ಪುದೀನಾ ಪಲಾವ್

– ಸುಹಾಸಿನಿ ಎಸ್.

ಪುದೀನಾ ಸೊಪ್ಪಿನಲ್ಲಿ ಆರೋಗ್ಯಕ್ಕೆ ಬೇಕಾದ ತುಂಬಾ ಉತ್ತಮ ಅಂಶಗಳಿವೆ. ಇದರಲ್ಲಿರುವ ವಿಟಾಮಿನ್- ಎ, ಬಿ, ಸಿ, ಚರ‍್ಮದ ಕೆಲಸಕ್ಕೆ ನೆರವಾಗುವುದು. ಈ ಸೊಪ್ಪಿನಲ್ಲಿರುವ ಕಬ್ಬಿಣದ ಅಂಶಗಳು ಹಿಮೋಗ್ಲೋಬಿನ್, ಮೆದುಳಿನ ಕೆಲಸಗಳು ಸರಾಗವಾಗಿ ನಡೆಯಲು ಸಹಾಯ ಮಾಡುತ್ತವೆ. ಈ ಸೊಪ್ಪು ಬಾಯಿಯಿಂದ ಬರುವ ವಾಸನೆಯನ್ನು ಹೋಗಲಾಡಿಸುತ್ತದೆ. ಮುಕದ ಕಾಂತಿಯನ್ನು ಹೆಚ್ಚಿಸಿ ಲವಲವಿಕೆಯನ್ನ ತರುತ್ತದೆ. ಇಂತಹ ಒಂದು ಒಳ್ಳೆಯ ಸೂಪ್ಪಿನಿಂದ ರುಚಿಯಾದ ಪಲಾವ್ ತಯಾರಿಸಿ ಸವಿಯಬಹುದು.

ಏನೇನು ಬೇಕು

ಅಕ್ಕಿ- 2 ಲೋಟ/ಕಪ್
ಪುದೀನಾ – 1 ಕಟ್ಟು
ಮೆಣಸಿನಕಾಯಿ – 3-4
ಈರುಳ್ಳಿ – 3-4
ಬೆಳ್ಳುಳ್ಳಿ ಎಸಳು – 4-5
ಪಲಾವ್ ಎಲೆ – 1
ಚಕ್ಕೆ, ಲವಂಗ, ಕಲ್ಲು ಹೂ – 2-3
ಗೋಡಂಬಿ – 4-5
ಎಣ್ಣೆ – 1-2 ಚಮಚ
ಜೀರಿಗೆ – 2 ಚಮಚ
ಕೊತ್ತಂಬರಿ, ಕರಿಬೇವು – ಸ್ವಲ್ಪ
ಹಸಿ ಶುಂಟಿ – ಸ್ವಲ್ಪ
ಹಸಿ ಬಟಾಣಿ – ಸ್ವಲ್ಪ
ಅರಿಶಿಣ – ಸ್ವಲ್ಪ
ಉಪ್ಪು, ತುಪ್ಪ – ಸ್ವಲ್ಪ

ಮಾಡುವ ಬಗೆ

1.  ಅಕ್ಕಿಯನ್ನು 2-3 ಸಲ ತೊಳೆದು 15 ನಿಮಿಶ ನೆನೆಯಲು ಬಿಡಿ.

2. ಪುದೀನಾ, ಕೊತ್ತಂಬರಿ ಮತ್ತು ಕರಿಬೇವು ತೊಳೆದು ಮಿಕ್ಸಿ ಜಾರ್ ಗೆ ಹಾಕಿ. ನಂತರ ಮೆಣಸಿನಕಾಯಿ, ಬೆಳ್ಳುಳ್ಳಿ ಎಸಳು, ಹಸಿ ಶುಂಟಿ, ಜೀರಿಗೆ, ಅರಿಶಿಣ ಮತ್ತು ಸ್ವಲ್ಪ ನೀರು ಹಾಕಿ ರುಬ್ಬಿ.

3. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ. ಸ್ವಲ್ಪ ಈರುಳ್ಳಿಯನ್ನು ಸಣ್ಣಗೆ ಉದ್ದಗೆ ಕತ್ತರಿಸಿ, ಅದು ಕಂದು ಬಣ್ಣ ಬರುವವರೆಗೆ ಮತ್ತು ಕುರಂ ಕುರುಂ ಆಗುವವರೆಗು ಹುರಿಯಿರಿ. ಹುರಿದ ಈರುಳ್ಳಿ ತೆಗೆದು ಬದಿಗೆ ಇಡಿ.

4. ಕುಕ್ಕರ್ ಗೆ ಸ್ವಲ್ಪ ಎಣ್ಣೆ ಹಾಕಿ, ಪಲಾವ್ ಎಲೆ, ಚಕ್ಕೆ, ಲವಂಗ, ಕಲ್ಲು ಹೂ (ಪುಡಿ ಮಾಡಿಯೂ ಹಾಕಬಹುದು) ಮತ್ತು ಗೋಡಂಬಿ ಹಾಕಿ ಕೈಯಾಡಿಸಿ. ಈರುಳ್ಳಿ, ಕರಿಬೇವು ಮತ್ತೆ ಹಸಿ ಬಟಾಣಿ ಹಾಕಿ ಕಲೆಸಿ.

5. ನಂತರ ಅರಿಶಿಣ ಪುಡಿ ಹಾಕಿ ಕಲೆಸಿ, ನೆನೆದ ಅಕ್ಕಿ, 4 ಲೋಟ/ಕಪ್ ನೀರು, ಕೊತ್ತಂಬರಿ ಮತ್ತು ರುಚಿಗೆ ತಕ್ಕಶ್ಟು ಉಪ್ಪು ಬೆರೆಸಿ ಸ್ವಲ್ಪ ತುಪ್ಪ ಹಾಕಿ. ಕುಕ್ಕರ್ ನ 2-3 ಸೀಟಿ/ವಿಶಲ್ ಆದಮೇಲೆ ಪುದೀನ ಪಲಾವ್ ತಯಾರು.

ಕಂದು ಬಣ್ಣಕ್ಕೆ ಕರಿದ ಈರುಳ್ಳಿಯೊಂದಿಗೆ ಅಲಂಕರಿಸಿ ಸವಿಯಿರಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks