ಸಪ್ತ ಸಾಗರದಾಚೆ ಎಲ್ಲೋ – ಸೈಡ್-A

– ನಿತಿನ್ ಗೌಡ.

ಸೈಡ್-B

‘ಬಟರ್ ಪ್ಲೈ ಎಪೆಕ್ಟ್ ‘ ಬಗೆಗೆ ತಿಳಿದಿರಬಹುದು. ಹಿಂದೆ ನಡೆದ/ಇಂದು ನಡೆಯುವ ಯಾವುದೋ ಚಿಕ್ಕ ಗಟನೆ, ಆಗುಹೋಗು ಇಂದು ಮತ್ತು ಮುಂದೆ ನಡೆಯುವುದರ ಮೇಲೆ ದೊಡ್ಡ ಪರಿಣಾಮ ಬೀರಬಹುದು ಮತ್ತು ನಮ್ಮ ಮುಂದೆ ಬೇರೆಯೇ ಜಗತ್ತಿನ ತೆರೆಯನ್ನು ತೆರೆಯಬಹುದು.
‘ಸಪ್ತ ಸಾಗರದಾಚೆ ಎಲ್ಲೋ’ ಇದು ಮನುವಿನ‌(ರಕ್ಶಿತ್) ಒಂದು ನಿರ‌್ದಾರ ಹೇಗೆ ಅವನ ಬದುಕಿನ ದಿಕ್ಕನ್ನೇ ಬದಲಿಸಿತು ಎಂಬುದನ್ನು ತೋರಿಸುತ್ತದೆ. ಪ್ರಿಯಾಳ(ರುಕ್ಮಿಣಿ,) ಕಡಲ ತೀರದಂಚಲ್ಲಿ ಪುಟ್ಟ ಮನೆಯೊಂದನ್ನು ಹೊಂದಬೇಕೆನ್ನುವ ಆಸೆ ಕೂಡಾ, ಮನುವಿನ ಈ ನಿಲುವಿಗೆ ಒಂದು ಬಗೆಯಲಿ‌ ಕಾರಣ ಕೂಡಾ! ಪ್ರೀತಿಸಿದವರು ಚೆನ್ನಾಗಿರಬೇಕು ಅನ್ನೋದೇ ನಿಜವಾದ ಪ್ರೀತಿ; ಇದು ಈ ಸಿನಿಮಾದ ತಿರುಳು.

ಚಿತ್ರದ ಮೊದಲ ಸೀನಿನಲ್ಲೇ, ಮನು ಮತ್ತು ಪ್ರಿಯಾ ಈಗಾಗಲೇ ಪ್ರೀತಿಯಲ್ಲಿ ಇದ್ದಾರೆ ಅನ್ನೋದನ್ನು ಒಪ್ಪಿಕೊಳ್ಳುವ ಹಾಗೆ ತೋರಿಸಿದ್ದಾರೆ ಚಿತ್ರದ ನಾವಿಕ ಹೇಮಂತ್. ಅಲ್ಲದೇ ಚಿತ್ರದ ಎರಡೂ ಬಾಗದಲ್ಲೂ ಪಾತ್ರದ ಹಿನ್ನೆಲೆ ಬಗ್ಗೆ ಹೆಚ್ಚು ಕೆದಕದೇ, ಆ ಪಾತ್ರಕ್ಕೆ ನೋಡುಗರು ತಕ್ಶಣವೇ ಒಗ್ಗಿಕೊಳ್ಳುವಂತೆ ತೋರಿಸಿದ್ದಾರೆ ಕೂಡಾ. ಪ್ರೀತಿ ಪ್ರೇಮದ ಕತೆಯಲ್ಲಿ, ಹೊಸತು ಹೇಳುವುದು ಕಶ್ಟ. ಆದರೆ ಹೇಮಂತ್ ಅವರು ಇಲ್ಲಿ ತಮ್ಮ ಚಿತ್ರಕತೆ(screen play) ಮೂಲಕ ಗೆದ್ದಿದ್ದಾರೆ. ಆದರೆ ಚಿತ್ರ ಕೊಂಚ ನಿದಾನ ಆಯ್ತು ಅನ್ನೋದು ನನ್ನ ಅಬಿಪ್ರಾಯ‌. ಸಾಮಾನ್ಯವಾಗಿ ಇದು ಹೇಮಂತ್ ಅವರ ಶೈಲಿ.

ಆರಕ್ಕೇಳದ ಮೂರಕ್ಕಿಳಿಯದ, ಮಿಡಲ್ ಕ್ಲಾಸ್ ಜೀವನದಲ್ಲಿ; ಮೇಲೇರಬೇಕು ಎಂದು ಕನಸು ಕಟ್ಟಿಕೊಳ್ಳುತ್ತಿದ್ದ ಮನುವಿನ ಪರಿಸ್ತಿತಿಯ ಲಾಬ ಪಡೆದ ಉಳ್ಳವರು; ತಮ್ಮ ತೆವಲಿಗಾಗಿ ಒಮ್ಮೆಲೆ ಆತನನ್ನು ಮೇಲಕ್ಕೇರಿಸುವ ಆಸೆ ತೋರಿಸಿ; ಮಾಡದ ತಪ್ಪಿಗೆ ಹೊಣೆ ಹೊರುವಂತೆ ಮಾಡುತ್ತಾರೆ. ಈ ಹೊತ್ತಲ್ಲಿ ಮನು ತೆಗೆದುಕೊಂಡ ಆ ಒಂದು‌ ನಿರ್‍ದಾರ ಆತನ ಮತ್ತು ಪ್ರಿಯಾಳ ಬದುಕಿನ ದಿಕ್ಕನ್ನೇ ಬದಲಿಸುತ್ತದೆ. ಮಿಡಲ್ ಕ್ಲಾಸ್ ಜೀವನದ ಚಿಕ್ಕ ಚಿಕ್ಕ ಸಂಗತಿಗಳು ನಮ್ಮನ್ನು ಮನು-ಪ್ರಿಯಾ ಜೋಡಿಗೆ ತಕ್ಶಣವೇ ಹತ್ತಿರವಾಗಿಸುತ್ತವೆ. ಎತ್ತುಗೆಗೆ; ಬಾಡಿಗೆ ಮನೆ ಹುಡುಕಾಟದ ಸೀನ್, ರುಕ್ಮಿಣಿಯನ್ನು ಬಸ್ಸಿಗೆ ಕಳುಹಿಸುವ ಸೀನ್, ಪಪ್ ಸೀನ್, ಕತ್ತೇ ಅನ್ನುವ ಎಲ್ಲಾ ಸೀನ್ ಇತ್ಯಾದಿ. ಚಿತ್ರದುದ್ದಕ್ಕೂ ಬಳಸಿರುವ ಬಣ್ಣದ ಆಯ್ಕೆ ಚೆನ್ನಾಗಿದೆ. ಅದರಲ್ಲೂ ನೀಲಿ ಬಣ್ಣ(ಕಡಲಿಂದ ಹಿಡಿದು, ನೂಲಿನುಂಡೆಯವರೆಗೂ). ಟೇಪ್ ರೆಕಾರ್‍ಡರನ್ನು ಬಾವನೆಗಳ ಜೊತೆ ಬೆಸೆದು ಚೆನ್ನಾಗಿ ಬಳಸಿಕೊಳ್ಳಲಾಗಿದೆ. ಎಂದಿನಂತೆ ಚರಣ್ ರಾಜ್ ಅವರ ಹಿನ್ನೆಲೆ ಸಂಗೀತ, ಹಾಡುಗಳು, ಸನ್ನಿವೇಶಗಳ ಬಾವನೆಗಳಿಗೆ ತಕ್ಕಂತೆ ಬೆಸೆದುಕೊಂಡಿವೆ. ಚಿತ್ರದ ಕೆಲವು ಹಾಡುಗಳನ್ನು ರಕ್ಶಿತ್ ಅವರೇ ಬರೆದಿದ್ದಾರೆ ಕೂಡಾ!

ಚಿತ್ರದಲ್ಲಿನ ಜೈಲಿನ ದ್ರುಶ್ಯಗಳನ್ನು ಹೇಮಂತ್ ದಿಟವಾಗಿ ಕಟ್ಟಿಕೊಟ್ಟಿದ್ದಾರೆ. ಜೈಲೆಂದರೆ ಅಲ್ಲಿ, ಒಂದು ಜಗತ್ತೇ ಇರುತ್ತದೆ. ಅಲ್ಲಿ ನೇಯ್ಗೆ, ವೆಲ್ಡಿಂಗ್, ಅಡುಗೆ ಸೇರಿದಂತೆ ಎಲ್ಲಾ ಬಗೆಯ ಕೆಲಸಗಳೂ ನಡೆಯುತ್ತವೆ ಎಂಬುದನ್ನು ನೋಡಬಹುದು. ಜೈಲಿನ ರಾಜಕಾರಣ, ಬ್ರಶ್ಟಾಚಾರ, ಕೈದಿಗಳ ಜಗಳ, ರಕ್ಶಿತ್ ಮುಗ್ದತೆ ಹೀಗೆ ಎಲ್ಲವನ್ನೂ ಕಾಣಬಹುದು. ರುಕ್ಮಿಣಿ ವಸಂತ್ ಅವರು ಪಾತ್ರದಲ್ಲಿ ಜೀವಿಸಿದ್ದಾರೆ. ಚಿಕ್ಕ ಚಿಕ್ಕ ಸಂಗತಿಗಳಲ್ಲಿ ತಮ್ಮ ನಟನೆಯ ನಾಜೂಕತೆಯನ್ನು ತೋರಿಸಿದ್ದಾರೆ. ಜೈಲಿನಲ್ಲಿ ಮನುವನ್ನು ಮೊದಲ ಬಾರಿಯಿಂದ ಹಿಡಿದು ಕೊನೆಯಬಾರಿ ಬೇಟಿಯಾಗುವವರೆಗೂ ತಮ್ಮ ಮುಕದಲ್ಲಿ ಪ್ರೀತಿ, ಚಡಪಡಿಕೆ, ಹತಾಶೆ ಎಲ್ಲಾ ಬಾವನೆಗಳ ಗ್ರಾಪ್ ಅನ್ನು ಚೆನ್ನಾಗಿ ತೋರಿಸಿದ್ದಾರೆ. ಈ ಹತಾಶೆಯನ್ನು ಹೇಮಂತ್ ಅವರು ಕೂಡಾ ಚೆನ್ನಾಗಿ ಕಾಣಿಸಿದ್ದಾರೆ; ಎತ್ತುಗೆಗೆ ಪ್ರಿಯಾ ಮೊದಮೊದಲಿಗೆ ಜೈಲಿಗೆ ಬರುವಾಗ ಬಸ್ಸಿನಲ್ಲಿ ತಮ್ಮ ಸೀಟನ್ನು, ವಯಸ್ಸಾದ ಇನ್ನೊಂದು ಹೆಂಗಸಿಗೆ ಬಿಟ್ಟು ಕೊಡುತ್ತಿದ್ದಳು; ಆದರೆ ಕೊನೆಯಲ್ಲಿ ಆಕೆ ಹಾಗೆ ಮಾಡುವುದನ್ನು ಬಿಡುತ್ತಾಳೆ. ಇದು ಆಕೆ ಎಶ್ಟು ರೋಸಿ ಹೋಗಿದ್ದಳು ಅನ್ನುವುದನ್ನು ಹೇಮಂತ್ ತೋರಿಸಿದ ಪರಿ. ಅಚ್ಯುತ್ ರಾವ್, ಗೋಪಾಲಕ್ರಿಶ್ಣ ದೆಶಪಾಂಡೆ ಮತ್ತು ಲೋಹಿತಾಶ್ವ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ರಮೇಶ್ ಇಂದಿರಾ ಅವರು ಕನ್ನಡ ಸಿನಿಮಾರಂಗಕ್ಕೆ ಒಬ್ಬ ಒಳ್ಳೆಯ ಕಳನಟನಾಗುವ ಬರವಸೆ ಮೂಡಿಸಿದ್ದಾರೆ.

ಕೊನೆಗೆ ಮನು ಜೈಲಿನಿಂದ ಹೊರಬರುವಶ್ಟರಲ್ಲಿ ಹತ್ತು ವರುಶ ಕಳೆದಿರುತ್ತದೆ; ಅಲ್ಲಿಗೆ ಪ್ರಿಯಾ ಮದುವೆಯಾಗಿರುತ್ತದೆ. ಮನುವಿನ ಜೀವನದೊಳಗೆ ಇನ್ನೊಬ್ಬಳು ಬರುವಳಾ? ಸೋಮಾ ಜೈಲಿನಿಂದ ಹೊರಗೆ ಬಂದ ಮೇಲೂ ಸೇಡಿಗೆ ಕಾಯುತ್ತಿರುವನಾ? ಪ್ರಿಯಾ ಮತ್ತೆ ಮನುವಿನ ಜೀವನದಲ್ಲಿ ಅಲೆಯೆಬ್ಬಿಸುವಳಾ? ಹೀಗೆ ಹಲವು ಪ್ರಶ್ನೆಗಳೊಂದಿಗೆ ಸೈಡ್-A ಚಿತ್ರದ ತೆರೆಯೆಳೆಯುತ್ತದೆ.

ಸೈಡ್-B

( ಚಿತ್ರಸೆಲೆ: paramvaMusic )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: