ರವೀಂದ್ರನಾತ ಟ್ಯಾಗೋರರ ಕವನಗಳ ಓದು – 4 ನೆಯ ಕಂತು

– ಸಿ.ಪಿ.ನಾಗರಾಜ.

*** ನರೋತ್ತಮ ***

ಸೇವಕನು ಬಂದು ಅರಸನ ವಂದಿಸುತ ನಿಂದು
ಒಪ್ಪಿಸಿದನಾದಿನದ ಪುರವಾರ್ತೆಗಳನು
ಕೊನೆಗವನು ಹೇಳಿದನು “ಪ್ರಭುವೆ ಬಲು ಮುಖ್ಯವಿದು
ಹೇಳುವೆನು ಕೇಳು ಹೊಸ ಗುಡಿಯ ಹದನವನು

ವರನರೋತ್ತಮ ಪರಮಸಾಧು ದೇಗುಲದಲ್ಲಿ
ಕಾಲಿಡಲು ಒಪ್ಪದೆಯೆ ಧಿಕ್ಕರಿಸುತಿಹನು
ಗುಡಿಯ ಹೊರಗಿನ ರಾಜ ಬೀದಿಯಲೆ ಈ ಸಾಧು
ಭಜನೆ ಕೀರ್ತನೆಯಿಂದ ಜನರ ಸೆಳೆಯುವನು

ನೀ ನಿರ್ಮಿಸಿದ ದೇವಮಂದಿರದ ವೈಭವಕೆ
ಸಾಟಿಯಿಲ್ಲವು ಪ್ರಭುವೆ ಈ ಧರಣಿಯಲ್ಲಿ
ಆದರೂ ಮಂದಿರವು ಭಣಗುಡುತಲಿಹುದಿಂದು
ಭಕ್ತರಿಲ್ಲದೆ ಬರಿಯ ದೀನ ಸ್ಥಿತಿಯಲ್ಲಿ

ಜನರೆಲ್ಲ ಈ ಸಾಧುವಿನ ಸುತ್ತ ತಿರುಗುವರು
ಬಿಳಿತಾವರೆಯ ಜೇನುನೊಣ ಮುತ್ತುವಂತೆ
ತುಂಬ ಜತನದಿ ನೀನು ಹೊನ್ನ ಕಲಶದಿ ತಂದ
ಸವಿ ಜೇನಿನಲಿ ಯಾರ ಲಕ್ಷ್ಯವಿರದಂತೆ

ಹೃದಯದಲಿ ಕ್ಲೇಶ ತುಂಬಲು ಅರಸ ರಥವೇರಿ
ತೆರಳಿದನು ವರನರೋತ್ತಮನಿರುವ ಸ್ಥಳಕೆ
ಗುಡಿಯ ಹೊರಗಿನ ಬಯಲಿನಲಿ ಮರದಡಿಯಲ್ಲಿ
ಹುಲ್ಲ ಹಾಸಲಿ ಕುಳಿತ ಸಾಧುವಿನ ಬಳಿಗೆ

ಸಾಧುವಿಗೆ ವಂದಿಸುತ ಅರಸ ಹೇಳಿದ “ತಂದೆ
ನನ್ನ ಗುಡಿಯನ್ನೇಕೆ ನೀನು ತ್ಯಜಿಸಿರುವೆ?
ದೇವದೇವನ ಮಹಿಮೆ ಜಗಕೆ ಸಾರುವೆನೆಂದು
ಹೊನ್ನ ಗೋಪುರವನ್ನೆ ನಾ ನಿರ್ಮಿಸಿರುವೆ

ದೇವ ಮಹಿಮೆಯ ಬೋಧಿಸಲು ಬಯಲ ಧೂಳೇಕೆ?
ಏಕೆ ನೀ ನನ್ನ ಗುಡಿಯೊಳಗೆ ಬರಲಾರೆ?”
ಎಂದೆನಲು ಸಾಧು ಹೇಳಿದ ಮಂದಹಾಸದಲಿ
“ದೇವನಿಲ್ಲದ ನಿನ್ನ ಗುಡಿಗೆ ಬರಲಾರೆ”

ರಾಜ ಅಸಹನೆಯಿಂದ ಹುಬ್ಬುಗಂಟಿಕ್ಕಿದನು
ನೀಡಿದನು ಸಾಧುವಿಗೆ ಗುಡಿಯ ಲೆಕ್ಕವನು
“ಇಪ್ಪತ್ತು ದಶಲಕ್ಷ ಹೊನ್ನ ವರಹಗಳಿಂದ
ಈ ಭವ್ಯ ಕಲೆಯ ದೇಗುಲ ನಿರ್ಮಿಸಿಹೆನು

ಯಜ್ಞ ಯಾಗಗಳಿಂದ ಶಾಸ್ತ್ರೋಕ್ತ ವಿಧಿಯಿಂದ
ಪ್ರಾಣದಾವಾಹನೆಯ ಮೂರ್ತಿಯಲಿ ಮಾಡಿ
ಶಿಲ್ಪಿಗಳ ಸತ್ಕರಿಸಿ ದೇವನನು ಮೆಚ್ಚಿಸಿದೆ
ಧನಕನಕಗಳ ದಾನದಕ್ಷಿಣೆಯ ನೀಡಿ”

ಸಾಧುವೆಂದನು “ಅರಸ, ಎಲ್ಲವನು ಬಲ್ಲೆ ನಾ
ಆಗಲೇ ಕಾಳ್ಗಿಚ್ಚು ಬಂದ ನೆನಪಿದೆಯೆ?
ಹಲವು ಸಾವಿರ ಜನರ ಮನೆ ಸುಟ್ಟು ಅವರೆಲ್ಲ
ಬೀದಿ ಪಾಲಾದ ಕತೆ ನಿನಗೆ ನೆನಪಿದೆಯೆ?

ನಿನ್ನ ಅಭಯವ ಬಯಸಿ ಅವರು ಬಂದಾಕ್ಷಣದಿ
ನೀನವರ ಧಿಕ್ಕರಿಸಿ ಹಿಂದೆ ಕಳುಹಿದೆ
ನೀನಾಗ ವೈಭವದ ಯಾಗ ಯಜ್ಞಗಳಲ್ಲಿ
ಪೂಜೆ ಉತ್ಸವಗಳಲ್ಲಿ ಮಗ್ನನಾಗಿದ್ದೆ

ಇದ ಕಂಡು ಖೇದದಿಂದಲಿ ದೇವ ಹೇಳಿದನು
“ತನ್ನ ಪ್ರಜೆಗಳ ಕಂಬನಿಯ ಒರೆಸದಿಹನೆ!
ಈ ಜನಕೆ ಮನೆಗಳನು ಕಟ್ಟಲಾರದ ಅರಸ
ನನ್ನ ಮನೆಯನು ದರ್ಪದಿಂ ಕಟ್ಟುತಿಹನೆ?”

ಇಂತು ಹೇಳುತ ದೇವ ಗುಡಿಯೊಳಗೆ ಹೋಗದೆಯೆ
ಮನೆಯಿಲ್ಲದಿಹ ದೀನ ಜನರ ನಡುವಿನಲಿ
ಬಯಲಿನಲಿ ಮರಗಳಡಿಯಲಿ ಬೀದಿ ಬದಿಯಲ್ಲಿ
ವಾಸಿಸಲು ತೊಡಗಿಹನು ಅಮಿತ ಕರುಣೆಯಲಿ

ಅಂದಿನಿಂದಲೆ ನಿನ್ನ ಹೊನ್ನ ಗೋಪುರವೆಲ್ಲ
ನೀರ ಗುಳ್ಳೆಯ ತೆರದಿ ಶೂನ್ಯವಾಗಿಹುದು
ನಿನ್ನ ಅಹಮಿಕೆಯ ಬಿಸಿಗಾಳಿ ಸೋಕುವುದಲ್ಲಿ
ಅರೆಗಳಿಗೆಯಲೆ ಮನವು ತಳಮಳಿಸುತಿಹುದು”

ಕೆರಳಿ ಕೂಗುತ ಅರಸ ಕೋಪದಿಂದೊದರಿದನು
“ತೊಲಗು ಸಾಧುವೆ ನನ್ನ ರಾಜ್ಯವನು ತೊರೆದು”
ಒಂದು ಕ್ಷಣ ಅರಸನನು ನೋಡಿ ಹೊರಟನು ಸಾಧು
ನಸು ನಗುತ ಶಾಂತಭಾವದಿ ಇಂತು ನುಡಿದನು

“ದೇವದೇವನ ನೀನು ನೂಕಿರುವ ಸ್ಥಳಕೆ
ತೊಲಗಿಸೆನ್ನನು ಅರಸ ಇನ್ನು ತಡವೇಕೆ?”

ಪ್ರಜೆಗಳ ಸಂಕಟವನ್ನು ನಿವಾರಿಸದೆ, ರಾಜ್ಯದ ಸಂಪತ್ತಿನಿಂದ ದೊಡ್ಡ ದೇಗುಲವನ್ನು ಕಟ್ಟಿಸಿ ಮೆರೆಯುವ ರಾಜನು “ಜನದ್ರೋಹಿಯೇ ಹೊರತು ಪ್ರಜೆಗಳ ಹಿತಚಿಂತಕನಲ್ಲ” ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ರಾಜ್ಯದ ಸಂಪತ್ತು=ದುಡಿಯುವ ವರ್‍ಗದ ಬಡಜನರ ಪರಿಶ್ರಮದಿಂದ ಉತ್ಪಾದನೆಗೊಂಡಿರುವ ದವಸದಾನ್ಯ, ಇನ್ನಿತರ ವಸ್ತುಗಳು ಮತ್ತು ಇವುಗಳ ಮೇಲಣ ತೆರಿಗೆಯ ಹಣದಿಂದ ತುಂಬಿರುವ ರಾಜ್ಯದ ಬೊಕ್ಕಸ;

ಸೇವಕ=ಆಳು/ಊಳಿಗದವನು; ಅರಸ=ರಾಜ/ದೊರೆ; ವಂದಿಸು=ನಮಸ್ಕರಿಸು; ಒಪ್ಪಿಸಿದನ್+ಆ+ದಿನದ; ಒಪ್ಪಿಸಿದನು=ಹೇಳಿದನು/ವಿವರಿದನು; ಪುರವಾರ್ತೆ=ನಗರದ ಸುದ್ದಿ/ನಗರದಲ್ಲಿ ನಡೆಯುತ್ತಿರುವ ಸಂಗತಿಗಳು; ಕೊನೆಗೆ+ಅವನು;

ಪ್ರಭು=ರಾಜ; ಬಲು=ಬಹಳ/ಹೆಚ್ಚಿನ; ಮುಖ್ಯ+ಇದು; ಗುಡಿ=ದೇಗುಲ/ದೇವಾಲಯ; ಹದನು=ಸುದ್ದಿ/ವರ್‍ತಮಾನ; ಗುಡಿಯ ಹದನವನು=ಗುಡಿಯಲ್ಲಿ ನಡೆಯುತ್ತಿರುವ ಸಂಗತಿಗಳನ್ನು;

ನರ+ಉತ್ತಮ; ನರ=ಮಾನವ; ಉತ್ತಮ=ಒಳ್ಳೆಯವನು; ನರೋತ್ತಮ=ಒಳ್ಳೆಯ ನಡೆನುಡಿಯಿಂದ ಕೂಡಿದ ವ್ಯಕ್ತಿ;

ಪರಮ=ಉತ್ತಮನಾದ; ಸಾಧು=ಸಂನ್ಯಾಸಿ/ಯತಿ; ಕಾಲ್+ಇಡಲು; ಒಪ್ಪದೆಯೆ=ಸಮ್ಮತಿಸದೆ; ಧಿಕ್ಕರಿಸುತ+ಇಹನು; ಧಿಕ್ಕರಿಸು=ತಿರಸ್ಕರಿಸು; ಇಹನು=ಇರುವನು;

ವರನರೋತ್ತಮ ಪರಮಸಾಧು ದೇಗುಲದಲ್ಲಿ ಕಾಲಿಡಲು ಒಪ್ಪದೆಯೆ ಧಿಕ್ಕರಿಸುತಿಹನು=ಒಳ್ಳೆಯ ಗುಣವಂತನಾದ ಸಂನ್ಯಾಸಿಯು ಪುರದಲ್ಲಿನ ದೇಗುಲದೊಳಕ್ಕೆ ಕಾಲಿಡಲು ಮನಸ್ಸಿಲ್ಲದೆ, ದೇಗುಲದಿಂದ ದೂರಸರಿದಿದ್ದಾನೆ;

ರಾಜಬೀದಿ=ಅರಮನೆಗೆ ಹೋಗಿಬರುವ ದೊಡ್ಡ ಬೀದಿ; ಭಜನೆ=ದೇವರ ನಾಮವನ್ನು ಬಗೆ ಬಗೆಯ ವಾದ್ಯಗಳ ದನಿಯೊಡನೆ ಮತ್ತೆ ಮತ್ತೆ ಉಚ್ಚರಿಸುತ್ತಿರುವುದು; ಕೀರ್ತನೆ+ಇಂದ; ಕೀರ್ತನೆ=ದೇವರ ಮಹಿಮೆಯನ್ನು ಕೊಂಡಾಡುವ ಹಾಡುಗಳನ್ನು ಹೇಳುತ್ತಿರುವುದು; ಸೆಳೆಯುವನು=ತನ್ನತ್ತ ಬರುವಂತೆ ಮಾಡಿರುವನು;

ಗುಡಿಯ ಹೊರಗಿನ ರಾಜಬೀದಿಯಲೆ ಈ ಸಾಧು ಭಜನೆ ಕೀರ್ತನೆಯಿಂದ ಜನರ ಸೆಳೆಯುವನು=ಗುಡಿಯ ಹೊರಗಡೆಯ ರಾಜಬೀದಿಯಲ್ಲಿ ಸಂನ್ಯಾಸಿಯು ಹಾಡುತ್ತಿರುವ ದೇವರ ಹಾಡಿನ ಮೋಡಿಗೆ ಜನರು ಒಳಗಾಗಿದ್ದಾರೆ. ಹಾಡುಗಳ ಮೂಲಕವೇ ಜನಮನದಲ್ಲಿ ಒಳ್ಳೆಯ ನಡೆನುಡಿಗಳ ಸಂಗತಿಗಳನ್ನು ಜನರಿಗೆ ಸಂನ್ಯಾಸಿಯು ಮನದಟ್ಟುಮಾಡುತ್ತಿದ್ದಾನೆ;

ನೀ=ನೀನು; ನಿರ್ಮಿಸಿದ=ಕಟ್ಟಿಸಿದ; ವೈಭವ=ಸಿರಿವಂತಿಕೆಯಿಂದ ಕೂಡಿದ/ಆಡಂಬರದಿಂದ ಕಂಗೊಳಿಸುತ್ತಿರುವ; ಸಾಟಿ+ಇಲ್ಲವು; ಸಾಟಿ=ಸಮಾನ/ಎಣೆ; ಧರಣಿ=ರಾಜ್ಯ/ಭೂಮಂಡಲ;

ನೀ ನಿರ್ಮಿಸಿದ ದೇವಮಂದಿರದ ವೈಭವಕೆ ಸಾಟಿಯಿಲ್ಲವು ಪ್ರಭುವೆ ಈ ಧರಣಿಯಲ್ಲಿ=ಪುರದಲ್ಲಿ ನೀನು ಕಟ್ಟಿಸಿರುವ ದೇವಮಂದಿರದ ಸೊಗಸಿಗೆ ಸಮಾನವಾದುದು ಈ ಜಗತ್ತಿನಲ್ಲಿಯೇ ಇಲ್ಲ;

ಮಂದಿರ=ದೇವಾಲಯ; ಭಣಗುಡುತಲ್+ಇಹುದು+ಇಂದು; ಭಣಗುಡು=ಜನರಿಲ್ಲದೆ ಬಿಕೋ ಎನ್ನುವುದು/ಬರಿದಾಗು; ಇಹುದು=ಇರುವುದು; ಇಂದು=ಈಗ/ಈ ದಿನಗಳಲ್ಲಿ; ಭಕ್ತರ್+ಇಲ್ಲದೆ; ದೀನಸ್ಥಿತಿ=ಹಾಳಾದ ರೀತಿಯಲ್ಲಿ;

ಆದರೂ ಮಂದಿರವು ಭಣಗುಡುತಲಿಹುದಿಂದು ಭಕ್ತರಿಲ್ಲದೆ ಬರಿಯ ದೀನಸ್ಥಿತಿಯಲ್ಲಿ=ದೊಡ್ಡ ದೇಗುಲವನ್ನು ನೀನು ಕಟ್ಟಿಸಿದ್ದರೂ ದೇವರನ್ನು ಪೂಜಿಸುವ ಜನರೇ ಇಲ್ಲದೆ ದೇಗುಲವು ಪಾಳುಬಿದ್ದ ರೀತಿಯಲ್ಲಿ ಕಂಡುಬರುತ್ತಿದೆ;

ಜನರೆಲ್ಲ ಈ ಸಾಧುವಿನ ಸುತ್ತ ತಿರುಗುವರು ಬಿಳಿ ತಾವರೆಯ ಜೇನುನೊಣ ಮುತ್ತುವಂತೆ=ಹೂವಿನ ರಸವನ್ನು ಹೀರಲೆಂದು ಜೇನು ನೊಣಗಳು ಬಿಳಿಯ ತಾವರೆ ಹೂವನ್ನು ಮುತ್ತುವಂತೆ ಜೀವನಕ್ಕೆ ಅಗತ್ಯವಾದ ಒಲವು, ನಲಿವು ಮತ್ತು ನೆಮ್ಮದಿಯ ಸಂಗತಿಗಳನ್ನು ತಿಳಿದುಕೊಳ್ಳಲು ಜನರು ಯತಿಯನ್ನು ಸುತ್ತುವರಿದಿದ್ದಾರೆ;

ತುಂಬ=ಬಹಳ/ಹೆಚ್ಚಿನ ಪ್ರಮಾಣ; ಜತನ=ಜೋಪಾನ/ಜೋಕೆ/ಪ್ರಯತ್ನ; ಹೊನ್ನು=ಬಂಗಾರ/ಚಿನ್ನ; ಕಲಶ=ದೇವರ ಪೂಜೆಗೆಂದು ಬಳಸುವ ಚೆಂಬು; ಸವಿ=ರುಚಿಕರವಾದ; ಲಕ್ಷ್ಯ+ಇರದ+ಅಂತೆ; ಲಕ್ಷ್ಯ=ಗಮನ; ಅಂತೆ=ಹಾಗೆ; ಲಕ್ಷ್ಯವಿರದಂತೆ=ಗಮನವಿಲ್ಲದಂತೆ;

ತುಂಬ ಜತನದಿ ನೀನು ಹೊನ್ನ ಕಲಶದಿ ತಂದ ಸವಿ ಜೇನಿನಲಿ ಯಾರ ಲಕ್ಷ್ಯವಿರದಂತೆ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೆ ಬಂದಿವೆ. ರಾಜ, ನೀನು ಬಂಗಾರದ ಕಲಶದಲ್ಲಿ ತುಂಬಾ ಆಸಕ್ತಿಯಿಂದ ತಂದಿದ್ದ ಸವಿಯಾದ ಜೇನಿನ ಬಗ್ಗೆ ಈಗ ನಿನ್ನ ಪ್ರಜೆಗಳಲ್ಲಿ ಯಾರೊಬ್ಬರ ಗಮನವಿಲ್ಲ. ಅಂದರೆ ನೀನು ಕಟ್ಟಿಸಿರುವ ಅದ್ದೂರಿ ಮತ್ತು ಆಡಂಬರದಿಂದ ಕಂಗೊಳಿಸುತ್ತಿರುವ ದೊಡ್ಡ ದೇಗುಲದ ಬಗ್ಗೆ ಯಾರ ಗಮನವೂ ಇಲ್ಲ. ಪ್ರಜೆಗಳೆಲ್ಲರೂ ದೇಗುಲದಿಂದ ದೂರಸರಿದಿದ್ದಾರೆ;

ಹೃದಯ=ಮನಸ್ಸು; ಕ್ಷೇಶ=ಸಂಕಟ/ಕಳವಳ; ಹೃದಯದಲಿ ಕ್ಲೇಶ ತುಂಬಲು=ದೇಗುಲಕ್ಕೆ ಜನರು ಬರುತ್ತಿಲ್ಲವೆಂಬ ಸುದ್ದಿಯನ್ನು ಕೇಳಿ ರಾಜನ ಮನಸ್ಸು ಕಳವಳಗೊಂಡು; ರಥ+ಏರಿ; ತೆರಳು=ಹೋಗು; ಸ್ಥಳ=ಜಾಗ/ನೆಲೆ; ಮರದ+ಅಡಿಯಲ್ಲಿ; ಹುಲ್ಲಹಾಸು=ಹಚ್ಚಹಸಿರಾದ ಹುಲ್ಲಿನಿಂದ ಪಸರಿಸಿರುವ ಜಾಗ; ತಂದೆ=ಹಿರಿಯರನ್ನು ಕುರಿತು ಮಾತನಾಡಿಸುವಾಗ ಬಳಸುವ ಪದ; ತ್ಯಜಿಸು=ಬಿಡು/ತೊರೆ;

ತಂದೆ, ನನ್ನ ಗುಡಿಯನ್ನೇಕೆ ನೀನು ತ್ಯಜಿಸಿರುವೆ?=ತಂದೆ, ನಾನು ಕಟ್ಟಿಸಿರುವ ಗುಡಿಯನ್ನೇಕೆ ನೀನು ತೊರೆದು ಬಂದಿರುವೆ;

ಮಹಿಮೆ=ಹಿರಿಮೆ/ಉನ್ನತವಾದುದು; ಸಾರುವೆನ್+ಎಂದು; ಸಾರು=ಪ್ರಕಟಪಡಿಸು/ಎಲ್ಲರಿಗೂ ತಿಳಿಸು; ಗೋಪುರ=ದೇಗುಲದ ಕಟ್ಟಡದಲ್ಲಿರುವ ಎತ್ತರವಾದ ಮೇಲಿನ ತುದಿ;

ದೇವದೇವನ ಮಹಿಮೆ ಜಗಕೆ ಸಾರುವೆನೆಂದು ಹೊನ್ನ ಗೋಪುರವನ್ನೆ ನಾ ನಿರ್ಮಿಸಿರುವೆ=ದೇವರ ಮಹಿಮೆ ಏನೆಂಬುದನ್ನು ಇಡೀ ಜಗತ್ತಿಗೆ ತಿಳಿಸಲೆಂದು ದೇಗುಲದ ಗೋಪುರವನ್ನು ಚಿನ್ನದಿಂದಲೇ ಮಾಡಿಸಿದ್ದೇನೆ;

ಬೋಧಿಸು=ತಿಳಿಯ ಹೇಳು; ಧೂಳ್+ಏಕೆ; ಧೂಳು=ದಾರಿಯಲ್ಲಿರುವ ಮಣ್ಣಿನ ಸಣ್ಣ ಸಣ್ಣ ಕಣಗಳು;

ದೇವ ಮಹಿಮೆಯ ಬೋಧಿಸಲು ಬಯಲ ಧೂಳೇಕೆ?=ದೇವರ ಹಿರಿಮೆಯನ್ನು ಜನರಿಗೆ ತಿಳಿಸಲು ದೂಳಿನಿಂದ ಕೂಡಿದ ಬೀದಿಯ ಬದಿಗೇಕೆ ಬಂದಿರುವೆ;

ಏಕೆ ನೀ ನನ್ನ ಗುಡಿಯೊಳಗೆ ಬರಲಾರೆ?=ಯಾವ ಉದ್ದೇಶದಿಂದ ನೀನು ನನ್ನ ಗುಡಿಯೊಳಕ್ಕೆ ಬರುತ್ತಿಲ್ಲ; ಎಂದು+ಎನಲು; ಮಂದಹಾಸ=ಮುಗುಳು ನಗೆ;

ದೇವನಿಲ್ಲದ ನಿನ್ನ ಗುಡಿಗೆ ಬರಲಾರೆ=ದೇವರಿಲ್ಲದ ನಿನ್ನ ಗುಡಿಗೆ ನಾನು ಬರುವುದಕ್ಕೆ ಆಗದು;

ಅಸಹನೆ+ಇಂದ; ಅಸಹನೆ=ತಾಳ್ಮೆಯನ್ನು ಕಳೆದುಕೊಂಡು; ಹುಬ್ಬುಗಂಟ್ಟಿಕ್ಕು=ಮನದಲ್ಲಿ ಉಂಟಾದ ಕೋಪತಾಪವನ್ನು ಮೊಗದಲ್ಲಿ ವ್ಯಕ್ತಪಡಿಸುತ್ತ;

ರಾಜ ಅಸಹನೆಯಿಂದ ಹುಬ್ಬುಗಂಟಿಕ್ಕಿದನು=ಸಂನ್ಯಾಸಿಯ ಮಾತಿನಿಂದ ಕುಪಿತನಾದ ರಾಜನ ಮೊಗದಲ್ಲಿ ಕೋಪತಾಪಗಳು ಎದ್ದು ಕಂಡವು;

ನೀಡು=ಕೊಡು; ನೀಡಿದನು=ವರದಿಯನ್ನು ಒಪ್ಪಿಸಿದನು;

ನೀಡಿದನು ಸಾಧುವಿಗೆ ಗುಡಿಯ ಲೆಕ್ಕವನು=ಇದೀಗ ರಾಜನು ಸಂನ್ಯಾಸಿಗೆ ಗುಡಿಯನ್ನು ಕಟ್ಟಿಸಲು ತಾನು ವೆಚ್ಚ ಮಾಡಿದ ಹಣದ ಲೆಕ್ಕವನ್ನು ಕೊಡಲು ತೊಡಗಿದನು;

ದಶ=ಹತ್ತು; ಲಕ್ಷ=ನೂರು ಸಾವಿರ; ಇಪ್ಪತ್ತು ದಶಲಕ್ಷ=ಎರಡು ಕೋಟಿ; ವರಹ+ಗಳ್+ಇಂದ; ವರಹ=ಪ್ರಾಚೀನ ಕಾಲದಲ್ಲಿ ವ್ಯವಹಾರದಲ್ಲಿ ಬಳಕೆಯಾಗುತ್ತಿದ್ದ ಚಿನ್ನದ ನಾಣ್ಯ. ‘ವರಾಹ’ ಎಂದರೆ ಹಂದಿ. ಈ ಚಿನ್ನದ ನಾಣ್ಯದಲ್ಲಿ ಹಂದಿಯ ಚಿತ್ರವಿದ್ದುದರಿಂದ ನಾಣ್ಯವನ್ನು ವರಹ ಎಂದು ಕರೆಯುತ್ತಿದ್ದರು; ವಿಷ್ಣುವಿನ ಹತ್ತು ಅವತಾರಗಳಲ್ಲಿ ಮೂರನೆಯದು ‘ ವರಾಹ ಅವತಾರ’ ಎಂಬ ನಂಬಿಕೆ ಹಿಂದೂ ಜನಸಮುದಾಯದ ಮನದಲ್ಲಿದೆ; ಭವ್ಯ=ಸೊಗಸಾದುದು/ಉನ್ನತವಾದುದು/ಅತ್ಯುತ್ತಮವಾದುದು; ಕಲೆ=ಬಣ್ಣಬಣ್ಣದ ಚಿತ್ರಗಳು/ ಕಲ್ಲಿನ ಕೆತ್ತನೆಯಿಂದ ಕೂಡಿದ ವಿಗ್ರಹಗಳು;

ಇಪ್ಪತ್ತು ದಶಲಕ್ಷ ಹೊನ್ನ ವರಹಗಳಿಂದ ಈ ಭವ್ಯ ಕಲೆಯ ದೇಗುಲ ನಿರ್ಮಿಸಿಹೆನು=ಎರಡು ಕೋಟಿ ಚಿನ್ನದ ವರಹಗಳನ್ನು ವೆಚ್ಚ ಮಾಡಿ ಬಣ್ಣಬಣ್ಣದ ಸೊಗಸಾದ ಚಿತ್ರಗಳು ಮತ್ತು ಮನಮೋಹಕವಾದ ವಿಗ್ರಹಗಳಿಂದ ಕೂಡಿರುವ ಕಲೆಯ ಸೊಬಗಿನ ತಾಣವಾಗಿ ದೇಗುಲವನ್ನು ನಾನು ಕಟ್ಟಿಸಿದ್ದೇನೆ;

ಯಜ್ಞ=ಒಂದು ಬಗೆಯ ಆಚರಣೆ. ಬೆಂಕಿಯ ಕುಂಡವನ್ನು ನಿರ್‍ಮಿಸಿ, ಅದರಲ್ಲಿ ದವಸ, ಹಣ್ಣು, ಬಟ್ಟೆ ಮುಂತಾದ ವಸ್ತುಗಳನ್ನು ಬೆಂಕಿಗೆ ಹಾಕಿ ಮಾಡುವ ದೇವತಾ ಪೂಜೆ. ಈ ರೀತಿ ಬೆಂಕಿಗೆ ಹಾಕುವ ವಸ್ತುಗಳನ್ನು ಅಗ್ನಿದೇವನು ತೆಗೆದುಕೊಂಡು ಹೋಗಿ ದೇವಲೋಕದಲ್ಲಿರುವ ದೇವತೆಗಳಿಗೆ ಕೊಡುತ್ತಾನೆ ಎಂಬ ನಂಬಿಕೆಯು ಈ ಆಚರಣೆಯಲ್ಲಿ ತೊಡಗುವವರ ಮನದಲ್ಲಿದೆ; ಯಾಗ=ಬೆಂಕಿಗೆ ವಸ್ತುಗಳನ್ನು ಸಲ್ಲಿಸಿ ಮಾಡುವ ಪೂಜಾ ಆಚರಣೆ; ಶಾಸ್ತ್ರ+ಉಕ್ತ; ಶಾಸ್ತ್ರ=ದೇವರನ್ನು ಪೂಜಿಸುವಾಗ ಅನುಸರಿಸಿಬೇಕಾದ ಕಟ್ಟಲೆಗಳು; ಉಕ್ತ=ಹೇಳಿದ; ವಿಧಿ+ಇಂದ; ವಿಧಿ=ನಿಯಮ/ಕಟ್ಟಲೆ/ನೇಮ; ಶಾಸ್ತ್ರೋಕ್ತ ವಿಧಿ=ಶಾಸ್ತ್ರದಲ್ಲಿ ಹೇಳಿರುವ ರೀತಿಯ ಆಚರಣೆಗಳು;

ಪ್ರಾಣದ+ಆವಾಹನೆ; ಪ್ರಾಣ=ಜೀವ; ಆವಾಹನೆ=ನೆಲೆಗೊಳಿಸುವುದು; ಮೂರ್ತಿ=ಕಲ್ಲಿನಿಂದ ಕೆತ್ತಿರುವ ದೇವರ ವಿಗ್ರಹ; ಪ್ರಾಣದ ಆವಾಹನೆಯ ಮೂರ್ತಿ=ಕಲ್ಲನ್ನು ಶಿಲ್ಪಿಯು ಕೆತ್ತಿ ಮೊದಲು ದೇವರ ವಿಗ್ರಹವನ್ನು ಕಡೆಯುತ್ತಾನೆ. ಅನಂತರ ಆ ವಿಗ್ರಹವನ್ನು ದೇಗುಲಕ್ಕೆ ತಂದ ಪುರೋಹಿತರು ಯಾಗ ಕುಂಡದ ಮುಂದೆ ಕುಳಿತು ದೇವರ ಹೆಸರನ್ನು ಉಚ್ಚರಿಸುತ್ತ, ಬಹುಬಗೆಯ ಮಂತ್ರಗಳನ್ನು ಹೇಳುತ್ತ, ಜಡರೂಪಿಯಾದ ದೇವರ ಶಿಲ್ಪಕ್ಕೆ ಜೀವವನ್ನು ಆಹ್ವಾನಿಸುವುದಕ್ಕಾಗಿ ಮಾಡುವ ಆಚರಣೆ. ಇದೊಂದು ನಂಬಿಕೆಯೇ ಹೊರತು, ಯಾವ ಪ್ರಾಣವೂ ಜಡರೂಪಿಯಾದ ವಿಗ್ರಹಕ್ಕೆ ಬರುವುದಿಲ್ಲ;

ಶಿಲ್ಪಿ=ಶಿಲೆಯಲ್ಲಿ ಶಿಲ್ಪವನ್ನು ಕೆತ್ತುವವನು; ಸತ್ಕರಿಸು=ಉಪಚರಿಸು; ಧನ=ಹಣ; ಕನಕ=ಚಿನ್ನ; ದಕ್ಷಿಣೆ=ಕಾಣಿಕೆ;

ದೇವನನು ಮೆಚ್ಚಿಸಿದೆ=ದೇವರು ಮೆಚ್ಚಿಕೊಳ್ಳುವಂತೆ ಪೂಜೆಯನ್ನು ಮಾಡಿ, ದೇಗುಲದಲ್ಲಿ ದೇವರನ್ನು ನೆಲೆಗೊಳಿಸಿದೆ;

ಸಾಧು+ಎಂದನು; ಬಲ್ಲೆ=ಗೊತ್ತಿದೆ/ತಿಳಿದಿದ್ದೇನೆ; ನಾ=ನಾನು;

ಅರಸ, ಎಲ್ಲವನು ಬಲ್ಲೆ ನಾ=ರಾಜನೇ, ನೀನು ಯಾವ ಉದ್ದೇಶದಿಂದ ಅಪಾರವಾದ ಹಣವನ್ನು ವೆಚ್ಚಮಾಡಿ, ದೊಡ್ಡದಾದ ದೇಗುಲವನ್ನು ಕಟ್ಟಿಸಿದೆ ಎಂಬುದೆಲ್ಲವೂ ನನಗೆ ತಿಳಿದಿದೆ;

ಆಗಲೇ=ತುಂಬಾ ಹಣವನ್ನು ವೆಚ್ಚಮಾಡಿ ನೀನು ದೇಗುಲವನ್ನು ಕಟ್ಟಿಸುತ್ತಿದ್ದ ದಿನಗಳಲ್ಲಿಯೇ; ಕಾಡು+ಕಿಚ್ಚು; ಕಿಚ್ಚು=ಬೆಂಕಿ; ಕಾಳ್ಗಿಚ್ಚು=ಕಾಡೆಲ್ಲವನ್ನೂ ವ್ಯಾಪಿಸಿರುವ ಬೆಂಕಿ; ನೆನಪು=ನಡೆದ ಪ್ರಸಂಗಗಳು ಮತ್ತೆ ಮನಸ್ಸಿನಲ್ಲಿ ಮೂಡುವುದು;

ಆಗಲೇ ಕಾಳ್ಗಿಚ್ಚು ಬಂದ ನೆನಪಿದೆಯೆ?=ಅದೇ ಸಮಯದಲ್ಲಿ ಕಾಡಿನ ಕಿಚ್ಚಿನಿಂದ ಆದ ಬೆಂಕಿ ಅನಾಹುತದ ನೆನಪಿದೆಯೇ ನಿನಗೆ;

ಅಭಯ=ಹೆದರಿಕೆಯಿಲ್ಲದಿರುವುದು; ಬಯಸಿ=ಇಚ್ಚಿಸಿ; ನಿನ್ನ ಅಭಯ ಬಯಸಿ=ಇದೊಂದು ನುಡಿಗಟ್ಟಾಗಿ ಬಳಕೆಯಾಗಿದೆ. ಕಾಳ್ಗಿಚ್ಚಿನ ಬೆಂಕಿ ಅನಾಹುತದಲ್ಲಿ ಮನೆಗಳನ್ನು ಮಾತ್ರವಲ್ಲ ತಮ್ಮೆಲ್ಲಾ ಒಡವೆ ವಸ್ತುಗಳನ್ನು ಕಳೆದುಕೊಂಡು ನಿರ್‍ಗತಿಕರಾದ ಜನರು ರಾಜನಾದ ನಿನ್ನಿಂದ ನೆರವನ್ನು ಪಡೆಯಲೆಂದು ಹಂಬಲಿಸಿ;

ಬಂದ+ಆ+ಕ್ಷಣದಿ; ನೀನ್+ಅವರ; ಧಿಕ್ಕರಿಸಿ=ಕಡೆಗಣಿಸಿ;

ಅವರು ಬಂದಾಕ್ಷಣದಿ ನೀನವರ ಧಿಕ್ಕರಿಸಿ ಹಿಂದೆ ಕಳುಹಿದೆ=ಅವರು ಬಂದಾಗ ನೀನು ಅವರ ನೋವು, ಸಂಕಟ, ಯಾತನೆಯ ಮೊರೆಯನ್ನು ಕೇಳದೆ, ಅವರೆಲ್ಲರನ್ನೂ ಬರಿಗಯ್ಯಲ್ಲಿ ಹಿಂದಕ್ಕೆ ಅಟ್ಟಿದೆ;

ನೀನ್+ಆಗ; ವೈಭವ=ಸಿರಿಯನ್ನು ಮೆರೆಸುತ್ತ ಆಡಂಬರದಿಂದ ಕೂಡಿರುವುದು; ಉತ್ಸವ=ಆಚರಣೆ; ಮಗ್ನನ್+ಆಗಿದ್ದೆ; ಮಗ್ನ=ತಲ್ಲೀನ;

ಖೇದ=ದುಗುಡ/ಚಿಂತೆ;

ಇದ ಕಂಡು ಖೇದದಿಂದಲಿ ದೇವ ಹೇಳಿದನು=ಜೀವಂತ ಪ್ರಜೆಗಳ ಸಂಕಟದ ನಿವಾರಣೆಗೆ ಗಮನಕೊಡದೆ, ಜಡರೂಪಿಯಾದ ದೇವರ ವಿಗ್ರಹಕ್ಕೆ ಮಾಡುವ ಪೂಜೆಯ ಆಚರಣೆಗಳಲ್ಲಿ ತೊಡಗಿದ್ದ ನಿನ್ನನ್ನು ಕಂಡು ದೇವರು ಈ ರೀತಿ ಹೇಳಿದನು;

ಕಂಬನಿ=ಕಣ್ಣೀರು; ಒರೆಸದೆ+ಇಹನೆ; ಒರೆಸು=ಸವರು/ಇಲ್ಲದಂತೆ ಮಾಡು; ಇಹನೆ=ಇರುವವನೆ; ದರ್ಪ=ಅಹಂಕಾರ/ಸೊಕ್ಕು;

ತನ್ನ ಪ್ರಜೆಗಳ ಕಂಬನಿಯ ಒರೆಸದಿಹನೆ! ಈ ಜನಕೆ ಮನೆಗಳನು ಕಟ್ಟಲಾರದ ಅರಸ ನನ್ನ ಮನೆಯನು ದರ್ಪದಿಂ ಕಟ್ಟುತಿಹನೆ?=ಮನೆಗಳನ್ನು ಕಳೆದುಕೊಂಡು ಬೀದಿಪಾಲಾದ ತನ್ನ ಪ್ರಜೆಗಳ ಕಣ್ಣೀರನ್ನು ಒರೆಸದ ರಾಜ…ಬೀದಿಪಾಲಾದ ಜನರಿಗೆ ಒಂದು ಸೂರನ್ನು ಕಟ್ಟಿಕೊಡದ ರಾಜ…ಇದೇ ಸಮಯದಲ್ಲಿ ತನಗೆ ದೇವಮಂದಿರವನ್ನು ಕಟ್ಟುತ್ತಿದ್ದಾನಲ್ಲವೇ;

ಇಂತು=ಈ ರೀತಿ; ಮನೆ+ಇಲ್ಲದೆ+ಇಹ; ದೀನ ಜನರು=ಎಲ್ಲವನ್ನೂ ಕಳೆದುಕೊಂಡ ಬಡವರು; ಮರಗಳ+ಅಡಿಯಲಿ; ತೊಡಗಿ+ಇಹನು; ಅಮಿತ=ಹೆಚ್ಚಾದ/ಅಪಾರವಾದ;

ಅಂದಿನಿಂದಲೆ=ಆ ದಿನದಿಂದಲೇ; ಶೂನ್ಯ+ಆಗಿ+ಇಹುದು;

ಅಂದಿನಿಂದಲೆ ನಿನ್ನ ಹೊನ್ನ ಗೋಪುರವೆಲ್ಲ ನೀರ ಗುಳ್ಳೆಯ ತೆರದಿ ಶೂನ್ಯವಾಗಿಹುದು=ನೀರಿನ ಗುಳ್ಳೆಯು ಅರೆಗಳಿಗೆಯಲ್ಲಿ ಒಡೆದುಹೋದಂತೆ ನಿನ್ನ ಚಿನ್ನದ ಗೋಪುರದ ದೇಗುಲ ಇಲ್ಲವಾಗಿದೆ; ದೇಗುಲದಿಂದ ದೇವರು ಹೊರಬಂದಿದ್ದಾನೆ;

ಅಹಮಿಕೆ=ಸೊಕ್ಕು/ಗರ್‍ವ/ಅಹಂಕಾರ;

ನಿನ್ನ ಅಹಮಿಕೆಯ ಬಿಸಿಗಾಳಿ ಸೋಕುವುದಲ್ಲಿ=ಈಗ ಆ ದೇಗುಲದಲ್ಲಿ ನಿನ್ನ ಅಹಂಕಾರದ ಬಿಸಿಗಾಳಿಯು ಆವರಿಸಿದೆ. ಅಂದರೆ ಈಗ ಆ ದೇಗುಲದಲ್ಲಿ ದೇವರಿಲ್ಲ. ನಿನ್ನ ಅಹಂಕಾರ ಮಾತ್ರ ಕಂಡುಬರುತ್ತಿದೆ;

ಅರೆಗಳಿಗೆ=ತುಸು ಸಮಯ; ತಳಮಳಿಸುತ+ಇಹುದು; ತಳಮಳ=ಸಂಕಟ/ಕಳವಳ

ಅರೆಗಳಿಗೆಯಲೆ ಮನವು ತಳಮಳಿಸುತಿಹುದು=ಈಗ ದೇಗುಲಕ್ಕೆ ಹೋದವರಿಗೆ ಮೊದಲಿನ ನೆಮ್ಮದಿಯು ದೊರೆಯುವುದಿಲ್ಲ. ಮನಸ್ಸು ಸಂಕಟದಿಂದ ಒದ್ದಾಡುತ್ತದೆ. ಏಕೆಂದರೆ ಅಲ್ಲಿ ದೇವರಿಲ್ಲ. ಅರಸನಾದ ನಿನ್ನ ಅಹಂಕಾರ ಮತ್ತು ಕ್ರೂರತನದ ನಡೆನುಡಿಗಳು ಎದ್ದು ಕಾಣುತ್ತಿವೆ;

ಕೆರಳು=ಕೋಪತಾಪಗಳ ಒಳಮಿಡತಕ್ಕೆ ಒಳಗಾಗುವುದು; ಕೋಪ+ಇಂದ+ಒದರಿದನು; ಒದರು=ಕಿರುಚು/ಗರ್‍ಜಿಸು;

ತೊಲಗು=ಬಿಟ್ಟು ದೂರಹೋಗು/ಕಣ್ಮರೆಯಾಗು; ತೊರೆ=ಬಿಡು/ತ್ಯಜಿಸು; ಶಾಂತಭಾವ=ಕೋಪತಾಪಗಳಿಲ್ಲದೆ ಸಮಚಿತ್ತನಾಗಿ; ತೊಲಗಿಸು+ಎನ್ನನು; ಎನ್ನನು=ನನ್ನನ್ನು; ತಡ+ಏಕೆ; ತಡ=ವಿಳಂಬ;

ದೇವದೇವನ ನೀನು ನೂಕಿರುವ ಸ್ಥಳಕೆ ತೊಲಗಿಸೆನ್ನನು ಅರಸ ಇನ್ನು ತಡವೇಕೆ?=ದೇಗುಲದಿಂದ ಹೊರಬಂದಿರುವ ದೇವರು ಈಗ ದುಡಿಯುವ ವರ್‍ಗದ ಬಡಜನರ ಜತೆಯಲ್ಲಿದ್ದಾನೆ. ಅಂತೆಯೇ ನನ್ನನ್ನು ಅವರ ಬಳಿ ಕಳುಹಿಸು;

ದೇವರು ಎನ್ನುವ ವ್ಯಕ್ತಿ ಇಲ್ಲವೇ ಶಕ್ತಿಯು ಮಾನವ ಸಮುದಾಯದ ಮನದಲ್ಲಿ ಮೂಡಿ ಬಂದಿರುವ ಒಂದು ಕಲ್ಪನೆಯಾಗಿದೆ. ಆದ್ದರಿಂದಲೇ ದೇವರನ್ನು ಕುರಿತ ಚಿಂತನೆಗಳು ಮತ್ತು ಆಚರಣೆಗಳು ಹಲವಾರು ಬಗೆಗಳಲ್ಲಿವೆ. ಅನ್ನ,ಬಟ್ಟೆ,ವಸತಿ,ವಿದ್ಯೆ,ಉದ್ಯೋಗ ಮತ್ತು ಆರೋಗ್ಯದಿಂದ ವಂಚಿತರಾದ ದುಡಿಯುವ ವರ್‍ಗದ ಬಡಜನರು ಇವನ್ನು ಪಡೆಯುವುದಕ್ಕಾಗಿ ದೇವರನ್ನು ಪೂಜಿಸಿದರೆ, ಅಪಾರವಾದ ಸಂಪತ್ತನ್ನು ಉಳ್ಳವರು ಮತ್ತು ಆಡಳಿತದ ಗದ್ದುಗೆಯಲ್ಲಿರುವ ವ್ಯಕ್ತಿಗಳು ತಮ್ಮ ಸಂಪತ್ತನ್ನು ಮತ್ತು ಗದ್ದುಗೆಯನ್ನು ಉಳಿಸಿಕೊಂಡು ಇನ್ನೂ ಹೆಚ್ಚಿನದನ್ನು ಪಡೆಯಲು ದೇವರನ್ನು ಪೂಜಿಸುತ್ತಾರೆ. ಸಿರಿವಂತರಿಗೆ ಮತ್ತು ಆಡಳಿತಗಾರರಿಗೆ ದೇವರು ಎನ್ನುವ ವ್ಯಕ್ತಿ ಇಲ್ಲವೇ ಶಕ್ತಿಯು ತಾವು ಸಹಮಾನವರಿಗೆ ಮತ್ತು ಸಮಾಜಕ್ಕೆ ಮಾಡುತ್ತಿರುವ ವಂಚನೆಯನ್ನು ಮುಚ್ಚಿಟ್ಟುಕೊಳ್ಳಲು ಮತ್ತು ತಮ್ಮ ವಂಚನೆಯನ್ನು ಮುಂದುವರಿಸಲು ಒಂದು ಉಪಕರಣವಾಗುತ್ತದೆ. ಆದ್ದರಿಂದಲೇ ಉಳ್ಳವರು ಮತ್ತು ಆಡಳಿತದ ಗದ್ದುಗೆಯಲ್ಲಿರುವವರು ದೊಡ್ಡ ದೊಡ್ಡ ದೇಗುಲವನ್ನು ಕಟ್ಟಿಸಿ, ದುಡಿಯುವ ವರ್‍ಗದ ಬಡವರಲ್ಲಿ ದೇವರ ಬಗೆಗಿನ ನಂಬಿಕೆಯನ್ನು ಹೆಚ್ಚುಮಾಡುತ್ತಾರೆ. ದುಡಿಯುವ ವರ್‍ಗದ ಜನರು “ತಮ್ಮ ಹಸಿವು, ಬಡತನ ಮತ್ತು ಅಪಮಾನದ ಜೀವನಕ್ಕೆ ತಮ್ಮ ಹಣೆಯಲ್ಲಿ ದೇವರು ಬರೆದಿರುವುದೇ ಕಾರಣ” ವೆಂದು ತಿಳಿದು, ತಮ್ಮನ್ನು ವಂಚಿಸಿ ಸುಲಿಗೆ ಮಾಡುತ್ತಿರುವ ಉಳ್ಳವರ ಮತ್ತು ಆಡಳಿತಗಾರರ ಎದುರು ತಿರುಗಿಬೀಳದೆ ತೆಪ್ಪಗಾಗುತ್ತಾರೆ. ರಾಜನು ದೇಗುಲವನ್ನು ಕಟ್ಟಿಸಿದ್ದು ಇಂತಹ ಉದ್ದೇಶದಿಂದಲೇ ಹೊರತು, ದೇವರ ಬಗೆಗಿನ ಒಲವಿನಿಂದಲ್ಲ.

ಆಡಳಿತದ ಗದ್ದುಗೆಯಲ್ಲಿ ಕುಳಿತು , ಸಿರಿವಂತಿಕೆಯ ಸೊಕ್ಕಿನಿಂದ ಮೆರೆಯುತ್ತಿರುವ ವ್ಯಕ್ತಿಗಳ ಮನದಲ್ಲಿ ದುಡಿಯುವ ವರ್‍ಗದ ಬಡಜನರ ಬದುಕಿನ ಬಗ್ಗೆ ಕರುಣೆ, ಕಾಳಜಿ ಮತ್ತು ಹೊಣೆಗಾರಿಕೆ ಇಲ್ಲವೆಂಬುದನ್ನು ಈ ಕವನದಲ್ಲಿ ಚಿತ್ರಣಗೊಂಡಿರುವ ಸಂಗತಿಗಳು ತಿಳಿಸುತ್ತವೆ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: