ಬ್ರೆಕ್ಟ್ ಕವನಗಳ ಓದು – 2 ನೆಯ ಕಂತು
– ಸಿ.ಪಿ.ನಾಗರಾಜ.
ರೈತನಿಗೆ ತನ್ನ ಹೊಲದ್ದೇ ಚಿಂತೆ
(ಕನ್ನಡ ಅನುವಾದ: ಶಾ.ಬಾಲುರಾವ್)
ರೈತನಿಗೆ ತನ್ನ ಹೊಲದ್ದೇ ಚಿಂತೆ
ಅವನು ದನಕರುಗಳನ್ನು ಸಾಕುತ್ತಾನೆ.
ಕಂದಾಯ ಕಟ್ಟುತ್ತಾನೆ
ಕೂಲಿಯ ದುಡ್ಡುಳಿಸಲೆಂದು
ಮಕ್ಕಳು ಮಾಡುತ್ತಾನೆ
ಅವನ ಬದುಕು ನಿಂತಿರುವುದು
ಹಾಲಿನ ಧಾರಣೆಯ ಮೇಲೆ
ಪಟ್ಟಣದ ಮಂದಿ
ರೈತಜನರ ಮಣ್ಣಿನ ಮೋಹದ ಬಗ್ಗೆ
ಅವರ ಯೋಗಕ್ಷೇಮದ ಬಗ್ಗೆ
ಮಾತಾಡುತ್ತಾರೆ
ಅವರೇ ದೇಶದ ಅಸ್ತಿಭಾರವೆನ್ನುತ್ತಾರೆ.====================================
ಇಡೀ ಜಗತ್ತಿನ ಜನಸಮುದಾಯಕ್ಕೆ ಅನ್ನವನ್ನು ಕೊಡುವ ಬೇಸಾಯಗಾರನ ಬದುಕಿನ ಬವಣೆಗಳನ್ನು ಚಿತ್ರಿಸುತ್ತ, ಆತನು ಬೆಳೆಯುವ ಬೆಳೆಗಳಿಗೆ ತಕ್ಕ ಬೆಲೆಯು ಹಣದ ರೂಪದಲ್ಲಿ ದೊರೆತಾಗ ಮಾತ್ರ, ಅವನ ಬದುಕಿನಲ್ಲಿ ನೆಮ್ಮದಿಯು ಉಂಟಾಗುತ್ತದೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.
ರೈತ=ಬೇಸಾಯಗಾರ/ಹೊಲಗದ್ದೆತೋಟದಲ್ಲಿ ದವಸದಾನ್ಯಗಳನ್ನು ಬೆಳೆಯುವ ವ್ಯಕ್ತಿ; ಹೊಲ=ಬೆಳೆಯನ್ನು ತೆಗೆಯುವುದಕ್ಕೆ ನೆಲೆಯಾದ ಬೂಮಿ;
ರೈತನಿಗೆ ತನ್ನ ಹೊಲದ್ದೇ ಚಿಂತೆ=ತನ್ನ ಮತ್ತು ತನ್ನ ಕುಟುಂಬದ ಬದುಕಿಗೆ ನೆಲೆಯಾದ ಬೆಳೆ ಕೊಡುವ ಹೊಲದ ಬಗ್ಗೆ ಸದಾಕಾಲ ಬೇಸಾಯಗಾರ ಚಿಂತಿಸುತ್ತಿರುತ್ತಾನೆ. ಏಕೆಂದರೆ ಬೀಸುವ ಗಾಳಿ, ಉರಿಯುವ ಸೂರ್‍ಯ, ಸುರಿಯುವ ಮಳೆ ಮುಂತಾದ ನಿಸರ್‍ಗದ ಆಗುಹೋಗುಗಳೆಲ್ಲವೂ ಬೇಸಾಯ ಮಾಡುವಾಗ ಸಕಾಲದಲ್ಲಿ ಬಂದರೆ ನೆರವಾಗುತ್ತವೆ, ಬಾರದಿದ್ದರೆ… ಬೇಸಾಯಗಾರನ ಬದುಕನ್ನೇ ಹಸಿವು, ಬಡತನ, ಸಾವು ನೋವಿಗೆ ದೂಡುತ್ತವೆ. ಬೆಳೆಯುವ ಬೆಳೆಯಾಗಲಿ ಇಲ್ಲವೇ ಮಾರಾಟದಿಂದ ದೊರೆಯುವ ಬೆಲೆಯಾಗಲಿ ಆತನ ಕಯ್ಯಲ್ಲಿಲ್ಲ. ಒಂದು ನಿಸರ್‍ಗವನ್ನು ಅವಲಂಬಿಸಿದ್ದರೆ, ಮತ್ತೊಂದು ಮಾರುಕಟ್ಟೆಯನ್ನು ಅವಲಂಬಿಸಿದೆ.
ಕಂದಾಯ=ರಾಜನಿಗೆ ಇಲ್ಲವೇ ಆಡಳಿತವನ್ನು ನಡೆಸುತ್ತಿರುವ ಸರ್‍ಕಾರಕ್ಕೆ ಜಮೀನಿನ ಒಡೆಯನಾದ ಬೇಸಾಯಗಾರನು ವರುಶಕ್ಕೊಮ್ಮೆ ಕಟ್ಟುವ ತೆರಿಗೆಯ ರೂಪದ ಹಣ; ಕೂಲಿ=ಜಮೀನಿನ ಒಡೆಯನಾದ ಬೇಸಾಯಗಾರನ ಜತೆಜತೆಯಲ್ಲಿಯೇ ಪರಿಶ್ರಮದಿಂದ ದುಡಿದು, ಅದಕ್ಕೆ ಪ್ರತಿಯಾಗಿ ಹಣವನ್ನು ಇಲ್ಲವೇ ದವಸವನ್ನು ಪಡೆಯುವ ವ್ಯಕ್ತಿ;
ದುಡ್ಡು+ಉಳಿಸಲು+ಎಂದು; ದುಡ್ಡುಳಿಸಲೆಂದು=ಕೂಲಿಗೆ ಕೊಡುವ ಹಣವನ್ನು ಉಳಿಸುವುದಕ್ಕಾಗಿ;
ಕೂಲಿಯ ದುಡ್ಡುಳಿಸಲೆಂದು ಮಕ್ಕಳು ಮಾಡುತ್ತಾನೆ=ಈ ನುಡಿಗಳು ಒಂದು ರೂಪಕದ ತಿರುಳಿನಲ್ಲಿ ಬಳಕೆಯಾಗಿವೆ. ಕೂಲಿಯಾಳಿಗೆ ಹಣವನ್ನು ಕೊಡಲಾಗದಂತಹ ಬಡತನದಲ್ಲಿರುವ ಬೇಸಾಯಗಾರನು ಹೆಚ್ಚು ಹೆಚ್ಚು ಮಕ್ಕಳನ್ನು ಪಡೆಯಲು ಇಚ್ಚೆಪಡುತ್ತಾನೆ. ತನ್ನ ಮನೆಯಲ್ಲಿಯೇ ದುಡಿಯುವ ವ್ಯಕ್ತಿಗಳು ಹೆಚ್ಚಾದರೆ, ಕೂಲಿಗೆ ಕೊಡಬೇಕಾದ ಹಣ ಉಳಿಯುತ್ತದೆ ಎಂಬ ಉದ್ದೇಶ;
ಅವನ ಬದುಕು ನಿಂತಿರುವುದು=ಬೇಸಾಯಗಾರನ ಬದುಕಿನ ನೋವು ನಲಿವುಗಳೆಲ್ಲವೂ ಅವಲಂಬಿಸಿರುವುದು; ಧಾರಣೆ=ಬೆಲೆ/ದರ: ಹಾಲಿನ ಧಾರಣೆ=ಇದೊಂದು ನುಡಿಗಟ್ಟು. ಬೇಸಾಯಗಾರ ಬೆಳೆಯುವ ದವಸದಾನ್ಯಗಳು, ಕುರಿ ಸಾಕಾಣಿಕೆ, ಪಶುಪಾಲನೆ ಮತ್ತು ರೇಶ್ಮೆಹುಳು ಸಾಕಾಣಿಕೆ ಮುಂತಾದ ಎಲ್ಲ ಬಗೆಯ ವಸ್ತುಗಳ ಉತ್ಪಾದನೆಗೂ ಹಣದ ರೂಪದಲ್ಲಿ ದೊರೆಯುವ ಬೆಲೆ;
ಅವನ ಬದುಕು ನಿಂತಿರುವುದು ಹಾಲಿನ ಧಾರಣೆಯ ಮೇಲೆ=ಬೇಸಾಯಗಾರನು ಹಗಲು ಇರುಳೆನ್ನದೆ ತನ್ನ ಬೆವರನ್ನು ಹರಿಸಿ, ರಕ್ತವನ್ನು ಬಸಿದು ಮಾಡಿದ ದುಡಿಮೆಯಿಂದ ಉತ್ಪಾದಿಸಿದ ವಸ್ತುಗಳಿಗೆ ಮಾರುಕಟ್ಟೆಯಲ್ಲಿ ತಕ್ಕ ಬೆಲೆ ದೊರೆತರೆ ಬೇಸಾಯಗಾರನು ತನ್ನ ಕುಟುಂಬದೊಡನೆ ಮತ್ತು ನೆರೆಹೊರೆಯವರೊಡನೆ ನೆಮ್ಮದಿಯಿಂದ ಬಾಳುತ್ತಾನೆ. ತಕ್ಕ ಬೆಲೆ ದೊರೆಯದಿದ್ದರೆ ಬದುಕಿನುದ್ದಕ್ಕೂ ಜೀವಂತವಾಗಿ ನರಳುತ್ತಾನೆ ಇಲ್ಲವೇ ಸಾಲಸೋಲದ ಸನ್ನಿವೇಶಗಳನ್ನು ಎದುರಿಸಲಾಗದೆ ಸಾವಿನ ಕುಣಿಕೆಗೆ ತನ್ನ ಕೊರಳನ್ನು ಒಡ್ಡುತ್ತಾನೆ;
ಪಟ್ಟಣದ ಮಂದಿ=ದೊಡ್ಡ ದೊಡ್ಡ ನಗರಗಳಲ್ಲಿ ವಾಸಮಾಡುತ್ತಿರುವ ಜನರು/ನಾಡಿನ ಸಂಪತ್ತಿನಲ್ಲಿ ಬಹು ದೊಡ್ಡ ಪಾಲನ್ನು ಪಡೆಯುತ್ತಿರುವವರು/ಉನ್ನತವಾದ ಗದ್ದುಗೆಯಲ್ಲಿ ಕುಳಿತು ನಾಡನ್ನು ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತು ಆಡಳಿತ ಸೂತ್ರವನ್ನು ಹಿಡಿದಿರುವವರು;
ಮೋಹ=ಅಕ್ಕರೆ/ಪ್ರೀತಿ; ಯೋಗಕ್ಷೇಮ=ನೆಮ್ಮದಿ/ಜೀವನಕ್ಕೆ ಅಗತ್ಯವಾದುದೆಲ್ಲವನ್ನೂ ಪಡೆದು ಆನಂದದಿಂದ ಬಾಳುವುದು; ದೇಶ=ನಾಡು/ರಾಜ್ಯ; ಅಸ್ತಿಭಾರ+ಎನ್ನುತ್ತಾರೆ; ಅಸ್ತಿಭಾರ=ಅಡಿಪಾಯ/ತಳಹದಿ;
ಪಟ್ಟಣದ ಮಂದಿ ರೈತಜನರ ಮಣ್ಣಿನ ಮೋಹದ ಬಗ್ಗೆ… ಅವರ ಯೋಗಕ್ಷೇಮದ ಬಗ್ಗೆ ಮಾತಾಡುತ್ತಾರೆ… ಅವರೇ ದೇಶದ ಅಸ್ತಿಭಾರವೆನ್ನುತ್ತಾರೆ=ಬೇಸಾಯಗಾರನು ಬೆಳೆದ ಬೆಳೆಗಳಿಂದಲೇ ಜೀವನಕ್ಕೆ ಅತ್ಯಗತ್ಯವಾದ ಅನ್ನ ಆಹಾರವನ್ನು ಪಡೆಯುತ್ತಿರುವ ಪಟ್ಟಣದ ಜನರು/ಸಿರಿವಂತರು/ಆಡಳಿತಗಾರರು ಬೇಸಾಯಗಾರನ ಬದುಕನ್ನು ಕುರಿತು ಮಾತಿನಲ್ಲಿ ಹಾಡಿ ಹೊಗಳುತ್ತಾರೆ. ಹಚ್ಚಹಸಿರಿನ ಪಯಿರುಪಚ್ಚೆಗಳ ನಡುವೆ ಮಣ್ಣಿನ ಮಗನಾಗಿ ಬಾಳುವ ಅವನಿಗೆ ಜೀವನದಲ್ಲಿ ಒಳಿತಾಗಲೆಂದು ಬರಿಮಾತುಗಳನ್ನಾಡುತ್ತಾರೆ. ಬೇಸಾಯಗಾರನು ಇಲ್ಲದಿದ್ದರೆ, ಈ ನಾಡು ಇರುತ್ತಿರಲಿಲ್ಲವೆಂದು, ಈ ನಾಡು ಉಳಿದು ಬೆಳೆದು ಬಾಳುತ್ತಿರುವುದಕ್ಕೆ ಬೇಸಾಯಗಾರನ ದುಡಿಮೆಯೇ ಕಾರಣವೆಂದು ಮಾತಿನಲ್ಲಿ ಬಣ್ಣಿಸುತ್ತಾರೆ;
ಆದರೆ ಇಂತಹ ಯಾವುದೇ ಬಣ್ಣದ ಮಾತುಗಳಿಂದ ಬೇಸಾಯಗಾರನ ಬದುಕು ಹಸನಾಗುವುದಿಲ್ಲ. ಅವನ ಬದುಕಿನಲ್ಲಿ ಆನಂದ ಮತ್ತು ನೆಮ್ಮದಿಯು ದೊರೆಯುವಂತಾಗಲು ಇರುವುದು ಒಂದೇ ಒಂದು ದಾರಿ. ಅದೆಂದರೆ ಅವನು ಬೆಳೆದ ಬೆಳೆಗಳಿಗೆ ತಕ್ಕ ಬೆಲೆ ದೊರೆಯುವಂತಹ ವ್ಯವಸ್ತೆಯು ಕಾರ್‍ಯರೂಪಕ್ಕೆ ಬರಬೇಕು ಎಂಬ ಆಶಯವನ್ನು ಈ ಕವನ ಸೂಚಿಸುತ್ತದೆ.
ಈ ಕವನದಲ್ಲಿ ಪ್ರಸ್ತಾಪಿಸಿರುವ ಸಂಗತಿಗೆ ಪೂರಕವಾಗಿ ಇಂಡಿಯಾ ದೇಶದಲ್ಲಿ ಹಸಿರು ಕ್ರಾಂತಿಯ ಹರಿಕಾರರೆಂದು ಕೀರ್‍ತಿಯನ್ನು ಪಡೆದಿದ್ದ ಡಾ.ಎಂ.ಎಸ್.ಸ್ವಾಮಿನಾತನ್ (1925-2023) ಅವರು ಬೇಸಾಯಗಾರನ ಬೆಳೆಗಳಿಗೆ ತಕ್ಕ ಬೆಲೆಯು ದೊರೆಯುವಂತಹ ವ್ಯವಸ್ತೆಯ ಬಗ್ಗೆ ಹೇಳಿರುವ ನುಡಿಗಳನ್ನು ತಿಳಿದುಕೊಳ್ಳಬೇಕು.
“ಬಾರತೀಯ ಕ್ರುಶಿ, ಹೈನುಗಾರಿಕೆ, ತೋಟಗಾರಿಕೆ, ಆಹಾರ ಶೇಕರಣೆ ಪ್ರೊಸೆಸಿಂಗ್ – ಈ ಎಲ್ಲ ಕ್ಶೇತ್ರಗಳು ಒಂದಕ್ಕೊಂದು ಪೂರಕವಾದವು. ಅದನ್ನು ಅರ‍್ತಮಾಡಿಕೊಂಡು ಒಂದು ಸಮಗ್ರ ರಾಶ್ಟ್ರೀಯ ನೀತಿ ಜಾರಿಗೆ ಬರಬೇಕು. ಇದುವರೆಗೆ ಬಾರತದಲ್ಲಿ ಕ್ರುಶಿ ಉತ್ಪನ್ನಗಳ ಬೆಲೆ ನಿಗದಿ ಕುರಿತು ಒಂದು ಸದ್ರುಡವಾದ ವೈಜ್ನಾನಿಕ ನೀತಿ-ನಿಯಮ ಜಾರಿಗೆ ಬಂದಿಲ್ಲ. ನಾವು ಕರೀದಿಸುವ ಒಂದು ಪೆನ್, ಮೊಬೈಲ್ ಪೋನ್ ಅತವಾ ಟೆಲಿವಿಶನ್ ಗೆ ದರ ನಿಗದಿ ಮಾಡುವ ವೇಳೆ ಅದರ ಉತ್ಪಾದನಾ ವೆಚ್ಚ, ಮಾರ‍್ಕೆಟಿಂಗ್ ಗೆ ಆದ ಕರ‍್ಚನ್ನು ಸೇರಿಸಿ, ಅದರ ಮೇಲೆ ಲಾಬವನ್ನು ಇಟ್ಟುಕೊಂಡು ದರ ನಿಗದಿ ಮಾಡಲಾಗುತ್ತದೆ.
ಅದೇ ಬಾರತದ ರೈತ ಒಂದು ಕ್ವಿಂಟಾಲ್ ಅಕ್ಕಿ ಅತವಾ ಗೋದಿ ಬೆಳೆಯಲು ಆಗುವ ಒಟ್ಟಾರೆ ವೆಚ್ಚ ಎಶ್ಟು…? ಅದಕ್ಕಾಗಿ ಆ ರೈತನ ಕುಟುಂಬ ಹರಿಸಿದ ಬೆವರಿನ ಬೆಲೆ ಎಶ್ಟು…? ಅದನ್ನು ಮಾರುಕಟ್ಟೆಗೆ ತಲುಪಿಸಲು ಬೇಕಾಗುವ ವೆಚ್ಚ ಎಶ್ಟು? – ಇವೆಲ್ಲವನ್ನೂ ಕೂಡಿಸಿ, ಅದರ ಮೇಲೆ ಶೇಕಡಾ ಮೂವತ್ತರಶ್ಟು ಲಾಬ ಸೇರಿಸಿ ಬೆಲೆ ನಿಗದಿಯಾಗುತ್ತಿದೆಯೇ?
ಈವತ್ತು ಮೊದಲು ಆಗಬೇಕಾಗಿರುವುದು ಇದು. ಮಾರುಕಟ್ಟೆಯಲ್ಲಿ ರೈತ ಬೆಳೆದ ಬೆಲೆಗೆ ಸೂಕ್ತ ಬೆಲೆ ನೀಡಿದಲ್ಲಿ, ರೈತರು ಸರ‍್ಕಾರದ ಸಬ್ಸಿಡಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ.”
(ಚಿತ್ರ ಸೆಲೆ: wikipedia.org)
ಇತ್ತೀಚಿನ ಅನಿಸಿಕೆಗಳು