ಬ್ರೆಕ್ಟ್ ಕವನಗಳ ಓದು – 17 ನೆಯ ಕಂತು

– ಸಿ.ಪಿ.ನಾಗರಾಜ

*** ಕಲಿಯುವವನು ***

(ಕನ್ನಡ ಅನುವಾದ: ಕೆ.ಪಣಿರಾಜ್)

ಮೊದಲು ಮರಳ ಅಡಿಪಾಯದ ಮೇಲೆ ಕಟ್ಟಿದೆ
ನಂತರ ಕಲ್ಲಿನ ಅಡಿಪಾಯದ ಮೇಲೆ ಕಟ್ಟಿದೆ
ಕಲ್ಲಿನ ಅಡಿಪಾಯವೂ ಕುಸಿದ ನಂತರ
ತುಂಬಾ ಸಮಯ ನಾನು ಏನನ್ನೂ ಕಟ್ಟಲಿಲ್ಲ
ನಂತರ ಮರಳು ಕಲ್ಲೆನ್ನದೆ
ದೊರಕಿದ ಜಾಗದಲ್ಲಿ ಕಟ್ಟಿದೆ
ಈಗ ನಾನು ಕಟ್ಟುವುದ ಕಲಿತಿದ್ದೇನೆ

ಯಾರಿಗೆ ನಾನು ಅಧಿಕಾರ ಪತ್ರ ನೀಡಿದ್ದೆನೋ
ಅವರು ಅದನ್ನು ಬಿಸಾಡಿದರು
ಆದರೆ ನಾನು ಅಸಡ್ಡೆ ಮಾಡಿದವರು
ಅದನ್ನು ನನಗೆ ವಾಪಾಸು ತಂದುಕೊಟ್ಟರು
ಅದರಿಂದ ನಾನು ಕಲಿತೆ.

ನಾನಿತ್ತ ಆಜ್ಞೆ ಜಾರಿಯಾಗಲಿಲ್ಲ
ಖುದ್ದಾಗಿ ಹೋಗಿ ಕಂಡೆ
ಆಜ್ಞೆ ತಪ್ಪಾಗಿತ್ತು
ಸರಿಯಾದುದ್ದನ್ನು ಮಾಡಲಾಗಿತ್ತು
ಅದರಿಂದಲೂ ನಾನು ಕಲಿತೆ

ಗಾಯದ ಕಲೆಗಳು ಸುಖದಾಯಕವಲ್ಲ
ಇದೀಗ ಥಂಡಿ ಬೇರೆ
ನಾನು ಯಾವತ್ತೂ ಹೇಳುತ್ತಿರುತ್ತೇನೆ
ನಮಗೇನನ್ನೂ ಕಲಿಸದವು
ಗೋರಿಗಳು ಮಾತ್ರ.

ವ್ಯಕ್ತಿಯು ತಾನು ಮಾಡುವ ಕೆಲಸದಲ್ಲಿ ಎಡೆಬಿಡದೆ ಪ್ರಯತ್ನಶೀಲನಾದಾಗ ಮತ್ತು ಇತರರೊಡನೆ ವ್ಯವಹರಿಸಲು ತೊಡಗಿದಾಗ “ಜೀವನದಲ್ಲಿ ಯಾವುದು ಸರಿ-ಯಾವುದು ತಪ್ಪು; ಯಾವುದನ್ನು ಮಾಡಬೇಕು-ಯಾವುದನ್ನು ಮಾಡಬಾರದು” ಎಂಬುದನ್ನು ನಿರಂತರವಾಗಿ ಕಲಿಯುತ್ತಿರುತ್ತಾನೆ ಎಂಬ ಸಂಗತಿಯನ್ನು ಈ ಕವನದಲ್ಲಿ ಹೇಳಲಾಗಿದೆ.

ಕಲಿ=ನಿರಂತರವಾದ ಪ್ರಯತ್ನ ಮತ್ತು ದುಡಿಮೆಯಿಂದ ಅರಿವನ್ನು ಪಡೆಯುವುದು;

ಅಡಿಪಾಯ=ತಳಹದಿ; ಕಲ್ಲು+ಎನ್ನದೆ; ಎನ್ನದೆ=ಎಂದು ಬೇರೆ ಬೇರೆಯಾಗಿ ವಿಂಗಡಿಸದೆ;

ಮನೆಯನ್ನು ಕಟ್ಟುವುದಕ್ಕೆ ಮೊದಲು, ಅದಕ್ಕೆ ಅಡಿಪಾಯವನ್ನು ಹಾಕುವಾಗ ಮೊದಲು ಮರಳನ್ನು ಮಾತ್ರ ಬಳಸಿದೆ. ಅದು ಕುಸಿದು ಹೋದಾಗ, ಕೇವಲ ಕಲ್ಲು ದಿಂಡುಗಳನ್ನು ಉಪಯೋಗಿಸಿ ಕಟ್ಟಿದೆ. ಅವು ಒಂದಕ್ಕೊಂದು ಗಟ್ಟಿಯಾಗಿ ಕೂಡಿಕೊಂಡು ನಿಲ್ಲಲಾಗದೆ ಉರುಳಿದಾಗ, ಮರಳು ಮತ್ತು ಕಲ್ಲುಗಳ ಜತೆ, ಮಣ್ಣು ಮತ್ತು ನೀರನ್ನು ಬೆರಸಿ ಕಟ್ಟತೊಡಗಿದಾಗ ಅಡಿಪಾಯ ಗಟ್ಟಿಯಾಗಿ ನಿರ್‍ಮಾಣಗೊಂಡಿತು. ಈಗ ಇಂತಹ ಅಡಿಪಾಯದ ಮೇಲೆ ಎಂತಹ ಕಟ್ಟಡವನ್ನಾದರೂ ಕಟ್ಟುವಂತಹ ತಿಳುವಳಿಕೆ ಮತ್ತು ಕುಶಲತೆಯನ್ನು ನಾನು ಗಳಿಸಿಕೊಂಡಿದ್ದೇನೆ:

ಮಾನವನು ಸಾವಿರಾರು ವರುಶಗಳಿಂದಲೂ ನಿಸರ್‍ಗದ ಆಗುಹೋಗುಗಳ ಜತೆಜತೆಯಲ್ಲಿ ತನ್ನ ಉಳಿವಿಗಾಗಿ ಸೆಣಸಾಡುತ್ತ, ಬದುಕಿನಲ್ಲಿ ಏರಿಳಿತಗಳನ್ನು ಕಾಣುತ್ತ, ಪ್ರಗತಿಯ ದಾರಿಯಲ್ಲಿ ಅರಿವನ್ನು ಪಡೆಯುತ್ತ, ಶಿಲಾಯುಗದಿಂದ ಅಣುಯುಗಕ್ಕೆ ಅಡಿಯಿಟ್ಟು ಮುನ್ನಡೆಯುತ್ತಿರುವುದನ್ನು ಈಗ ನಾನು ಕಟ್ಟುವುದ ಕಲಿತಿದ್ದೇನೆ” ಎಂಬ ನುಡಿಗಳು ಸೂಚಿಸುತ್ತವೆ;

ಅಧಿಕಾರ=ಆಡಳಿತದ ಹುದ್ದೆ; ಪತ್ರ=ಓಲೆ; ಅಧಿಕಾರ ಪತ್ರ=ವ್ಯಕ್ತಿಯು ವಿವೇಚನೆ ಮತ್ತು ಹೊಣೆಗಾರಿಕೆಯಿಂದ ಸ್ವತಂತ್ರವಾಗಿ ಕಾರ್‍ಯವನ್ನು ಮಾಡಲು ನೀಡುವ ಆದೇಶದ ಪತ್ರ;

ನೀಡು=ಕೊಡು; ಬಿಸಾಡು=ತೊರೆ/ತ್ಯಜಿಸು; ಅಸಡ್ಡೆ=ಕಡೆಗಣನೆ/ಉದಾಸೀನತೆ;

ಆಡಳಿತದ ಆದೇಶವನ್ನುಳ್ಳ ಬಹುಮುಕ್ಯವಾದ ಪತ್ರವೊಂದನ್ನು ಮತ್ತೊಬ್ಬರಿಗೆ ತಲುಪಿಸುವ ಜವಾಬ್ದಾರಿಯನ್ನು ನಾನು “ಈತನೇ ಸರಿಯಾದ ವ್ಯಕ್ತಿ” ಎಂದು ನಂಬಿ ಯಾರಿಗೆ ವಹಿಸಿದ್ದೆನೋ, ಆತ ಅದನ್ನು ಕಡೆಗಣಿಸಿ ಬಿಸಾಡಿದ್ದ. ಯಾರನ್ನು ನಾನು ಈ ಕಾರ್‍ಯವನ್ನು ಸರಿಯಾಗಿ ಮಾಡಲಾರ ಎಂದು ಕಡೆಗಣಿಸಿದ್ದನೋ, ಅವನೇ ಕಳೆದುಹೋಗಿದ್ದ ಪತ್ರವನ್ನು ನನಗೆ ತಂದುಕೊಟ್ಟು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದ;

 ಜೀವನದಲ್ಲಿ ನಾವೆಲ್ಲರೂ ಕೆಲವರನ್ನು ಮಾತ್ರ ನಂಬಿಕೆಗೆ ಯೋಗ್ಯರೆಂದು, ಇನ್ನುಳಿದವರು ನಂಬಿಕೆಗೆ ಯೋಗ್ಯರಲ್ಲವೆಂಬ ನಿಲುವನ್ನು ತಳೆದಿರುತ್ತೇವೆ. ಇಂತಹ ನಿಲುವಿಗೆ ನಾವು ಅವರ ಜತೆಯಲ್ಲಿ ಪಡೆದಿರುವ ಕುಟುಂಬದ ನೆಂಟು, ಗೆಳೆತನದ ನೆಂಟು ಮತ್ತು ಇನ್ನಿತರ ನೆಂಟುಗಳು ಕಾರಣವಾಗಿರುತ್ತವೆ. ಕೆಲವೊಮ್ಮೆ ವ್ಯಕ್ತಿಯ ಬಹಿರಂಗದ ರೂಪ ಮತ್ತು ಉಡುಗೆತೊಡುಗೆಗಳನ್ನು ನೋಡಿಯೇ “ಆ ವ್ಯಕ್ತಿ ಒಳ್ಳೆಯವನು ಇಲ್ಲವೇ ಕೆಟ್ಟವನು ಎಂಬ ನಿಲುವನ್ನು ತಳೆಯುತ್ತೇವೆ. ಈ ರೀತಿ ಯಾವುದೇ ವ್ಯಕ್ತಿಯನ್ನು ಸಂಪೂರ್‍ಣವಾಗಿ ನಂಬಿಕೊಳ್ಳುವುದಾಗಲಿ ಇಲ್ಲವೇ ಕಡೆಗಣಿಸುವುದಾಗಲಿ ಸರಿಯಲ್ಲವೆಂಬ ಅರಿವನ್ನು ಈ ಪ್ರಸಂಗವು ಸೂಚಿಸುತ್ತದೆ. ಏಕೆಂದರೆ ವ್ಯಕ್ತಿಗಳ ನಡೆನುಡಿ ಯಾವ ಗಳಿಗೆಯಲ್ಲಿ ಯಾವ ರೀತಿ ಇರಬಲ್ಲುದೆಂಬುದನ್ನು ಯಾರೊಬ್ಬರೂ ಮೊದಲೇ ಹೇಳುವುದಕ್ಕೆ ಆಗುವುದಿಲ್ಲವೆಂಬ ವಾಸ್ತವವನ್ನು ಅರಿತುಕೊಳ್ಳುವುದನ್ನು “ಅದರಿಂದ ನಾನು ಕಲಿತೆ” ಎಂಬ ನುಡಿಗಳು ಸೂಚಿಸುತ್ತವೆ;

ನಾನು+ಇತ್ತ; ಇತ್ತ=ಕೊಟ್ಟ/ನೀಡಿದ; ಆಜ್ಞೆ=ಅಪ್ಪಣೆ/ಆದೇಶ; ಜಾರಿ+ಆಗಲಿಲ್ಲ; ಜಾರಿ=ಆಚರಣೆ/ಕಾರ್‍ಯರೂಪಕ್ಕೆ ಬರುವುದು; ಖುದ್ದು=ತಾನಾಗಿ/ಸ್ವಂತ;

“ಈ ರೀತಿಯೇ ಮಾಡಬೇಕು” ಎಂದು ನಾನು ನೀಡಿದ್ದ ಆದೇಶವನ್ನು ನನ್ನ ಕಯ್ ಕೆಳಗಿನವರು ಕಾರ್‍ಯರೂಪಕ್ಕೆ ತಾರದೆ, ಜನಸಮುದಾಯಕ್ಕೆ ಹಾನಿಯನ್ನುಂಟುಮಾಡುವಂತಿದ್ದ ಆದೇಶದಲ್ಲಿನ ತಪ್ಪನ್ನು ಗುರುತಿಸಿ, ಅದನ್ನು ಸರಿಪಡಿಸಿ ಆಚರಣೆಗೆ ತಂದಿದ್ದರು. “ನನ್ನ ಅಪ್ಪಣೆಯನ್ನು ಏಕೆ ತಿರಸ್ಕರಿಸಿದರು” ಎಂಬುದನ್ನು ನಾನೇ ನೇರವಾಗಿ ಪರಿಶೀಲಿಸಿದಾಗ, ನಾನು ನೀಡಿದ್ದ ಆದೇಶ ತಪ್ಪಾಗಿತ್ತು ಎಂಬುದು ನನಗೆ ಮನದಟ್ಟಾಯಿತು. “ಎಲ್ಲಾ ವಿಚಾರಗಳಲ್ಲಿಯೂ ನನ್ನ ತಿಳುವಳಿಕೆಯೇ ಯಾವಾಗಲೂ ಸರಿಯಾಗಿರುತ್ತದೆ ಎಂಬ ಅಹಂಕಾರ ಒಳ್ಳೆಯದಲ್ಲ ಎಂಬುದನ್ನು ತಿಳಿದುಕೊಳ್ಳುವ ಬಗೆಯನ್ನು “ಅದರಿಂದಲೂ ನಾನು ಕಲಿತೆ” ಎಂಬ ನುಡಿಗಳು ಸೂಚಿಸುತ್ತಿವೆ;

ಕಲೆ=ಮಚ್ಚೆ; ಗಾಯದ ಕಲೆ=ಯಾವುದೇ ಬಗೆಯ ಏಟು ಬಿದ್ದು, ದೇಹದ ಮೇಲಣ ತೊಗಲು ಹರಿದು, ರಕ್ತ ಸೋರಿ ಆಗಿದ್ದ ಗಾಯವು ಗುಣಗೊಂಡ ಮೇಲೆ, ದೇಹದ ಆ ಜಾಗದ ತೊಗಲಿನ ಬಣ್ಣ ಕಪ್ಪಾಗುತ್ತದೆ; ಸುಖದಾಯಕ+ಅಲ್ಲ; ಸುಖದಾಯಕ=ಆನಂದವನ್ನುಂಟುಮಾಡುವುದು;

ಗಾಯದ ಕಲೆಗಳು ಸುಖದಾಯಕವಲ್ಲ=ಈ ನುಡಿಗಳು ಒಂದು ರೂಪಕವಾಗಿ ಬಳಕೆಗೊಂಡವೆ. ಜೀವನದಲ್ಲಿ ನಡೆದ ಕಹಿಪ್ರಸಂಗಗಳಿಂದ ದೇಹ ಮತ್ತು ಮನಸ್ಸು ಗಾಸಿಗೊಂಡಿರುತ್ತವೆ. ಅವನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದರಿಂದ ಮನಸ್ಸಿನ ನೆಮ್ಮದಿ ಕೆಡುತ್ತದೆ. ಆದ್ದರಿಂದ ಕಹಿನೆನಪುಗಳಿಂದ ದೂರವಿರಬೇಕೆಂಬ ಬುದ್ದಿಯನ್ನು ಕಲಿತೆನು;

ಇದು+ಈಗ; ಥಂಡಿ=ತುಂಬಾ ಚಳಿ/ಕೊರೆಯುವ ಚಳಿ;

ಇದೀಗ ಥಂಡಿ ಬೇರೆ=ಈ ನುಡಿಗಟ್ಟು ಒಂದು ರೂಪಕವಾಗಿ ಬಳಕೆಗೊಂಡಿದೆ. ಈಗ ಅತ್ಯಂತ ಸಂಕಟದ ಕಾಲದಲ್ಲಿ ಜನಸಮುದಾಯದ ಜೀವನವು ಜರ್‍ಜರಿತಗೊಂಡಿದೆ;

ಗೋರಿ=ಹೆಣವನ್ನು ಹೂಳಿದ ಜಾಗದಲ್ಲಿ, ವ್ಯಕ್ತಿಯ ನೆನಪಿಗಾಗಿ ಕಟ್ಟಿರುವ ಗದ್ದುಗೆ; ಗೋರಿಯು ಗತಕಾಲದ ಕಹಿ ನೆನಪುಗಳಿಗೆ

ಒಂದು ಸಂಕೇತವಾಗಿ ಬಳಕೆಯಾಗಿದೆ; ನಮಗೆ+ಏನನ್ನೂ; ಏನನ್ನೂ=ಯಾವುದನ್ನೂ;

ನಾನು ಯಾವತ್ತೂ ಹೇಳುತ್ತಿರುತ್ತೇನೆ… ನಮಗೇನನ್ನೂ ಕಲಿಸದವು… ಗೋರಿಗಳು ಮಾತ್ರ=ಈ ನುಡಿಗಳು ರೂಪಕದ ತಿರುಳಿನಲ್ಲಿ ಬಳಕೆಗೊಂಡಿವೆ. ಗತಕಾಲದಲ್ಲಿ ನಡೆದ ಕಹಿ ಪ್ರಸಂಗಗಳನ್ನು ನೆನೆನೆನೆದುಕೊಂಡು ಪರಿತಪಿಸುವುದರಿಂದ ಜೀವನದಲ್ಲಿ ನಾವು ಏನನ್ನೂ ಕಲಿಯುವುದಿಲ್ಲ. ನಮ್ಮ ಪರಿಶ್ರಮದ ದುಡಿಮೆ ಮತ್ತು ಸಹಮಾನವರ ಜತೆಯಲ್ಲಿ ವ್ಯವಹರಿಸುವುದರ ಮೂಲಕ ನಾವು ವರ್‍ತಮಾನದಲ್ಲಿ ಬದುಕನ್ನು ಒಳ್ಳೆಯ ರೀತಿಯಲ್ಲಿ ರೂಪಿಸಿಕೊಂಡು ಬಾಳುವುದನ್ನು ಕಲಿಯಬೇಕು ಎಂಬುದನ್ನು ಈ ನುಡಿಗಳು ಸೂಚಿಸುತ್ತಿವೆ;

(ಚಿತ್ರ ಸೆಲೆ: wikipedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications