ಮೈ ಜುಮ್ ಎನ್ನಿಸುವ ಜೋನಾ ಡೆ ಸೈಲೆನ್ಸಿಯೋ

– ಜಯತೀರ‍್ತ ನಾಡಗವ್ಡ.

ಪ್ರತಿದಿನವೂ ಅರಿಮೆ ವಲಯದಲ್ಲಿ ಒಂದಲ್ಲಾ ಒಂದು ಹೊಸ ವಿಶಯದ ಬಗ್ಗೆ ಏನಾದರೂ ಮಾಹಿತಿ ಹೊರಬರುತ್ತಲೇ ಇರುತ್ತದೆ. ಚಂದ್ರ, ಮಂಗಳ ಗ್ರಹಗಳತ್ತ ಮಂದಿ ಹೋಗಬಹುದಾದಶ್ಟು ಅರಿಮೆ ವಲಯ ಮುನ್ನಡೆ ಸಾದಿಸಿದೆ. ಅರಿಮೆ ಇಶ್ಟೊಂದು ಮುಂದಕ್ಕೆ ಸಾಗಿದ್ದರೂ, ಕೆಲವೊಂದು ಬೆರಗಿನ ಸಂಗತಿಗಳು ನಮ್ಮ ಸುತ್ತ ನಡೆಯುತ್ತಲೇ ಇವೆ. ಈ ಬೆರಗಿನ ಸಂಗತಿಗಳ ಗುಟ್ಟು ರಟ್ಟಾಗಿಸಲು ಅರಕೆಗಾರರು, ಅರಿಗರು ಸಾಕಶ್ಟು ಪ್ರಯತ್ನಿಸಿದರೂ ಇವುಗಳು ಇನ್ನೂ ಗುಟ್ಟಾಗೇ ಉಳಿದಿವೆ. ಅರಿಮೆಗೆ ಇಂತ ಸಂಗತಿಗಳು ಸವಾಲನ್ನು ಒಡ್ಡುತ್ತಲೇ ಇವೆ. ಗುಟ್ಟು ರಟ್ಟಾಗದ ಬೆರಗಿನ ಸಂಗತಿಗಳೆಂದೊಡನೆ ಹಲವರ ನೆನಪಿಗೆ ಬರುವುದು ಬರ‍್ಮುಡಾ ಟ್ರ್ಯಾಂಗಲ್(Bermuda Triangle). ಈ ನಡುಗಡ್ಡೆಯ ಗುಟ್ಟಿನ ಬಗ್ಗೆ ಇನ್ನೂ ಚರ‍್ಚೆಗಳು ನಡೆಯುತ್ತಲೇ ಇವೆ ಬರ‍್ಮುಡಾ ಟ್ರ್ಯಾಂಗಲ್ ನತ್ತ ತೆರಳಿದ ಮಂದಿ, ವಸ್ತು, ಉಸಿರಿಗಳು ಯಾವುದು ಮರಳಿ ಬಂದಿಲ್ಲ. ದಾರಿ ತಪ್ಪಿ ಬರ‍್ಮುಡಾದತ್ತ ಸಾಗಿ ಬಂದ ಹಡಗು, ಬಾನೋಡಗಳು ಕಣ್ಮರೆಯಾಗಿವೆ. ಇದೇ ತೆರನಾದ ಇನ್ನೊಂದು ಜಾಗವೊಂದಿದೆ. ಅದೇ “ಜೋನಾ ಡೆ ಸೈಲೆನ್ಸಿಯೋ“.

ಏನಿದು ಜೋನಾ ಡೆ ಸೈಲೆನ್ಸಿಯೋ?

ಅಮೇರಿಕಾದ ಟೆಕ್ಸಾಸ್‌ ನಾಡಿನ ಎಲ್‌ಪಾಸೋ(El Paso) ಊರಿನಿಂದ ತೆಂಕಣ ದಿಕ್ಕಿನಲ್ಲಿ 400 ಮೈಲಿ ದೂರ, ಅಂದರೆ ಮೆಕ್ಸಿಕೋ ನಾಡಿನಲ್ಲಿ ಸೆಬಾಯೋಸ್(Ceballos) ಊರಿನಾಚೆ 48 ಕಿ.ಮೀ.ದೂರದಲ್ಲಿ ಪಾಳು ಬಿದ್ದಿರುವ ಜನರಿಲ್ಲದ ಮರಳುಗಾಡಿನಂತ ಜಾಗವೊಂದು ಕಂಡು ಬರುತ್ತದೆ. ಈ ಜಾಗವೇ ಜೋನಾ ಡೆ ಸೈಲೆನ್ಸಿಯೋ(Zona Del Silencio). ಈ ಜಾಗದಲ್ಲಿ ಅಲೆಯುಲಿಗಳು, ಬಾನುಲಿಗಳು ಕೆಲಸ ಮಾಡುವುದಿಲ್ಲ. ದಿಕ್ಕನ್ನು ತೋರಿಸುವ ಕೈವಾರ(Compass) ತೆಂಕಣ-ಬಡಗಣ ತೋರಿಸದೇ ಗಿರ ಗಿರ ಸುತ್ತುತ್ತಲೇ ಇರುತ್ತದಂತೆ. ವಿಚಿತ್ರ ಬಗೆಯ ಉಸಿರಿಗಳು(Animals), ಅಚ್ಚರಿಯಿಂದ ಹುಬ್ಬೇರಿಸುವ ಗಟನೆಗಳು ಇಲ್ಲಿ ನಡೆದಿವೆ. ಕಲ್ಲು, ಮಣ್ಣುಗಳಿಂದ ಕೂಡಿದ ಈ ಜಾಗದ ಸುತ್ತ ಮುತ್ತಲಿನಲ್ಲಿ ಮಂದಿ ಕಾಣುವುದೇ ಇಲ್ಲ.

ಜೋನಾ ಡೆ ಸೈಲೆನ್ಸಿಯೋ ಇರುವುದರ ಬಗ್ಗೆ ಮೊದಲು ಗೊತ್ತಾಗಿದ್ದು 1930ರಲ್ಲಿ. ಮೆಕಿಕ್ಸೋದ ಪೈಲಟ್ ಪ್ರಾನಿಸ್ಕೋ ಸರಾಬಿಯಾ ಹೇಳಿದಂತೆ, ಈ ಜಾಗದ ಮೂಲಕ ಹಾದು ಹೋಗುವಾಗ ಈತನ ಬಾನೋಡದ ಬಾನುಲಿ ಇದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸಿತ್ತಂತೆ. ಇದರ ಹಿಂದಿನ ಕಾರಣ ತಿಳಿಯಲು ಎಶ್ಟೇ ಪ್ರಯತ್ನ ಪಟ್ಟರೂ ಕಾರಣ ತಿಳಿಯಲೇ ಇಲ್ಲವಂತೆ.

ಇನ್ನೂ 11 ಜುಲೈ, 1970 ರಲ್ಲಿ ಇದಕ್ಕಿಂತ ಅಚ್ಚರಿ ಸಂಗತಿಯೊಂದು ನಡೆಯಿತು. ಅಮೇರಿಕೆಯ ಏರ್‌ಪೋರ‍್ಸ್ ಉಟಾಹ್ ನಾಡಿನಿಂದ ಅತೇನಾ ಹೆಸರಿನ ಬಿಟ್ಟೇರುವೊಂದನ್ನು(Missile) ಹಾರಿಬಿಟ್ಟಿತ್ತು. ಇದು 700 ಮೈಲಿ ದೂರದಲ್ಲಿರುವ ಅಮೇರಿಕಾದ ನ್ಯೂ ಮೆಕ್ಸಿಕೋನ ಬಿಳಿ ಮರಳುಗಾಡಿನಲ್ಲಿ ಬೀಳುವಂತೆ ಅಣಿಗೊಳಿಸಲಾಗಿತ್ತು. ಆದರೆ ಹಾಗಾಗಲಿಲ್ಲ, ಬದಲಿಗೆ ಈ ಬಿಟ್ಟೇರು ನೂರಾರು ಮೈಲಿ ಹೆಚ್ಚಿನ ದೂರಕ್ಕೆ ಹಾರಿ ಜೋನಾ ಡೆ ಸೈಲೆನ್ಸಿಯೋದಲ್ಲಿ ಬಂದು ಬಿದ್ದಿತ್ತು. ಇದು ಅಮೇರಿಕಾದ ಏರ್‌ಪೋರ‍್ಸ್ ಅದಿಕಾರಿಗಳಿಗೆ ಅಚ್ಚರಿ ಮೂಡಿಸಿದ್ದಲ್ಲದೇ, ಅಲ್ಲಿನ ಅರಕೆಗಾರರನ್ನು(Researchers) ಚಿಂತೆಗೀಡು ಮಾಡಿತ್ತು. ನಾಸಾದ ಅರಿಗರಿಗೂ(Scientists) ಇದು ಹೇಗಾಯಿತೆಂದು ಬಿಡಿಸಲಾಗಲಿಲ್ಲ. ಕೆಲವು ಅರಿಗರ ಪ್ರಕಾರ ಜೋನಾ ಡೆ ಸೈಲೆನ್ಸಿಯೋ ಮರಳು ಗಾಡೇ ಈ ಬಿಟ್ಟೇರನ್ನು ತನ್ನತ್ತ ಸೆಳೆದುಕೊಂಡಿರುವ ಸಾದ್ಯತೆ ಇದೆ. ಇನ್ನೂ ಕೆಲವರು ಮಂಡಿಸುವಂತೆ ಬೂಮಿಯ ಸೆಳೆಬಲ ಹೆಚ್ಚಿನ ಕಡೆ ಒಂದೇ ಸಮವಾಗಿದ್ದರೂ, ಜೋನಾ ಡೆ ಸೈಲೆನ್ಸಿಯೋದಲ್ಲಿ ಮಾತ್ರ ಹೆಚ್ಚಿನ ಸೆಳೆಬಲ(Gravitational Force) ಇದ್ದು, ಇದು ವಸ್ತುಗಳನ್ನು ತನ್ನತ್ತ ಎಳೆಯುತ್ತದಂತೆ.

ಈ ಜಾಗದ ಬಗ್ಗೆ ಹೆಚ್ಚು ತಿಳಿದಿರುವ ಕೆಲವರು ಹೇಳುವಂತೆ ಇಲ್ಲಿ ಸೆಳೆಬಲ ಹೆಚ್ಚಾಗಿರುವುದರಿಂದ ಇದು ಆಗಸದಿಂದ ಬಾನ್ಗಲ್ಲು(Meteorite) ಮತ್ತು ಆಗಸದ ಕಸಕಡ್ಡಿ ಸೆಳೆಯುವ ಕಸುವನ್ನು ಪಡೆದಿದೆ. ಹೆಚ್ಚಿನ ಬಾನ್ಗಲ್ಲುಗಳು ಒಡೆದುಕೊಂಡು ಈ ಮರಳುಗಾಡನ್ನು ಉಂಟುಮಾಡಿರಬೇಕೆಂಬ ವಾದವನ್ನು ಹಲವರು ಮುಂದಿಟ್ಟಿದ್ದಾರೆ. 1054ರ ಹೊತ್ತಲ್ಲಿ ನಡೆದ ಸೂಪರ್ ನೋವಾ ಸಿಡಿತ ಬರಿಗಣ್ಣಿನಿಂದ ನೋಡಬಹುದಾಗಿತ್ತು. ಅಂತ ಸೂಪರ್ ನೋವಾ ಸಿಡಿತಗಳಿಂದಾದ ಬಾನ್ಗಲ್ಲುಗಳನ್ನು ಈ ತಾಣ ಸೆಳೆದಿರಬಹುದೇ ಎನ್ನುವ ಕೇಳ್ವಿಗಳು ಮೂಡಿವೆ. 3000 ವರುಶಗಳಶ್ಟು ಹಳಮೆ ಹೊಂದಿರುವ ಅನಾಸಾಜಿ ಪೊಳಲಿಕೆಯ(Anasazi Civilization) ಮಂದಿಗೆ ಇದರ ಬಗ್ಗೆ ತಿಳಿದಿರಬಹುದೆಂದು, ಇವರು ಬಾನು, ಬಾನಿನ ಚುಕ್ಕೆಗಳ ಬಗ್ಗೆ ವಿಶೇಶವಾದ ಗೌರವ ಹೊಂದಿದ್ದರೆಂದು ಕೆಲ ಹಿನ್ನಡವಳಿಯರಿಗರ(Historian) ವಿವರಣೆ. ತೆಂಕಣ ಮೆಕ್ಸಿಕೋ ಮತ್ತು ಅದರ ಸುತ್ತಲಿನ ಜಾಗಗಳಲ್ಲಿ ನೆಲೆಸಿದ್ದ ಮಾಯಾ ಪೊಳಲಿಕೆಯ(Maya Civilization) ಮಂದಿಗೂ ಇದರ ಬಗ್ಗೆ ತಿಳಿದಿತ್ತು, ಅನಾಸಾಜಿ-ಮಾಯಾ ಪೊಳಲಿಕೆಯ ಮಂದಿ ಇದರ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಈ ಎರಡು ಪೊಳಲಿಕೆಯ ಮಂದಿಗೂ ಬಾನಿಗೂ ನೇರ ಸಂಬಂದವಿತ್ತೆಂದು ಹಿನ್ನಡವಳಿಯರಿಗರು ವಿವರಿಸುತ್ತಾರೆ.

ಈ ಜಾಗದಲ್ಲಿ ಯಾವುದೇ ಹಾರುವ ತಟ್ಟೆಗಳು(UFO) ಕಂಡು ಬಂದಿಲ್ಲವೆಂದು  ಕೆಲವರು ವಾದಿಸಿದರೆ, ಇನ್ನೂ ಕೆಲ ಅರಿಗರು ಹಾರುವ ತಟ್ಟೆಗಳು ಇಲ್ಲಿ ಬಂದಂತ ಕುರುಹುಗಳಿವೆ ಎಂದಿದ್ದಾರೆ. ಬರ‍್ಮುಡಾ ಟ್ರ್ಯಾಂಗಲ್ ನ ಒಂದು ಬದಿಯಿಂದ ನೇರವಾಗಿ ಗೆರೆಯೊಂದನ್ನು ಎಳೆದರೆ ಅದು “ಜೋನಾ ಡೆ ಸೈಲೆನ್ಸಿಯೋ” ಮೂಲಕ ಹಾದು ಹೋಗುತ್ತದೆ. ಒಂದೇ ನೇರ ಗೆರೆಯ ಮೇಲೆ ನೆಲೆಗೊಂಡಿರುವ ಕಾರಣ “ಜೋನಾ ಡೆ ಸೈಲೆನ್ಸಿಯೋ” ತಾಣದಲ್ಲೂ ಕೂಡ ಹೆಚ್ಚಿನ ಸೆಳೆಬಲವಿರಬಹುದು ಎಂದು ಕೂಡ ಚರ‍್ಚೆಗಳು ನಡೆಯುತ್ತಿವೆ. ತನ್ನೊಡಲಲ್ಲಿ ಯಾವ ಗುಟ್ಟನ್ನು ಅಡಗಿಸಿಕೊಂಡಿದೆಯೋ ಈ ಜೋನಾ ಡೆ ಸೈಲೆನ್ಸಿಯೋ? ಇದರ ಬಗ್ಗೆ ಇನ್ನೂ ಹೆಚ್ಚಿನ ಅರಕೆಗಳು ನಡೆಯಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia.orgಹಿಸ್ಟರಿ ಇಂಡಿಯಾ ಚಾನೆಲ್)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *