ಅಗಸಿ ಹಿಂಡಿ (ಚಟ್ನಿ ಪುಡಿ)

– ಸುಹಾಸಿನಿ ಎಸ್.

ಅಗಸೆ/ಅಗಸಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಒಮೆಗಾ ಕೊಬ್ಬಿನ ಆಮ್ಲ (omega fatty acids), ಪ್ರೋಟಿನ್, ನಾರು, ಮೆಗ್ನೀಸಿಯಮ್, ವಿಟಮಿನ್ ಗಳು ಹೇರಳವಾಗಿವೆ. ಅಗಸೆಯ ಹಸಿ ಬೀಜವನ್ನು ಹಾಗೆಯೇ ತಿಂದರೆ ಬಾಯಿಯಲ್ಲಿ ಸ್ವಲ್ಪ ಜಿಗುಟು ಅನ್ನಿಸುತದೆ. ಆದ್ದರಿಂದ ಅದನ್ನು ಹುರಿದು ತಿನ್ನುವುದು ಸರಳ ಮತ್ತು ರುಚಿಕರ. ದಿನವೂ ಒಂದು ಚಮಚ ಅಗಸೆಯನ್ನು ಬಳಸಿದರೆ ದೇಹಕ್ಕೆ ಬೇಕಾದ ಅಗತ್ಯ ಪೋಶಕಾಂಶಗಳು ಸಿಗುತ್ತವೆ ಮತ್ತು ಕೋಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರಿಸಲು ಸಾದ್ಯ. ಅಗಸೆಯಲ್ಲಿರುವ ಮೆಗ್ನೀಸಿಯಮ್, ಸಿರೊಟೇನಿನ್ ಹಾರ‍್ಮೋನ್ ಚೆನ್ನಾಗಿ ಕೆಲಸ ಮಾಡುವ ಹಾಗೆ ಮಾಡುತ್ತದೆ. ಇದರಿಂದ ಉತ್ತಮ ಮನಸ್ತಿತಿ, ಉತ್ತಮ ನಿದ್ರೆ, ಉತ್ತಮ ಜೀರ‍್ಣಕ್ರಿಯೆಯನ್ನು ಹೊಂದಲು ಸಾದ್ಯವಾಗುತ್ತದೆ. ಇದರಲ್ಲಿನ ನಾರಿನಂಶವು ಮಲಬದ್ದತೆ, ಆಸಿಡಿಟಿಯಂತಹ ತೊಂದರೆಯನ್ನು ಹೋಗಲಾಡಿಸಲು ನೆರವಾಗುತ್ತದೆ. ಇಂತಹ ಒಳ್ಳೆಯ ಅಗಸೆಯಿಂದ ತಟ್ಟನೆ ಆಗುವಂತ ಹಿಂಡಿ/ಚಟ್ನಿ ಮಾಡುವುದು ಹೇಗೆ ಅಂತ ನೋಡೋಣ.

ಏನೇನು ಬೇಕು?

ಅಗಸೆ – 200 ಗ್ರಾಂ
ಜೀರಿಗೆ – 1 ಚಮಚ
ಬೆಳ್ಳುಳ್ಳಿ – 6-7 ಎಸಳು
ಒಣ ಕೆಂಪುಕಾರದ ಪುಡಿ – 4-5 ಚಮಚ
ಉಪ್ಪು – ರುಚಿಗೆ ತಕ್ಕಶ್ಟು

ಮಾಡುವ ಬಗೆ

ಅಗಸೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಚಿಟಪಟ ಸದ್ದು ಬರುವ ತನಕ ಹುರಿದು, ಆರಲು ಬಿಡಬೇಕು. ಅಗಸೆ ಆರಿದ ನಂತರ ಒಂದು ಮಿಕ್ಸಿ ಜಾರ್ ಗೆ ಹುರಿದ ಅಗಸೆ ಮತ್ತು ಉಳಿದ ಎಲ್ಲಾ ಸಾಮಾನು ಹಾಕಿ ಮಿಕ್ಸಿ ಮಾಡಿದರೆ ಅಗಸೆ ಚಟ್ನಿ ತಯಾರು. ಇದನ್ನು ಒಂದು ಬಾಟಲ್ ನಲ್ಲಿ ಹಾಕಿಡಬಹುದು. ರೊಟ್ಟಿ, ಚಪಾತಿ, ಅನ್ನ, ದೋಸೆ ಜೊತೆಗೆ ರುಚಿಯಾದ ಅಗಸೆ ಹಿಂಡಿ/ಚಟ್ನಿ ಪುಡಿ ತಿನ್ನಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: