ಹೊನಲುವಿಗೆ 11 ವರುಶ ತುಂಬಿದ ನಲಿವು
– ಹೊನಲು ತಂಡ.
ಕಳೆದ ಹಲವು ವರುಶಗಳಿಂದ ಎಡೆಬಿಡದೆ ಬರಹಗಳ ತೊರೆಯನ್ನು ಹರಿಸುತ್ತ ಓದುಗರಿಗೆ ಹಲವು ಹೊಸ ವಿಶಯಗಳ ಸುತ್ತ ಮಾಹಿತಿ-ಮನರಂಜನೆ ನೀಡುತ್ತಲೇ, ಹೊಸ ಬರಹಗಾರರಿಗೆ ವೇದಿಕೆಯಾಗಿರುವ ಹೊನಲು ಆನ್‌ಲೈನ್ ಮ್ಯಾಗಜೀನ್‌ಗೆ ಇಂದು ಹುಟ್ಟುಹಬ್ಬದ ನಲಿವು. ಕಳೆದ ಹಲವು ವರುಶಗಳಿಂದ ಎಡೆಬಿಡದೇ ಬಗೆಬಗೆಯ ಬರಹಗಳನ್ನು ಹೊತ್ತು ತರುತ್ತಿರುವ ಹೊನಲು ಇಂದು 11 ವರುಶಗಳನ್ನು ದಾಟಿ 12ಕ್ಕೆ ಕಾಲಿಡುತ್ತಿದೆ. ಇದಕ್ಕೆ ಬೆನ್ನಾಗಿ ನಿಂತ ನಮ್ಮೆಲ್ಲ ಓದುಗಗರಿಗೂ, ಬರಹಗಾರರಿಗೂ ಮತ್ತೆಲ್ಲ ಬೆಂಬಲಿಗರಿಗೂ ಮನದಾಳದ ನನ್ನಿ.
ಹನ್ನೊಂದು ವರುಶಗಳು – ಒಂದು ಹಿನ್ನೋಟ
ಹನ್ನೊಂದು ವರುಶಗಳ ಹಿಂದೆ (2013) ಇದೇ ದಿನ ಹೊನಲು ಶುರುವಾಗಿದ್ದು. ಬೆರಳೆಣಿಕೆಯಶ್ಟು ಬರಹಗಾರರೊಂದಿಗೆ ಶುರುವಾದ ಹೊನಲು ಬರಹಗಾರರ ಬಳಗಕ್ಕೆ ಇಂದು ನೂರಾರು ಗೆಳೆಯರು. ಇಲ್ಲಿಯವರೆಗೆ ಸುಮಾರು 350ಕ್ಕೂ ಹೆಚ್ಚು ಮಂದಿ ಹೊನಲಿಗೆ ಬರಹಗಳನ್ನು ಮಾಡಿದ್ದಾರೆ. ಹೊನಲಿನ ಮೂಲಕ ಇಲ್ಲಿಯವರೆಗೆ 4,500ಕ್ಕೂ ಹೆಚ್ಚು ಬರಹಗಳನ್ನು ದೇಶ-ವಿದೇಶಗಳಲ್ಲಿರುವ ಕೋಟ್ಯಂತರ ಕನ್ನಡಿಗರ ಮುಂದಿಟ್ಟಿದ್ದಾರೆ.
ಇವರಲ್ಲಿ 8 ಬರಹಗಾರರು 100 ಕ್ಕಿಂತ ಹೆಚ್ಚು ಬರಹಗಳನ್ನು ಮಾಡಿದ್ದರೆ, ಸುಮಾರು 20 ಮಂದಿ 50ಕ್ಕಿಂತ ಹೆಚ್ಚು ಬರಹಗಳನ್ನು ಮಾಡಿದ್ದಾರೆ. ಇನ್ನು 25ಕ್ಕಿಂತ ಹೆಚ್ಚು ಬರಹಗಳನ್ನು ಮಾಡಿದ ಬರಹಗಾರರ ಎಣಿಕೆ 20ಕ್ಕೂ ಹೆಚ್ಚಿದೆ. ಕಳೆದ ಒಂದು ವರುಶದಲ್ಲೇ 7 ಮಂದಿ ಬರಹಗಾರರು 25ಕ್ಕಿಂತ ಹೆಚ್ಚು ಬರಹಗಳನ್ನು ಮಾಡಿದ್ದಾರೆ.
ಹೊನಲಿನಲ್ಲಿ ಏನೇನಿದೆ?
ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಹೊನಲಿನಲ್ಲಿ ಮೂಡಿಬರದ ವಿಶಯಗಳೇ ಇಲ್ಲ ಎನ್ನಬಹುದು. ಹಳಗನ್ನಡ ಕಾವ್ಯಗಳ ಓದು, ಕುವೆಂಪು ಅವರ ಕವಿತೆಗಳ ಓದು, ವಚನಗಳು, ಕತೆ-ಕವಿತೆಗಳಿಂದ ಹಿಡಿದು, ಆಟೋಟ, ಸಿನೆಮಾ, ಅಡುಗೆ ಬರಹಗಳು ಹೀಗೆ ನೂರಾರು ವಿಶಯಗಳ ಕುರಿತ ಸಾವಿರಾರು ಬರಹಗಳು ಹೊನಲಿನಲ್ಲಿವೆ. ಈ ವಿಶ್ವದ ನಿಬ್ಬೆರಗಾಗಿಸುವ ಸೋಜಿಗದ ಸಂಗತಿಗಳ ಸುಮಾರು 300ಕ್ಕೂ ಹೆಚ್ಚು, ಮತ್ತು ಸುಮಾರು 700ಕ್ಕೂ ಅರಿಮೆಯವಿಜ್ನಾನದ ಬರಹಗಳು ಹೊನಲಿನಲ್ಲಿವೆ. 500ಕ್ಕೂ ಹೆಚ್ಚು ಅಡುಗೆ ಬರಹಗಳು ಇಲ್ಲಿವೆ. ಇವುಗಳಲ್ಲಿ ಕರ್‍ನಾಟಕದ ಹಲವು ಊರುಗಳ ಅಡುಗೆಗಳಲ್ಲದೇ ಹಲವು ಬೇರೆ ದೇಶಗಳ ಅಡುಗೆ ಬರಹಗಳೂ ಸೇರಿವೆ.
ಹಿಗ್ಗುತ್ತಿದೆ ಹೊನಲಿನ ಹರವು
ಹೊನಲಿಗೆ ಬರಹಗಾರರು ಜೀವಾಳ. ಹೊತ್ತು ಕೊಟ್ಟು ಒಳ್ಳೊಳ್ಳೆಯ ಬರಹ ಮಾಡುವ ಮೂಲಕ ಬರಹಗಾರರು ಹೊನಲಿಗೆ ಜೀವ ತುಂಬಿಸಿದ್ದಾರೆ. ಹೆಚ್ಚೆಚ್ಚು ಬರಹಗಾರರು ನಮ್ಮ ಜೊತೆಗೆ ಕೈಜೋಡಿಸುತ್ತಿರುವುದು ನಮಗೆ ಕುಶಿಯ ವಿಚಾರ
ಸುಮಾರು 50ಕ್ಕೂ ಹೆಚ್ಚು ದೇಶಗಳಲ್ಲಿ ನಮ್ಮ ಓದುಗರು ಇದ್ದರೆ, ಕರ್‍ನಾಟಕದ ಮೂಲೆಮೂಲೆಗಳಿಂದ ಅಂದರೆ ಎಲ್ಲಾ ಜಿಲ್ಲೆಗಳಿಂದ, ಬೇರೆ ಬೇರೆ ರಾಜ್ಯಗಳಿಂದಶ್ಟೇ ಅಲ್ಲದೇ ಹೊರನಾಡುಗಳಿಂದ ಬರಹಗಾರರು ತಮ್ಮ ಬರಹಗಳ ಕೊಡುಗೆ ನೀಡಿದ್ದಾರೆ. ನಮ್ಮ ಪೇಸ್‌ಬುಕ್ ಮತ್ತು ಟ್ವಿಟರ್ ಪುಟಗಳಿಗೆ ಜಗತ್ತಿನಾದ್ಯಂತ ಇರುವ ಕನ್ನಡಿಗರು ಮೆಚ್ಚುಗೆ ಸೂಚಿಸುತ್ತ ಬಂದಿದ್ದಾರೆ.
ಪ್ರಪಂಚದ ಮೂಲೆಮೂಲೆಯಿಂದ ಬೆಂಬಲ ತೋರಿಸುತ್ತಿರುವ ನಮ್ಮೆಲ್ಲ ಓದುಗರ ಬಳಗಕ್ಕೂ, ಹೊತ್ತು ಕೊಟ್ಟು ಹೊನಲಿಗಾಗಿ ಬರಹ ಮಾಡುವ ಮೂಲಕ ನಮ್ಮ ಬೆನ್ನೆಲುಬಾಗಿ ನಿಂತ ಬರಹಗಾರರಿಗೂ, ಪ್ರತಿಯೊಂದು ಬರಹವನ್ನು ಓದಿ, ಮೆಚ್ಚಿ, ಹೆಚ್ಚಿನ ಮಂದಿಯೊಂದಿಗೆ ಹಂಚಿಕೊಳ್ಳುತ್ತಿರುವ ತಮಗೆಲ್ಲ ಹೊನಲು ಬಳಗದಿಂದ ಮತ್ತೊಮ್ಮೆ ವಂದಿಸುವೆವು. ಎಂದಿನಂತೆ ಹೊನಲಿಗೆ ನಿಮ್ಮ ಬೆಂಬಲ ಮುಂದುವರೆಯುತ್ತಿರಲಿ.
ಪೇಸ್‌ಬುಕ್ ಪುಟ: https://www.facebook.com/honalu.mimbagilu
ಟ್ವಿಟರ್ ಗೂಡು: https://twitter.com/honalunet
ಇನ್‌ಸ್ಟಾಗ್ರಾಂ: https://www.instagram.com/honalunet
ವಾರ್ಷಿಕೋತ್ಸವದ ಶುಭಾಶಯಗಳು. ನೂರ್ಕಾಲ ಕನ್ನಡದ ಕಂಪನ್ನು ಪಸರಿಸುವ ಕಾರ್ಯ ನಿರಂತರವಾಗಿ ಸಾಗಲಿ ಎಂದು ಹಾರೈಸುವೆ. 💐💐💐