ನಾ ನೋಡಿದ ಸಿನೆಮಾ: ಕೌಸಲ್ಯಾ ಸುಪ್ರಜಾ ರಾಮ
ಕೌಟುಂಬಿಕ ಕತೆಯ ಸಿನೆಮಾಗಳಿಗೆ ಚಂದನವನದಲ್ಲಿ ಬರವಿಲ್ಲ. ಯಾವುದೇ ಟ್ರೆಂಡ್ ನಡೆಯುತ್ತಿರಲಿ, ಕೌಟುಂಬಿಕ ಸಿನೆಮಾಗಳು ಒಂದಿಲ್ಲೊಂದು ನೋಡುಗರ ಮುಂದೆ ಬರುತ್ತಿರುತ್ತವೆ. ಇದು ಒಂದು ರೀತಿಯಲ್ಲಿ ಒಳ್ಳೆಯ ಬೆಳವಣಿಗೆ. ಸಮಾಜದ ಹೊರಗಶ್ಟೇ ಅಲ್ಲದೆ, ಮನೆಯೊಳಗೂ ಸಹ ಬದಲಾವಣೆಗಳು ಬೇಕು. ಅದನ್ನು ತೆರೆಯ ಮೇಲೆ ತಂದು ನೋಡುಗರನ್ನು ಮುಟ್ಟಿದರೆ, ಕೆಲವೊಂದಶ್ಟು ಮಂದಿಯಾದರೂ ಆ ಬದಲಾವಣೆಗೆ ತೆರೆದುಕೊಂಡರೆ, ಅದೂ ಸಹ ಒಂದು ರೀತಿಯ ಗೆಲುವೆ.
ತಾನು ಗಂಡಸು, ಹೆಂಗಸು ತನ್ನ ಅಡಿಯಾಳು ಎನ್ನುವ ಯೋಚನೆ ಹಲವು ಗಂಡಸರಲ್ಲಿರುವುದು ಈ ಸಮಾಜದಲ್ಲಿ ಇಂದಿಗೂ ಎದ್ದು ಕಾಣುತ್ತದೆ. ತಾವಶ್ಟೇ ಈ ಸಾಮಾಜಿಕ ಪಿಡುಗಿಗೆ ತಲೆಬಾಗಿದ್ದಲ್ಲದೇ ತಮ್ಮ ಮುಂದಿನ ತಲೆಮಾರಿಗೂ ಅದನ್ನೇ ಉಣಬಡಿಸುವವರನ್ನು ಕಂಡಿದ್ದೇವೆ. ಇದಕ್ಕೆ ಗಂಡಸರನ್ನಶ್ಟೇ ಹೊಣೆಮಾಡುವುದು ಸರಿಯಲ್ಲ, ತಪ್ಪು ಎಂದು ತಿಳಿದೂ ಸಹ ಮರು ಮಾತಾಡದೇ ತಲೆ ಬಗ್ಗಿಸಿ ನಡೆದ ಹೆಂಗಸರದ್ದೂ ಸಹ ತಪ್ಪಿದೆ. ಈ ಎಲ್ಲಾ ತಪ್ಪು ಒಪ್ಪುಗಳನ್ನು ನೋಡುಗರ ಮುಂದಿಟ್ಟಿದೆ ಕೌಸಲ್ಯಾ ಸುಪ್ರಜಾ ರಾಮ ಸಿನೆಮಾ.
ಗಂಡಸು ಮನೆಯ ಒಡೆಯ, ಎಂದಿಗೂ ಹೆಂಗಸರೆದುರು ತಲೆಬಾಗಬಾರದು, ಅವರು ಅಡುಗೆ ಮನೆಗೆ ಸೀಮಿತ, ತಾವು ಏನೇ ಮಾಡಿದರೂ ನಡೆಯುತ್ತದೆ ಎಂದು ಬದುಕಿ, ತನ್ನ ಮಗನಿಗೂ ಅದನ್ನೇ ಕಲಿಸಿದ ತಂದೆ. ತಂದೆಯ ಈ ಗುಣವನ್ನು ಅರಿತೋ ಅರಿಯದೆಯೋ ಮೈಗೂಡಿಸಿಕೊಂಡು, ತಾಯಿಯ ಮಮತೆಯನ್ನೂ ಸಹ ಲೆಕ್ಕಿಸದ ಮಟ್ಟಕ್ಕೆ ಬೆಳೆದ ಮಗ. ಆತನ ಕಾಲೇಜು ದಿನಗಳಲ್ಲಿ ಅರಳುವ ಒಲವು, ತಾನೇ ಮೇಲು ತನಗನಿಸಿದ ಹಾಗೇ ತನ್ನ ಹುಡುಗಿಯೂ ಇರಬೇಕು ಎನ್ನುವ ನಾಯಕ. ಹೀಗಿರುವಾಗ ನಾಯಕನ ಬದುಕು ಯಾವ ರೀತಿ ತಿರುವು ತೆಗೆದುಕೊಳ್ಳುತ್ತದೆ, ಇಶ್ಟು ದಿನ ಸರಿಯೆಂದುಕೊಂಡು ಮಾಡಿದ ತಪ್ಪು ಹೇಗೆ ಆತನನ್ನು ಕಾಡಿ, ಪಾಟ ಕಲಿಸುತ್ತದೆ ಎನ್ನುವುದೇ ಸಿನೆಮಾದ ಕತೆ.
ನಾಯಕನ ಪಾತ್ರದಲ್ಲಿ ಡಾರ‍್ಲಿಂಗ್ ಕ್ರಿಶ್ಣ ನಟಿಸಿದ್ದು, ನಾಯಕಿಯರ ಪಾತ್ರದಲ್ಲಿ ಬ್ರುಂದಾ ಆಚಾರ್‍ಯ ಹಾಗೂ ಮಿಲನಾ ನಾಗರಾಜ್ ನಟಿಸಿದ್ದಾರೆ. ನಾಯಕನ ತಂದೆಯ ಪಾತ್ರದಲ್ಲಿ ರಂಗಾಯಣ ರಗು ಹಾಗೂ ತಾಯಿಯ ಪಾತ್ರದಲ್ಲಿ ಸುದಾ ಬೆಳವಾಡಿ ಕಾಣಿಸಿಕೊಂಡಿದ್ದಾರೆ. ನಾಯಕನ ಸಂಬಂದಿಕ ಹಾಗೂ ಗೆಳೆಯನಾಗಿ ನಾಗಬೂಶಣ ಎನ್. ಎಸ್. ನಟಿಸಿದ್ದು, ಇನ್ನುಳಿದಂತೆ ಅಚ್ಯುತ್ ಕುಮಾರ್ ಹಾಗೂ ಇತರೆ ತಾರಾಗಣವಿದೆ. ರಂಗಾಯಣ ರಗು ಹಾಗೂ ಸುದಾ ಬೆಳವಾಡಿಯವರು ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದು, ನಾಗಬೂಶಣ ಅವರು ಎಂದಿನಂತೆ ನೋಡುಗರನ್ನು ತಮ್ಮ ಸಹಜ ನಟನೆಯ ಮೂಲಕ ನಗಿಸುತ್ತಾರೆ.
ತೆರೆಯ ಹಿಂದಿನ ವರ‍್ಗಕ್ಕೆ ಬಂದರೆ ಶಶಾಂಕ್ ಅವರ ನಿರ‍್ದೇಶನವಿದ್ದು, ಯದುನಂದನ್ ಅವರ ಚಿತ್ರ ಕತೆಯಿದೆ. ಅರ‍್ಜುನ್ ಜನ್ಯ ಸಂಗೀತ ಹಾಗೂ ಗಿರಿ ಮಹೇಶ್ ಅವರ ಸಂಕಲನವಿದೆ. ಕೌರವ ಪ್ರೊಡಕ್ಶನ್ ಹೌಸ್ ಹಾಗೂ ಶಶಾಂಕ್ ಸಿನೆಮಾಸ್ ಈ ಚಿತ್ರವನ್ನು ನಿರ‍್ಮಿಸಿದ್ದು, ಅಮೇಜಾನ್ ಪ್ರೈಮ್ ನಲ್ಲಿ ನೋಡುಗರಿಗೆ ಲಬ್ಯವಿದೆ.
(ಚಿತ್ರಸೆಲೆ: imdb.com )
ಇತ್ತೀಚಿನ ಅನಿಸಿಕೆಗಳು