ಚಂದದ ನ್ಯಾನೋ ಕತೆಗಳು

ವೆಂಕಟೇಶ ಚಾಗಿ.

ಕಿರುಗತೆಗಳು, ಪುಟ್ಟಕತೆಗಳು, Nano Stories, Short Stories

ಗೆಳೆತನ

ಅವನು ಒಂದು ಪುಸ್ತಕ ಬರೆದ. ತುಂಬಾ ಹೆಸರು ಮಾಡಿತು ಆ ಪುಸ್ತಕ. ಬೆಲೆ ಅಶ್ಟೇನು ಜಾಸ್ತಿ ಇರಲಿಲ್ಲ. ಬಹಳಶ್ಟು ಜನರು ಮೆಚ್ಚುಗೆಯನ್ನು ಸಹ ನೀಡಿದರು. ಒಮ್ಮೆ ಅವನ ಸ್ನೇಹಿತರಾದ ರಾಮು ಮತ್ತು ರಮೇಶ್ ಅವನನ್ನು ಬೇಟಿಯಾಗಲು ಅವನ ಮನೆಗೆ ಬಂದರು. ಅವನ ಪುಸ್ತಕದ ಜನಪ್ರಿಯತೆಯನ್ನು ಹೊಗಳಿದರು. ಸಮಾಜದಲ್ಲಿನ ಅನೇಕ ಜನರಿಗೆ ನಿನ್ನ ಪುಸ್ತಕ ಒಳ್ಳೆಯ ಕೊಡುಗೆ ಎಂದರು. ಆ ಸ್ನೇಹಿತರಿಗೆ ಸ್ವಲ್ಪ ಹಣ ಬೇಕಿತ್ತು. ಪುಸ್ತಕ ಮಾರಿದ ಹಣವನ್ನು ಅವರಿಗೆ ಕೊಟ್ಟು ಕಳಿಸಿದ. ದಿನಗಳು, ವರ‍್ಶಗಳು ಉರುಳಿದರೂ ಸ್ನೇಹಿತರಿಬ್ಬರೂ ಬರಲಿಲ್ಲ ಹಾಗೆಯೇ ಹಣವೂ ಸಹ. ಅಂದಹಾಗೆ ಆ ಪುಸ್ತಕದ ಹೆಸರು “ಸ್ನೇಹ ಉಳಿಸಿಕೊಳ್ಳಲು ನೂರು ಮಾರ‍್ಗಗಳು”

ಪ್ರೀತಿ

ಒಂದು ದೊಡ್ಡ ಬಂಡೆ ಕಲ್ಲಿನ ಮೇಲೆ ತಮ್ಮ ಹೆಸರನ್ನು ಬರೆದು ತಮ್ಮ ಪ್ರೀತಿ ಅಮರವಾಯಿತೆಂದು ಅಂದುಕೊಂಡರು. ಬಹುದಿನಗಳವರೆಗೆ ಪ್ರೀತಿಸಿದರು. ಅವರ ಪ್ರೀತಿಗೆ ಸಾಕ್ಶಿಯಾಗಿ ಆ ಬಂಡೆಕಲ್ಲು ಅವರ ಹೆಸರನ್ನು ತನ್ನ ಮೈ ಮೇಲೆ ಹಾಗೆಯೇ ಉಳಿಸಿಕೊಂಡಿತು. ಇಬ್ಬರೂ ಬಂಡೆಯ ಮೇಲೆ ಕುಳಿತು ತಮ್ಮ ಬವಿಶ್ಯದ ಜೀವನದ ಕುರಿತು ಮಾತನಾಡಿಕೊಳ್ಳುತ್ತಿದ್ದರು. ದಿನಗಳು ಉರುಳಿದವು. ಅವರಿಬ್ಬರೂ ತಮ್ಮ ಪ್ರೀತಿ ಮರೆತು ಬೇರೆ ಬೇರೆಯಾಗಿ ಮತ್ತೊಬ್ಬರನ್ನು ಮದುವೆಯಾಗಿ ಅದೇ ಬಂಡೆಯ ಬಳಿ ಆಕಸ್ಮಿಕವಾಗಿ ಸಂದಿಸಿದರು. ಬಂಡೆ ಮಾತ್ರ ಅವರಿಬ್ಬರ ಪ್ರೀತಿಗೆ ಸಾಕ್ಶಿ ನುಡಿಯುತ್ತಿತ್ತು ಮೌನವಾಗಿ.

ಹರಿದ ನೋಟು

ಆ ನೋಟು ಮಾಸಿ ಹರಿದು ತಂಡುತುಂಡಾದರೂ ಅದಕ್ಕೆ ತೇಪೆ ಹಾಕಿ ಅದನ್ನು ಬದ್ರವಾಗಿ ಅವನು ತನ್ನ ಬಳಿ ಇಟ್ಟುಕೊಂಡಿದ್ದ. ಆ ನೋಟೇನು ಅಶ್ಶೊಂದು ಕಿಮ್ಮತ್ತಿನದೇನೂ ಆಗಿರಲಿಲ್ಲ. ಆದರೂ ಆ ನೋಟಿಗೆ ಅಶ್ಟೊಂದು ಬದ್ರತೆ ಅವನಿಂದ ಇತ್ತು. ನೆನಪಾದಾಗಲೆಲ್ಲಾ ಆ ನೋಟನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಅವನು ಕಣ್ಣೀರು ಸುರಿಸುತ್ತಿದ್ದ. ಅದು ಅವನ ಮೊದಲ ದುಡಿಮೆಯಾಗಿತ್ತು. ಹಾಗೆಯೇ ಅವಳ ಹೆಸರೂ ಅದರ ಮೇಲೆ ಬರೆದಿತ್ತು. ಅವಳಿಂದಲೇ ಕೋಟಿ ನೋಟುಗಳ ನಡುವೆ ಆ ನೋಟು ವಿಶೇಶವಾಗಿತ್ತು. ಅವಳಿಲ್ಲದಿರುವುದು ಕಣ್ಣೀರಿಗೆ ಕಾರಣವಾಗಿತ್ತು.

ರಸ್ತೆ

ಮೊದಲು ಆ ಜಾಗ ಹಚ್ಚಹಸಿರಿನ ಹುಲ್ಲಿನಿಂದ ಕೂಡಿತ್ತು. ಆ ಜಾಗದ ಮೂಲಕ ಹಾದೂ ಹೋದರೆ ಕೆಲವೊಂದು ಕಟ್ಟಡಗಳಿಗೆ ದೂರ ಕಿರಿದಾಗುತ್ತಿತ್ತು. ಮೊದ ಮೊದಲು ಅಲ್ಲಿ ಕಾಲುದಾರಿ ಪ್ರಾರಂಬವಾಯಿತು. ಹೆಜ್ಜೆ ಇಟ್ಟ ಕೆಲದಿನಗಳಲ್ಲೇ ಹಸಿರು ಮಾಯವಾಗಿತ್ತು. ಒಣಗಿದ ನೆಲ ನಡೆಯಲು ಸಹಕಾರಿಯಾಗಿತ್ತು. ದಿನಗಳು ಕಳೆದಂತೆ ಅಲ್ಲೊಂದು ಕಚ್ಚಾದಾರಿಯನ್ನು ನಿರ‍್ಮಿಸಲಾಯಿತು. ಸಣ್ಣಪುಟ್ಟ ವಾಹನಗಳ, ಜನರ ಓಡಾಟ ಶುರುವಾಯಿತು. ಆ ರಸ್ತೆ ಅದೆಶ್ಟು ಜನನಿಬಿಡವಾಯಿತೆಂದರೆ ಆ ರಸ್ತೆ ಹೆದ್ದಾರಿಯಾಗಿ ಮಾರ‍್ಪಟ್ಟಿತು. ರಸ್ತೆ ಅಂದುಕೊಂಡಿತು ಎಲ್ಲಾ ನನ್ನ ಹಣೆಬರಹ ಎಂದು.

( ಚಿತ್ರಸೆಲೆ : professionalstudies.educ.queensu.ca )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Priyadarshini Shettar says:

    Beautiful stories sir. Enjoyed reading…

ಅನಿಸಿಕೆ ಬರೆಯಿರಿ:

Enable Notifications