು.

ನೀರಿಗೆ ಮೊದಲೇ ಉಪ್ಪು ಎಣ್ಣೆ ಬೆರೆಸಿರುತ್ತಿದ್ದರು. ಈ ಕಚ್ಚಾ ಹಿಟ್ಟನ್ನು ಶಾವಿಗೆ ಮಶಿನು ಚಾಲೂ ಮಾಡಿ, ಅದರಲ್ಲಿ ಹಾಕುವಾಗ ಅದು ತುಂಬಾ ಸದ್ದು ಮಾಡುತ್ತಾ ಶಾವಿಗೆ ಒತ್ತುತಿತ್ತು. ಶಾವಿಗೆ ಕೆಳಗೆ ಹೊರಬರುವಾಗ ಮೊರದಲ್ಲಿ, ತಟ್ಟೆಯ ಮೇಲೆ ಇಲ್ಲವೇ ಕಯ್ಯಲ್ಲೇ ಕಡಿದು ಬಿಡಿಸಿಕೊಂಡು, ಹಳೇ ಸೀರೆ ಮೇಲೆ ಇಲ್ಲವೇ ಉದ್ದಕ್ಕೆ ಕಟ್ಟಿದ ಹಗ್ಗದ ಮೇಲೆ ಹಾಕುತ್ತಿದ್ದರು. ಶಾವಿಗೆ ಮಾಡುವುದು ತುಂಬಾ ತಾಳ್ಮೆ, ಶ್ರಮ ಹಾಗೂ ಕಸುಬು ಕಲೆ ಬೇಡುತ್ತಿತ್ತು. ಮಶಿನ್ನಿಗೆ ಹಿಟ್ಟು ಹಾಕುವವರ ಮೇಲೆಯೇ ಇಡೀ ಕೆಲಸ ಆನಿಸಿಕೊಂಡು ನಿಂತಿರುತ್ತಿತ್ತು ಕೆಲವೊಮ್ಮೆ. ಅವರು ತಪ್ಪು ಮಾಡಿದರೆ ಶಾವಿಗೆ ಎಳೆಗಳು ಕಡಿದು ಬೀಳುತ್ತಿದ್ದವು. ಕೆಲವೊಮ್ಮೆ ಹಿಟ್ಟು ಒತ್ತರಿಸಿಕೊಂಡು ಚನ್ನಿಯ (ಶಾವಿಗೆಯ ಅಚ್ಚು, ಮೋಲ್ಡ್) ಪಕ್ಕದಿಂದ ಬುಸಬುಸನೇ ಹೊರಬರುತ್ತಿತ್ತು.

ಹಿಟ್ಟಿನ ಹದವನ್ನು ಅನುಬವ ಬುದ್ದಿವಂತಿಕೆ ಎರಡರಿಂದಲೂ ನೋಡುತ್ತಾ ಶಾವಿಗೆ ಹಾಕುತ್ತಿದ್ದರು. ಶಾವಿಗೆ ಹಾಕುವವರ ಸಂಗಡಿಗರು ಉರಿಬಿಸಿಲಲ್ಲಿಯೇ ಶಾವಿಗೆ ಎಳೆಗಳನ್ನು ಒಯ್ದು ಒಣಹಾಕುತ್ತಿದ್ದರು. ಕೆಲವರು ಮೊದಲೇ ಮಾತಾಡಿಕೊಂಡು ನಸುಕಿನಲ್ಲಿಯೇ ಬರುತ್ತಿದ್ದರು. ತಂಪಾದ ಬೆಳಕಲ್ಲಿ ಶಾವಿಗೆ ಮಾಡಿಸಿಕೊಳ್ಳುತ್ತಿದ್ದರೂ ಒಂದೊಂದು ಸಲ‌ ಪೇಲಾಗುತ್ತಿತ್ತು, ಕರೆಂಟ್ ಕೈಕೊಟ್ಟಾಗ! ಮುಂಜಾನೆ ಬಿಸಿಲಿದ್ದು ನಡುಹೊತ್ತಿನಲ್ಲಿ ಬಿಸಿಲಿನ ಕಾವು ಕಡಿಮೆಯಾದರೆ, ಮೋಡ ಕವಿದುಬಿಟ್ಟರೆ ಶಾವಿಗೆ ಸರಿಯಾಗಿ ಒಣಗದೆ ಮುದ್ದೆಯಾಗುತ್ತಿತ್ತು. ಮನೆಗೆ ಒಯ್ಯಲೂ ಆಗದೆ ಅಲ್ಲೇ ಕುಪ್ಪೆ ಮಾಡಿ ಬಟ್ಟೆ ಮುಚ್ಚಿಹೋಗುವ ಪಾಳಿ ಬರುತ್ತಿತ್ತು. ಕೆಲವರ ಶಾವಿಗೆ ಮೇಲೆ ಬೇಸಿಗೆಯಲ್ಲಿ ಪಕ್ಕನೆ ಬರುವ ‘ಅವಕಳೆ’ ಮಳೆಸುರಿದು ಮನೆಯಲ್ಲಿ ಮಾಡಬೇಕಾಗಿದ್ದ ಪಾಯಸ, ಹುಗ್ಗಿ ಅಲ್ಲಿಯೇ ಆಗಿಬಿಡುತ್ತಿತ್ತು! ಆದರೂ ಇಡೀ ಶಾವಿಗೆ ಮಾಡುವ ಪ್ರೊಸೆಸ್ ಒಂದು ಹಬ್ಬಕ್ಕಿಂತ ಕಡಿಮೆಯಾಗಿರುತ್ತಿದ್ದಿಲ್ಲ.

ನನ್ನ ಅಜ್ಜಿ ಮಾಡುವ ಶಾವಿಗೆ (ಬಡಗಣ ಕರ‍್ನಾಟಕ ಹೇಳುವಂತೆ “ಶ್ಯಾವsಗೀ”) ತುಂಬಾ ಡಿಪರೆಂಟ್, ಇನ್‌ಸ್ಟಂಟ ನ್ಯೂಡಲ್ ತರಹವಂತೂ ಅಲ್ಲ. ಅನ್ನ ಮಾಡಿದ ಹಾಗೆ ಶಾವಿಗೆ ಮಾಡಿ ಆಮೇಲೆ ಅದರ ಮೇಲೆ ಸಕ್ಕರೆ ಉದುರಿಸಿಕೊಂಡು ತಿನ್ನುವುದು. ನನ್ನ ಅಮ್ಮ ಮಾಡುವ ಪಾಯಸದ ಹಾಗೆ ಅಲ್ಲ. ಎರಡರಲ್ಲೂ ಅದೇ ಶಾವಿಗೆ ಇದ್ದರೂ ಎರಡರ ಟೇಸ್ಟ್ ಪೂರ ಬೇರೆ ಬೇರೆ, ಅಡುಗೆಯೇ ಹಾಗೆ, ಮಾಡುವವರ ಹಾಗೆ ಬದಲಾಗುತ್ತದೆ. ಅದೇ ಗೊದಿಹಿಟ್ಟಾದರೂ ಶಾವಿಗೆ ರಮೆನ್ ನ್ಯೂಡಲ್, ಪಾಸ್ತಾ, ರವಿಯೋಲೀ ವರ‍್ಮಿಸೆಲ್ಲಿಗಳ ರುಚಿ ಒಂದಕ್ಕಿಂತ ಮತ್ತೊಂದು ಬೇರೆ. ಪಾಸ್ತಾ ಮಾಡುವುದನ್ನು ಮೊದಲು ನೋಡಿದವರಿಗೆ ಅದು ಬಡಗಣ ಕರ‍್ನಾಟಕದಲ್ಲಿ ಮಾಡುವ ಕಡುಬಿನ ತರಹ ಕಾಣದೆ ಇರದು. ಚಯ್ನೀಸ್ ಮಸಾಲೆ ಹಾಕಿದರೆ ಇಟ್ಯಾಲಿಯನ್, ಇಂಡಿಯನ್ ಎಲ್ಲ‌ ತಮ್ಮದೇ ಚಾಪು ಶಾವಿಗೆ ಮೇಲೆ ಹಾಕುತ್ತವೆ.

ನನಗಿನ್ನೂ ಚೆನ್ನಾಗಿ ನೆನಪಿದೆ ನನ್ನ ತಾತನ ಮನೆಯಲ್ಲಿ ಅಜ್ಜಿ ಶಾವಿಗೆ ಮಾಡುತ್ತಿದ್ದದ್ದು. ಮನೆಯಲ್ಲಿ ಮಾಡುವ ಶಾವಿಗೆ ಪ್ರೊಸೆಸ್ ತುಂಬಾ‌ ಕಟಿಣವಾದದ್ದು! ಕಟ್ಟಿಗೆ ತುಂಡಿನ ಮೇಲೆ ಶಾವಿಗೆ ಒತ್ತುವ ಮಶಿನ್ ಹೊಂದಿಸಲಾಗಿತ್ತು. ಮೊದಲು ಕಟ್ಟಿಗೆಯನ್ನು ಅಲುಗಾಡದ ಹಾಗೆ ಬೆಂಚ್ ಮೇಲೆ ಬಾರವಾದ ಕಲ್ಲುಗಳನ್ನು ಇಟ್ಟು ಸ್ತಿರ ಮಾಡಲಾಗುತ್ತಿತ್ತು. ಅದರ ತಿರುಗಣಿಗೆ ಉದ್ದದ ಕಬ್ಬಿಣದ ಸಲಾಕೆಯನ್ನು ತೂರಿಸಿ ಅದರ ಕೊನೆಗೆ ಇಬ್ಬರು ಹುಡುಗರನ್ನು ನಿಲ್ಲಿಸಲಾಗುತ್ತಿತ್ತು. ಹೆಂಗಸರು ಹಿಟ್ಟನ್ನು ಹದಮಾಡಿಕೊಂಡು ಲಟ್ಟಣಿಗೆಯಿಂದ ಮಶಿನಿನ ಬಾಯಿಗೆ ಹಾಕುತ್ತಿದ್ದರು, ಹುಡುಗರು ಸಲಾಕೆಯನ್ನು ಹಿಡಿದುಕೊಂಡು ಓಡುತ್ತಾ ಮಶಿನಿನ ತಿರುಗಣಿಯನ್ನು ತಿರುಗಿಸಲು ಶುರು ಮಾಡುತ್ತಿದ್ದರು. ಆಗ ಶಾವಿಗೆ ಅಚ್ಚಿನಿಂದ ಕೆಳಗೆ ಬೀಳಲು ಶುರುವಾಗುತ್ತಿತ್ತು. ದಿನವೆಲ್ಲ ಶಾವಿಗೆ ಮಾಡಿದರು ಅರ‍್ದಗಂಟೆಗೆ ಒಮ್ಮೆ ಹುಡುಗರನ್ನು ಬದಲಾಯಿಸಲಾಗುತ್ತಿತ್ತು. ಶಾವಿಗೆ ಮಾಡಲು ನೆರವಾಗುವ ಹುಡುಗರಿಗೆ ಐಸ್‌ಕ್ರೀಂ, ಜೊತೆಗೆ ಎರಡು ರೂಪಾಯಿ ಬಕ್ಶೀಸ್!

ಜಗತ್ತಿನಲ್ಲಿ ಮೊದಲ ಬಾರಿಗೆ ಶಾವಿಗೆ ಮಾಡಿ ತಿಂದವರು ಚೀನಿಯರಂತೆ. 4000 ವರುಶಗಳ ಹಿಂದೆಯೇ ಶಾವಿಗೆಯನ್ನು ಹುಟ್ಟುಹಾಕಲಾಗಿತ್ತು. ಲಾಜಿಯಾ ಆರ‍್ಕಿಯಾಲಾಜಿಕಲ್ ಸೈಟಿನಲ್ಲಿ 4000 ವರುಶ ಹಳೆಯ ಶಾವಿಗೆ ಒಂದು ಬಟ್ಟಲಿನೊಳಗೆ ಸಿಕ್ಕಿದೆ. ಜಪಾನಿಗೆ ಶಾವಿಗೆ ತಂದವನು ಒಬ್ಬ ಬೌದ್ದ ಬಿಕ್ಕು,ಅಲ್ಲಿ ‘ಉಡೋನ್, ರಮೆನ್’ ಅಂತೆಲ್ಲ ಕರೆಯುತ್ತಾರೆ. ಪರ‍್ಶಿಯಾ, ಆಪಗಾನಿಸ್ತಾನದಲ್ಲಿ ‘ರೇಶ್ತೇ’ ಅಂತ, ಕರ‍್ನಾಟಕದಲ್ಲಿ ಮೊದಲು ಗಡಿಗೆಯನ್ನು ಬೋರಲು ಹಾಕಿ ಕಯ್ಯಿಂದ ಹೊಸೆದ ಶಾವಿಗೆ ಮಾಡುವ ವಿದಾನವೂ ಇದೆ. ಆದರೆ ಈಗ ಅಶ್ಟು ನಡಾವಳಿಯಲ್ಲಿ ಇಲ್ಲ. ಶಾವಿಗೆಗೆ ಬಳಸುವ ಗೋದಿಹಿಟ್ಟಿನಿಂದ ಸವತೇ ಬೀಜದ ಹಾಗೆ ಸಣ್ಣಗೆ ಕಡಿಯುತ್ತಾರೆ. ಗೋದಿಯ ಕುಟ್ಟಿದ ಹುಗ್ಗಿ ಮಾಡುತ್ತಾರೆ ಹಾಗೂ ಬಟವೀಯನ್ನೂ(ಪಿಶ್ ಪುಡ್ ತರಹ ಚಿಕ್ಕಚಿಕ್ಕ‌ ದುಂಡನೆಯ ಕಾಳುಗಳ ರೀತಿ) ಮಾಡುತ್ತಾರೆ.

(ಮಾಹಿತಿ ಸೆಲೆ: nationalgeographic.com, ಚಿತ್ರ ಸೆಲೆ: publictv.in)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.