ಗೊರಕೆಗೆ ಇನ್ಮುಂದೆ ಬೀಳಲಿದೆ ತಡೆ

ವಿಜಯಮಹಾಂತೇಶ ಮುಜಗೊಂಡ.

ನೀನು ಸತ್ತಾಗ ಅದು ನಿನಗೆ ಗೊತ್ತಾಗುವದಿಲ್ಲ ಆದರೆ ಅದು ಇನ್ನೊಬ್ಬರಿಗೆ ನೋವಿನ ಸಂಗತಿ. ನೀನು ಮುಟ್ಟಾಳನಾಗಿದ್ದಾಗ ಕೂಡ ಅದು ಹಾಗೆಯೇ”. ಹೀಗೊಂದು ಇಂಗ್ಲಿಶ್ ಗಾದೆಯಿದೆ. ಇದನ್ನೇ ಗೊರಕೆಯ ವಿಶಯದಲ್ಲಿ ಹೇಳುವದಾದರೆ, “ನೀನು ಗೊರಕೆ ಹೊಡೆಯುತ್ತಿರುವದು ನಿನಗೆ ಗೊತ್ತಾಗದು. ಆದರೆ ಅದು ನಿನ್ನ ಪಕ್ಕದವರಿಗೆ ಅತಿ ದೊಡ್ಡ ತಲೆನೋವು.

ನೀವು ಕನಸಿನ ಲೋಕದಲ್ಲಿ ತೇಲುತ್ತಿದ್ದೀರಿ, ಏನನ್ನೋ ಊಹಿಸಿಕೊಂಡು ತನಗೇ ಗೊತ್ತಿಲ್ಲದೆ ಕುಶಿಪಡುತ್ತಿರುತ್ತೀರಿ; ಆಕಾಶದಲ್ಲಿ ತೇಲಾಡುತ್ತಿರುವಂತೆ, ತಂಗಾಳಿಯನ್ನು ಸವಿಯುತ್ತಾ ಮಗುವಾಗಿ, ಏನೋ ಒಂತರಾ ಮಜಾ ಮಾಡುತ್ತಿದ್ದೀರಿ. ಒಮ್ಮೆಗೇ ಏನೋ ಒಂದು ಗೊಂದಲದ ಸದ್ದು, ಕನಸಿನ ದಿಕ್ಕೇ ಬದಲಾಗುತ್ತದೆ. ಗುಡುಗುಡು, ಗಡಗಡ ಅಬ್ಬರದ ಸದ್ದು. ಏನಾಗುತ್ತಿದೆ ಎಂದು ಸಾವರಿಸಿಕೊಂಡು ನೋಡಿದರೆ ನಿಮ್ಮ ಪಕ್ಕಕ್ಕೆ ಮಲಗಿರುವವರು ಜೋರಾಗಿ ಗೊರಕೆ ಹೊಡೆಯುತ್ತಾ ತಮ್ಮದೇ ಆದ ಕನಸಿನ ಲೋಕದಲ್ಲಿದ್ದಾರೆ. ಆಗ ತಮ್ಮ ಅರಿವಿಗೆ ಬರುತ್ತದೆ, ಕನಸನ್ನು ಅರ‍್ದಕ್ಕೆ ಕೊಂದ ಆ ಗುಡುಗುಡು ಸದ್ದು ಗೊರಕೆ! ಚೇ, ಅದೆಂತಹ ಹತಾಶೆಯ ಬಾವನೆ. ಗೊರಕೆ ಹೊಡೆಯುತ್ತಿರುವ ಅವರ ಮುಕ ನೋಡಿದರೆ ಕೋಪ, ಅವರು ನೋಡಿದರೆ ಏನೂ ನಡೆದೇ ಇಲ್ಲವೇನೋ ಎಂಬಂತೆ ಹಾಯಾಗಿ ಮಲಗಿದ್ದಾರೆ. ಅವರನ್ನು ನಿದ್ದೆಯಿಂದ ಎಬ್ಬಿಸಲೂ ಬೇಡದ ಮನಸ್ಸು. ಆದರೆ ನೀವು ಮಲಗಬೇಕೆಂದರೆ ಅವರ ಗೊರಕೆ ಕೊನೆಯಾಗಬೇಕು. ನೀವು ಬೇಡದ ಮನಸ್ಸಿನಿಂದ ಅವರನ್ನು ಎಬ್ಬಿಸುತ್ತೀರಿ. ಇಂತಹ ಸನ್ನಿವೇಶಗಳು ಎಲ್ಲರ ಗಮನಕ್ಕೂ ಬಂದಿರಲೇಬೇಕು.ಅಕಸ್ಮಾತ್ ಗೊರಕೆ ಹೊಡೆಯುವವರು ನೀವೇ ಆಗಿದ್ದರೆ?

ಇನ್ನೊಬ್ಬರ ಗೊರಕೆಯಿಂದ ನಿಮಗಾಗುವ ಅತವಾ ನಿಮ್ಮ ಗೊರಕೆ ಇನ್ನೊಬ್ಬರಿಗೆ ಕೊಡುವ ತೊಂದರೆ ಅದೇನೆ ಆಗಿರಲಿ. ಈಗ ಗೊರಕೆಗೆ ಪೂರ‍್ತಿಯಾಗಿ ಕೊನೆ ಬೀಳಲಿದೆ. ಹವ್ದು, ಇದೀಗ ಗೊರಕೆಯಿಂದಾಗುವ ಸದ್ದನ್ನು ತಡೆಯಬಲ್ಲ ಸಲಕರಣೆಯೊಂದು ಸದ್ಯದಲ್ಲೇ ಮಾರುಕಟ್ಟೆಗೆ ಬರಲಿದೆ. ನೆತಾನಲ್ ಈಯಾಲ್(Netanel Eyal) ಎನ್ನುವ ಯುವಕ ಕಟ್ಟಿದ “ಸೈಲೆಂಟ್ ಪಾರ‍್ಟ್ನರ್”(Silent Partner) ಎನ್ನುವ ಕಂಪನಿಯು ಈ ಉಪಕರಣವನ್ನು ಹೊರತರಲಿದೆ. ಈ ಮಾಡುಗೆಯು ಇದೇ ವರುಶ ನವೆಂಬರ್‌ವರೆಗೆ ಮಾರುಕಟ್ಟೆಗೆ ಬರಲಿದೆ.

device

(ತಿಟ್ಟ: ನೆತಾನಲ್ ಈಯಾಲ್ ಬೆಳವಣಿಗೆಗೊಳಿಸಿದ ಗೊರಕೆ ತಡೆಯುವ ಎಣಿ)

ಸೈಲೆಂಟ್ ಪಾರ‍್ಟ್ನರ್ ಹೇಗೆ ಕೆಲಸ ಮಾಡುತ್ತದೆ?

ಈ ಉಪಕರಣವು ಗೊರಕೆಯನ್ನು ತಡೆಯುವ ಚಳಕ ಬಹಳ ಕುತೂಹಲದ್ದಾಗಿದೆ. ನಿಜ ಹೇಳಬೇಕೆಂದರೆ ಈ ಸಲಕರಣೆಯು ಗೊರಕೆಯನ್ನು ತಡೆಯುವದಿಲ್ಲ, ಆದರೆ ಗೊರಕೆಯಿಂದ ಆಗುವ ಬಯಂಕರ ಸದ್ದನ್ನು ತಡೆಯಬಲ್ಲುದು. ಇದು ಒಂದು ರೀತಿಯ ಸದ್ದಡಗಿಸುವ ಚಳಕವನ್ನು(Noise-cancellation technology) ಬಳಸುತ್ತದೆ. ಇದು ಸದ್ದಿನ ಅಲೆಗಳ(Sound Waves) ಇರುವರಿಮೆ(Physics)ಯನ್ನು ನೆಚ್ಚಿಕೊಂಡಿದೆ. ಅಲೆಗಳ ಇರುವರಿಮೆ ಹೇಳುವಂತೆ ಎಲ್ಲ ಸದ್ದುಗಳೂ ಒಂದು ತರದ ಅಲೆಗಳಾಗಿದ್ದು ಅದಕ್ಕೆ ತನ್ನದೇ ಆದ ಅಲೆಯೆತ್ತರ(amplitude) ಮತ್ತು ಅಲೆಯ ಸಲದೆಣಿಕೆ(frequency) ಇರುತ್ತದೆ. ಮೊದಲು ಸೈಲೆಂಟ್ ಪಾರ‍್ಟ್ನರ್ ಸಲಕರಣೆಯು ಗೊರಕೆಯ ಸದ್ದಿನ ಅಲೆಯತ್ತರದ ಮತ್ತು ಅಲೆಯ ಸಲದೆಣಿಕೆಯನ್ನು ಗುರುತಿಸುತ್ತದೆ. ಬಳಿಕ ಅದೇ ಅಳತೆಯ ಅಲೆಯೆತ್ತರದ ಮತ್ತು ಸಲದೆಣಿಕೆಯ ಇನ್ನೊಂದು ಅಲೆಯನ್ನು ಆದರೆ ಬೋರಲಾದ ಅಲೆಕಟ್ಟನ್ನು(inverted waveform) ಹೊರಡಿಸುತ್ತದೆ. ಈಗ ಒಂದಕ್ಕೊಂದು ವಿರುದ್ದವಾದ ಅಲೆಗಳು ತೊಡೆದುಹಾಕುವದರಿಂದ ಯಾವುದೇ ಸದ್ದು ಕೇಳಿಸುವದಿಲ್ಲ.

ಇದನ್ನು ಬಳಸಲು ಯಾವುದೇ ತರದ ತರಬೇತಿ ಬೇಕಾಗಿಲ್ಲ. ಇದು ಸರಿಹೊತ್ತಿನ ಚಳಕವನ್ನು ಬಳಸುತ್ತದೆ. ಹೆಬ್ಬೆರಳಿನ ಅಳತೆಯ ಎರಡು ಸಣ್ಣ ತುಂಡುಗಳಿರುವ ಈ ಸಾದನವನ್ನು ಜೋಡಿಸಲು ಮೂಗೇಣುವಿನ ಮೇಲೆ ಬರುವಂತೆ ಒಂದು ಕೊಂಡಿ ಇರುತ್ತದೆ. ಹೆಬ್ಬೆರಳಿನ ಅಳತೆಯ ಎರಡು ತುಂಡುಗಳು ಮೂಗಿನ ಎರಡು ಕಡೆ ಬರುವಂತೆ ’ಸೈಲೆಂಟ್ ಪಾರ‍್ಟ್ನರ‍್’ ಸಾದನವನ್ನು ಇರಿಸಲಾಗುತ್ತದೆ. ಒಂದು ಬದಿಯಲ್ಲಿರುವ ಅರಿವುಕವು(sensor) ಸದ್ದಿನ ಅಲೆಯೆತ್ತರ ಮತ್ತು ಸಾರಿಯೆಣಿಕೆಯನ್ನು ಗುರುತಿಸಿದರೆ ಎರಡೂ ಕಡೆಗಳಲ್ಲಿರುವ ನುಡಿಗೆಣಿಗಳು(Speaker) ಅದಕ್ಕೆ ಬೋರಲಾದ ಅಲೆಕಟ್ಟನ್ನು(Waveform) ಹೊರಡಿಸುತ್ತವೆ.

working_GIF

ಸೈಲೆಂಟ್ ಪಾರ‍್ಟ್ನರ್ ನ ಜಂಬಾರದ ಹಮ್ಮುಗೆ(Business Plan):

ಇಂತಹ ಕುತೂಹಲಕಾರಿ ಉಪಕರಣದ ಮಾಡುಗೆಯ ಹಿಂದೆ ಅಶ್ಟೇ ಕುತೂಹಲದ ಸಂಗತಿಗಳಿವೆ. ಈ ಸಲಕರಣೆಯನ್ನು ಕಂಡುಹಿಡಿದ ’ಸೈಲೆಂಟ್ ಪಾರ‍್ಟ್ನರ‍್’ ಕಂಪನಿಯು ಮಂದಿ ಹೂಡಿಕೆಗೆ(crowd funding) ಇಂಡೀಗೊಗೊ(Indiegogo) ಎನ್ನುವ ಮಿಂಬಲೆ ತಾಣವನ್ನು ಬಳಸಿಕೊಂಡಿದೆ. ಬರೀ 40 ಸಾವಿರ ಡಾಲರ್‌ಗಳ ಹೂಡಿಕೆಯ ಗುರಿಯನ್ನು ಹೊಂದಿದ್ದ ಈ ಹಮ್ಮುಗೆಯು 600 ಸಾವಿರ ಡಾಲರ್ ಗೂ ಹೆಚ್ಚು ಹೂಡಿಕೆಯನ್ನು ಪಡೆದಿದೆ.ಸೈಲೆಂಟ್ ಪಾರ‍್ಟ್ನರ್ ಕಂಪನಿಯು 2015ರಲ್ಲಿ ಈ ಚಳಕಕ್ಕೆ ಹಕ್ಕೋಲೆಗಾಗಿ ಮನವಿ(patent application) ಸಲ್ಲಿಸಿತ್ತು, ಆದರೆ ಈ ಚಳಕಕ್ಕೆ 1936ರಲ್ಲಿಯೇ ಲೂಯೆಗ್ ಪಾಲ್(Lueg Paul) ಎನ್ನುವವರು ಪಡೆದಿದ್ದರಂತೆ.

ನಿಮ್ಮ ಅಕ್ಕಪಕ್ಕ ಮಲಗಿರುವರು ಎಂತಹ ಗೊರಕೆ ದೊರೆಯೇ ಆಗಿದ್ದರೂ, ಈಗ ನೀವು ಹಾಯಾಗಿ ನಿದ್ದೆ ಮಾಡಬಹುದು ಎನ್ನಿ. ಒಂದು ಹೊತ್ತಿಗೆ ನೀವೇ ಆ ಗೊರಕೆದೊರೆ ಆಗಿದ್ದರೆ ನಿಮ್ಮ ಸುತ್ತಮುತ್ತ ಇರುವರಿಗೆ ಇದೀಗ ಒಂದು ಕುಶಿಯ ನಿಟ್ಟುಸಿರು!

(ಈ ಎಣಿ ಕೆಲಸ ಮಾಡುವ ಕುರಿತಾದ ಓಡುತಿಟ್ಟದ ತುಣುಕು)

(ಮಾಹಿತಿ ಮತ್ತು ತಿಟ್ಟ ಸೆಲೆ: livescience.com, engineering.com, silent-partner.co)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: