“ನೀವು ಗಂಡಸರು ತುಂಬಾ ದೈರ‍್ಯವಂತರು ಬಿಡಪ್ಪ…”
– ಸುರೇಶ್ ಗೌಡ ಎಂ.ಬಿ.
ಸುರೇಶ ತನ್ನ ಊರಿಗೆ ಬಂದು ಎರಡು ದಿನಗಳಾಗಿತ್ತು. ಆತ ಊರು ಬಿಟ್ಟು ಬೆಂಗಳೂರು ಸೇರಿ ತುಂಬಾ ವರ‍್ಶಗಳೇ ಆಗಿತ್ತು. ವರ‍್ಶಕ್ಕೆ ನಾಲ್ಕೈದು ಬಾರಿ ಹಬ್ಬಕ್ಕೆ, ಹುಣ್ಣಿಮೆಗೆ ಊರಿಗೆ ಬಂದು ಹೋಗುತ್ತಿದ್ದ. ಅಂದು ಊರಿನಲ್ಲಿ ಮನೆದೇವರ ಪೂಜೆ ಮಾಡುವ ಸಲುವಾಗಿ ಮನೆ ಮಂದಿಯಲ್ಲ ಸೇರಿದ್ರು. ತುಂಬು ಸಂಸಾರ.. ಗಿಜಿ ಬಿಜಿ.. ತಲೆ ಹರಟೆ, ಮಾತುಕತೆ ಸಾಂಗವಾಗಿ ಸಾಗ್ತಾ ಇತ್ತು. ಆಗಲೇ ರಾತ್ರಿ ಒಂಬತ್ತು ಗಂಟೆ. ಎಲ್ಲರೂ ಊಟ ಮಾಡಿ ಮಲಗ್ತಾ ಇದ್ರು. ಅಶ್ಟರಲ್ಲಿ ಸುರೇಶನಿಗೆ ಪೋನ್ ಬಂತು. ಮೊಬೈಲ್ ಕೈಗೆತ್ತುಕೊಂಡು ಹಲೋ ಅಂದ. ಆ ಕಡೆಯಿಂದ ಮದುರವಾದ ದ್ವನಿ ಹಾಯ್ ಅಂತು. ಸ್ವರ‍್ಗಕ್ಕೆ ನೇರವಾಗಿ ಹೋಗೇ ಬಿಟ್ಟ. ತನ್ನ ಲವರ್ ಪೋನ್. ಮನೆಯಲ್ಲಿ ಮಾತಾನಾಡಲು ಆಗದು ಅಂತ ಗೊತ್ತಾಗ್ತಾ ಇದ್ದ ಹಾಗೆ, ಮೊಬೈಲ್ ತಗೊಂಡು ಮನೆ ಹಿಂದಿನ ಮಾವಿನ ತೋಟಕ್ಕೆ ಮಾತಾಡ್ತಾ ಹೋದ.
ಅದು ಇದು ಮಾತಾಡ್ತಾ ಮಾತಾಡ್ತಾ ಹೊತ್ತು ಹೋದದ್ದೆ ಗೊತ್ತಾಗ್ಲಿಲ್ಲ. ಹಾಗೆ ತುಂಬಾ ದೂರ ಅಂದರೆ ಊರ ಹೊರಗೆ ಬಂದೇ ಬಿಟ್ಟಿದ್ದ. ಆ ಕಡೆ ಇಂದ ಗುಡ್ ನೈಟ್ ಹೇಳಿ ಪೋನ್ ಕಟ್ ಮಾಡಿ, ಮೊಬೈಲ್ ಟಾರ‍್ಚ್ ಆನ್ ಮಾಡಿ ಮನೆ ಕಡೆ ಹೋಗೋಕೆ ತಿರುಗಿದ. ಹಾಗೆ ಸ್ತಬ್ದನಾಗಿ ನಿಂತು ಬಿಟ್ಟ..ಎದುರಿಗೆ ಸ್ವಲ್ಪ ದೂರದಲ್ಲಿ ಏನೋ ಶಬ್ದ, ಅದು ಹೆಣ್ಣಿನ ಗೆಜ್ಜೆ ಶಬ್ದ… ನಿಂತ, ಮತ್ತೆ ಕೇಳಿದ, ಮತ್ತೆ ಮತ್ತೆ ಕೇಳಿದ, ಹೌದು ಅದೇ ಶಬ್ದ. ಹಾಗೆ ಅಸ್ಪಶ್ಟ ನಾಲ್ಕೈದು ಆಕ್ರುತಿಗಳು ಕಾಣತೊಡಗಿದವು. ಮೈ ಜುಮ್ ಅಂತು. ದೈರ‍್ಯವಂತ, ಆದರೆ ಇಂದು ಕೈಕಾಲು ನಡುಗುತ್ತಿವೆ. ನಾಲಿಗೆ ತಡವರಿಸುತ್ತಿದೆ. ನೆನ್ನೆ ರಾತ್ರಿ ತಾತ ಹೇಳಿದ “ಕೊಳ್ಳಿ ದೆವ್ವ”ದ ಕತೆ ನೆನಪಾಗುತ್ತಿದೆ. ಆಗ್ತಿಲ್ಲ.. ಹೂ ಹೂಂ ಆಗ್ತನೇ ಇಲ್ಲ..
ಎಶ್ಟೇ ದೈರ‍್ಯ ತಂದುಕೊಂಡರು ಆತಂಕ ನಿಲ್ತಾ ಇಲ್ಲ. ಎದುರು ಹೋಗುತ್ತಿರುವ ಆಕ್ರುತಿಗಳೆಲ್ಲ ಹೆಣ್ಣುಗಳು ಎಂಬುದು ಸ್ಪಶ್ಟ ಆಯ್ತು. ಆದರೆ ಯಾರು? ಮುಕ ಕಾಣ್ತಿಲ್ಲ. ಕೈಯಲ್ಲಿ ಬೆಂಕಿ ಉಂಡೆಗಳು. ಹೌದು ಇವು ಕೊಳ್ಳಿ ದೆವ್ವಗಳೇ. ಮನಸ್ಸಲ್ಲಿ ಸಾವಿರ ಯೋಚನೆಗಳು. ಯಾರಿರಬಹುದು? ಮೊನ್ನೆ ಸತ್ತ ಗೌರಮ್ಮನ!!? ಇಲ್ಲ ಹೋದ ವರ‍್ಶ ಸತ್ತ ಎಳೆವೆ ಯಡ್ಡಮ್ಮನ?
ಸುಮಾರು ವರ‍್ಶಗಳ ಹಿಂದೆ ಸತ್ತ ವೆಂಕಟಮ್ಮನಾ? ಯಾವುದು ಅರ‍್ತ ಆಗ್ತಿಲ್ಲ. ಮೈ ಮೇಲೆ ಬೆವರಿನ ಹನಿಗಳು. ಅದರಲ್ಲೇ ಸ್ನಾನ ಆಗ್ತಾ ಇದೆ. ಬಯದಲ್ಲಿ ಗುಂಡಿಗೆ ಸಾವಿರ ಬಾರಿ ಹೊಡೆದು ಕೊಳ್ಳುತ್ತಿದೆ. ತಲೆ ಕೆಟ್ಟು ಮೊಸರು ಗಡಿಗೆ ಆಗ್ತಾ ಇದೆ. ಏನೋ ತೇವ ಆದ ಅನುಬವ, ಬೆವರು ಕೆಳಕ್ಕೆ ಇಳಿಯುತ್ತದೆ ಅಂದು ಕೊಂಡ. ಹೂ ಹೂಂ ಅಲ್ಲ, ಅದು ಬೆವರಲ್ಲ!!
ಎಲ್ಲಾ ಆಕ್ರುತಿಗಳು ಒಂದು ಕಡೆ ಸೇರಿದವು. ಏನಾಗುತ್ತಿದೆ ಅಂತ ಅರ‍್ತ ಮಾಡಿಕೊಳ್ಳುವಶ್ಟರಲ್ಲಿ, ಮೊಬೈಲ್ ಟಾರ‍್ಚ್ ಆಪ್ ಆಯ್ತು. ಬಯ ಜಾಸ್ತಿ ಆಯ್ತು. ಅಶ್ಟರಲ್ಲಿ ಹಿಂದಿನಿಂದ ಬಲವಾದ ಕೈ ಒಂದು ಮೈ ಮೇಲೆ ಬಿತ್ತು. ಆ ಕೈ ಬಿದ್ದದ್ದಕ್ಕೆ, ಅಲ್ಪ ಸ್ವಲ್ಪ ಇದ್ದ ದೈರ‍್ಯ ಸಂಪೂರ‍್ಣ ಹುದುಗಿ ಹೋಯ್ತು. ಜಂಗಾಬಲವೇ ಹುದುಗಿ ಹೋಗಿತ್ತು. ದೇವರ ಮೇಲೆ ಅಶ್ಟೋಂದು ನಂಬಿಕೆ ಇರದಿದ್ದವನಿಗೆ, ಮುನ್ನೂರ ಮುವತ್ತಾ ಮೂರು ಕೋಟಿ ದೇವರು ನೆನಪಾದವು. ಯಾವತ್ತೋ ಓದಿದ ಶ್ಲೋಕಗಳು, ದೇವರ ನಾಮಗಳು ಪಟಪಟನೇ ಬಾಯಿಂದ ತನಗೆ ಅರವಿಲ್ಲದೆ ಬರತೊಡಗಿದವು. ದೇವರ ಮೇಲೆ ಬಾರ ಹಾಕಿ ನಿದಾನವಾಗಿ ಹಿಂದೆ ತಿರುಗಿ ನೋಡಿದ. ಕಡುಕಪ್ಪನೆಯ ರಾತ್ರಿಯಲ್ಲಿ ಇವನನ್ನ ಮುಟ್ಟಿದವರು ಯಾರು?
ಮೊದಲು ಕಾಲು ನೋಡಿದ, ಸರಿಯಾಗಿಯೇ ಇದೆ. ಸ್ವಲ್ಪ ದೈರ‍್ಯ ತಂದುಕೊಂಡು ಮುಕ ನೋಡಿದ. ಅಬ್ಬಾ. ಇದು ಆತನೇ, ಹೌದು ಆತನೇ. ಆತನ ಬಾವ. ಅಕ್ಕನ ಗಂಡ. ಸದ್ಯ ಹೋದ ಜೀವ ಬಂದ ಹಾಗೆ ಆಯ್ತು. “ಲೋ ಸೂರಿ, ಯಾಕೋ ಆಗ್ಲಿಂದ ಕೂಗ್ತಾ ಇದ್ದಿನಿ ತಿರುಗಿ ನೋಡ್ಲೇ ಇಲ್ಲ?”
ಅವರಿಗೇನು ಗೊತ್ತು, ಇವನಿಗೆ ಎಲ್ಲಾ ಅಲ್ಲೇ ಆಗೋಗಿದೆ ಎಂದು. ಇದ್ದ ಬದ್ದ ದೈರ‍್ಯನೆಲ್ಲ ಎದೆಗೆ ತಂದುಕೊಂಡು ಆ ಕಡೆ ಬೆಟ್ಟು ಮಾಡಿ ತೋರಿಸಿದ. ಈಗ ಹೆದರುವ ಸರದಿ ಅವರದ್ದಾಗಿತ್ತು. ಇಬ್ಬರು, ಒಬ್ಬರ ಮುಕ ಒಬ್ಬರು ನೋಡಿಕೊಂಡು ತೋರಿಕೆಯ ದೈರ‍್ಯ ತೋರಿಸುತ್ತಿದ್ದಾರೆ. ಆದರೆ ಆದರೆ ಸತ್ಯ ಮರೆಮಾಚಲಾಗುವುದೇ? ಹೂ ಹೂಂ ಇಬ್ಬರ ಕೈಯಲ್ಲೂ ಒಂದು ಅಡಿ ಮುಂದೆ ಇಡಲಾಗುತ್ತಿಲ್ಲ. ಎದುರಿಗೆ ಅನತಿ ದೂರದ ಆ ಆಕ್ರುತಿಗಳು ಅಲ್ಲೇ ನಿಂತೊ, ಕೈಯಲ್ಲಿನ ಬೆಂಕಿಯುಂಡೆಗಳನ್ನ ಕೆಳಗಿಟ್ಟೊ, ಆ ಬೆಂಕಿಯ ಬೆಳಕಿನಲ್ಲಿ ಕಾದು ಕೆಂಪಾದ ಆ ಮುಕಗಳು ಅಸ್ಪಶ್ಟವಾಗಿ ಕಾಣುತ್ತಿವೆ.
ಸೂರಿಗೋ ಒಂದು ಕ್ಶಣ ಬಾವನನ್ನು ಅಲ್ಲೇ ಬಿಟ್ಟು ಓಡಿ ಹೋಗೋಣ ಅಂತ ಅನಿಸಿ, ಕಾಲು ಕೀಳುತ್ತಾನೆ. ತಿರುಗುತ್ತಾನೆ, ಕಡು ಕಪ್ಪಾದ ಕತ್ತಲೆಯನ್ನ ಕಂಡು ಕಿತ್ತ ಕಾಲನ್ನ ವಾಪಸ್ ಸ್ವಸ್ತಾನಕ್ಕೆ ತಂದು ಹಾಗೆ ಬಾವನ ಪಕ್ಕ ನಿಂತು ಕೊಳ್ಳುತ್ತಾನೆ. ಆ ಆಕ್ರುತಿಗಳೋ, ಬೆಂಕಿಯನ್ನ ಒಂದು ಕಡೆ ಹಾಕಿ, ಒಂದಾದ ಮೇಲೆ ಒಂದು ದಾಟುತ್ತಿರುತ್ತವೆ. ನೀರವ ರಾತ್ರಿಯಲ್ಲಿ ಸೂಜಿ ಬಿದ್ದರು ಕೇಳಿಸುವಶ್ಟು ನಿಶಬ್ದ, ಇವರು ಒಂದೊಂದೇ ಹೆಜ್ಜೆ ಆ ಆಕ್ರುತಿಗಳೆಡೆಗೆ ಇಡುತ್ತಿದ್ದಾರೆ. ಮಾವಿನ ತರೆಗಳು ಇವರ ಹೆಜ್ಜೆ ಬಾರಕ್ಕೆ ನುರಿ ನುರಿ ಅನ್ನುತ್ತಿದೆ. ಅಶ್ಟರಲ್ಲಿ ಒಂದು ಆಕ್ರುತಿ ಇವರ ಕಡೆ ನೋಡುತ್ತೆ ಅಶ್ಟೆ. ಇಬ್ಬರಿಗೂ ನಿಂತಲ್ಲಿಯೇ ಎಲ್ಲ ಆಗೋಗ್ತಾ ಇದೆ. ಯಾವುದೋ ಬ್ರಮೆಗೆ ಬಿದ್ದವರಂತೆ ಇಬ್ಬರು ಒಂದೇ ಉಸಿರಿಗೆ ಓಟ ಕೀಳುತ್ತಾರೆ. ಓಡುತ್ತಾರೆ ಓಡುತ್ತಾರೆ, ಓಡುತ್ತಲೇ ಇದ್ದಾರೆ. ಹೂ ಹೂಂ ಇನ್ನು ಮನೆ ಸಿಕ್ತಿಲ್ಲ. ಸಿಕ್ತಾನೆ ಇಲ್ಲ. ಆದ್ರು ಓಟ ನಿಲ್ಸಿಲ್ಲ!!! ಓಡು ಓಡು ಓಡು…
ಅಶ್ಟರಲ್ಲಿ ಆ ಆಕ್ರುತಿ ಇವರ ಹತ್ತಿರ ಬಂದು ಮಾತನಾಡಿಸಿತು. ಆಶ್ಚರ‍್ಯ !!? ನಾವು ಓಡಿಲ್ವ!!? ಇಲ್ಲೇ ಇದ್ದೀವ!!? ಆ ಆಕ್ರುತಿ ಮಾತನಾಡಿಸಿದ್ದಕ್ಕೆ ಮೂರ‍್ಚೆ ಬೀಳೋದು ಒಂದು ಬಾಕಿ. ಆದರೂ ಬಿದ್ದಿಲ್ಲ. ಯಾಕಂದ್ರೆ ಆಗ್ಲೆ ತೇವ ಆಗಿತ್ತಲ್ಲ!! ಇನ್ನು ಆಗೋಕೆ ಏನಿದೆ!!? ವಾಸ್ತವಕ್ಕೆ ಬಂದು, ಸ್ವಲ್ಪ ದೈರ‍್ಯ ತಂದುಕೊಂಡು (ಇಬ್ಬರು ಇದ್ದದ್ದಕ್ಕೆ ದೈರ‍್ಯ, ಅದು ಅರ‍್ದಂಬರ‍್ದ) ಮಾತನಾಡಿಸಿದ್ದು ಯಾರು ಅಂತ ನೋಡುದ್ರೆ…”ಸೂರಿ ಒಂದು ಕಲ್ಲು ಹುಡುಕಿಕೊಡೋ…” ಆಕ್ರುತಿ ಹೇಳಿದ್ದು ಕೇಳಿ ಆಶ್ಚರ‍್ಯ ಆಗಿ, ಮನೆ ದೇವರನ್ನ ನೆನಸಿಕೊಂಡು, ಏನು ಮಾಡಬೇಕೆಂದು ತಿಳಿಯದೇ ತಲೆ ಕೆರಕೊಂಡ ಸೂರಿ. ಯಾರಿದು!?
ಹೌದು ಅವರೇ, ಅವರೇ ಇದು.. ಕೆಳಗಿನ ಹಟ್ಟಿ ಲಕ್ಶ್ಮಮ್ಮ…!!! ಮನಸಲ್ಲೆ ನಿನ್ನ ಮಕ್ಕೆ ಗಲಗಚ್ಚು ಹಾಕ, ನೀನು ಇನ್ನು ಸತ್ತಿಲ್ವ ನೀನು…!!? ಅನ್ಯಾಯವಾಗಿ ನನ್ನ ಹೆದರಿಬಿಟ್ಟಲ್ಲ ಅಂದುಕೊಂಡು.. ಹೇಳಿ ಅಕ್ಕ ಅಂದ.
“ಏನು ಇಲ್ಲ ಸೂರಿ, ಪಾಪುಗೆ ದ್ರುಶ್ಟಿ ಆಗಿ ‘ಕಾಲ್ ದೂಳ್’ ಆಗಿತ್ತು, ಬೆಳಿಗ್ಗೆ ಇಂದ ಒಂದೇ ಸಮನೇ ಬೇದಿ. ದ್ರುಶ್ಟಿ ತೆಗೆದು, ನಾಲ್ಕು ದಾರಿ ಕೂಡಿರೋತಕ್ಕೆ ‘ಅನ್ನ ಸಾಗಾಕನಾ’ ಅಂತ ಬಂದೋ ಎಂದು. ಒಬ್ಳಿಗೆ ಬಯ ಆಗಿ, ನಾನು, ಹನುಮಕ್ಕ, ನರಸಮ್ಮ, ತಿಮ್ಮಕ್ಕ ಬಂದೋ ಕಣೋ.. ನೀವು ಗಂಡಸರು ತುಂಬಾ ದೈರ‍್ಯವಂತರು ಬಿಡಪ್ಪ, ಇಶ್ಟೊತ್ತಲ್ಲಿ ಅರಾಮವಾಗಿ ಓಡಾಡ್ತಿ ಇದ್ದೀರಾ” ಅಂತು.
ಆವಮ್ಮನಿಗೇನು ಗೊತ್ತು, ಇಶ್ಟೊತ್ತು ಸೂರಿಗೆ ಎಲ್ಲಾ ಆಗೋಗಿತ್ತು ಅನ್ನೋದು. “ಮಡಿಕೆ, ಕೆಂಡ ಎಲ್ಲಾ ತಂದಿದೀವಿ, ಮಡಿಕೆ ಒಡೆಯೋಕೆ ಕಲ್ಲು ಬೇಕಾಗಿತ್ತು ತಂದು ಕೊಡೋ” ಅಂದ್ರು. ಅಂದರೆ ನಾನು ಇಶ್ಟೊತ್ತು ಬೆಂಕಿ ಉಂಡೆ ಕೊಳ್ಳಿ ದೆವ್ವ ಅಂತ ಹೆದರಿಕೊಂಡಿದ್ದು ಇದಕ್ಕ!!!? (ಒಬ್ಬೊಬ್ಬರು ಬೆಳಿಗ್ಗೆ ಹೊತ್ತೆ ನೋಡೋಕೆ ದೆವ್ವಗಳ ತರಹ ಇದ್ದೀರ ಇನ್ನು ಕತ್ತಲಲ್ಲಿ ನಾನು ಹೆದರಿಕೊಂಡಿದ್ದು ತಪ್ಪೇನು ಇಲ್ಲ ಬಿಡಿ) ಅಂತ ಮನಸ್ಸಲ್ಲೇ ಬೈದುಕೊಂಡು, ಕಲ್ಲು ತಂದು ಕೊಟ್ಟು, ತಿರುಗಿ ನೋಡದೆ ಸೂರಿ, ಆತನ ಬಾವ ವಾಪಸ್ ಮನೆ ಕಡೆ ಹೊರಟ್ರು. ನಾವು ಬಯ ಪಟ್ಟಿದ್ದು, ಮನೇಲಿ ಆಗ್ಲಿ, ಊರೋರಿಗಾಗ್ಲಿ, ಯಾರಿಗೂ ಹೇಳಬಾರದು ಎನ್ನುವ ಕರಾರಿನೊಂದಿಗೆ!!!
( ಚಿತ್ರ ಸೆಲೆ: theweird0.wordpress.com )
Thank you for sharing the post! ❤