ಕವಿತೆ: ಕಳೆಯುವೆವು ಕಾಲವನ್ನು

– .

ಅವರು ಹಂಗೆ
ಇವರು ಹಿಂಗೆ
ನಾವು ಹೆಂಗೆ
ಅನ್ನುವುದರಲ್ಲಿಯೇ
ಜೀವನವ ಕಳೆಯುವೆವು

ಗೆದ್ದಾಗ ಹಿಗ್ಗಿ
ಸೋತಾಗ ಕುಗ್ಗಿ
ಬಿದ್ದು ಎದ್ದಾಗ ಮುನ್ನುಗ್ಗಿ
ಓಡುವುದರಲ್ಲಿಯೇ
ಬದುಕನ್ನು ಕಳೆಯುವೆವು

ಸರಿಯನ್ನು ತಪ್ಪೆಂದು
ತಪ್ಪನ್ನು ಸರಿಯೆಂದು
ಸರಿ ತಪ್ಪುಗಳಾವುವೆಂದು
ಹುಡುಕುವುದರಲ್ಲಿಯೇ
ಬಾಳನ್ನು ಕಳೆಯುವೆವು

ಜೊತೆಗಿದ್ದಾಗ ಕಡೆಗಣಿಸಿ
ದೂರವಾದಾಗ ಪರಿತಪಿಸಿ
ಮನದ ತೊಳಲಾಟದಲ್ಲಿ
ಒದ್ದಾಡುವುದರಲ್ಲಿಯೇ
ಸಮಯವ ಕಳೆಯುವೆವು

ಹೆತ್ತವರ ಕನಸು ನನಸಾಗಿಸದೇ
ಗುರು ತೋರಿದ ಗುರಿ ಮುಟ್ಟದೇ
ನಾಡು ನುಡಿಯ ರಕ್ಶಣೆ ಮಾಡದೇ
ನಿಶ್ಪ್ರಯೋಜಕರಾಗಿ ಬಾಳುವುದರಲ್ಲಿಯೇ
ಕಾಲವನ್ನು ಕಳೆಯುವೆವು

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: