ಅಕ್ಕಿ ಹಿಟ್ಟಿನ ಸಿಹಿ ಕಡುಬು

– ಸವಿತಾ.

 

rice, sweet, kadubu, ಅಕ್ಕಿ ಹಿಟ್ಟಿನ ಸಿಹಿ ಕಡುಬು

ಬೇಕಾಗುವ ಸಾಮಾನುಗಳು

  • ಅಕ್ಕಿ ಹಿಟ್ಟು – 2 ಲೋಟ
  • ಬೆಲ್ಲದ ಪುಡಿ – 1 ಲೋಟ
  • ಹಸಿ ಕೊಬ್ಬರಿ ತುರಿ – 2 ಲೋಟ
  • ಗಸಗಸೆ – 1 ಚಮಚ
  • ಎಳ್ಳು – 2 ಚಮಚ
  • ಏಲಕ್ಕಿ – 2
  • ಕರಿ ಮೆಣಸಿನ ಕಾಳು -1 ಚಮಚ
  • ಉಪ್ಪು – 1 ಚಮಚ
  • ತುಪ್ಪ – 1 ಸಣ್ಣ ಬಟ್ಟಲು

ಮಾಡುವ ಬಗೆ

ಹಸಿ ಕೊಬ್ಬರಿ ತುರಿದು ಇಟ್ಟುಕೊಳ್ಳಿ. ಬೆಲ್ಲಕ್ಕೆ ನಾಲ್ಕು ಚಮಚ ನೀರು ಹಾಕಿ ಸ್ವಲ್ಪ ಬಿಸಿ ಮಾಡಿ. ಕರಗಿದ ಮೇಲೆ ಹಸಿ ಕೊಬ್ಬರಿ ತುರಿ ಸೇರಿಸಿ ಸ್ವಲ್ಪ ಹೊತ್ತು ಹುರಿದು ಒಲೆ ಆರಿಸಿ. ಎಳ್ಳು, ಏಲಕ್ಕಿ, ಕರಿ ಮೆಣಸಿನ ಕಾಳು ಸ್ವಲ್ಪ ಹುರಿದು ಪುಡಿ ಮಾಡಿ ಸೇರಿಸಿ. ಬೇಕಾದರೆ ಚಿಟಿಕೆ ಉಪ್ಪು ಸೇರಿಸಿ ಕೈಯಾಡಿಸಿ ಹೂರಣ ತಯಾರು ಮಾಡಿ ಇಟ್ಟುಕೊಳ್ಳಿ.

ನೀರು ಕುದಿಯಲು ಇಟ್ಟು, ಕುದಿ ಬಂದ ನಂತರ ಉಪ್ಪು, ಸ್ವಲ್ಪ ತುಪ್ಪ ಹಾಕಿ ಅಕ್ಕಿ ಹಿಟ್ಟು ಸೇರಿಸಿ ಕಟ್ಟಿಗೆ ಚಮಚದಿಂದ ತಿರುಗಿಸಿ ಮುದ್ದೆ ಮಾಡಿ ಒಲೆ ಆರಿಸಿ. ಅಕ್ಕಿ ಹಿಟ್ಟು ಆರಿದ ನಂತರ ಕೈಗೆ ನೀರು ಹಚ್ಚಿಕೊಂಡು ಸಣ್ಣ ಸಣ್ಣ ಉಂಡೆ ಮಾಡಿ. ಸ್ವಲ್ಪ ತುಪ್ಪ ಹಚ್ಚಿ ಮಣೆ ಮೇಲೆ ಬಾಳೆ ಎಲೆ ಇಟ್ಟು ಲಟ್ಟಿಸಿ. ತಯಾರಿಸಿದ ಹೂರಣ ತುಂಬಿ ಎರಡೂ ಬದಿ ಜೋಡಿಸಿ, ಕಡುಬು ತಯಾರಿಸಿ. ತಯಾರಾದ ಕಡುಬು ಒಂದು ಪಾತ್ರೆಗೆ ಹಾಕಿ, ಕುಕ್ಕರ‍್‌ನಲ್ಲಿ ತಳಕ್ಕೆ ನೀರು ಹಾಕಿ ಮೇಲೆ ಪಾತ್ರೆ ಇಟ್ಟು ಮುಚ್ಚಳ ಹಾಕಿ ಹಬೆ ಜೋರಾಗಿ ಹೊರಗೆ ಹೋಗುವಂತೆ 7-8 ನಿಮಿಶ ಕುದಿಸಿ. ಒಲೆ ಆರಿಸಿ ಹತ್ತು ನಿಮಿಶ ಬಿಟ್ಟು ಪಾತ್ರೆ ತೆಗೆದು, ತಣ್ಣೀರಿನ ನೀರಲ್ಲಿ ಇಡಿ. ಸ್ವಲ್ಪ ತಣ್ಣಗಾದ ಮೇಲೆ ಕಡುಬು ತೆಗೆಯಿರಿ. ಈಗ ಅಕ್ಕಿ ಹಿಟ್ಟಿನ ಸಿಹಿ ಕಡುಬು ಸವಿಯಲು ಸಿದ್ದ. ತುಪ್ಪ ದ ಜೊತೆ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: