ಕುಮಾರವ್ಯಾಸ ಬಾರತ ಓದು: ವಿರಾಟಪರ್‍ವ – ಕೀಚಕನ ಪ್ರಸಂಗ – ನೋಟ – 2

– ಸಿ.ಪಿ.ನಾಗರಾಜ.

*** ಕೀಚಕನ ಪ್ರಸಂಗ: ನೋಟ – 2 ***

ಕೀಚಕನ ಅಂತಃಕರಣ ತಾರಿತು. ಕಾಮನ ಕೂರುಗಣೆ ಕಾಲಿಕ್ಕಿದವು. ಮನದ ಏರು ಮುಚ್ಚದು. ದುಗುಡ ಬಲಿದುದು. ಢಗೆ ಮೀರಿ ಮೈದೋರೆ ಮುಸುಕು ಮೋರೆಯಲಿ ನಿಜ ಮಂದಿರಕೆ ಬಂದನು. ಮರುದಿವಸ ಅರಮನೆಯ ಬಾಗಿಲಲಿ ದ್ರೌಪದಿಯನು ತಲೆಮಾರಿ ಕಂಡನು. ತನ್ನೊಡನೆ ಬಹ ಗಾವಳಿಯ ಪರಿವಾರವನು ಕಳುಹಿದನು. ತನ್ನಯ ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು ಒಲಿದು ಸಿಂಹದ ಸತಿಗೆ ನರಿ ಮನವು ಅಳುಪುವಂತಿರೆ, ಗರುಡನ ಅರಸಿಗೆ ನಲಿದು ಫಣಿ ಬಯಸುವವೋಲು ಬಾಲಕಿಯ ಬಳಿಗೆ ಐದಿದ. ಆಗಳೆ ಖಳನ ಮನದ ಇಂಗಿತವನು ತಿಳಿದು ಕಾಮಿನಿ ಬೆದರಿದಳು.

ಸೈರಂಧ್ರಿ: (ತನ್ನ ಮನದೊಳಗೆ…) ಕಳವಳಿಗ ಸೋತನು, ಕೆಟ್ಟೆನು. (ಎಂದಳು. ತೊಲಗಿ ಹಿಂದಡಿಯಿಡಲು ಕೀಚಕನು ಅಳುಕದೆ ಐತಂದು ಅಬುಜವದನೆಯ ಬಳಿಗೆ ಬಂದನು.)

ಕೀಚಕ: ನುಡಿಸಲಾಗದೆ ತರಳೆ ನೀನು?

ಸೈರಂಧ್ರಿ: ಎಲೆ ಮರುಳೆ, ಬೇಡ ಅಳುಪದಿರು. ಕೂರಲಗ ಕೊರಳಿಗೆ ಬಯಸದಿರು. ಕಳವಳಿಸದಿರು. ನಿನ್ನ ಅರಮನೆಗೆ ಕೈಯೊಡನೆ ತೆರಳುವುದು. ಅಕಟ, ಬೇಡ. ಸುಲಭೆ ನಾ ನಿನಗಲ್ಲ. ನಿನ್ನನು ಕೆಲರು ನಗುವರು. ಪರದ ಸದ್ಗತಿ ತೊಲಗುವುದು.

ಕೀಚಕ: ಎಲೆಗೆ ಸೈರಂಧ್ರಿ, ನಿಲ್ಲು. ಕಾಮನ ಬಲ್ಲೆಹದ ಬಲು ಗಾಯ ತಾಗಿತು. ನೀನು ಔಷಧಿಯ ಬಲ್ಲೆ. ಎನ್ನೊಡಲ ರಕ್ಷಿಸಿಕೊಂಬುದು. ಮೆಲ್ಲನೆ ಅಡಿಯಿಡು. ಮಾತ ಮನ್ನಿಸು. ಚೆಲ್ಲೆಗಂಗಳನು ಎನ್ನ ಮುಖದಲಿ ಚೆಲ್ಲಿ ವಿಗತಜೀವನನ ಸಪ್ರಾಣಿಸಲು ಬೇಹುದು. ಎಲೆಗೆ ಪಾತಕಿ, ನಿನ್ನ ಕಣ್ಣೆಂಬ ಅಲಗಿನಲಿ ತನ್ನೆದೆಯ ನೋಯಿಸಿ ತೊಲಗಬಹುದೇ. ನಿನ್ನ ಮನದೊಳಗೆ ಕರುಣವಿಲ್ಲವೆ. ಒಲಿದು ಬಂದೆನು. ಕಾಮನ ಊಳಿಗ ಬಲುಹು. ಎನ್ನಯ ಭಯವ ತಗ್ಗಿಸಿ ತಲೆಯ ಕಾಯಲು ಬೇಕು.

(ಎನುತ ಕೀಚಕನು ಕೈಮುಗಿದ.)

ಸೈರಂಧ್ರಿ: ಪರರ ಸತಿಗೆ ಅಳುಪಿದೊಡೆ ಪಾತಕ ದೊರಕುವುದು. ನಿಜಲಕ್ಷ್ಮಿ ತೊಲಗುಗು. ಧರೆಯೊಳು ಅಗ್ಗದ ಕೀರ್ತಿ ಮಾಸುಗು. ಗತಿಗೆ ಕೇಡಹುದು. ಕೊರಳು ಹಲವಾದ ಅಸುರನು ಅಂತಕಪುರವನು ಐದಿದ ಕಥೆಯ ನೀ ಕೇಳ್ದು ಅರಿಯಲಾ. ಕಡುಪಾಪಿ ಹೋಗು.

ಕೀಚಕ: ಮೇಲೆ ಸದ್ಗತಿ ಬೆಂದು ಹೋಗಲಿ. ಕಾಲನವರು ಐತರಲಿ. ಬಂಧುಗಳು ಏಳಿಸಲಿ. ತನ್ನವರು ತೊಲಗಲಿ. ರಾಣಿಯರು ಬಿಡಲಿ. ಬಾಲೆ, ನಿನಗೆ ಆನು ಒಲಿದೆ. ಕಾಮನ ಕೋಲು ಎನ್ನನು ಮರಳಲು ಈಯದು. ಲೋಲಲೋಚನೆ ಬಿರುಬ ನುಡಿಯದೆ ತನ್ನನು ಉಳುಹು. ಎಳನಗೆಯ ಬೆಳುದಿಂಗಳನು ನೀ ತಳಿತು ತಾಪವ ಕೆಡಿಸು. ಅಕಟ, ಮಧುರದ ಮೆಲುನುಡಿಯ ಸುಧೆಯಿಂದ ತೃಷ್ಣೆಯನು ಪರಿಹರಿಸು. ಅಳಿಮನದ ಬಡತನವ ನಿನ್ನಯ ಕಳಶ ಕುಚ ಲಕ್ಷ್ಮಿಯಲಿ ಕಳೆ. ಕಾಂತೆ, ಮನದ ಒಲವನು ಇತ್ತಲು ತಿದ್ದಬೇಹುದು.
(ಕೇಳಿ ಕಿವಿ ಮುಚ್ಚಿದಳು. ತನ್ನಯ ಮೇಳದ ಐವರ ನೆನೆದು “ಹರ ಹರ ಶೂಲಪಾಣಿ ಮುಕುಂದ” ಎನುತವೆ ರವಿಯನು ಈಕ್ಷಿಸುತ “ಕಾಳು ಮೂಳನಲಾ…ಖಳಾಗ್ರಣಿ ಮೇಲುಗಾಣನಲಾ. ಮದಾಂಧನ ಸೋಲಿಸುವರು ಆರುಂಟು” ಎನುತ ತಲೆಬಾಗಿದಳು ತರಳೆ.)

ಸೈರಂಧ್ರಿ: ಎಲೆ ದುರಾತ್ಮ, ಮಹಾಪರಾಧವ ಬಳಸುವರೆ. ನಿನ್ನಯ ಕುಲದ ಬೇರನು ಬಯಲಿಂಗೆ ಕೊಯ್ವರೇ. ಹೆತ್ತವರು ಮಕ್ಕಳುಗಳು ಎಂಬ ಈ ಬದುಕು ಮಾಣದೆ ಎಳಸಿಕೊಂಬಂತೆ ಆಯಿತು. ಇದರಿಂದ ಆವುದು ಬಹುದು. ಹಳಿವು ಹೊದ್ದದೆ. ಕಾತರಿಸದಿರು, ಮಂದಿವಾಳದ ಮಾತುಗಳು ಸಾಕು. ಅಕಟ, ತೊಲಗೈ. ಸೋತಡೇನು ಅದು ಮನುಜರ‍್ಮದ ಚಿತ್ತಚಪಲವಲ. ಈ ತತು ಕ್ಷಣ ಜಾರು. ತನ್ನವರು ದೇವವ್ರಾತದಲಿ ಬಲ್ಲಿದರು.ಆತಗಳು ಕೇಳಿದಡೆ ಸೈರಿಸರು.

ಕೀಚಕ: ಕಾಮನ ಡಾವರವು ಘನ. ತನಗೆ ಸಾವು ತಪ್ಪದು. ನಿನ್ನ ನೆರೆದೇ ಸಾವೆನಲ್ಲದೆ, ಕಾಮನ ಅಂಬಿಗೆ ಒಡಲನು ಒಪ್ಪಿಸೆನು. ಭಾವೆ, ಎನ್ನ ನೂಕದಿರು. ವರ ರಾಜೀವಮುಖಿ, ಕೃಪೆ ಮಾಡು. ತನ್ನಯ ಜೀವನವನು ಉಳುಹು.

(ಎನುತ ಕಮಲಾನನೆಗೆ ಕೈಮುಗಿದ.)

ಸೈರಂಧ್ರಿ: ಮರುಳತನ ಬೇಡ. ಎಲವೊ, ತಾನು ಗಂಧರ‍್ವರಿಗೆ ಹೆಂಡತಿ. ತನ್ನವರು ಬಲ್ಲಿದರು. ನಿನ್ನಯ ದುರುಳತನವನು ಸೈರಿಸರು. ಸೊರಹದಿರು. ಅಪಕೀರ್ತಿ ನಾರಿಯ ನೆರೆಯದಿರು. ನೀ ನಿನ್ನ ನಿಳಯಕೆ ಮರಳುವುದು ಲೇಸು.

(ಎಂದು ತೃಣವನು ಹಿಡಿದು ಸಾರಿದಳು. ಆಗ ದ್ರೌಪದಿಗೆ ಖಳ ಈ ರೀತಿ ನುಡಿದನು.)

ಕೀಚಕ: ಎನ್ನ ಆಟೋಪವನು ನೀನು ಅರಿಯೆ. ಬಡವರ ಕೋಪವು ಔಡಿಗೆ ಮೃತ್ಯು. ನಿನ್ನವರು ಎನ್ನನು ಏಗುವರು. ಅವರ ಆಪೆನು. ಅಂತಿರಲಿ, ನೀನು ಎನಗೆ ಓಪಳಾದರೆ ಸಾಕು. ಮಲೆತಡೆ ಆ ಪಿನಾಕಿಗೆ ತೆರಳುವೆನೆ. ಬಳಿಕ ಅಲ್ಲಿ ನೋಡು. ಹುಳುಕನಲ್ಲಾ ತುಂಬಿ… ಕೋಗಿಲೆ ಗಳಹನಲ್ಲಾ…ಶಶಿ ವಸಂತನ ಬಲುಹು ಮಾನ್ಯರನು ಇರಿಯದೇ…ತಂಗಾಳಿ ಧಾರ್ಮಿಕನೆ… ಖಳನಲಾ ಮಾಕಂದ…ಮನೋಭವನು ಲೋಕದ ಕೊಲೆಗಡಿಗನಲ್ಲಾ…ಪಾಪಿ, ಇಳಿಕೆಗೊಂಬರೆ ಒಲಿಯದೆ ಕೊಲುವರೇ?

ಸೈರಂಧ್ರಿ: ನಿನ್ನನು ಒಲಿದು ನಾವು ಕೊಲ್ಲೆವು. ಕೊಲುವ ಸುಭಟರು ಬೇರೆ. ಬಯಲಿಗೆ ಹಲವ ಗಳಹಿದರೇನು ಫಲವಿಲ್ಲ. ಅಕಟ, ಸಾರಿದೆನು. ತಿಳುಪಿದೊಡೆ ಎನ್ನವರು ನಿನ್ನಯ ತಲೆಯನು ಅರಿದೂ ತುಷ್ಟರಾಗರು. ನಿನ್ನ ಅನ್ವಯ ಅಬ್ಧಿಯನು ಕಲಕುವರು. ಕುಲದೊಳು ಒಬ್ಬನು ಜನಿಸಿ ವಂಶವನು ಅಳಿದನು ಅಕಟಕಟ ಎಂಬ ದುರ್ಯಶವು ಉಳಿವುದಲ್ಲದೆ ಲೇಸಗಾಣೆನು. ಬರಿದೆ ಗಳಹದಿರು. ನಿನ್ನ ಅಖಿಳ ರಾಣಿಯರು “ಕೊಲೆಗಡಿಕೆಯೋ ಪಾಪಿ ಹೆಂಗಸು ಹಲಬರನು ಕೊಲಿಸಿದಳು ಸುಡಲೆಂದು” ಅಳಲುವರು.

ಕೀಚಕ: ಮರುಳೇ, ಹರಿ ವಿರಂಚಿಗಳು ಆದೊಡೆಯು ಸಂಗರದೊಳು ಎನಗೆ ಇದಿರಿಲ್ಲ. ತರುಣಿ, ನಿನ್ನೊಡನೆ ಏನು. ತೋರಾ ನಿನ್ನ ವಲ್ಲಭರ.

ಸೈರಂಧ್ರಿ: ಪರಸತಿಯ ಸೆರೆಗೈಯೆ ಕೋಡಗವಿಂಡು ನೆರೆದು ಮುತ್ತಿತು. ಅರಿಯಾಯ್ತು. ಸುಭಟನು ಅಂತಕನ ನಗರಿಗೆ ಸರಿದನು.

ಕೀಚಕ: ನೀರೆ ನೂಕದಿರು. ಎನ್ನ ಮನ ಮುಮ್ಮಾರುವೋದುದು. ನೀನು ಚಿತ್ತವ ಸೂರೆಗೊಂಡು ಈ ಮದನನ ಅಂಬಿಂಗೆ ಒಡಲ ಹೂಣಿಸುವೆ. ಜಾರದಿರು. ಎನ್ನೆದೆಗೆ ತಾಪವ ಬೀರದಿರು. ಎನಗೆ ಕಾರುಣ್ಯವನು ಕೈದೋರು. ಕಮಲಾಕ್ಷಿ, ಅಕಟ ಮರಣವ ಮಾಣಿಸು.

ಸೈರಂಧ್ರಿ: ಮರುಳೆ, ಮನದ ವಿಕಾರ ಮಾರಿಯ ಸರಸವಾಡುವರು ಉಂಟೆ. ಮೃತ್ಯುವ ನೆರೆವರೇ. ದಳ್ಳುರಿಯ ಪ್ರತಿಮೆಯನು ಅಪ್ಪುವರೆ. ಬಯಸಿ ಸರಳಿಗೆ ಅಂಗೈಸುವರೆ. ಪಾಪಿಯೆ, ನಿನ್ನ ಅರಮನೆಗೆ ಮರಳು. ಎನ್ನಯ ಗರುವ ಗಂಡರು ಕಡಿದು ಹರಹುವರು.

ಕೀಚಕ: ತೋಳ ತೆಕ್ಕೆಯ ತೊಡಿಸಿ ಕಾಮನ ಕೋಲ ತಪ್ಪಿಸು. ಖಳನ ಕಗ್ಗೊಲೆ ಊಳಿಗವ ಕೇಳು. ಉಸುರದಿಹರೆ ಸಮರ್ಥರಾದವರು. ಸೋಲಿಸಿದ ಗೆಲವಿಂದ ಬಲು ಮಾತಾಳಿ ಇವನು ಎನ್ನದಿರು. ಹರಣದ ಮೇಲೆ ಸರಸವೆ ಕಾಯಬೇಹುದು. ಕಾಂತೆ ಕೇಳು, ಉಳಿದ ತನ್ನ ಅರಸಿಯರ ನಿನ್ನಯ ಬಳಿಯ ತೊತ್ತಿರ ಮಾಡುವೆನು. ಕೇಳು ಎಲಗೆ, ತನ್ನ ಒಡಲಿಂಗೆ ಒಡೆತನ ನಿನ್ನದಾಗಿರಲಿ. ಲಲನೆ, ನಿನ್ನೊಳು ನಟ್ಟ ಲೋಚನ ತೊಲಗಲಾರದು. ತನ್ನ ಕಾಯವ ಬಳಲಿಸದೆ ಕೃಪೆ ಮಾಡಬೇಹುದು.

(ಎನುತ್ತ ಕೈಮುಗಿದ.)

ಸೈರಂಧ್ರಿ: ಈ ಅಧಮನ ಅನ್ಯಾಯವು ಧರ್ಮ ಮಾರ್ಗ ನ್ಯಾಯವನು ಮಿಗೆ ಗೆಲುವುದು. ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗೆ ಆವುದು ಅಂತರವು. ಎನ್ನವರು ಕಾಯರು. ಅವರ ಕೈಗುಣದ ಆಯತವ ಬಲ್ಲವರೆ ಬಲ್ಲರು. ನಾಯಿ ಸಿಂಹಕ್ಕೆ ಇದಿರೆ, ಫಡ ಹೋಗು.

(ಎಂದು ತಿರುಗಿದಳು.)

ಪದವಿಂಗಡಣೆ ಮತ್ತು ತಿರುಳು

ಅಂತಃಕರಣ=ಮನಸ್ಸು; ತಾರು=ಕುಗ್ಗು/ಸೊರಗು;

ಕೀಚಕನ ಅಂತಃಕರಣ ತಾರಿತು=ಅಕ್ಕನಾದ ಸುದೇಶ್ಣೆಯು ಆಡಿದ ಮಾತು ಮತ್ತು ನೀಡಿದ ಎಚ್ಚರಿಕೆಯ ನುಡಿಗಳನ್ನು ಕೇಳಿ ಕೀಚಕನ ಮನಸ್ಸು ಕುಗ್ಗಿತು/ಕೀಚಕನು ನಿರಾಶೆಗೊಂಡನು;

ಕೂರು+ಕಣೆ; ಕೂರು=ಹರಿತವಾದ; ಕಣೆ=ಬಾಣ; ಕಾಲ್+ಇಕ್ಕಿದವು; ಕಾಲಿಕ್ಕಿದವು=ಇದೊಂದು ನುಡಿಗಟ್ಟು. ನಾಟಿಕೊಂಡವು/ಒಳಹೊಕ್ಕವು;

ಕಾಮನ ಕೂರುಗಣೆ ಕಾಲಿಕ್ಕಿದವು=ಕಾಮದೇವನು ಬಿಟ್ಟ ಹೂಬಾಣಗಳು ಕೀಚಕನ ಮಯ್ ಮನದಲ್ಲಿ ನಾಟಿಕೊಂಡವು/ಕೀಚಕನ ಮಯ್ ಮನದ ತುಂಬಾ ಕಾಮುಕತನದ ಒಳಮಿಡಿತಗಳು ತುಡಿಯತೊಡಗಿದವು;

ಏರು=ಹೋರಾಟ/ತುಮುಲ; ಮುಚ್ಚು=ಮರೆಮಾಡು/ಅಡಗಿಸು;

ಮನದ ಏರು ಮುಚ್ಚದು=ಮನದಲ್ಲಿ ಉಕ್ಕೇಳುತ್ತಿರುವ ಕಾಮುಕತನದ ಒಳಮಿಡಿತಗಳನ್ನು ನಿಯಂತ್ರಿಸಿಕೊಳ್ಳಲು ಆಗುತ್ತಿಲ್ಲ;

ದುಗುಡ=ಉಮ್ಮಳ/ಚಿಂತೆ; ಬಲಿ=ಹೆಚ್ಚಾಗು;

ದುಗುಡ ಬಲಿದುದು=ಮನದ ಉಮ್ಮಳ ಹೆಚ್ಚಾಯಿತು;

ಢಗೆ=ಕಳವಳ/ತಳಮಳ/ಕಾವು; ಮೀರಿ=ಹೆಚ್ಚಾಗಿ; ಮೈದೋರು=ಕಂಡುಬರುವುದು;

ಢಗೆ ಮೀರಿ ಮೈದೋರೆ=ಕಾಮದ ತಾಪವು ಹೆಚ್ಚಾಗಿ ಕಂಡುಬರಲು;

ಮುಸುಕು=ಮಂಕು; ಮೋರೆ=ಮೊಗ; ನಿಜ=ತನ್ನ; ಮಂದಿರ=ಮನೆ;

ಮುಸುಕು ಮೋರೆಯಲಿ ನಿಜ ಮಂದಿರಕೆ ಬಂದನು=ಕಾಮದ ಬೇಗೆಯಲ್ಲಿ ಬೇಯುತ್ತಿರುವ ಕೀಚಕನು ಕಳಾಹೀನನಾಗಿ ಸಪ್ಪನೆಯ ಮೊಗದಿಂದ ತನ್ನ ಮನೆಗೆ ಹಿಂತಿರುಗಿದನು;

ತಲೆಮಾರಿ=ಇದೊಂದು ನುಡಿಗಟ್ಟು. ಕೆಟ್ಟ ನಡೆನುಡಿಗೆ ಬಲಿಯಾಗಿ ಅರಿವನ್ನು ಕಳೆದುಕೊಂಡವನು/ಅವಿವೇಕಿ;

ಮರುದಿವಸ ಅರಮನೆಯ ಬಾಗಿಲಲಿ ದ್ರೌಪದಿಯನು ತಲೆಮಾರಿ ಕಂಡನು=ಮಾರನೆಯ ದಿನ ಅರಮನೆಯ ಬಾಗಿಲ ಬಳಿ ಸೈರಂದ್ರಿಯು ಹೋಗುತ್ತಿರುವುದನ್ನು ಕಾಮುಕತನದಿಂದ ತಿಳಿಗೇಡಿಯಾಗಿರುವ ಕೀಚಕನು ಕಂಡನು;

ಗಾವಳಿ=ಗುಂಪು; ಪರಿವಾರ=ಸೇನಾನಿಯಾಗಿದ್ದ ಕೀಚಕನ ಸುತ್ತಲೂ ಇದ್ದ ಕಾವಲು ಪಡೆ;

ತನ್ನೊಡನೆ ಬಹ ಗಾವಳಿಯ ಪರಿವಾರವನು ಕಳುಹಿದನು=ತನ್ನ ಮಯ್ಗಾವಲಾಗಿ ಇದ್ದ ಪಡೆಯನ್ನು ದೂರಹೋಗುವಂತೆ ಕಳುಹಿಸಿದನು;

ಹಡಪ=ಎಲೆ ಅಡಕೆಯ ಸುಣ್ಣ ಮುಂತಾದ ತಾಂಬೂಲದ ವಸ್ತುಗಳನ್ನು ಇಟ್ಟುಕೊಳ್ಳುವ ಚೀಲ;

ತನ್ನಯ ಬಳಿಯ ಹಡಪದ ಬಾಲಕನ ಹಿಂದಿಕ್ಕಿ ನಡೆತಂದು=ತನ್ನ ಹತ್ತಿರದಲ್ಲಿಯೇ ಇದ್ದ ಹಡಪದ ಬಾಲಕನನ್ನು ಹಿಂದಕ್ಕೆ ಬಿಟ್ಟು, ಸೈರಂದ್ರಿಯು ಹೋಗುತ್ತಿದ್ದ ಕಡೆಗೆ ವೇಗವಾಗಿ ಮುನ್ನಡೆದು;

ಒಲಿ=ಮೋಹಗೊಳ್ಳು/ಮರುಳಾಗು/ಮೆಚ್ಚು;

ಒಲಿದು=ಸೈರಂಧ್ರಿಗಾಗಿ ಮೋಹಗೊಂಡು;

ಸಿಂಹದ ಸತಿ=ಹೆಣ್ಣು ಸಿಂಹ; ಅಳುಪು+ಅಂತೆ+ಇರೆ; ಅಳುಪು=ಬಯಸು/ಇಚ್ಚಿಸು; ಅಂತೆ=ಹಾಗೆ; ಇರೆ=ಇರಲು;

ಸಿಂಹದ ಸತಿಗೆ ನರಿ ಮನವು ಅಳುಪುವಂತಿರೆ=ಹೆಣ್ಣು ಸಿಂಹದ ಜತೆಗೂಡಿ ರಮಿಸಲು ನರಿಯು ಆಸೆಪಟ್ಟಂತೆ;

ಗರುಡನ ಅರಸಿ=ಹೆಣ್ಣು ಗರುಡ ಪಕ್ಷಿ; ನಲಿ=ಮೆಚ್ಚು/ಇಚ್ಚಿಸು; ಫಣಿ=ಹಾವು;

ಗರುಡನ ಅರಸಿಗೆ ನಲಿದು ಫಣಿ ಬಯಸುವವೋಲು=ಹೆಣ್ಣು ಗರುಡನೊಂದಿಗೆ ಕೂಡಿ ರಮಿಸಲು ಹಾವು ಆಸೆಪಟ್ಟಂತೆ;

ಐದು=ಸಮೀಪಿಸು/ಬಳಿಗೆ ಬರುವುದು;

ಬಾಲಕಿಯ ಬಳಿಗೆ ಐದಿದ=ಸೈರಂದ್ರಿಯ ಬಳಿಗೆ ಕೀಚಕನು ಬಂದನು; ಹೆಣ್ಣು ಸಿಂಹವನ್ನು ಕೂಡಲೆಂದು ಬರುವ ನರಿ ಮತ್ತು ಹೆಣ್ಣು ಗರುಡನೊಂದಿಗೆ ರಮಿಸಲು ಬರುವ ಹಾವು, ಮುಂದಿನ ಗಳಿಗೆಯಲ್ಲಿ ಹೇಗೆ ದುರಂತಕ್ಕೆ ಬಲಿಯಾಗುತ್ತವೆಯೋ, ಅಂತೆಯೇ ಸೈರಂದ್ರಿಯ ಜತೆಗೂಡಿ ರಮಿಸಬೇಕೆಂಬ ಕಾಮದ ಬಯಕೆಯಿಂದ ಬರುತ್ತಿರುವ ಕೀಚಕನು ದುರಂತದ ಕಡೆಗೆ ಅಡಿಯಿಡುತ್ತಿದ್ದಾನೆ ಎಂಬುದನ್ನು ಈ ರೂಪಕಗಳು ಸೂಚಿಸುತ್ತಿವೆ;

ಆಗಳೆ=ಆ ಗಳಿಗೆಯಲ್ಲಿಯೇ; ಖಳ=ನೀಚ/ಕೇಡಿ; ಇಂಗಿತ=ಮನಸ್ಸಿನ ಬಯಕೆ/ಉದ್ದೇಶ; ಕಾಮಿನಿ=ಹೆಂಗಸು;

ಆಗಳೆ ಖಳನ ಮನದ ಇಂಗಿತವನು ತಿಳಿದು ಕಾಮಿನಿ ಬೆದರಿದಳು=ಕೀಚಕನು ತನ್ನ ಬಳಿ ಬರುತ್ತಿರುವುದನ್ನು ನೋಡಿದ ಕೂಡಲೇ, ದ್ರೌಪದಿಯು ಆ ಕಾಮುಕನ ಉದ್ದೇಶವನ್ನು ಗ್ರಹಿಸಿಕೊಂಡು ಹೆದರಿಕೆಯಿಂದ ತತ್ತರಿಸಿದಳು;

ತನ್ನ ಮನದೊಳಗೆ=ದ್ರೌಪದಿಯು ತನ್ನ ಮನಸ್ಸಿನಲ್ಲಿಯೇ;

ಕಳವಳಿಗ=ಕಾತರಪಡುವವನು/ತಳಮಳಿಸುವವನು; ಸೋಲು=ಅಪಜಯ;

ಕಳವಳಿಗ ಸೋತನು=ಕೀಚಕನು ನನ್ನ ರೂಪವನ್ನು ನೋಡಿ ತಳಮಳಗೊಂಡು ಕಾಮಕ್ಕೆ ವಶನಾಗಿದ್ದಾನೆ;

ಕೆಟ್ಟೆನು ಎಂದಳು=ಕೀಚಕನ ಕಾಮದ ನೋಟಕ್ಕೆ ಸಿಲುಕಿರುವ ನನಗೆ ಇನ್ನು ಮುಂದೆ ಕೇಡಾಗುತ್ತದೆ ಎಂದುಕೊಂಡಳು.

ತೊಲಗು=ಹಿಂತಿರುಗು; ಹಿಂದೆ+ಅಡಿ+ಇಡಲು; ಅಡಿ=ಹೆಜ್ಜೆ;

ತೊಲಗಿ ಹಿಂದಡಿಯಿಡಲು=ಕೀಚಕನಿಂದ ದೂರಸರಿದು ಹೋಗೋಣವೆಂದು ಹಿಂದಕ್ಕೆ ಹೆಜ್ಜೆಯನ್ನಿಡುತ್ತಿರಲು;

ಅಳುಕು=ಹೆದರಿಕೆ/ಹಿಂಜರಿಕೆ; ಐತರು=ಬಳಿಗೆ ಬರುವುದು/ಸಮೀಪಿಸುವುದು;

ಕೀಚಕನು ಅಳುಕದೆ ಐತಂದು=ಕೀಚಕನು ಯಾವ ಹಿಂಜರಿಕೆಯೂ ಇಲ್ಲದೆ ಸಮೀಪಿಸಿ;

ಅಬುಜ=ತಾವರೆಯ ಹೂವು; ವದನ=ಮೊಗ; ಅಬುಜವದನೆ=ಸುಂದರಿ;

ಅಬುಜವದನೆಯ ಬಳಿಗೆ ಬಂದನು=ಸೈರಂಧ್ರಿಯ ಬಳಿಗೆ ಬಂದನು;

ತರಳೆ=ತರುಣಿ/ಯುವತಿ;

ನುಡಿಸಲಾಗದೆ ತರಳೆ ನೀನು=ತರುಣಿ, ನನ್ನನ್ನು ಕಂಡು ಹಿಂದಕ್ಕೆ ಹೆಜ್ಜೆಯನ್ನು ಇಡುತ್ತಿರುವೆಯಲ್ಲಾ… ಏಕೆ… ನೀನು ನನ್ನೊಡನೆ ಮಾತನಾಡಲಾರೆಯಾ;

ಮರುಳ=ಹುಚ್ಚ/ತಿಳಿಗೇಡಿ; ಅಳುಪು=ಬಯಸು;

ಎಲೆ ಮರುಳೆ, ಬೇಡ ಅಳುಪದಿರು=ತಿಳಿಗೇಡಿಯೇ… ಬೇಡ… ಈ ರೀತಿ ನನ್ನನ್ನು ಬಯಸಬೇಡ;

ಕೂರ್+ಅಲಗು; ಕೂರ್=ಹರಿತವಾದ; ಅಲಗು=ಬಾಣ/ಕತ್ತಿ;

ಕೂರಲಗ ಕೊರಳಿಗೆ ಬಯಸದಿರು=ಹರಿತವಾದ ಕತ್ತಿಯಿಂದ ತಲೆಯನ್ನು ಕತ್ತರಿಸಿಕೊಳ್ಳುವಂತಹ ಬಯಕೆಗೆ ಬಲಿಯಾಗದಿರು;

ಕಳವಳಿಸದಿರು=ಕಾಮಾತುರನಾಗಿ ತಳಮಳಕ್ಕೆ ಒಳಗಾಗಬೇಡ;

ಕೈಯೊಡನೆ=ಕೂಡಲೇ/ಈ ಗಳಿಗೆಯಲ್ಲಿಯೇ;

ನಿನ್ನ ಅರಮನೆಗೆ ಕೈಯೊಡನೆ ತೆರಳುವುದು=ನಿನ್ನ ಅರಮನೆಗೆ ಈ ಕೂಡಲೇ ಹೋಗುವುದು;

ಅಕಟ=ಅಯ್ಯೋ. ಸಂಕಟ ಇಲ್ಲವೇ ಆಪತ್ತಿನ ಸನ್ನಿವೇಶದಲ್ಲಿ ವ್ಯಕ್ತಿಯ ಬಾಯಿಂದ ಹೊರಡು ಉದ್ಗಾರದ ಪದ;

ಅಕಟ, ಬೇಡ=ಅಯ್ಯೋ… ನಿನ್ನ ಈ ಕಾಮ ನಿನ್ನನ್ನೇ ಬಲಿತೆಗೆದುಕೊಳ್ಳುತ್ತದೆ. ಆದ್ದರಿಂದ ಇಂತಹ ಕೆಟ್ಟ ಆಲೋಚನೆ ಬೇಡ;

ಸುಲಭ=ಸರಾಗ/ಸಲೀಸು/ಯಾವ ಅಡೆತಡೆಯು ಇಲ್ಲದಿರುವುದು;

ಸುಲಭೆ ನಾ ನಿನಗಲ್ಲ=ನಾನು ನಿನಗೆ ದಕ್ಕುವವಳಲ್ಲ;

ನಿನ್ನನು ಕೆಲರು ನಗುವರು=ಈ ರೀತಿ ಕಂಡಕಂಡ ಹೆಣ್ಣುಮಕ್ಕಳ ಮೇಲೆ ಕಾಮದ ಕೆಟ್ಟ ನೋಟವನ್ನು ಬೀರುವ ನಿನ್ನ ನಡೆನುಡಿಯನ್ನು ಕಂಡು ಇತರರು ನಗುತ್ತಾರೆ. ಇದು ನಿನ್ನ ವ್ಯಕ್ತಿತ್ವಕ್ಕೆ ತಕ್ಕುದಲ್ಲ; ಅಂದರೆ ವಿರಾಟರಾಜನ ವೀರ ಸೇನಾನಿಯಾಗಿರುವ ನಿನ್ನ ಇಂತಹ ರ‍್ತನೆಯ ನಗೆಪಾಟಲಿಗೆ ಈಡಾಗುತ್ತದೆ.

ಪರ=ದೇವಲೋಕ/ಸ್ರ‍್ಗಲೋಕ; ಸದ್ಗತಿ=ಮೋಕ್ಶ;

ಪರದ ಸದ್ಗತಿ ತೊಲಗುವುದು=ಸತ್ತ ನಂತರ ನಿನಗೆ ಪರಲೋಕದಲ್ಲಿ ಮೋಕ್ಶವು ದೊರಕುವುದಿಲ್ಲ;

ಎಲೆಗೆ=ಹೆಂಗಸನ್ನು ಕುರಿತು ಮಾತನಾಡಿಸುವಾಗ ಬಳಸುವ ಪದ;

ಎಲೆಗೆ ಸೈರಂಧ್ರಿ, ನಿಲ್ಲು=ಸೈರಂದ್ರಿ… ನನ್ನನ್ನು ಕಂಡಕೂಡಲೇ ದೂರಸರಿಯಬೇಡ… ನಿಲ್ಲು;

ಬಲ್ಲೆಹ=ಈಟಿ; ತಾಗು=ಹೊಡೆ/ಅಪ್ಪಳಿಸು/ನೋಯಿಸು;

ಕಾಮನ ಬಲ್ಲೆಹದ ಬಲು ಗಾಯ ತಾಗಿತು=ಕಾಮನು ಇರಿದ ಈಟಿಯಿಂದಾದ ಗಾಯವು ನನ್ನನ್ನು ಬಹಳವಾಗಿ ನೋಯಿಸುತ್ತಿದೆ;

ನೀನು ಔಷಧಿಯ ಬಲ್ಲೆ=ಇಂತಹ ನೋವಿಗೆ ಪರಿಹಾರ ಏನೆಂಬುದನ್ನು ನೀನು ಚೆನ್ನಾಗಿ ತಿಳಿದಿರುವೆ;

ಎನ್ನ+ಒಡಲ; ಎನ್ನ=ನನ್ನ; ಒಡಲು=ದೇಹ/ಶರೀರ/ಮಯ್;

ಎನ್ನೊಡಲ ರಕ್ಷಿಸಿಕೊಂಬುದು=ನನ್ನ ದೇಹವನ್ನು ಕಾಪಾಡಿಕೊಳ್ಳುವ ಹೊಣೆ ನಿನ್ನದು;

ಅಡಿ+ಇಡು; ಅಡಿ=ಹೆಜ್ಜೆ;

ಮೆಲ್ಲನೆ ಅಡಿಯಿಡು=ದೊಡ್ಡ ಹೆಜ್ಜೆಗಳನ್ನಿಡಬೇಡ;

ಮನ್ನಿಸು=ಒಪ್ಪು;

ಮಾತ ಮನ್ನಿಸು=ನನ್ನ ಮಾತುಗಳಿಗೆ ನೀನು ಒಪ್ಪಿಕೊಳ್ಳುವುದು/ನನ್ನ ಮನದ ಆಶೆಯನ್ನು ಪೂರಯಿಸು;

ಚೆಲ್ಲೆ+ಕಣ್=ಚೆಲ್ಲೆಗಣ್; ಚೆಲ್=ಸುಂದರವಾದ/ಅಂದವಾದ; ಚೆಲ್ಲೆಗಣ್=ಅಂದವಾದ ಕಣ್ಣು; ಚೆಲ್ಲೆಗಂಗಳು=ಅಂದವಾದ ಕಣ್ಣುಗಳು; ಚೆಲ್ಲು=ಹರಡು/ಚಾಚು;

ಚೆಲ್ಲೆಗಂಗಳನು ಎನ್ನ ಮುಖದಲಿ ಚೆಲ್ಲಿ=ನಿನ್ನ ಅಂದಚೆಂದದ ಕಣ್ಣುಗಳಿಂದ ನನ್ನ ಮೊಗವನ್ನು ನೋಡುತ್ತ ಅಂದರೆ ನನ್ನತ್ತ ಒಲವಿನ ನೋಟವನ್ನು ಬೀರಿ;

ವಿಗತ=ಹೊರಟುಹೋದ/ಅಗಲಿದ; ವಿಗತಜೀವನ=ಜೀವವಿಲ್ಲದ ಬದುಕು; ಸಪ್ರಾಣಿಸು=ಬದುಕಿಸು; ಬೇಹುದು=ವ್ಯವಹರಿಸುವುದು;

ವಿಗತಜೀವನನ ಸಪ್ರಾಣಿಸಲು ಬೇಹುದು=ಸತ್ತಂತಿರುವ ನನ್ನನ್ನು ಬದುಕಿಸಿಕೊಳ್ಳುವುದು;

ಪಾತಕಿ=ಕೆಟ್ಟದ್ದನ್ನು ಮಾಡಿರುವವಳು;

ಎಲೆಗೆ ಪಾತಕಿ=ಕಾಮುಕನಾಗಿರುವ ಕೀಚಕನಿಗೆ ಸೈರಂದ್ರಿಯೇ ಕೆಟ್ಟದ್ದನ್ನು ಮಾಡಿರುವ ವ್ಯಕ್ತಿಯಾಗಿ ಕಾಣುತ್ತಿದ್ದಾಳೆ. ಕಾಮುಕನಾದ ವ್ಯಕ್ತಿ ಅರಿವನ್ನು ಕಳೆದುಕೊಂಡು, ತನ್ನ ತಪ್ಪನ್ನು ಮರೆತು, ಇತರರನ್ನು ನಿಂದಿಸುತ್ತಾನೆ;

ಅಲಗು=ಬಾಣ/ಕತ್ತಿ/ಹರಿತವಾದ ಹತಾರ; ತನ್ನ+ಎದೆಯ; ಎದೆ=ಮನಸ್ಸು;

ನಿನ್ನ ಕಣ್ಣೆಂಬ ಅಲಗಿನಲಿ ತನ್ನೆದೆಯ ನೋಯಿಸಿ ತೊಲಗಬಹುದೇ=ನಿನ್ನ ಸುಂದರವಾದ ಕಣ್ಣುಗಳ ನೋಟದಿಂದ ನನ್ನ ಮಯ್ ಮನದ ಕಾಮವನ್ನು ಕೆರಳಿಸಿ, ನನ್ನ ಮನಸ್ಸನ್ನು ಗಾಸಿಗೊಳಿಸಿ, ಈ ರೀತಿ ನೀನು ನನ್ನಿಂದ ದೂರಸರಿಯಬಹುದೇ;

ನಿನ್ನ ಮನದೊಳಗೆ ಕರುಣವಿಲ್ಲವೆ=ನಿನ್ನ ಮನದಲ್ಲಿ ನನ್ನ ಬಗ್ಗೆ ಕರುಣೆಯಿಲ್ಲವೆ;

ಒಲಿದು ಬಂದೆನು=ನಿನ್ನನ್ನು ಮೋಹಿಸಿ ಬಂದಿದ್ದೇನೆ;

ಊಳಿಗ=ಕೆಲಸ; ಬಲುಹು=ಬಹು ಕಸುವುಳ್ಳದ್ದು;

ಕಾಮನ ಊಳಿಗ ಬಲುಹು=ಕಾಮ ಕೆರಳಿದಾಗ ಉಂಟಾಗುವ ಪರಿಣಾಮಗಳು ಬಲು ತೀವ್ರವಾಗಿರುತ್ತವೆ;

ಎನ್ನಯ ಭಯವ ತಗ್ಗಿಸಿ ತಲೆಯ ಕಾಯಲು ಬೇಕು=ನನ್ನೊಳಗಿನ ಕಾಮದ ತೀವ್ರತೆಯನ್ನು ತಡೆಯಲಾರದೆ ಏನಾಗುವುದೋ ಎಂಬ ನನ್ನ ಅಂಜಿಕೆಯನ್ನು ಹೋಗಲಾಡಿಸಿ, ನನ್ನ ಪ್ರಾಣಮಾನವನ್ನು ನೀನು ಕಾಪಾಡಬೇಕು ಎಂದು ಕೀಚಕನು ಕಯ್ ಮುಗಿದನು; ಕಾಮುಕನಾದ ವ್ಯಕ್ತಿಯು ಅರಿವನ್ನು ಮಾತ್ರವಲ್ಲ, ಸಮಾಜ ಒಪ್ಪಿತವಾದ ಮಾನ ಮರ‍್ಯಾದೆಯ ನಡೆನುಡಿಗಳನ್ನು ಕಡೆಗಣಿಸುವುದರ ಜತೆಗೆ, ಅತ್ಯಂತ ದುರ‍್ಬಲ ವ್ಯಕ್ತಿಯಾಗಿ ಯಾವ ನೆಲೆಗೆ ಬೇಕಾದರೂ ಇಳಿಯುತ್ತಾನೆ ಎಂಬುದನ್ನು ಕೀಚಕನ ನಡೆನುಡಿಯು ಸೂಚಿಸುತ್ತಿದೆ;

ಪರರ ಸತಿ=ಮತ್ತೊಬ್ಬರ ಹೆಂಡತಿ; ಅಳುಪು=ಬಯಸು;

ಪರರ ಸತಿಗೆ ಅಳುಪಿದೊಡೆ ಪಾತಕ ದೊರಕುವುದು=ಮತ್ತೊಬ್ಬರ ಹೆಂಡತಿಯನ್ನು ಕಾಮುಕತನದಿಂದ ಬಯಸಿದರೆ ಕೆಟ್ಟ ಕೆಲಸವನ್ನು ಮಾಡಿದ ಪಾಪ ಉಂಟಾಗುವುದು;

ನಿಜ=ತನ್ನ/ನಿನ್ನ; ಲಕ್ಷ್ಮಿ=ಸಂಪತ್ತು/ಸಿರಿ;

ನಿಜಲಕ್ಷ್ಮಿ ತೊಲಗುಗು=ನಿನ್ನಲ್ಲಿರುವ ಸಂಪತ್ತೆಲ್ಲವೂ ನಾಶವಾಗುತ್ತದೆ;

ಧರೆ+ಒಳು; ಧರೆ=ಭೂಮಿ/ಜಗತ್ತು/ಪ್ರಪಂಚ; ಅಗ್ಗ=ಅತಿಶಯ/ಉತ್ತಮ; ಕರ‍್ತಿ=ಒಳ್ಳೆಯ ಹೆಸರು/ಯಶಸ್ಸು; ಮಾಸು=ಕುಗ್ಗು/ಕಾಂತಿಗುಂದು/ಕಡಿಮೆಯಾಗು;

ಧರೆಯೊಳು ಅಗ್ಗದ ಕೀರ್ತಿ ಮಾಸುಗು=ಜಗತ್ತಿನಲ್ಲಿ ವ್ಯಕ್ತಿಯು ಹೊಂದಿರುವ ಒಳ್ಳೆಯ ಹೆಸರಿಗೆ ಕಳಂಕ ತಟ್ಟುವುದು;

ಗತಿ=ಈಗ ವ್ಯಕ್ತಿಯು ಸಮಾಜದಲ್ಲಿ ಹೊಂದಿರುವ ಅಂತಸ್ತು; ಕೇಡು+ಅಹುದು; ಕೇಡು=ಹಾನಿ/ಅಳಿವು/ನಾಶ;

ಗತಿಗೆ ಕೇಡಹುದು=ವ್ಯಕ್ತಿಯ ಸಾಮಾಜಿಕ ಅಂತಸ್ತಿಗೆ ಹಾನಿಯುಂಟಾಗುವುದು;

ಅಸುರ=ರಕ್ಕಸ;

ಕೊರಳು ಹಲವಾದ ಅಸುರ=ಹತ್ತು ತಲೆಗಳನ್ನು ಹೊಂದಿದ್ದ ರಕ್ಕಸನಾದ ರಾವಣ;

ಅಂತಕ=ಯಮ; ಪುರ=ಪಟ್ಟಣ; ಐದು=ಬರು/ಸಮೀಪಿಸು; ಐದಿದ=ಸೇರಿದ; ಅಂತಕಪುರವನು ಐದು=ಇದೊಂದು ನುಡಿಗಟ್ಟು. ಸಾಯುವುದು;

ಕೊರಳು ಹಲವಾದ ಅಸುರನು ಅಂತಕಪುರವನು ಐದಿದ ಕಥೆಯ ನೀ ಕೇಳ್ದು ಅರಿಯಲಾ=ಹತ್ತು ತಲೆಗಳನ್ನು ಹೊಂದಿದ್ದ ರಾವಣನು ರಾಮನ ಮಡದಿಯಾದ ಸೀತೆಯನ್ನು ಕಾಮುಕತನದಿಂದ ಅಪಹರಿಸಿ ರಾಮನಿಂದ ರಣರಂಗದಲ್ಲಿ ಸಾವನ್ನಪ್ಪಿದ ಕತೆಯನ್ನು ನೀನು ಕೇಳಿ ತಿಳಿದಿಲ್ಲವೇ;

ಕಡು=ಹೆಚ್ಚಾಗಿ/ಬಹಳವಾಗಿ; ಕಡುಪಾಪಿ=ಅತಿ ಹೆಚ್ಚಿನ ಪಾಪವನ್ನುಮಾಡಿರುವ ವ್ಯಕ್ತಿ;

ಕಡುಪಾಪಿ ಹೋಗು=ಅತಿ ಹೆಚ್ಚಿನ ಪಾಪಕ್ಕೆ ತೊಡಗಿರುವ ನೀಚನೇ ಇಲ್ಲಿಂದ ತೊಲಗು ಎಂದು ಸೈರಂದ್ರಿಯು ಕೀಚಕನಿಗೆ ಎಚ್ಚರಿಕೆಯನ್ನು ನೀಡುತ್ತಾಳೆ; ಆದರೆ ಕಾಮುಕತನದಿಂದ ಮಯ್ ಮನದ ಮೇಲಣ ಅರಿವನ್ನು ಕಳೆದುಕೊಂಡಿರುವ ಕೀಚಕನು ಯಾವ ಹಂತಕ್ಕೆ ಬೇಕಾದರೂ ಇಳಿಯಲು ತಯಾರಾಗಿದ್ದಾನೆ;

ಮೇಲೆ=ಪರಲೋಕದಲ್ಲಿ; ಸದ್ಗತಿ=ಮೋಕ್ಷ/ಸ್ವರ್‍ಗದ ನೆಲೆ; ಈ ಜಗತ್ತಿನಲ್ಲಿ ಒಳ್ಳೆಯ ನಡೆನುಡಿಯಿಂದ ಬಾಳಿದವರು ಸತ್ತ ನಂತರ ಪರಲೋಕದಲ್ಲಿ ನೆಮ್ಮದಿಯ ನೆಲೆಯಾದ ಸ್ವರ್‍ಗಕ್ಕೆ ಮತ್ತು ಕೆಟ್ಟ ನಡೆನುಡಿಯಿಂದ ಬಾಳಿದವರು ಸಂಕಟದ ನೆಲೆಯಾದ ನರಕಕ್ಕೆ ಹೋಗುತ್ತಾರೆ ಎಂಬ ನಂಬಿಕೆಯು ಜನಮನದಲ್ಲಿ ಪರಂಪರಾಗತವಾಗಿ ಬಂದಿದೆ;

ಮೇಲೆ ಸದ್ಗತಿ ಬೆಂದು ಹೋಗಲಿ=ನಾನು ಸತ್ತ ನಂತರ ನನಗೆ ಯಾವ ಸದ್ಗತಿಯು ಬೇಕಾಗಿಲ್ಲ. ಅಂತಹ ಸದ್ಗತಿಯು ಹಾಳಾಗಿ ಹೋಗಲಿ. ಈಗ ನೀನು ನನ್ನವಳಾದರೆ ಅದೇ ನನಗೆ ಸಾಕು;

ಕಾಲ=ಯಮ; ಕಾಲನವರು=ಯಮದೂತರು;

ಕಾಲನವರು ಐತರಲಿ=ಯಮದೂತರು ಬಂದು ನನ್ನ ಪ್ರಾಣವನ್ನು ಒಯ್ಯಲಿ;

ಏಳಿಸು=ಅವಹೇಳನ ಮಾಡು/ನಿಂದಿಸು/ತೆಗಳು;

ಬಂಧುಗಳು ಏಳಿಸಲಿ=ನನ್ನ ನೆಂಟರು ನನ್ನ ಬಗ್ಗೆ ಅಪಮಾನದ ನುಡಿಗಳನ್ನಾಡಲಿ/ನನ್ನ ನಡೆನುಡಿಯನ್ನು ಕುರಿತು ಅವಹೇಳನ ಮಾಡಲಿ;

ತನ್ನವರು ತೊಲಗಲಿ=ನನ್ನವರು ಎನಿಸಿಕೊಂಡ ತಂದೆತಾಯಿ, ಸೋದರ ಸೋದರಿಯರು, ಮಕ್ಕಳು ಮತ್ತು ನೆಂಟರಿಶ್ಟರು ಎಲ್ಲರೂ ನನ್ನನ್ನು ಬಿಟ್ಟುಬಿಡಲಿ ಇಲ್ಲವೇ ನನ್ನಿಂದ ದೂರಸರಿಯಲಿ;

ರಾಣಿಯರು ಬಿಡಲಿ=ನನ್ನ ಹೆಂಡತಿಯರು ಬಿಡಲಿ;

ಬಾಲೆ=ತರುಣಿ/ಯುವತಿ;

ಬಾಲೆ, ನಿನಗೆ ಆನು ಒಲಿದೆ=ಸೈರಂದ್ರಿಯೇ, ನಾನು ನಿನ್ನನ್ನು ಮೋಹಿಸಿದ್ದೇನೆ; ಕೋಲು=ಬಾಣ;

ಕಾಮನ ಕೋಲು=ಮದನನ ಹೂಬಾಣ. ಇದೊಂದು ರೂಪಕವಾಗಿದೆ. ವ್ಯಕ್ತಿಯ ಮಯ್ ಮನದಲ್ಲಿ ಕೆರಳುವ ಕಾಮದ ಒಳಮಿಡಿತಗಳು ಎನ್ನುವ ತಿರುಳಿನಲ್ಲಿ ಬಳಕೆಗೊಂಡಿದೆ;

ಎನ್ನನು=ನನ್ನನ್ನು; ಮರಳಲು=ಹಿಂತಿರುಗಲು/ಮೊದಲಿನಂತಾಗಲು; ಈ=ಕೊಡು; ಈಯದು=ಅವಕಾಶ ಕೊಡುತ್ತಿಲ್ಲ;

ಕಾಮನ ಕೋಲು ಎನ್ನನು ಮರಳಲು ಈಯದು=ನಿನ್ನನ್ನು ಕಂಡ ಗಳಿಗೆಯಿಂದಲೂ ನನ್ನ ಮಯ್ ಮನದಲ್ಲಿ ಕೆರಳಿದ ಕಾಮದ ಒಳಮಿಡಿತಗಳಿಂದ ಪಾರಾಗಿ ಮೊದಲಿನಂತಾಗಲು ಆಗುತ್ತಿಲ್ಲ. ಅಂದರೆ ನಾನು ಕಾಮ ಪರವಶನಾಗಿದ್ದೇನೆ;

ಲೋಲ=ಅಲುಗಾಟ/ಅಲ್ಲಾಡುವುದು; ಲೋಚನ=ಕಣ್ಣು; ಲೋಲಲೋಚನೆ=ಚಂಚಲವಾದ ಕಣ್ಣುಗಳನ್ನುಳ್ಳ ಸುಂದರಿ; ಬಿರುಬು=ಬಿರುಸು/ಉಗ್ರತೆ;

ಲೋಲಲೋಚನೆ ಬಿರುಬ ನುಡಿಯದೆ ತನ್ನನು ಉಳುಹು=ಸುಂದರಿಯೇ, ನನ್ನ ಮನನೋಯಿಸುವಂತಹ ಬಿರುನುಡಿಗಳನ್ನಾಡದೆ, ನನ್ನನ್ನು ಉಳಿಸಿಕೊ. ಇಲ್ಲದಿದ್ದರೆ ಈ ಕಾಮದ ಬೇಗೆಯಲ್ಲಿ ನಾನು ನಾಶವಾಗಲಿದ್ದೇನೆ;

ಎಳನಗೆ=ಒಲವು ನಲಿವು ಚೆಲುವಿನಿಂದ ಕೂಡಿದ ಕೋಮಲವಾದ ನಗೆ; ಎಳನಗೆಯ ಬೆಳುದಿಂಗಳು=ಇದೊಂದು ರೂಪಕ. ಪ್ರಶಾಂತವಾದ ಮತ್ತು ಪ್ರೀತಿಯಿಂದ ಕೂಡಿದ ಮುಕಬಾವಕ್ಕೆ ಸಂಕೇತ; ತಳಿ=ಹರಡು/ಸಿಂಪಡಿಸು/ಚೆಲ್ಲು/ಬೀರು; ತಾಪ=ಕಾಮದ ಬೇಗೆ; ಕೆಡಿಸು=ಇಲ್ಲದಂತೆ ಮಾಡು;

ಎಳನಗೆಯ ಬೆಳುದಿಂಗಳನು ನೀ ತಳಿತು ತಾಪವ ಕೆಡಿಸು=ನಿನ್ನ ಒಲವು ನಲಿವು ಚೆಲುವಿನಿಂದ ಕೂಡಿದ ನಗೆಯ ಬೆಳುದಿಂಗಳನು ನನ್ನ ಮೇಲೆ ಬೀರುತ್ತ, ನನ್ನ ಕಾಮದ ಉರಿಯನ್ನು ನಂದಿಸು;

ಅಕಟ=ಅಯ್ಯೋ; ಕೀಚಕನು ತನ್ನ ಮಯ್ ಮನದಲ್ಲಿ ಕೆರಳಿರುವ ಕಾಮಕ್ಕೆ ವಶನಾಗಿ, ದೀನನಂತೆ “ಅಕಟ” ಎಂಬ ಉದ್ಗಾರವನ್ನು ಎಳೆಯುತ್ತಿದ್ದಾನೆ;

ಮಧುರ=ಇಂಪಾದ/ಸಿಹಿಯಾದ/ಸವಿಯಾದ; ಮೆಲುನುಡಿ=ಮನಸ್ಸಿಗೆ ಮುದ ನೀಡುವಂತಹ ಮಾತು; ಸುಧೆ+ಇಂದ; ಸುಧೆ=ಅಮೃತ; ತೃಷ್ಣೆ=ತೀವ್ರತರವಾದ ಆಸೆ/ಹತ್ತಿಕ್ಕಲಾರದ ಬಯಕೆ; ಪರಿಹರಿಸು=ನಿವಾರಿಸು/ಹೋಗಲಾಡಿಸು;

ಮಧುರದ ಮೆಲುನುಡಿಯ ಸುಧೆಯಿಂದ ತೃಷ್ಣೆಯನು ಪರಿಹರಿಸು=ಮನಕ್ಕೆ ಮುದ ನೀಡುವಂತಹ ಸವಿಯಾದ ಮಾತಿನ ಅಮೃತಸಿಂಚನದಿಂದ ನನ್ನ ಮಯ್ ಮನದ ಕಾಮದ ಪರಿತಾಪವನ್ನು ಹೋಗಲಾಡಿಸು;

ಅಳಿಮನ=ದರ‍್ಬಲವಾದ ಮನಸ್ಸು/ಕೆಟ್ಟ ಮನಸ್ಸು; ಬಡತನ=ಏನೂ ಇಲ್ಲದಿರುವಿಕೆ; ಅಳಿಮನದ ಬಡತನ=ಇದೊಂದು ರೂಪಕ. ಕಾಮಕ್ಕೆ ವಶನಾಗಿ ದರ‍್ಬಲ ಮನದವನಾಗಿರುವ ನಾನು ಎಲ್ಲ ಬಗೆಯ ಆನಂದ ಮತ್ತು ನೆಮ್ಮದಿಯನ್ನು ಕಳೆದುಕೊಂಡಿದ್ದೇನೆ; ಕಳಶ=ಚೆಂಬು; ಕುಚ=ಮೊಲೆ/ಸ್ತನ; ಲಕ್ಷ್ಮಿ=ಚೆಲುವು; ಕಳೆ=ನಿವಾರಿಸು/ಹೋಗಲಾಡಿಸು;

ಅಳಿಮನದ ಬಡತನವ ನಿನ್ನಯ ಕಳಶ ಕುಚ ಲಕ್ಷ್ಮಿಯಲಿ ಕಳೆ=ದರ‍್ಬಲವಾದ ಮನಸ್ಸಿನಿಂದ ಕೂಡಿ ಆನಂದ ಮತ್ತು ನೆಮ್ಮದಿಯಿಂದ ವಂಚಿತನಾಗಿರುವ ನನ್ನನ್ನು ಆಲಂಗಿಸಿಕೊಂಡು, ನಿನ್ನ ಸ್ತನಗಳನ್ನು ತಾಗಿಸುವುದರಿಂದ ನನಗೆ ಮುದವನ್ನು ನೀಡು;

ಕಾಂತೆ=ಪ್ರಿಯೆ; ಇತ್ತಲು=ಈ ಕಡೆ; ತಿದ್ದಬೇಹುದು=ಅಣಿಗೊಳಿಸುವುದು/ಪಳಗಿಸುವುದು;

ಕಾಂತೆ, ಮನದ ಒಲವನು ಇತ್ತಲು ತಿದ್ದಬೇಹುದು=ಪ್ರಿಯೆ, ನಿನ್ನ ಮನದ ಒಲವನ್ನು ನನ್ನತ್ತ ತಿರುಗಿಸು;

ಕೇಳಿ ಕಿವಿ ಮುಚ್ಚಿದಳು=ತನ್ನ ಮುಂದೆ ಯಾವ ಹಿಂಜರಿಕೆಯಾಗಲಿ ಇಲ್ಲವೇ ಲಜ್ಜೆಯಾಗಲಿ ಇಲ್ಲದೆ ಕಾಮಕೇಳಿಗೆ ಕರೆ ನೀಡುವಂತೆ ಕೀಚಕನಾಡಿದ “ಅಳಿಮನದ ಬಡತನವ ನಿನ್ನಯ ಕಳಶ ಕುಚ ಲಕ್ಷ್ಮಿಯಲಿ ಕಳೆ” ಎಂಬ ನುಡಿಗಳನ್ನು ಕೇಳಲಾಗದೆ ಸೈರಂದ್ರಿಯು ಕಿವಿಗಳನ್ನು ಮುಚ್ಚಿಕೊಂಡಳು;

ಮೇಳ=ನಂಟು;

ತನ್ನಯ ಮೇಳದ ಐವರ ನೆನೆದು=ತನ್ನ ಗಂಡಂದಿರಾದ ಅಯ್ದು ಮಂದಿ ಪಾಂಡವರನ್ನು ನೆನೆಯುತ್ತ;

ಹರ ಹರ=ಶಿವ… ಶಿವ… ಎಂಬ ಉದ್ಗಾರ ಸೂಚಕ ಪದಗಳು; ಶೂಲಪಾಣಿ=ಶಿವ/ಶೂಲವೆಂಬ ಹತಾರವನ್ನು ಹಿಡಿದವನು; ಮುಕುಂದ=ಕ್ರಿಶ್ಣ; ಎನುತವೆ=ಸ್ಮರಣೆ ಮಾಡುತ್ತ;

“ಹರ ಹರ ಶೂಲಪಾಣಿ ಮುಕುಂದ“ ಎನುತವೆ=ಹರ ಹರ… ಶಿವ… ಕ್ರಿಶ್ಣ ಎಂದು ದೇವರ ನಾಮಸ್ಮರಣೆಯನ್ನು ಮಾಡುತ್ತ;

ರವಿಯನು ಈಕ್ಷಿಸುತ=ತಲೆಯೆತ್ತಿ ಸರ‍್ಯನನ್ನು ನೋಡುತ್ತ;

ಕಾಳು=ಕೆಟ್ಟದ್ದು/ಕೀಳಾದುದ್ದು; ಮೂಳ=ತಿಳಿಗೇಡಿ; ಖಳ+ಅಗ್ರಣಿ: ಖಳ=ನೀಚ/ಕೇಡಿ; ಅಗ್ರಣಿ=ಮುಂದಾಳು; ಖಳಾಗ್ರಣಿ=ಮಹಾಕೇಡಿ/ಮಹಾನೀಚ; ಮೇಲು+ಕಾಣನಲಾ; ಮೇಲ್ಗಾಣು=ಇದೊಂದು ನುಡಿಗಟ್ಟು. ಯೋಗ್ಯವಾದುದನ್ನು/ಸರಿಯಾದುದನ್ನು/ಉಚಿತವಾದುದನ್ನು ಅರಿತುಕೊಳ್ಳುವುದು;

ಕಾಳು ಮೂಳನಲಾ…ಖಳಾಗ್ರಣಿ ಮೇಲುಗಾಣನಲಾ=ಕೆಟ್ಟವನು… ತಿಳಿಗೇಡಿಯೂ… ಮಹಾನೀಚನೂ ಆದ ಕೀಚಕನು ಯೋಗ್ಯವಾದ ನಡೆನುಡಿ ಯಾವುದೆಂಬುದನ್ನು ಕಾಣಲಾರ; ಏಕೆಂದರೆ ಕಾಮದಿಂದ ಕುರುಡನಾಗಿದ್ದಾನೆ;

ಮದ+ಅಂಧನ; ಮದ=ಸೊಕ್ಕು; ಅಂಧ=ಕುರುಡ; ಮದಾಂಧ=ಸೊಕ್ಕಿನಿಂದ ಕುರುಡನಾಗಿದ್ದಾನೆ; ಆರು+ಉಂಟು; ಆರು=ಯಾರು; ತರಳೆ=ಯುವತಿ/ತರುಣಿ;

ಮದಾಂಧನ ಸೋಲಿಸುವರು ಆರುಂಟು ಎನುತ ತರಳೆ ತಲೆಬಾಗಿದಳು=ತೋಳ್ಬಲ, ರಾಜಬಲ ಮತ್ತು ಸೇನಾಬಲದಿಂದ ಸೊಕ್ಕಿರುವ ಕೀಚಕನ್ನು ಸೋಲಿಸುವವರು ಯಾರಿದ್ದಾರೆ ಎಂದು ಸೈರಂದ್ರಿಯು ಕಳವಳಪಡುತ್ತ, ಆ ಕಾಮಿಯ ಮೊಗವನ್ನು ನೋಡಲಾಗದೆ ತಲೆಯನ್ನು ಬಗ್ಗಿಸಿದಳು; ಆದರೆ ಸುಮ್ಮನಾಗದೆ ದಿಟ್ಟತನದಿಂದ ಕೀಚಕನನ್ನು ಎದುರಿಸುತ್ತ, ಅವನಿಗೆ ತಿಳಿಯ ಹೇಳುವುದರ ಜತೆಜತೆಗೆ ಎಚ್ಚರಿಕೆಯನ್ನು ನೀಡತೊಡಗಿದಳು;

ದುರಾತ್ಮ=ನೀಚ ವ್ಯಕ್ತಿ; ಮಹಾ+ಅಪರಾಧ; ಅಪರಾಧ=ತಪ್ಪು;

ಎಲೆ ದುರಾತ್ಮ ಮಹಾಪರಾಧವ ಬಳಸುವರೆ=ಎಲೆ ನೀಚನೇ, ದೊಡ್ಡ ತಪ್ಪನ್ನು ಮಾಡುತ್ತಾರೆಯೇ; ಕುಲ=ವಂಶ/ಮನೆತನ;

ಬೇರನು ಬಯಲಿಂಗೆ ಕೊಯ್=ಇದೊಂದು ರೂಪಕ. ಗಿಡ/ಬಳ್ಳಿ/ಮರದ ಬೇರನ್ನು ಬುಡಸಮೇತ ಬೂಮಿಯಿಂದ ಕಿತ್ತು ಹೊರಕ್ಕೆಳದು ಭೂಮಿಯ ಮೇಲೆ ಹಾಕುವುದು ಅಂದರೆ ಇಡೀ ಆ ಸಸ್ಯವನ್ನು ನಾಶಮಾಡುವುದು;

ನಿನ್ನಯ ಕುಲದ ಬೇರನು ಬಯಲಿಂಗೆ ಕೊಯ್ವರೇ=ನಿನ್ನ ಈ ಕಾಮದ ಸೊಕ್ಕಿನ ನಡೆನುಡಿಯು ನಿನ್ನ ವಂಶವನ್ನೇ ಬುಡಸಮೇತ ನಾಶಪಡಿಸುತ್ತದೆ;

ಮಾಣ್=ನಿಲ್ಲಿಸು;

ಹೆತ್ತವರು ಮಕ್ಕಳುಗಳು ಎಂಬ ಈ ಬದುಕು ಮಾಣದೆ ಎಳಸಿಕೊಂಬಂತೆ ಆಯಿತು=ನಿನ್ನ ಈ ನೀಚತನದ ಕೆಲಸದಿಂದ ಹೆತ್ತವರು ಮಕ್ಕಳಿಂದ ಕೂಡಿದ ನಿನ್ನ ಬದುಕು ಉಳಿಯದೆ ಸಾವಿನ ಪಾಶದಿಂದ ಎಳೆಸಿಕೊಳ್ಳುವಂತೆ ಆಯಿತು;

ಇದರಿಂದ ಆವುದು ಬಹುದು=ಇಂತಹ ಕುರುಡು ಕಾಮದಿಂದ ಯಾವುದನ್ನು ತಾನೆ ನೀನು ಪಡೆಯಬಹುದು;

ಹಳಿವು=ಕೇಡು/ನಿಂದೆ; ಹೊದ್ದು=ಅಂಟು/ಹತ್ತು/ತಟ್ಟು;

ಹಳಿವು ಹೊದ್ದದೆ=ನಿನ್ನ ಕೇಡು ತಟ್ಟುವುದಿಲ್ಲವೇ;

ಕಾತರಿಸದಿರು=ಕಾಮದ ಪರಿತಾಪದಿಂದ ಕಳವಳಕ್ಕೆ ಒಳಗಾಗದಿರು;

ಮಂದಿವಾಳ=ಸಲುಗೆ/ಸದರ;

ಮಂದಿವಾಳದ ಮಾತುಗಳು ಸಾಕು=ನಾನು ರಾಣಿವಾಸದ ದಾಸಿಯೆಂದು ತಿಳಿದುಕೊಂಡು ನೀನು ಆಡುತ್ತಿರುವ ಸದರದ ನುಡಿಗಳು ಸಾಕು;

ಅಕಟ, ತೊಲಗೈ=ಅಯ್ಯೋ… ಈ ಗಳಿಗೆಯಲ್ಲೇ ಇಲ್ಲಿಂದ ದೂರಸರಿ;

ಸೋತಡೆ+ಏನು; ಮನುಜ=ಮಾನವ; ಚಿತ್ತ=ಮನಸ್ಸು; ಚಪಲ=ಚಂಚಲತೆ;

ಸೋತಡೇನು ಅದು ಮನುಜ ರ‍್ಮದ ಚಿತ್ತಚಪಲವಲ=ನನ್ನ ರೂಪವನ್ನು ಕಂಡು ನೀನು ಕಾಮಪರವಶನಾಗಿದ್ದರೇನು… ಅದು ಅಂತಹ ದೊಡ್ಡ ತಪ್ಪಲ್ಲ. ಏಕೆಂದರೆ ಸುಂದರಿಯಾದ ಹೆಣ್ಣನ್ನು ಕಂಡಾಗ ಗಂಡಿನ ಮನಸ್ಸು ಈ ರೀತಿ ಚಂಚಲಗೊಳ್ಳುವುದು ಮಾನವರಿಗೆ ಸಹಜವಾದುದು;

ಈ ತತು ಕ್ಷಣ ಜಾರು=ಈ ಗಳಿಗೆಯಲ್ಲೇ ಇಲ್ಲಿಂದ ದೂರಸರಿ;

ವ್ರಾತ=ಗುಂಪು/ಸಮೂಹ; ದೇವವ್ರಾತ=ದೇವತೆಗಳ ಗುಂಪು;

ತನ್ನವರು ದೇವವ್ರಾತದಲಿ ಬಲ್ಲಿದರು=ನನ್ನ ಗಂಡಂದಿರುವ ದೇವತೆಗಳ ಸಮೂಹದಲ್ಲಿಯೇ ಮಹಾಬಲಶಾಲಿಗಳು;

ಆತಗಳು=ಅವರುಗಳು; ಸೈರಿಸು=ತಾಳು/ಸಹಿಸು;

ಆತಗಳು ಕೇಳಿದಡೆ ಸೈರಿಸರು=ನೀನು ನನಗೆ ಕೊಡುತ್ತಿರುವ ಕಾಮದ ಕಿರುಕುಳವನ್ನು ಕೇಳಿದರೆ ಅವರು ಸಹಿಸಿಕೊಂಡು ಸುಮ್ಮನಿರುವುದಿಲ್ಲ; ಸೈರಂದ್ರಿಯು ಆಡಿದ ಒಳಿತಿನ ಮಾತುಗಳಾಗಲಿ ಇಲ್ಲವೇ ನೀಡಿದ ಎಚ್ಚರಿಕೆಯಾಗಲಿ ಕಾಮಿಯಾದ ಕೀಚಕನ ಮನದ ಮೇಲೆ ತುಸುವಾದರೂ ಪರಿಣಾಮವನ್ನು ಬೀರಲಿಲ್ಲ. ಕಾಮಜ್ವರದಿಂದ ಪೀಡಿತನಾಗಿರುವ ಕೀಚಕನು ಸೈರಂಧ್ರಿಯನ್ನು ಕೂಡುವುದಕ್ಕಾಗಿ ಸಾವಿಗೂ ಸಿದ್ದನಾಗಿದ್ದಾನೆ;

ಡಾವರ=ಕೋಟಲೆ/ಹಿಂಸೆ/ಪ್ರತಾಪ; ಘನ=ದೊಡ್ಡದು;

ಕಾಮನ ಡಾವರವು ಘನ=ಮದನನ ಕೋಟಲೆ ಬಹು ಶಕ್ತಿಯುತವಾಗಿದೆ/ನನ್ನ ಮಯ್ ಮನದಲ್ಲಿ ತುಡಿಯುತ್ತಿರುವ ಕಾಮದ ಒಳಮಿಡಿತಗಳು ತೀವ್ರತರವಾಗಿವೆ;

ನೆರೆ=ಕೂಡು/ದೇಹದೊಡನೆ ಕಾಮದ ನಂಟನ್ನು ಪಡೆದು; ಸಾವೆನ್+ಅಲ್ಲದೆ; ಅಂಬು=ಬಾಣ; ತನಗೆ ಸಾವು ತಪ್ಪದು.

ನಿನ್ನ ನೆರೆದೇ ಸಾವೆನಲ್ಲದೆ, ಕಾಮನ ಅಂಬಿಂಗೆ ಒಡಲನು ಒಪ್ಪಿಸೆನು=ಹೇಗಿದ್ದರೂ ನನಗೆ ಸಾವು ತಪ್ಪದು. ಆದ್ದರಿಂದ ನಿನ್ನೊಡನೆ ಕಾಮದ ನಂಟನ್ನು ಹೊಂದಿಯೇ ಸಾಯುತ್ತೇನಲ್ಲದೆ, ಕಾಮನ ಬಾಣಕ್ಕೆ ನನ್ನ ಒಡಲನ್ನು ನೀಡುವುದಿಲ್ಲ. ಅಂದರೆ ನಿನ್ನನ್ನು ಕೂಡಬೇಕೆಂಬ ಬಯಕೆಯನ್ನು ಈಡೇರಿಸಿಕೊಳ್ಳದೇ ಸಾಯುವುದಿಲ್ಲ;

ಭಾವೆ=ಸುಂದರಿ;

ಭಾವೆ, ಎನ್ನ ನೂಕದಿರು=ಸುಂದರಿಯೇ, ನನ್ನನ್ನು ನಿರಾಕರಿಸಿದಿರು;

ವರ=ಉತ್ತಮವಾದ; ರಾಜೀವ=ತಾವರೆ; ರಾಜೀವಮುಖಿ=ತಾವರೆಯ ಮೊಗದವಳು/ಸುಂದರಿ; ಕೃಪೆ=ದಯೆ/ಕರುಣೆ;

ವರ ರಾಜೀವಮುಖಿ, ಕೃಪೆ ಮಾಡು=ಸುಂದರಿ… ನನ್ನ ಮೇಲೆ ದಯೆ ತೋರು;

ತನ್ನಯ ಜೀವನವನು ಉಳುಹು ಎನುತ ಕಮಲಾನನೆಗೆ ಕೈಮುಗಿದ=ನನ್ನ ಜೀವನವನ್ನು ಉಳಿಸು ಎನುತ ಸೈರಂದ್ರಿಗೆ ಕಯ್ ಮುಗಿದ; ಕೀಚಕನ ಯಾವುದೇ ಬಗೆಯ ನಯವಂಚನೆಯ ಇಲ್ಲವೇ ಕಾಮುಕತನದ ಮಾತುಗಳಿಗೆ ಬೆಲೆಕೊಡದೆ, ಸೈರಂದ್ರಿಯು ಕೀಚಕನಿಗೆ ಮತ್ತೆ ಎಚ್ಚರಿಕೆಯನ್ನು ನೀಡುತ್ತಾಳೆ;

ಮರುಳುತನ=ಹುಚ್ಚತನ/ತಲೆಕೆಟ್ಟ ನಡವಳಿಕೆ;

ಮರುಳತನ ಬೇಡ=ತಲೆಕೆಟ್ಟವನಂತೆ ನಡೆದುಕೊಳ್ಳಬೇಡ;

ಎಲವೊ, ತಾನು ಗಂಧರ್ವರಿಗೆ ಹೆಂಡತಿ; ತನ್ನವರು ಬಲ್ಲಿದರು=ನನ್ನ ಗಂಡಂದಿರು ಬಲಶಾಲಿಗಳು;

ನಿನ್ನಯ ದುರುಳತನವನು ಸೈರಿಸರು=ನಿನ್ನ ಕೆಟ್ಟತನವನ್ನು ಸಹಿಸಿಕೊಳ್ಳುವುದಿಲ್ಲ;

ಸೊರಹು=ಅತಿಯಾಗಿ ಮಾತನಾಡು;

ಸೊರಹದಿರು=ಬಾಯಿಗೆ ಬಂದಂತೆ ಏನೇನೊ ಮಾತನಾಡಬೇಡ;

ಅಪಕರ‍್ತಿ=ಕೆಟ್ಟ ಹೆಸರು; ನಾರಿ=ಹೆಣ್ಣು; ನೆರೆ=ಕೂಡು;

ಅಪಕೀರ್ತಿ ನಾರಿಯ ನೆರೆಯದಿರು=ಇದೊಂದು ರೂಪಕ. ಕೆಟ್ಟಹೆಸರನ್ನು ಹೊಂದಬೇಡ;

ನಿಳಯ=ಮನೆ; ತೃಣ=ಹುಲ್ಲುಕಡ್ಡಿ; ಸಾರು=ಒತ್ತಿಹೇಳು;

ನೀ ನಿನ್ನ ನಿಳಯಕೆ ಮರಳುವುದು ಲೇಸು ಎಂದು ತೃಣವನು ಹಿಡಿದು ಸಾರಿದಳು=ನೀನು ನಿನ್ನ ಮನೆಗೆ ಹಿಂತಿರುಗುವುದು ಒಳ್ಳೆಯದು ಎಂದು ನುಡಿದಳು. ಕೀಚಕನನ್ನು ಉದ್ದೇಶಿಸಿ ಮಾತನಾಡುವಾಗ ಅವನ ಮೊಗವನ್ನು ನೋಡಲು ಹೇಸಿ, ಒಂದು ಹುಲ್ಲುಕಡ್ಡಿಯನ್ನು ಆಸರೆಯಾಗಿ ಹಿಡಿದುಕೊಂಡು, ಅದನ್ನು ನೋಡುತ್ತ ಸೈರಂದ್ರಿಯು ತಾನು ನೀಡಬೇಕಾದ ಎಚ್ಚರಿಕೆಯ ನುಡಿಗಳನ್ನಾಡಿದಳು; ಆದರೆ ಕಾಮಿಯಾದ ಕೀಚಕನು ಸೈರಂದ್ರಿಯ ಮಾತುಗಳನ್ನು ಲೆಕ್ಕಿಸದೆ, ತನ್ನ ಪ್ರತಾಪವನ್ನೇ ಮೆರೆಯುತ್ತಾನೆ;

ಎನ್ನ=ನನ್ನ; ಆಟೋಪ=ಆಡಂಬರ/ಅಬ್ಬರ; ಅರಿಯೆ=ತಿಳಿಯೆ;

ಎನ್ನ ಆಟೋಪವನು ನೀನು ಅರಿಯೆ=ನನ್ನ ಸಿರಿಸಂಪತ್ತು ಮತ್ತು ನನ್ನ ಪರಾಕ್ರಮದ ಬಗೆಯು ಏನೆಂಬುದು ನಿನಗೆ ಗೊತ್ತಿಲ್ಲ;

ಔಡು=ದವಡೆ; ಮೃತ್ಯು=ಸಾವು;

ಬಡವರ ಕೋಪವು ಔಡಿಗೆ ಮೃತ್ಯು=ಬಡವನ ಕೋಪ ದವಡೆಗೆ ಮೂಲ ಎಂಬ ಗಾದೆ ಮಾತು ಜನಬಳಕೆಯಲ್ಲಿದೆ. ಸಿರಿವಂತರ ಎದುರು ಬಡವರು ತಿರುಗಿಬಿದ್ದರೆ, ಬಡವರು ನಾಶಗೊಳ್ಳುತ್ತಾರೆ ಎಂಬ ತಿರುಳಿನಲ್ಲಿ ಈ ಗಾದೆಯು ಬಳಕೆಗೊಂಡಿದೆ. ಅಂತೆಯೇ ರಾಜವಂಶದವನು, ಸೇನಾನಿಯು ಮತ್ತು ಬಲಶಾಲಿಯು ಆದ ತನ್ನ ಎದುರು ಯಾರೇ ಬಂದರು ನಾಶವಾಗುತ್ತಾರೆ ಎಂಬ ಅಹಂಕಾರದಿಂದ ಕೀಚಕನು ಈ ನಾಣ್ಣುಡಿಯನ್ನು ಬಳಸಿದ್ದಾನೆ;

ಏಗು=ಏನನ್ನು ಮಾಡು;

ನಿನ್ನವರು ಎನ್ನನು ಏಗುವರು=ನಿನ್ನವರು ನನ್ನನ್ನು ಏನು ತಾನೆ ಮಾಡಬಲ್ಲರು;

ಆಪು=ಪರಾಕ್ರಮ/ಸಾಹಸ;

ಅವರ ಆಪೆನು=ಅವರನ್ನು ಪರಾಕ್ರಮದಿಂದ ಸದೆಬಡಿಯಬಲ್ಲೆನು;

ಅಂತು+ಇರಲಿ; ಅಂತು=ಹಾಗೆ; ಅಂತಿರಲಿ=ನಿನ್ನ ಗಂಡಂದಿರುವ ಮಹಾಪರಾಕ್ರಮಿಗಳು ಎಂಬ ಸಂಗತಿ ಹಾಗಿರಲಿ. ಅದು ನನಗೆ ದೊಡ್ಡ ಸಂಗತಿಯಲ್ಲ. ಏಕೆಂದರೆ ನಾನು ಮಹಾಪರಾಕ್ರಮಿ;

ಎನಗೆ=ನನಗೆ; ಓಪಳು+ಆದರೆ; ಓಪಳು=ನಲ್ಲೆ;

ನೀನು ಎನಗೆ ಓಪಳಾದರೆ ಸಾಕು=ನೀನು ನನಗೆ ನಲ್ಲೆಯಾದರೆ ಸಾಕು;

ಮಲೆ=ಎದುರಿಸು/ಇದುರುಬೀಳು; ಪಿನಾಕಿ=ಪಿನಾಕವೆಂಬ ಹತಾರವನ್ನು ಹಿಡಿದುಕೊಂಡಿರುವ ವ್ಯಕ್ತಿ/ಶಿವ; ತೆರಳು=ಹೆದರು/ಹಿಂಜರಿ;

ಮಲೆತಡೆ ಆ ಪಿನಾಕಿಗೆ ತೆರಳುವೆನೆ=ಆ ಶಿವನೊಡನೆ ಕಾಳಗ ಎದುರಾದರೂ ನಾನು ಹಿಂಜರಿಯುವುದಿಲ್ಲ/ಶಿವನನ್ನೇ ಸದೆಬಡಿಯಬಲ್ಲೆ;

ಬಳಿಕ ಅಲ್ಲಿ ನೋಡು=ಈಗ ಕೀಚಕನು ಬಹಳ ಹಗುರವಾದ ದಾಟಿಯಲ್ಲಿ ವ್ಯಂಗ್ಯದ ಮಾತುಗಳನ್ನಾಡತೊಡಗುತ್ತಾನೆ; ಮಾನವ ಜೀವಿಗಳ ಮಯ್ ಮನದಲ್ಲಿ ಕಾಮದ ಒಳಮಿಡಿತಗಳು ಮೂಡುವುದಕ್ಕೆ ಕಾರಣವಾದ ನಿರ‍್ಗದ ಸಂಗತಿಗಳನ್ನು ಕುರಿತು ವಿಡಂಬನೆ ಮಾಡತೊಡಗುತ್ತಾನೆ;

ಹುಳುಕು=ಕೀಳಾದುದು/ಹೀನವಾದುದು/ಅತಿ ಸಾಮಾನ್ಯವಾದುದು;

ಹುಳುಕನಲ್ಲಾ ತುಂಬಿ=ಜೇಂಕಾರ ನಾದವನ್ನು ಮಾಡುವ ತುಂಬಿ ಒಂದು ಸಾಮಾನ್ಯ ಹುಳುವಲ್ಲವೇ;

ಗಳಹು=ಹರಟು/ಅತಿಯಾಗಿ ಮಾತನಾಡು;

ಕೋಗಿಲೆ ಗಳಹನಲ್ಲಾ=ತನ್ನ ಕೊರಳ ಗಾನದ ಇಂಪಿನಿಂದ ಹಾಡುವ ಕೋಗಿಲೆಯು ಹರಟೆಯ ಮಲ್ಲನಲ್ಲವೇ;

ಶಶಿ=ಚಂದ್ರ; ವಸಂತ=ಮರಗಿಡಗಳೆಲ್ಲವೂ ಚಿಗುರಿ ಕಂಗೊಳಿಸುವ ಕಾಲ; ಬಲುಹು=ಶಕ್ತಿ/ಕಸುವು; ಮಾನ್ಯರು=ಮನ್ನಣೆಯನ್ನು ಪಡೆದವರು/ಸಮಾಜದಲ್ಲಿ ಒಳ್ಳೆಯ ಸ್ತಾನಮಾನವನ್ನು ಪಡೆದವರು; ಇರಿ=ಚುಚ್ಚು/ತಿವಿ;

ಶಶಿ ವಸಂತನ ಬಲುಹು ಮಾನ್ಯರನು ಇರಿಯದೇ=ಬೆಳುದಿಂಗಳನ್ನು ಚೆಲ್ಲುವ ಚಂದ್ರ ಮತ್ತು ಚಿಗುರಿದ ಮರಗಿಡಬಳ್ಳಿಗಳ ಸೊಬಗಿನಿಂದ ಕಂಗೊಳಿಸುವ ವಸಂತನು ಲೋಕದಲ್ಲಿ ಒಳ್ಳೆಯ ವ್ಯಕ್ತಿಗಳೆಂದು ಹೆಸರಾದವರ ಮಯ್ ಮನದಲ್ಲಿ ಕಾಮದ ಒಳಮಿಡಿತಗಳನ್ನು ಕೆರಳಿಸಿ ಕಾಡುವುದಿಲ್ಲವೇ;

ತಂಗಾಳಿ ಧಾರ್ಮಿಕನೆ=ಬೀಸಿ ಸುಳಿಯುವ ತಂಗಾಳಿಯು ಬಹಳ ಒಳ್ಳೆಯವನೇ;

ಮಾಕಂದ=ಮಾವಿನ ಮರ;

ಮಾಕಂದ ಖಳನಲಾ=ಚಿಗುರನ್ನು ತಳೆದು ಕೋಗಿಲೆಯನ್ನು ಸೆಳೆದು ಮಾವಿನ ಚಿಗುರನ್ನು ತಿಂದು ಕೋಗಿಲೆಯು ಇಂಪಾದ ಗಾನವನ್ನು ಹಾಡುವುದಕ್ಕೆ ಕಾರಣವಾಗುವ ಮಾವಿನ ಮರ ಅತಿ ಕೇಡಿಯಲ್ಲವೇ;

ಮನೋಭವ=ಮದನ/ಕಾಮದೇವ/ಮನ್ಮತ; ಕೊಲೆಗಡಿಗ=ಕೊಲ್ಲುವವನು;

ಮನೋಭವನು ಲೋಕದ ಕೊಲೆಗಡಿಗನಲ್ಲಾ=ಮಾನವರ ಮಯ್ ಮನದಲ್ಲಿ ಕಾಮವನ್ನು ಕೆರಳಿಸಿ ಕಾಡುವ ಮನ್ಮಥನು ಲೋಕದ ಕೊಲೆಗಡುಕನಲ್ಲವೇ;

ಕೀಚಕನು ತನ್ನ ಕಾಮವಿಕಾರದ ನಡೆನುಡಿಗೆ ನಿರ‍್ಗದಲ್ಲಿನ ದುಂಬಿಯ ಜೇಂಕಾರ; ಕೋಗಿಲೆಯ ಇಂಪಾದ ಹಾಡು; ಚಂದ್ರನ ಕಿರಣಗಳು; ವಸಂತಕಾಲದ ನಿರ‍್ಗದ ಚೆಲುವು; ತಂಗಾಳಿಯ ಸ್ರ‍್ಶ; ಮಾವಿನ ಮರದ ಚಿಗುರು; ಮನ್ಮಥನ ಹೂಬಾಣದ ಪೆಟ್ಟುಗಳು ಕಾರಣವೆಂದು ಆರೋಪಿಸುತ್ತಿದ್ದಾನೆ; ಸಮಾಜದಲ್ಲಿ ಎಲ್ಲ ಕಾಲದಲ್ಲಿಯೂ ಮತ್ತು ಎಲ್ಲ ಸನ್ನಿವೇಶಗಳಲ್ಲಿಯೂ ಪ್ರತಿಯೊಬ್ಬ ಕಾಮಿಯು ತನ್ನ ತಪ್ಪನ್ನು ಮುಚ್ಚಿಕೊಂಡು ಬೇರೆಯವರ ಮೇಲೆ ಆರೋಪವನ್ನು ಮಾಡುವುದನ್ನು ಕೀಚಕನ ನುಡಿಗಳು ಸೂಚಿಸುತ್ತಿವೆ;

ಪಾಪಿ=ಕಾಮದ ತೀವ್ರತೆಯಿಂದ ತಿಳಿಗೇಡಿಯಾಗಿರುವ ಕೀಚಕನಿಗೆ ತನ್ನನ್ನು ನಿರಾಕರಿಸುತ್ತಿರುವ ಸೈರಂದ್ರಿಯೇ ಕೆಟ್ಟವಳಾಗಿ ಕಾಣುತ್ತಿದ್ದಾಳೆ;

ಇಳಿಕೆ=ತಿರಸ್ಕಾರ/ತಾತ್ಸಾರ/ಕಡೆಗಣನೆ;

ಇಳಿಕೆಗೊಂಬರೆ=ನನ್ನನ್ನು ಕಡೆಗಣಿಸುವುದು ಸರಿಯೇ;

ಒಲಿಯದೆ ಕೊಲುವರೇ=ನನಗೆ ವಶಳಾಗದೆ ಈ ರೀತಿ ದೂರಸರಿದು, ನನ್ನನ್ನು ಕೊಲ್ಲುತ್ತಿರುವುದು ಸರಿಯಲ್ಲವೆಂದು ಕೀಚಕನು ದೂರುತ್ತಿದ್ದಾನೆ;

ನಿನ್ನನು ಒಲಿದು ನಾವು ಕೊಲ್ಲೆವು=ನಿನ್ನನ್ನು ಕೊಲ್ಲಬೇಕೆಂಬ ಇಚ್ಚೆ ನನಗಿಲ್ಲ;

ಸುಭಟ=ಪರಾಕ್ರಮಿ/ಶೂರ;

ಕೊಲುವ ಸುಭಟರು ಬೇರೆ=ನಿನ್ನನ್ನು ಕೊಲ್ಲುವ ಪರಾಕ್ರಮಿ ಬೇರೆ ಇದ್ದಾರೆ;

ಬಯಲು=ಬಹಿರಂಗವಾಗಿ/ಪ್ರಯೋಜನವಿಲ್ಲದ; ಗಳಹು=ಹರಟು/ಬಾಯಿಗೆ ಬಂದಂತೆ ಮಾತನಾಡು; ಫಲ=ಪ್ರಯೋಜನ;

ಬಯಲಿಗೆ ಹಲವ ಗಳಹಿದರೇನು ಫಲವಿಲ್ಲ=ಸುಮ್ಮನೆ ಬಾಯಿಗೆ ಬಂದಂತೆ ಪ್ರಯೋಜನವಿಲ್ಲದ ಮಾತನಾಡುವುದರಿಂದ ಏನು ದೊರಕುವುದಿಲ್ಲ;

ಅಕಟ, ಸಾರಿದೆನು=ಅಯ್ಯೋ… ಮತ್ತೆ ಮತ್ತೆ ನಿನಗೆ ತಿಳಿಯಹೇಳುತ್ತಿದ್ದೇನೆ;

ತಿಳುಪಿದೊಡೆ=ತಿಳಿಸಿದರೆ; ಎನ್ನವರು=ನನ್ನ ಗಂಡಂದಿರು; ಅರಿದು=ಕತ್ತರಿಸಿ; ತುಷ್ಟ=ತಣಿವು/ತ್ರುಪ್ತಿ/ಸಮಾಧಾನ;

ತಿಳುಪಿದೊಡೆ ಎನ್ನವರು ನಿನ್ನಯ ತಲೆಯನು ಅರಿದೂ ತುಷ್ಟರಾಗರು=ನೀನು ನನಗೆ ಕೊಡುತ್ತಿರುವ ಕಿರುಕುಳವನ್ನು ನನ್ನ ಗಂಡಂದಿರಿಗೆ ತಿಳಿಸಿದರೆ, ಅವರು ನಿನ್ನ ತಲೆಯನ್ನು ಕತ್ತರಿಸಿದರೂ ಸಮಾದಾನಗೊಳ್ಳುವುದಿಲ್ಲ;

ಅನ್ವಯ=ವಂಶ/ಮನೆತನ; ಅಬ್ಧಿ=ಕಡಲು/ಸಮುದ್ರ; ಕಲಕು=ಕದಡು/ಕೆಡಿಸು/ಕಡೆ;

ನಿನ್ನ ಅನ್ವಯ ಅಬ್ಧಿಯನು ಕಲಕುವರು=ನಿನ್ನ ವಂಶದ ಕಡಲನ್ನೇ ಕಡೆಯುತ್ತಾರೆ/ಇಡೀ ನಿನ್ನ ವಂಶವನ್ನೇ ನಾಶಪಡಿಸುತ್ತಾರೆ;

ಅಳಿ=ನಾಶ;

ಕುಲದೊಳು ಒಬ್ಬನು ಜನಿಸಿ ವಂಶವನು ಅಳಿದನು=ಕುಲದಲ್ಲಿ ಒಬ್ಬನು ಹುಟ್ಟಿ, ಅವನು ವಂಶವನ್ನೇ ಕೊನೆಗೊಳಿಸಿದನು;

ದರ‍್ಯಶ=ಕೆಟ್ಟ ಹೆಸರು; ಲೇಸು+ಕಾಣೆನು; ಲೇಸು=ಒಳ್ಳೆಯದು;

ಅಕಟಕಟ ಎಂಬ ದುರ್ಯಶವು ಉಳಿವುದಲ್ಲದೆ ಲೇಸಗಾಣೆನು=ಅಯ್ಯಯ್ಯೋ ಎಂಬ ನಿನ್ನವರ ಸಂಕಟದ ದನಿಯೊಡನೆ ನಿನಗೆ ಕೆಟ್ಟಹೆಸರು ಬರುವುದಲ್ಲದೆ, ಮತ್ತಾವ ರೀತಿಯಲ್ಲಿಯೂ ನಿನಗೆ ಒಳ್ಳೆಯದಾಗುವುದನ್ನು ನಾನು ಕಾಣೆನು;

ಬರಿದೆ ಗಳಹದಿರು=ಸುಮ್ಮನೆ ಹರಟಬೇಡ/ಸೊಕ್ಕಿನ ನುಡಿಗಳನ್ನಾಡಬೇಡ;

ಅಖಿಳ=ಸಮಸ್ತ/ಎಲ್ಲ; ಕೊಲೆಗಡಿಕೆ=ಕೊಲೆಗಾತಿ/ಕೊಲ್ಲುವವಳು; ಹಲಬರನು=ಅನೇಕ ಜನರನ್ನು; ಸುಡಲಿ+ಎಂದು; ಅಳಲು=ಸಂಕಟಪಡು/ಶೋಕಿಸು;

ನಿನ್ನ ಅಖಿಳ ರಾಣಿಯರು “ಕೊಲೆಗಡಿಕೆಯೋ ಪಾಪಿ ಹೆಂಗಸು ಹಲಬರನು ಕೊಲಿಸಿದಳು ಸುಡಲೆಂದು” ಅಳಲುವರು=ನೀನು ಮತ್ತು ನಿನ್ನ ವಂಶದವರ ಸಾವನ್ನು ಕಂಡು ನಿನ್ನ ರಾಣಿವಾಸದ ಹೆಂಗಸರೆಲ್ಲರೂ “ಕೊಲೆಗಡುಕಿಯಾದ ಈ ಪಾಪಿ ಹೆಂಗಸು ಅನೇಕರನ್ನು ಕೊಲ್ಲಿಸಿದಳು. ಇವಳನ್ನು ಸುಡಲಿ” ಎಂದು ನನಗೆ ಶಾಪವನ್ನು ಹಾಕುತ್ತ ಕಣ್ಣೀರನ್ನು ಇಡುತ್ತಾರೆ; ಸೈರಂದ್ರಿಯ ಯಾವ ಬಗೆಯ ಹಿತನುಡಿಗಳಾಗಲಿ ಇಲ್ಲವೇ ಎಚ್ಚರಿಕೆಯ ನುಡಿಗಳಾಗಲಿ ಏನೊಂದು ಪರಿಣಾಮವನ್ನು ಕೀಚಕನ ಮನದ ಮೇಲೆ ಬೀರುತ್ತಿಲ್ಲ; ಕೀಚಕ ಮತ್ತೆ ಮತ್ತೆ ತನ್ನ ಪರಾಕ್ರಮದ ಮಾತುಗಳನ್ನೇ ಆಡುತ್ತ, ಸೈರಂಧ್ರಿಯನ್ನು ಮತ್ತೆ ಮತ್ತೆ ಪೀಡಿಸುತ್ತಿದ್ದಾನೆ;

ಮರುಳು=ತಿಳಿಗೇಡಿ; ಹರಿ=ವಿಶ್ಣು ; ವಿರಂಚಿ=ಬ್ರಹ್ಮ; ಸಂಗರ=ಕಾಳೆಗ/ಯುದ್ದ;

ಮರುಳೇ, ಹರಿ ವಿರಂಚಿಗಳು ಆದೊಡೆಯು ಸಂಗರದೊಳು ಎನಗೆ ಇದಿರಿಲ್ಲ=ನನ್ನ ಪರಾಕ್ರಮದ ಬಗ್ಗೆ ಅರಿವಿಲ್ಲದವಳೇ, ಕೇಳು… ರಣರಂಗದಲ್ಲಿ ಆ ಹರಿ ಬ್ರಹ್ಮ ಬಂದರೂ ನನಗೆ ಸಮನರಲ್ಲ;

ನಿನ್ನೊಡನೆ ಏನು=ನಿನ್ನೊಡನೆ ಸುಮ್ಮನೆ ಏನು ಮಾತು; ನಿನ್ನ ವಲ್ಲಭರ ತೋರಾ=ನಿನ್ನ ಗಂಡಂದಿರನ್ನು ತೋರು;

ಪರಸತಿ=ಅನ್ಯರ ಹೆಂಡತಿ; ಸೆರೆ=ಬಂಧಿಸು; ಕೋಡಗ+ಪಿಂಡು; ಕೋಡಗ=ವಾನರ/ಕಪಿ; ಪಿಂಡು=ಗುಂಪು/ಸಮೂಹ; ನೆರೆ=ಜತೆಗೂಡು; ಮುತ್ತು=ಆಕ್ರಮಣ ಮಾಡು;

ಪರಸತಿಯ ಸೆರೆಗೈಯೆ ಕೋಡಗವಿಂಡು ನೆರೆದು ಮುತ್ತಿತು=ರಾಮನ ಹೆಂಡಿತಿಯಾದ ಸೀತಾದೇವಿಯನ್ನು ರಾವಣನು ಅಪಹರಿಸಿಕೊಂಡು ಹೋಗಲು, ವಾನರ ಸೇನೆಯು ಜತೆಗೂಡಿ ಲಂಕೆಯ ಮೇಲೆ ಆಕ್ರಮಣವನ್ನು ಮಾಡಿತು;

ಅರಿ+ಆಯ್ತು; ಅರಿ=ಹಗೆ/ಶತ್ರು;

ಅರಿಯಾಯ್ತು=ರಾಮನೊಡನೆ ರಾವಣನಿಗೆ ಹಗೆತನ ಉಂಟಾಯಿತು;

ಸುಭಟನು ಅಂತಕನ ನಗರಿಗೆ ಸರಿದನು=ಪರಾಕ್ರಮಿಯಾಗಿದ್ದ ರಾವಣನು ಯಮನ ಪಟ್ಟಣಕ್ಕೆ ಹೋದನು. ಮಹಾವೀರನಾಗಿದ್ದ ರಾವಣನು ಸೀತಾ ಅಪಹರಣದ ಕಾಮುಕತನದ ಕೆಟ್ಟಕೆಲಸದಿಂದ ಸಾವನ್ನಪ್ಪಿದನು;

ನೀರೆ=ಸುಂದರಿ;

ನೀರೆ ನೂಕದಿರು=ಸುಂದರಿ, ನನ್ನನ್ನು ನಿರಾಕರಿಸಬೇಡ;

ಮುಮ್ಮಾರು+ಪೋದುದು; ಮುಮ್ಮಾರು=ಮುನ್+ಮಾರು; ಮುನ್=ಈ ಮೊದಲೇ; ಮಾರು=ಮೋಹ/ಪರವಶ; ಮುಮ್ಮಾರು=ಮೊದಲೇ ಮೋಹಗೊಂಡಿರುವುದು;

ಎನ್ನ ಮನ ಮುಮ್ಮಾರುವೋದುದು=ನನ್ನ ಮನಸ್ಸು ನಿನ್ನನ್ನು ಕಂಡಕೂಡಲೇ ಮೋಹಗೊಂಡಿದೆ;

ಚಿತ್ತ=ಮನಸ್ಸು; ಸೂರೆ=ಕೊಳ್ಳೆ/ಲೂಟಿ; ಒಡಲು=ದೇಹ; ಹೂಣಿಸು=ನೀಡು/ಗುರಿಯಿಡು;

ನೀನು ಚಿತ್ತವ ಸೂರೆಗೊಂಡು ಈ ಮದನನ ಅಂಬಿಂಗೆ ಒಡಲ ಹೂಣಿಸುವೆ=ನೀನು ನನ್ನ ಮನಸ್ಸನ್ನು ಸೆಳೆದುಕೊಂಡು, ಈ ಮದನನ ಬಾಣಕ್ಕೆ ನನ್ನ ದೇಹವನ್ನು ಬಲಿಕೊಡುತ್ತಿರುವೆ;

ಜಾರದಿರು=ನನಗೆ ಒಲಿಯದೆ ನುಣಿಚಿಕೊಳ್ಳಬೇಡ;

ಎನ್ನ+ಎದೆಗೆ; ಎದೆ=ಮನಸ್ಸು; ತಾಪ=ಬಿಸಿ/ಸಂಕಟ; ಬೀರು=ಉಂಟುಮಾಡು;

ಎನ್ನೆದೆಗೆ ತಾಪವ ಬೀರದಿರು=ನನ್ನ ಮನಕ್ಕೆ ಸಂಕಟವನ್ನು ಉಂಟುಮಾಡಬೇಡ;

ಕಾರುಣ್ಯ=ಕರುಣೆ/ದಯೆ/ಮರುಕ;

ಎನಗೆ ಕಾರುಣ್ಯವನು ಕೈದೋರು=ನನಗೆ ನಿನ್ನ ಕರುಣೆಯನ್ನು ನೀಡು;

ಕಮಲ+ಅಕ್ಷಿ; ಅಕ್ಷ=ಕಣ್ಣು; ಕಮಲಾಕ್ಷಿ=ಕಮಲ ಹೂವಿನಂತಹ ಕಣ್ಣುಳ್ಳವಳು/ಸುಂದರಿ; ಮಾಣ್=ನಿಲ್ಲಿಸು;

ಕಮಲಾಕ್ಷಿ, ಅಕಟ ಮರಣವ ಮಾಣಿಸು=ಸುಂದರಿಯೇ, ಅಯ್ಯೋ… ನಿನ್ನನ್ನು ಪಡೆಯಲಾಗದೆ ಸಾಯುವಂತಾಗಿರುವ ನನ್ನನ್ನು ಕಾಪಾಡು/ನನ್ನ ಸಾವನ್ನು ತಪ್ಪಿಸು;

ವಿಕಾರ=ರೂಪ ಕೆಡುವುದು; ಮಾರಿ=ಸಾವಿನ ದೇವತೆ/ಕೇಡು/ಹಾನಿ; ಮನದ ವಿಕಾರ ಮಾರಿ=ಇದೊಂದು ರೂಪಕ. ಸಾವು ನೋವು ಕಾರಣವಾಗುವಂತಹ ರೀತಿಯಲ್ಲಿ ವ್ಯಕ್ತಿಯ ಮನದಲ್ಲಿ ಕೆಟ್ಟ ಕೆಟ್ಟ ಒಳಮಿಡತಗಳು ಮೂಡುವುದು; ಸರಸ=ವಿನೋದ/ಚೆಲ್ಲಾಟ;

ಮರುಳೆ, ಮನದ ವಿಕಾರ ಮಾರಿಯ ಸರಸವಾಡುವರು ಉಂಟೆ=ತಿಳಿಗೇಡಿಯೇ, ಮನದಲ್ಲಿ ಮೂಡುವಂತಹ ಕೆಟ್ಟ ಒಳಮಿಡಿತಗಳನ್ನು ಹತ್ತಿಕ್ಕಿಕೊಳ್ಳಲಾಗದೆ, ಅವನ್ನು ಆಚರಣೆಗೆ ತರಲು ಹೋಗಿ ಸಾವಿನ ಜತೆ ಚೆಲ್ಲಾಟವಾಡುವರು ಇದ್ದಾರೆಯೆ;

ಮೃತ್ಯುವ ನೆರೆವರೇ=ಸಾವನ್ನು ಕೂಡುವರೇ… ತಾವಾಗಿಯೇ ಸಾವನ್ನು ತಂದುಕೊಳ್ಳುತ್ತಾರೆಯೇ;

ದಳ್ಳುರಿ=ದಗದಗನೇ ಉರಿಯುತ್ತಿರುವ; ಪ್ರತಿಮೆ=ಲೋಹದಿಂದ ಮಾಡಿರುವ ವಿಗ್ರಹ;

ದಳ್ಳುರಿಯ ಪ್ರತಿಮೆಯನು ಅಪ್ಪುವರೆ=ದಗದಗನೇ ಉರಿಯುತ್ತಿರುವ ಬೆಂಕಿಯಿಂದ ಕಾದು ಕೆಂಡದಂತಾಗಿರುವ ಲೋಹದ ವಿಗ್ರಹವನ್ನು ಅಪ್ಪಿಕೊಳ್ಳುತ್ತಾರೆಯೆ; ಅಪ್ಪಿಕೊಂಡವರು ಸಾವಿಗೀಡಾಗುತ್ತಾರಲ್ಲವೇ;

ಸರಳು=ಬಾಣ/ಸಲಾಕೆ; ಅಂಗೈಸು=ಕೂಡು/ಮೇಲೆ ಬೀಳು;

ಬಯಸಿ ಸರಳಿಗೆ ಅಂಗೈಸುವರೆ=ತಾವಾಗಿಯೇ ಬಯಸಿ ಕಬ್ಬಿಣದ ಸಲಾಕೆಯ ಮೇಲೆ ಬೀಳುತ್ತಾರೆಯೇ;

ಪಾಪಿಯೆ, ನಿನ್ನ ಅರಮನೆಗೆ ಮರಳು=ಪಾಪಿಯೇ, ಹೆಚ್ಚು ಮಾತನಾಡದೆ ನಿನ್ನ ಅರಮನೆಗೆ ಹಿಂತಿರುಗು;

ಗರುವ=ಹೆಮ್ಮೆ; ಹರಹು=ತೂರು/ಎಸೆ/ಹರಡು;

ಎನ್ನಯ ಗರುವ ಗಂಡರು ಕಡಿದು ಹರಹುವರು=ನನ್ನ ಹೆಮ್ಮೆಯ ಗಂಡಂದಿರು ನಿನ್ನನ್ನು ಕಡಿದು ಕತ್ತರಿಸಿ, ನಿನ್ನ ದೇಹದ ತುಂಡುಗಳನ್ನು ಸುತ್ತಲೂ ಎಸೆಯುವರು; ಕಾಮದಿಂದ ಕುರುಡನಾಗಿರುವ ಮತ್ತು ವ್ಯಕ್ತಿತ್ವವನ್ನೇ ಕಳೆದುಕೊಂಡಿರುವ ಕೀಚಕನ ಮನಕ್ಕೆ ಸೈರಂದ್ರಿಯ ನುಡಿಗಳು ತಾಕುತ್ತಿಲ್ಲ;

ತೆಕ್ಕೆ=ಅಪ್ಪುಗೆ/ಆಲಿಂಗನ; ಕೋಲು=ಬಾಣ; ಕಾಮನ ಕೋಲು=ಕಾಮನ ಹೂಬಾಣ/ಮಯ್ ಮನದೊಳಗೆ ಉರಿಯುತ್ತಿರುವ ಕಾಮದ ಒಳಮಿಡಿತಗಳು;

ತೋಳ ತೆಕ್ಕೆಯ ತೊಡಿಸಿ ಕಾಮನ ಕೋಲ ತಪ್ಪಿಸು=ನಿನ್ನ ತೋಳುಗಳಿಂದ ನನ್ನನ್ನು ತಬ್ಬಿಕೊಂಡು, ನನ್ನೊಳಗೆ ಉರಿಯುತ್ತಿರುವ ಕಾಮದ ಬೇಗೆಯನ್ನು ತಗ್ಗಿಸಿ, ಕಾಮದ ಉಮ್ಮಳದಿಂದ ನನ್ನನ್ನು ಪಾರುಮಾಡು;

ಖಳ=ನೀಚ/ಕೇಡಿ; ಕಗ್ಗೊಲೆ=ಕ್ರೂರವಾದ ಕೊಲೆ; ಊಳಿಗ=ಕೆಲಸ/ಕರ‍್ಯ; ಖಳ=ಕೀಚಕನ ಪಾಲಿಗೆ ಮದನನೇ ಕೇಡಿಯಾಗಿದ್ದಾನೆ;

ಖಳನ ಕಗ್ಗೊಲೆ ಊಳಿಗವ ಕೇಳು=ಕೇಡಿಯಾಗಿರುವ ಮದನನು ಮಾಡುತ್ತಿರುವ ಕ್ರೂರವಾದ ಹಿಂಸೆಯಿಂದ ಉಂಟಾಗುತ್ತಿರುವ ನನ್ನ ಸಂಕಟವನ್ನು ಕೇಳು;

ಉಸುರು=ಹೇಳು; ಸರ‍್ಥರು=ತಿಳಿದವರು;

ಉಸುರದಿಹರೆ ಸಮರ್ಥರಾದವರು=ಕಾಮನಿಂದ ಉಂಟಾಗುವ ಸಂಕಟವನ್ನು ತಿಳಿದವರು ಹೇಳದಿರುತ್ತಾರೆಯೇ;

ಮಾತಾಳಿ=ಮಾತುಗಾರ/ಹರಟೆಮಲ್ಲ;

ಸೋಲಿಸಿದ ಗೆಲವಿಂದ ಬಲು ಮಾತಾಳಿ ಇವನು ಎನ್ನದಿರು=ನಿನ್ನ ಮಾತುಗಳೆಲ್ಲಕ್ಕೂ ಪ್ರತಿಯಾಗಿ ಮಾತನಾಡುತ್ತಿರುವ ನನ್ನನ್ನು ಹರಟೆಮಲ್ಲ ಎಂದು ತಿಳಿಯಬೇಡ;

ಹರಣ=ಜೀವ/ಪ್ರಾಣ; ಸರಸ=ವಿನೋದ/ಚೆಲ್ಲಾಟ;

ಹರಣದ ಮೇಲೆ ಸರಸವೆ=ಪ್ರಾಣದ ಜತೆ ಚಲ್ಲಾಟವಾಡಲು ಆಗುತ್ತದೆಯೇ; ಕಾಯಬೇಹುದು=ಕಾಮದ ಬೇಗೆಗೆ ಸಿಲುಕಿ ಸಾಯುತ್ತಿರುವ ನನ್ನನ್ನು ನೀನು ಉಳಿಸಿಕೊಳ್ಳಬೇಕು;

ಕಾಂತೆ ಕೇಳು=ನಲ್ಲೆ, ಮತ್ತೊಂದು ಸಂಗತಿಯನ್ನು ಹೇಳುತ್ತೇನೆ ಕೇಳು;

ತೊತ್ತು=ದಾಸಿ/ಸೇವಕಿ; ತೊತ್ತಿರು=ದಾಸಿಯರು;

ಉಳಿದ ತನ್ನ ಅರಸಿಯರ ನಿನ್ನಯ ಬಳಿಯ ತೊತ್ತಿರ ಮಾಡುವೆನು=ಉಳಿದ ನನ್ನೆಲ್ಲಾ ಹೆಂಡತಿಯರನ್ನು ನಿನ್ನ ದಾಸಿಯರನ್ನಾಗಿ ಮಾಡುತ್ತೇನೆ;

ಕೇಳು ಎಲಗೆ, ತನ್ನ ಒಡಲಿಂಗೆ ಒಡೆತನ ನಿನ್ನದಾಗಿರಲಿ=ಕೇಳು ಸುಂದರಿ, ನನ್ನ ದೇಹಕ್ಕೆ ನೀನೆ ಒಡತಿಯಾಗಿರು;

ಲಲನೆ=ಹೆಂಗಸು; ಲೋಚನ=ಕಣ್ಣು;

ಲಲನೆ, ನಿನ್ನೊಳು ನಟ್ಟ ಲೋಚನ ತೊಲಗಲಾರದು=ಸುಂದರಿ, ನಿನ್ನ ಮೇಲಿಟ್ಟ ಈ ದಿಟ್ಟಿಯನ್ನು ಅಗಲಿಸಲಾರೆನು/ನಿನ್ನ ಮೇಲಣ ಬಯಕೆಯು ತಗ್ಗುತ್ತಿಲ್ಲ;

ಕಾಯ=ದೇಹ;

ತನ್ನ ಕಾಯವ ಬಳಲಿಸದೆ ಕೃಪೆ ಮಾಡಬೇಹುದು ಎನುತ್ತ ಕೈಮುಗಿದ=ಕಾಮದ ಪರಿತಾಪದಿಂದ ಕೂಡಿರುವ ಈ ನನ್ನ ದೇಹವನ್ನು ಹೆಚ್ಚು ಆಯಾಸಪಡಿಸದೆ ನನ್ನ ಮೇಲೆ ಕರುಣೆಯನ್ನು ತೋರಬೇಕು ಎಂದು ಕಯ್ ಮುಗಿದು ಬೇಡಿಕೊಂಡ; ತುಸುವಾದರೂ ಬದಲಾಗದ ಕೀಚಕನ ಕಾಮುಕತನದ ನಡೆನುಡಿಯನ್ನು ಕಂಡು ಆತಂಕಗೊಂಡ ಸೈರಂದ್ರಿಯು ಕೀಚಕನಿಗೆ ಮತ್ತೊಮ್ಮೆ ಎಚ್ಚರಿಕೆಯನ್ನು ನೀಡಿ ಅರಮನೆಯ ಬಾಗಿಲನಿಂದ ದೂರಸರಿಯುತ್ತಾಳೆ;

ಅಧಮ=ನೀಚ/ಕೇಡಿ; ಮಿಗೆ=ಹೆಚ್ಚಾಗಿ/ಬಹಳವಾಗಿ;

ಈ ಅಧಮನ ಅನ್ಯಾಯವು ಧರ್ಮ ಮಾರ್ಗ ನ್ಯಾಯವನು ಮಿಗೆ ಗೆಲುವುದು=ಈ ನೀಚನು ತನ್ನ ಕೆಟ್ಟ ನಡೆನುಡಿಗಳನ್ನೇ ನ್ಯಾಯವಾದವು ಎಂದು ವಾದಿಸುತ್ತಿದ್ದಾನೆ;

ಸ್ಥಾಯಿ=ನೆಲೆಸಿರುವ; ತಿಮಿರ=ಕತ್ತಲೆ; ಭಾಸ್ಕರ=ಸರ‍್ಯ; ಆವುದು=ಯಾವುದು; ಅಂತರ=ಹೋಲಿಕೆ;

ಸ್ಥಾಯಿಗಳ ತಿಮಿರಕ್ಕೆ ಭಾಸ್ಕರಗೆ ಆವುದು ಅಂತರವು=ನೆಲೆಸಿರುವ ಕತ್ತಲೆಗೂ ಬೆಳಕಿನ ಕಿರಣಗಳನ್ನು ಬೀರುವ ಸರ‍್ಯನಿಗೆ ಎಲ್ಲಿಯ ಹೋಲಿಕೆ/ಕೀಚಕನ ಕಾಮದ ನಡೆನುಡಿಯು ಕತ್ತಲೆಯಂತೆ ವ್ಯಾಪಿಸಿವೆ. ನಾನು ಹೇಳುತ್ತಿರುವ ಯಾವುದೇ ಮಾತುಗಳು ಅವನ ಮನದ ಕತ್ತಲೆಯನ್ನು ಹೋಗಲಾಡಿಸುವ ಬೆಳಕಿನ ಕಿರಣಗಳಾಗಲಿಲ್ಲ;

ಕಾಯ್=ಕಾಪಾಡು/ಉಳಿಸು;

ಎನ್ನವರು ಕಾಯರು=ನನ್ನ ಗಂಡಂದಿರು ನಿನ್ನನ್ನು ಉಳಿಸುವುದಿಲ್ಲ;

ಕೈಗುಣ=ಹೆಚ್ಚಿನ ಕಸುವು/ಕುಶಲತೆ; ಆಯತ=ಹೆಚ್ಚಳ/ಅತಿಶಯ;

ಅವರ ಕೈಗುಣದ ಆಯತವ ಬಲ್ಲವರೆ ಬಲ್ಲರು=ನನ್ನ ಗಂಡಂದಿರು ಎಂತಹ ಪರಾಕ್ರಮಿಗಳು ಎಂಬುದು ಅವರ ಸಾಹಸ ಕರ‍್ಯಗಳನ್ನು ಕಂಡವರಿಗೆ ಚೆನ್ನಾಗಿ ಗೊತ್ತು;

ಫಡ=ತಿರಸ್ಕಾರ ಹಾಗೂ ಕೋಪದಿಂದ ನುಡಿಯುವಾಗ ಬಳಸುವ ಪದ/ಚೀ..ತೂ… ಎಂಬ ದನಿಯನ್ನು ಹೊಂದಿರುವ ಪದ;

ನಾಯಿ ಸಿಂಹಕ್ಕೆ ಇದಿರೆ, ಫಡ ಹೋಗು ಎಂದು ತಿರುಗಿದಳು=ನಾಯಿ ಸಿಂಹವನ್ನು ಎದುರಿಸಲು ಆಗುತ್ತದೆಯೇ… ಚೀ… ತೂ… ಹೋಗು ಎಂದು ಕೀಚಕನನ್ನು ನಿಂದಿಸುತ್ತ ಸೈರಂದ್ರಿಯು ಅರಮನೆಯ ಬಾಗಿಲಿನಿಂದ ಹೊರನಡೆದಳು.

(ಚಿತ್ರ ಸೆಲೆ: quoracdn.net)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: