ಕವಿತೆ: ಇರುವುದೆಲ್ಲವ ಬಿಟ್ಟು
– ನಿತಿನ್ ಗೌಡ.
ದುಂಬಿಗೆ ಮಕರಂದ ಹೀರುವಾಸೆ
ನದಿಗೆ ಕಡಲ ಸೇರುವಾಸೆ
ಅಡವಿಗೆ ಹಸಿರ ಉಡುವಾಸೆ
ಅಲೆಗೆ ದಡವ ಸೇರುವಾಸೆ
ಇಳೆಗೆ ನೇಸರನ ಸುತ್ತುವಾಸೆ
ಬೆಳದಿಂಗಳಿಗೆ ಇಳೆಗೆ ಮುತ್ತಿಕ್ಕುವಾಸೆ
ಕಾರ್‍ಮೋಡಕೆ ಮಳೆಯಾಗುವಾಸೆ
ಕಲ್ಲಿಗೆ ಶಿಲೆಯಾಗುವಾಸೆ
ಕಣ್ಣಿಗೆ ನೋಟದಾಸೆ
ನಾಲಿಗೆಗೆ ರುಚಿಯಾಸೆ
ಕಿವಿಗೆ ಇಂಪನಾಲಿಸುವಾಸೆ
ಮೂಗಿಗೆ ಸುವಾನೆಯಾಸೆ
ಬಾಯಿಗೆ ಬಡಬಡಿಸುವಾಸೆ
ಏಕಾಂಗಿಗೆ ಜೊತೆಯಾಸೆ
ಇನಿಯನಿಗೆ ಇನಿಯಳ ಸಾಂಗತ್ಯದಾಸೆ
ಕಾಮಕ್ಕೆ ಕುರುಡಾಗುವಾಸೆ
ಪಿಂಡಕ್ಕೆ ಹುಟ್ಟುವಾಸೆ
ರಣರಂಗಕೆ ನೆತ್ತರದೋಕುಳಿಯಾಸೆ
ಸೋಲಿಗೆ ಗೆಲುವಿನಾಸೆ
ಸೋತು ಗೆದ್ದವರಿಗೆ, ನೆಮ್ಮದಿಯಾಸೆ
ಇವೆಲ್ವವ ಮೀರಿದವರಿಗೆ ಮುಕುತಿಯಾಸೆ
ಹಸುಗೂಸಿಗೆ ತಾಯಿ ಮಡಿಲಾಸೆ
ಯೌವ್ವನಕೆ ಲೋಕ ಸುಕದಾಸೆ
ಮುಪ್ಪಿಗೆ ಯೌವ್ವನದಾಸೆ
ಒಡಲು ತುಂಬಿದವನಿಗೆ ನೂರಾಸೆ
ಹಸಿದವನಿಗೆ ಒಂದೇ ಆಸೆ
ಮನುಜನಿಗೆ ಇರುವುದೆಲ್ಲವ ಬಿಟ್ಟು
ಇರದುದೆಡೆಗೆ ತುಡಿಯುವಾಸೆ
(ಚಿತ್ರ ಸೆಲೆ: mindfulmuscle.com)
ಇತ್ತೀಚಿನ ಅನಿಸಿಕೆಗಳು