ಹಲಸು ದೇಹಕ್ಕೆ ಸೊಗಸು

– ಸಂಜೀವ್ ಹೆಚ್. ಎಸ್.

jack fruit, ಹಲಸು

ಮೂಲತಹ ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾನು ನೈಸರ‍್ಗಿಕವಾಗಿ ಸಿಗುವ ಹಲವು ಬಗೆಯ ಹಣ್ಣು ಹಂಪಲುಗಳನ್ನೇ ತಿಂದು ಬೆಳೆದದ್ದು. ಬಾಲ್ಯವೆಂದರೆ ಹಾಗೆಯೇ. ಹಲವು ಬಗೆಯ ಆಟಗಳು, ಆಟದಲ್ಲಿ ತಿಂಡಿ-ತಿನಿಸುಗಳ ಪಾತ್ರಗಳೇ ಹೆಚ್ಚು. ಹೊಲಗದ್ದೆ, ತೋಟಗಳಲ್ಲಿ ಬೆಳೆದ ಹಣ್ಣುಗಳೇ ನಮಗೆ ಆಹಾರ. ಅಂತಹ ಹಣ್ಣುಗಳಲ್ಲಿ ಹಲಸಿನ ಹಣ್ಣು ಕೂಡ ಒಂದು. ಸ್ನೇಹಿತರೊಂದಿಗೆ ಸೇರಿ ಹಲಸಿನ ಹಣ್ಣನ್ನು ಬೇರೆಯವರ ತೋಟದಲ್ಲಿ ಕದ್ದು ತಿಂದದ್ದು ಇನ್ನೂ ನೆನಪಿದೆ. ಹಲಸಿನಹಣ್ಣಿನೊಂದಿಗಿನ ನೆನಪು ಸದಾ ಹಸಿರಾಗಿದೆ. ಕೇವಲ ನನಗಶ್ಟೇ ಅಲ್ಲ ನಿಮಗೂ ಕೂಡ ಸದಾ ಅವುಗಳ ನೆನಪು ಕಾಡುತ್ತದೆ ಎಂದು ಬಾವಿಸಿದ್ದೇನೆ.

ಸಂಸ್ಕ್ರತದಲ್ಲಿ ‘ಪನಸ’ ಎಂದು ಕರೆಯುವ , ವೈಜ್ನಾನಿಕವಾಗಿ ಆರ‍್ಟೋಕಾರ‍್ಪಸ್ ಹೆಟಿರೋಪೈಲಸ್ ಎಂಬ ಹೆಸರುಳ್ಳ ಇಂಗ್ಲಿಶ್‌ನಲ್ಲಿ ಜಾಕ್ ಪ‍್ರೂಟ್ ಎಂದು ಕರೆಯಲಾಗುವ ಹಲಸಿನ ಹಣ್ಣಿನ ಆಹಾರ ಮೌಲ್ಯ ಬಹಳ ಹೆಚ್ಚು. ಬಡವರ ಹಣ್ಣು ಎಂದೇ ಕ್ಯಾತಿ ಪಡೆದಿರುವ ಹಲಸಿನ ಹಣ್ಣು, ಹೊರಗಿನಿಂದ ಒರಟಾಗಿದ್ದರೂ ಒಳಗೆ ಮ್ರುದು‌. ತನ್ನ ಒಡಲಾಳದಲ್ಲಿ ಮುತ್ತನ್ನು ಪೋಣಿಸಿದಂತೆ ತನ್ನ ಎಲ್ಲಾ ಹಣ್ಣುಗಳನ್ನು ನಾರುಗಳ ಸಹಾಯದಿಂದ ಸುತ್ತಿರುವ ಹಣ್ಣು. ಹಲಸಿನ ಉತ್ಪಾದನೆಯಲ್ಲಿ ಬಾರತ ದೇಶಕ್ಕೆ ಜಗತ್ತಿನಲ್ಲಿಯೇ ಎರಡನೇ ಸ್ತಾನವಿದೆ. ಹಲಸು ನಿತ್ಯಹರಿದ್ವರ‍್ಣದ ದೊಡ್ಡ ಪ್ರಮಾಣದ ಮರ. ಇದು ಕರ‍್ನಾಟಕದ ದಕ್ಶಿಣ ಬಾಗದಲ್ಲಿ ಎಲ್ಲಾ ಕಡೆ, ಮಲೆನಾಡು ಮತ್ತು ಕರಾವಳಿಯ ಕಾಡುಗಳಲ್ಲಿಯೂ ಕೂಡಾ ವ್ಯಾಪಕವಾಗಿ ಬೆಳೆಯುತ್ತದೆ.

ದೂರದೂರಿನ ಸೇಬಿಗಿಂತ ನಮ್ಮದೇ ಊರಿನ ಹಲಸಿನಲ್ಲಿ ಹಲವಾರು ಪೌಶ್ಟಿಕಾಂಶಗಳ ಸಾರಗಳಿವೆ. ಹಲವು ಪ್ರಮುಕ ಮತ್ತು ಸಣ್ಣ ಪೌಶ್ಟಿಕಾಂಶಗಳ ಆಗರ ಎಂದೇ ಕರೆದರು ಅತಿಶಯೋಕ್ತಿಯಲ್ಲ. ಹಲಸಿನ ಹಣ್ಣಿನಲ್ಲಿ ಅದಿಕ ಪ್ರಮಾಣದಲ್ಲಿ ವಿಟಮಿನ್‌ಗಳು, ಸೆರೊಟಿನಿನ್, ಬೀಟಾ ಕ್ಯಾರೋಟಿನ್, ಸೋಡಿಯಮ್ , ಕ್ಯಾಲ್ಶಿಯಮ್, ಪೊಟಾಶಿಯಮ್ ಅಂಶಗಳಿವೆ.

ಕೋವಿಡ್ 19 ಬಂದ ನಂತರದಲ್ಲಿ ಎಲ್ಲರೂ ರೋಗನಿರೋದಕ ಶಕ್ತಿ ಹೆಚ್ಚಿಸುವುದರ ಬಗ್ಗೆ ಮಾತು ಆರಂಬಿಸಿದ್ದಾರೆ, ಅಂತಹ ರೋಗನಿರೋದಕ ಶಕ್ತಿ ಹೆಚ್ಚಿಸುವ ಹಲವು ಔಶದೀಯ ಗುಣಗಳನ್ನು ನಮ್ಮ ಮನೆಯ ಹಿತ್ತಲಿನಲ್ಲಿ ಬೆಳೆದ ಹಲಸಿನಹಣ್ಣು ಹೊಂದಿದೆ. ಅದಿಕ ಪ್ರಮಾಣದಲ್ಲಿ ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು, ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಶಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋದಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಕ ಪಾತ್ರ ವಹಿಸುತ್ತದೆ. 100 ಗ್ರಾಂ ಹಲಸಿನಲ್ಲಿ 47.8 ಮಿಲಿಗ್ರಾಂ ವಿಟಮಿನ್ ಸಿ ಸಿಗುತ್ತದೆ. ಪ್ರೋಟೀನ ಮತ್ತು ವಿಟಮಿನ್ ಸಿ ಯನ್ನು ಒಳಗೊಂಡಂತೆ ಹಲಸಿನ ಹಣ್ಣು, ಲಿಗಾನ್ಸ್, ಐಸೋಪ್ಲೇವನ್ಸ್ ಮತ್ತು ಸಪೋನಿನ್ಸ್‌ನಂತಹ ಪೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ. ಇದು ಕ್ಯಾನ್ಸರ್ ವಿರುದ್ದ ಮತ್ತು ಬೇಗನೇ ಮುಪ್ಪಿನ ಲಕ್ಶಣಗಳನ್ನು ಕಾಣಿಸಿಕೊಳ್ಳುವುದರ ವಿರುದ್ದ ಹೋರಾಡುತ್ತದೆ. ಯಾರಿಗೆ ಚಿರಯೌವನ್ನು ಹಾಗೆ ಉಳಿಸಿಕೊಳ್ಳಲು ಇಚ್ಚಿಸುವವರು ಹಲಸಿನಹಣ್ಣಿನ ಸೇವನೆ ಮಾಡಬಹುದು!

ಹಲವು ಔಶದೀಯ ಅಂಶಗಳನ್ನೂ ಒಳಗೊಂಡಿರುವ ಹಲಸು ಹಲವು ಬಗೆಯಲ್ಲಿ ನಮ್ಮ ದೇಹಕ್ಕೆ ಬಹು ಉಪಕಾರಿ. ಈ ಹಣ್ಣನ್ನು ನಿತ್ಯವೂ ನಿಯಮಿತವಾಗಿ ಸೇವಿಸಿದರೆ ಇದರಲ್ಲಿರುವ ಪೈಟೋನ್ಯೂಟ್ರಿಯೆಂಟ್ಗಳು ಕ್ಯಾನ್ಸರ್ ಗೆ ಪ್ರತಿಬಂದಕವಾಗಿ ಕಾರ‍್ಯವೆಸಗುತ್ತದೆ. ಅದಿಕ ವಿಟಮಿನ್ ಎ ಇರುವುದರಿಂದ ಕಣ್ಣಿನ ತೊಂದರೆಗಳಿಗೆ ಮುಕ್ಯವಾಗಿ ಇರುಳುಗಣ್ಣು ತೊಂದರೆಗಳಿಗೆ ಉತ್ತಮ. ಮೆಗ್ನೀಶಿಯಂ ಮತ್ತು ಕ್ಯಾಲ್ಸಿಯಂನಂತಹ ಕನಿಜಾಂಶಗಳು ಹೆಚ್ಚಾಗಿ ಈ ಹಣ್ಣಿನಲ್ಲಿ ಇರುವುದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಇದರಲ್ಲಿನ ತಾಮ್ರದ ಅಂಶ ತೈರಾಡ್ ಸಮಸ್ಯೆಯನ್ನು ಪರಿಹರಿಸಲು ಸಹಕಾರಿ. ದೇಹದಲ್ಲಿ ಅಲ್ಸರ್ ಗಳಾಗಿದ್ದರೆ ಅದನ್ನು ಕೂಡ ಗುಣಪಡಿಸುವ ವಿಶಿಶ್ಟ ಗುಣ ಹಲಸಿನ ಹಣ್ಣಿಗೆ ಇದೆ. ಅತ್ಯದಿಕ ಪೈಬರ್ ಅಂಶವು ಮ್ರುದುವಾದ ಕರುಳಿನ ಚಲನೆಗೆ ಸಹಾಯ ಮಾಡಿ ಜೀರ‍್ಣಕ್ರಿಯೆ ಸಮಸ್ಯೆಯನ್ನು ದೂರಮಾಡುತ್ತದೆ. ಇದರಿಂದಾಗಿಯೇ “ಹಸಿದು ಹಲಸು ತಿನ್ನು ಉಂಡು ಮಾವು ತಿನ್ನು” ಎಂಬ ಗಾದೆ ಮಾತು ಬಂದಿರಬಹುದು.

ಪ್ರಮುಕವಾಗಿ ಹಲಸಿನಹಣ್ಣು ಕೊಬ್ಬಿನಂಶ ಮತ್ತು ಸೋಡಿಯಂ ಅಂಶ ಕಡಿಮೆ ಇರುವ ಕಾರಣ ತೂಕ ಇಳಿಸಿಕೊಳ್ಳಲು ಇಚ್ಚಿಸುವವರು ಹಲಸಿನ ಹಣ್ಣನ್ನು ಸೇವಿಸಬಹುದು.‌ ದೇಹದಲ್ಲಿ ಕೊಬ್ಬು ಮತ್ತು ಸೋಡಿಯಂ ಹೆಚ್ಚಾದರೂ ಹಲವು ಬಗೆಯ ರೋಗಗಳು ಅಂಟಿಕೊಳ್ಳುತ್ತವೆ. ಅವುಗಳೆಲ್ಲವನ್ನು ತಡೆಯುವಲ್ಲಿ ಕಡಿಮೆ ಕೊಬ್ಬಿನಂಶ ಮತ್ತು ಸೋಡಿಯಂ ಅಂಶ ಇರುವ ಹಲಸಿನಹಣ್ಣು ಬಹು ಉಪಕಾರಿ. ಹಿತ್ತಲ ಗಿಡ ಮದ್ದಲ್ಲ ಎಂಬ ಹಾಗೆ ನಾವು ಸುಕಾಸುಮ್ಮನೆ ಹೊರಗಿನ ಹಲವು ಬಗೆಯ ಪರಿಹಾರಗಳನ್ನು ಹುಡುಕುತ್ತೇವೆ ನಮ್ಮ ಕಣ್ಣೆದುರಲ್ಲೇ ಪರಿಹಾರವಿದ್ದರೂ ಕುರುಡರಾಗುತ್ತೇವೆ.

ಹಲಸಿನ ಹಣ್ಣಿನಿಂದ ನೂರಕ್ಕೂ ಹೆಚ್ಚು ತಿನಿಸುಗಳನ್ನು ತಯಾರಿಸುತ್ತಾರೆ, ಅವರವರ ಪ್ರದೇಶಕ್ಕೆ ತಕ್ಕಂತೆ ಅವರವರ ಆಹಾರ ಪದ್ದತಿಗನುಗುಣವಾಗಿ ಹಲವು ಬಗೆಯ ತಿಂಡಿ ತಿನಿಸುಗಳು ಬಾಯಿಗೆ ಸವಿರುಚಿಯನ್ನು ನೀಡುತ್ತದೆ ಹಲಸು. ಹಲಸಿನ ಬೀಜವನ್ನು ಒಣಗಿಸಿ ಅದರಲ್ಲೇ ಸಾಂಬಾರ್ ಮಾಡಿದರೆ ಅದರ ರುಚಿಯೇ ಬೇರೆ. ಚಿಕ್ಕ ಮಕ್ಕಳಾಗಿದ್ದಾಗ ಹಲಸಿನ ಬೀಜವನ್ನು ಒಲೆಯ ಮೇಲೆ ಕೆಂಡದಲ್ಲಿ ಬೇಯಿಸಿ ತಿನ್ನುತ್ತಿದ್ದವು. ಅದರ ನೆನಪು ಈಗಲೂ ಇದೆ.  ಇಶ್ಟೇ ಅಲ್ಲದೆ ಟನ್ಗಟ್ಟಲೆ ಉತ್ಪಾದನೆಯಾಗುತ್ತಿರುವ ಹಲಸಿನ ಹಣ್ಣನ್ನು ಸಂಸ್ಕರಿಸಿ ಹಲವು ರೀತಿಯ ಆಹಾರಗಳಲ್ಲಿ ಸೇರಿಸಿ ಮೌಲ್ಯವರ‍್ದಿತ ಆಹಾರಗಳನ್ನಾಗಿ ಮಾಡಿ ಗ್ರಾಹಕರ ಹಸಿವನ್ನು ತಣಿಸಲಾಗುತ್ತಿದೆ. ಈಗಾಗಲೇ ಹಲವು ಸಣ್ಣ ಕೈಗಾರಿಕೆಗಳು ಇದರೆಡೆಗೆ ಒಲವು ಹೆಚ್ಚಿಸಿರುವುದು ಕುಶಿಯ ವಿಚಾರ.

(ಚಿತ್ರ ಸೆಲೆ: wallpaperflare.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications