ಕವಿತೆ: ಸಂತ ಸರ‍್ವಜ್ನ
– ಮಹೇಶ ಸಿ. ಸಿ.
ನಾಡಿನ ಹೊಂಬೆಳಕು ಸರ‍್ವಜ್ನರೂ
ಜಗವೆಂದು ಮರೆಯದ ಮಾಣಿಕ್ಯರು,
ಲೋಕ ಸಂಚಾರದಲೆ ಹಿತ ನುಡಿದರು
ನಾಡಿನ ಡೊಂಕನ್ನು ತಿದ್ದಿದವರು || ಸರ‍್ವಜ್ನ ||
ಮಾಳಿ ಮಲ್ಲರ ಮುದ್ದು ಕುವರನಿವರು
ಓದು-ಬರಹ ತಿಳಿಯದ ಪುಶ್ಪದತ್ತರು,
ಕೈಯಲ್ಲಿ ದಂಡ, ಜೋಳಿಗೆಯ ಹಿಡಿದವರು
ಮೈಮೇಲೆ ತುಂಡು ಬಟ್ಟೆ ಸಾಕೆಂದರು || ಸರ‍್ವಜ್ನ ||
ಗಾನದಲಿ ಸರಿ-ತಪ್ಪು ನುಡಿದರಿವರು,
ಒಂದು ಕಡೆ ನಿಲ್ಲದೆ ಜಗ ಪ್ರದಕ್ಶಿಸಿದರು,
ಎಲ್ಲವನು ಬಲ್ಲವರು ತಾವಾದರೂ,
ತಿಳಿದದ್ದು ತಿಳಿಸುತ್ತಾ ಮುನ್ನಡೆದರು || ಸರ‍್ವಜ್ನ ||
ಜಾತಿ ಮತಗಳ ಮೆಟ್ಟಿ ನಿಂತರಿವರು
ಎಲ್ಲರಲೂ ಸಮಾನತೆ ಕಂಡರಿವರು,
ಕಂಡಲ್ಲೇ ನುಡಿಯುವ ಆಶುಕವಿಯಾದರು
ಅಂದಕಾರದ ಜಗಕೆ ಬೆಳಕಾದರು || ಸರ‍್ವಜ್ನ ||
ತಿಳಿಯದ ವಿಶಯವ ಕೇಳಿ ಕಲಿತವರು
ತಮಗೆ ತಿಳಿದಿದ್ದು ತ್ರಿಪದಿಯಲಿ ಹೇಳಿಹರು,
ಒಬ್ಬರೊಳು ಒಂದೊಂದು ನುಡಿಕಲಿತರು
ವಿದ್ಯೆಯ ಪರ‍್ವತವೇ ತಾವಾದರು || ಸರ‍್ವಜ್ನ ||
ಸೂರ‍್ಯ ಚಂದ್ರರಶ್ಟೇ ಸತ್ಯವಾ ನುಡಿದವರು
ಇಂದಿಗೂ ಪ್ರಸ್ತುತ ವಾಸ್ತವವ ಸಾರಿದರು,
ಬಂದಿದೆ ಅವರ ಆದರ‍್ಶ ತಿಳಿಯುವ ಸರದಿ
ನಾಡಿಗೆ ಹಂಚೋಣ ಸರ‍್ವಜ್ನ ತ್ರಿಪದಿ || ಸರ‍್ವಜ್ನ ||
( ಚಿತ್ರಸೆಲೆ: wikimedia.org )
ಇತ್ತೀಚಿನ ಅನಿಸಿಕೆಗಳು