ಐಪಿಎಲ್ 2020ರಲ್ಲಿ ಕರ‍್ನಾಟಕದ ಆಟಗಾರರು

– ಆದರ‍್ಶ್ ಯು. ಎಂ.

ಐಪಿಎಲ್ 2020 ಬಂದೇ ಬಿಟ್ಟಿದೆ. ಪ್ರತಿ ವರುಶ ಐಪಿಎಲ್ ಬಂದಾಗಲೂ ಕನ್ನಡಿಗರು ಕಾಯೋದು ಈ ಸಲ ಯಾರೆಲ್ಲಾ ಕನ್ನಡಿಗರು ಯಾವ ತಂಡದಲ್ಲಿದ್ದಾರೆ, ಆ ಮೂಲಕ ಅವರ ಆಟವನ್ನು ಕಣ್ತುಂಬಿಸಿಕೊಳ್ಳಬಹುದಲ್ಲಾ ಅಂತ. ಅದೇ ರೀತಿ ಈ ವರ‍್ಶದ ಐಪಿಎಲ್ ನಲ್ಲಿ ಯಾರೆಲ್ಲಾ ಕನ್ನಡಿಗರು ಯಾವ ಯಾವ ತಂಡದಲ್ಲಿದ್ದಾರೆ ಅಂತ ನೋಡೋಣ.

ಈ ಸಲ ಒಟ್ಟು ಹನ್ನೆರಡು ಜನ ಕರ‍್ನಾಟಕದ ಆಟಗಾರರು ಒಟ್ಟು ಐದು ಐಪಿಎಲ್ ತಂಡಗಳಲ್ಲಿ ಆಡುತ್ತಿದ್ದಾರೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದಲ್ಲಿ 5, ರಾಜಸ್ತಾನ್ ರಾಯಲ್ಸ್ ತಂಡದಲ್ಲಿ 3, ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದಲ್ಲಿ 2, ಸನ್ ರೈಸರ‍್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ‍್ಸ್ ತಂಡದಲ್ಲಿ ತಲಾ ಒಬ್ಬರು ಕರ‍್ನಾಟಕದ ಆಟಗಾರರಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ನಮ್ಮ ಹಲವು ಕನ್ನಡಿಗರು ಕಿಂಗ್ಸ್ ಇಲೆವೆನ್ ಕರ‍್ನಾಟಕ ಅಂತ ಪ್ರೀತಿಯಿಂದ ಕರೆಯೋದುಂಟು. ಯಾಕೆಂದರೆ ಈ ತಂಡದ ನಾಯಕ ಕನ್ನಡಿಗ ಕೆ.ಎಲ್.ರಾಹುಲ್ ಹಾಗೂ ಕೋಚ್ ಕೂಡಾ ಕನ್ನಡಿಗ ಅನಿಲ್ ಕುಂಬ್ಳೆ. ರಾಹುಲ್ ಅಲ್ಲದೇ ಕರ‍್ನಾಟಕದ ಈ ವರುಶದ ರಣಜಿ ನಾಯಕ ಕರುಣ್ ನಾಯರ್, ಬಾರತ ಟೆಸ್ಟ್ ತಂಡದ ಕಾಯಂ ಸದಸ್ಯ ಮಯಾಂಕ್ ಅಗರ‍್ವಾಲ್, ಸ್ಪಿನ್ನರ್ ಜಗದೀಶ್ ಸುಚಿತ್ ಹಾಗೂ ಸ್ಪಿನ್ನರ್ ಆಲ್ ರೌಂಡರ್ ಕ್ರಿಶ್ಣಪ್ಪ ಗೌತಮ್ ಇವರುಗಳೆಲ್ಲಾ ಇದ್ದಾರೆ. ಇದೇ ಕಾರಣಕ್ಕಾಗಿ ಪಂಜಾಬ್ ತಂಡ ಹಲವಾರು ಕನ್ನಡಿಗರ ನೆಚ್ಚಿನ ಐಪಿಎಲ್ ತಂಡವಾಗಿದೆ.

ರಾಜಸ್ತಾನ್ ರಾಯಲ್ಸ್ ತಂಡದಲ್ಲಿ ಈ ಐಪಿಎಲ್‌ನಲ್ಲಿ ಮೂರು ಜನ ಕರ‍್ನಾಟಕದ ಆಟಗಾರರಿದ್ದಾರೆ. ನಮ್ಮೆಲ್ಲರ ನೆಚ್ಚಿನ ಕನ್ನಡಿಗ-ಕೊಡಗಿನ ಕಲಿ ರಾಬಿನ್ ಉತ್ತಪ್ಪ ಈ ತಂಡದಲ್ಲಿರೋದು ಪ್ರಮುಕ ಆಕರ‍್ಶಣೆ. ಕರ‍್ನಾಟಕ ರಣಜಿ ತಂಡದ ಉಪನಾಯಕರಾಗಿದ್ದ ಶ್ರೇಯಸ್ ಗೋಪಾಲ್ ಅವರೂ ಈ ತಂಡದಲ್ಲಿದ್ದು ಅವರ ಮೇಲೆಯೂ ಅಪಾರವಾದ ನಿರೀಕ್ಶೆಯಿದೆ. ಕೊಹ್ಲಿ-ಎಬಿಡಿ ಅವರನ್ನು ಅವರು ಕಟ್ಟಿಹಾಕಿದ್ದು ಇನ್ನೂ ಕಣ್ಣ ಮುಂದಿದೆ. ಇದರ ಜೊತೆಗೆ ಸ್ಬೋಟಕ ಬ್ಯಾಟ್ಸ್‌ಮನ್ ಹಾಗೂ ಆಪ್ ಸ್ಪಿನ್ನರ್ ಅನಿರುದ್ದ್ ಜೋಶಿ ಅವರು ಕೂಡಾ ಈ ತಂಡದಲ್ಲಿದ್ದಾರೆ. ಇವರ ಮೇಲೆಯೂ ಬರವಸೆಯಿದೆ.

ಆರ್ ಸಿ ಬಿ ಅಂದರೆ ರಾಯಲ್ ಚಾಲೆಂಜರ‍್ಸ್ ಬೆಂಗಳೂರು ತಂಡದಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ದೇವದತ್ ಪಡಿಕ್ಕಲ್ ಹಾಗೂ ಪವನ್ ದೇಶಪಾಂಡೆ. ದೇವದತ್ ಪಡಿಕ್ಕಲ್ ಕಳೆದ ವರುಶದ ಸೈಯದ್ ಮುಶ್ತಾಕ್ ಆಲಿ ಟಿ20 ಪಂದ್ಯಾವಳಿಯ ಮೂಲಕ ಎಲ್ಲರಿಗೂ ಪರಿಚಿತರಾಗಿದ್ದಾರೆ. ಅವರ ಸಿಕ್ಸರ್ ಗಳು, ಬಿರುಸಿನ ಹೊಡೆತಗಳಿಗೆ ದೇಶದಾದ್ಯಂತ ಅಬಿಮಾನಿಗಳಿದ್ದಾರೆ. ಅವರು ಈ ಬಾರಿ ಆರ್ ಸಿ ಬಿ ತಂಡಕ್ಕೆ ಆರಂಬಿಕರಾಗಿ ಆಡೋದು ಹೆಚ್ಚೂ ಕಡಿಮೆ ಸ್ಪಶ್ಟವಾಗಿದೆ. ಪವನ್ ದೇಶಪಾಂಡೆ ಕೂಡಾ ಅದ್ಬುತ ಬ್ಯಾಟ್ಸ್‌ಮನ್, ಅವರು ಮದ್ಯಮ ಕ್ರಮಾಂಕದಲ್ಲಿ ಚೆನ್ನಾಗಿ ಹೊಂದಿಕೊಳ್ಳಬಹುದು. ಅವರ ಆಪ್ ಸ್ಪಿನ್ ಕೂಡಾ ತಂಡಕ್ಕೆ ನೆರವಾಗಬಹುದು.

ಸನ್ ರೈಸರ‍್ಸ್ ಹೈದರಾಬಾದ್ ತಂಡದಲ್ಲಿ ಇರೋದು ನಮ್ಮ ಕರ‍್ನಾಟಕ ಕ್ರಿಕೆಟ್ ತಂಡದ ನಾಯಕ ಮನೀಶ್ ಪಾಂಡೆ. ಈತ ಐಪಿಎಲ್ ನಲ್ಲಿ ಮಾಡಿರುವ ದಾಕಲೆ ಮರೆಯುವ ಹಾಗೆಯೇ ಇಲ್ಲ. ಐಪಿಎಲ್‌ನಲ್ಲಿ ಶತಕ ಗಳಿಸಿದ ಮೊದಲ ಬಾರತೀಯ ಆಟಗಾರ ಇವರೇ ಎಂಬುದು ಅನೇಕರಿಗೆ ತಿಳಿದಿಲ್ಲ. ಇಂತಹ ಮನೀಶ್ ಪಾಂಡೆ ಸನ್ ರೈಸರ‍್ಸ್ ನ ಶಕ್ತಿ ಎಂದರೆ ತಪ್ಪಲ್ಲ.

ಕೋಲ್ಕತ್ತಾ ನೈಟ್ ರೈಡರ‍್ಸ್ ಅಂದರೆ ಕೆಕೆಆರ್ ನಲ್ಲಿ ಕಳೆದ ಸಾಲುಗಳಲ್ಲಿ ರಾಬಿನ್-ವಿನಯ್-ಪಾಂಡೆ ಎಲ್ಲಾ ಇದ್ದು ನಾವೆಲ್ಲಾ ಪ್ರೀತಿಯಿಂದ ಕರ‍್ನಾಟಕ ನೈಟ್ ರೈಡರ‍್ಸ್ ಅಂತ ಕರೆಯುತ್ತಿದ್ದ ಕಾಲವೂ ಇತ್ತು. ಆದರೆ ಈಗ ಅಲ್ಲಿ ಉಳಿದಿರೋದು ಒಬ್ಬನೇ ಕನ್ನಡಿಗ ಅದು ಪ್ರಸಿದ್ದ್ ಕ್ರಿಶ್ಣ. ಆತನ ವೇಗದ ಬೌಲಿಂಗ್ ಕೋಲ್ಕತ್ತಾ ತಂಡದ ಮುಕ್ಯ ಶಕ್ತಿಯಾಗಿದೆ. ಬಾರತ ತಂಡಕ್ಕೆ ಆಯ್ಕೆಯಾಗಲು ಕೂಡಾ ಈ ವರುಶ ಆತ ಚೆನ್ನಾಗಿ ಆಡಬೇಕಾದ ಅನಿವಾರ‍್ಯತೆಯಿದೆ.

ಈ ವರುಶದ ಐಪಿಎಲ್ ನಲ್ಲಿ ರೋಹನ್ ಕದಂ ಸೇರಿದಂತೆ ಐಪಿಎಲ್ ನಲ್ಲಿ ಆಡಬಹುದಾಗಿದ್ದ ಇನ್ನೂ ಹಲವು ಆಟಗಾರರಿದ್ದರು. ಆದರೆ ಹಲವರು ನಿರ‍್ಲಕ್ಶ್ಯಕ್ಕೆ ಒಳಗಾದರು.

ಐಪಿಎಲ್ 2020ಕ್ಕೆ ಆಯ್ಕೆಯಾದ ಹನ್ನೆರಡು ಕನ್ನಡಿಗ ಆಟಗಾರರಲ್ಲಿ ಆಡುವ ಹನ್ನೊಂದರಲ್ಲಿ ಆಡುವ ಅವಕಾಶ ಒಂದಶ್ಟು ಜನರಿಗೆ ಸಿಗುವುದು ಕಶ್ಟ. ಆದರೆ ನಮ್ಮ ಹುಡುಗರು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಬಳಸಿಕೊಂಡು ಗೆಲ್ಲಲಿ. ಇದೇ ಎಲ್ಲಾ ಕನ್ನಡಿಗರ ಆಸೆ ಒತ್ತಾಸೆ.

ಈ ವರುಶದ ಐಪಿಎಲ್ ನಲ್ಲಿ ಕರ‍್ನಾಟಕದ ಆಟಗಾರರನ್ನು ಬೆಂಬಲಿಸೋಣ, ಹಾಗೆಯೇ ಈ ಪಂದ್ಯಗಳನ್ನು ‘ಸ್ಟಾರ್ ಸ್ಪೋರ‍್ಟ್ಸ್ ಕನ್ನಡ’ದಲ್ಲಿಯೇ ನೋಡೋಣ ?

(ಚಿತ್ರ ಸೆಲೆ: kultejas.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks