ನಮ್ಮದೇ ಕೇಡುಗಳಿಗೆ ನಾವು ಬೂದಿ
ಹಸಿರಿನ ಉಸಿರಿಗೆ ನಂಜಿಕ್ಕಿದ ತಪ್ಪಿಗೆ
ತಬ್ಬಲಿಯಾದೆವು ನಾವುಗಳು
ಹೊಣೆಗಾರಿಕೆಯಿಲ್ಲದ ಕಯ್ಗೆಟುಕದ ಕೆಲಸವ ಮಾಡಿ
ಸೊರಗಬೇಕಾಯಿತು ನಾವುಗಳು
ಕನಿಜ-ಸಿರಿ-ಗಿಡ-ಮರ-ತೊರೆ-ಹೊಳೆ-ಹಳ್ಳ-ಮೋಡ
ನೆಲದವ್ವಳ ನಾಡಿಗಳೆಂದು ತಿಳಿಯದೆ
ಮೂಡತನದಿ ದಕ್ಕಿದಶ್ಟು ದಕ್ಕಿಸಿಕೊಂಡೆವು ನಾವುಗಳು
ಗೋಳಾಟ, ತೊಳಲಾಟ, ಬಡಿದಾಟ
ಈ ನಮ್ಮದೇ ಕೇಡು ಮನದ ಬೆಂಕಿಯ ಕಿಡಿಗಳು
ಉರಿಯಲು ಬಯಲಿಗೆ ದಾಪುಗಾಲು ಹಾಕಿವೆ
ಇವುಗಳಿಗೆ ಆಗಿಹೆವು ನಾವು ಸೌದೆಗಳು
ಉರಿದ ಮೇಲೆ ನಾವು ಬೂದಿ
ನಿಜವಾಗಿಯೂ ನಮ್ಮದೇ ಕೇಡುಗಳಿಗೆ ನಾವು ಬೂದಿ!
ಬೇಕಿದ್ದರೆ ನಮಗೆ ತುಸುವಾದರೂ ನೆಮ್ಮದಿ
ಎಲ್ಲವು ನೆಲದವ್ವಳಿಗೆ ಸೇರಿದ್ದೆನ್ನುವ ರೀತಿಯಲ್ಲಿ
ನಾವೂ ಕೂಡ ಅವಳಿಗೆ ಸೇರಿದ್ದೇವೆನ್ನುವ ಸ್ಪೂರ‍್ತಿಯಲ್ಲಿ
ಒಗ್ಗಟ್ಟಾಗಿ ಒಂದುಗೂಡಿ ಕಾಪಾಡಿಕೊಳ್ಳೋಣ ನೆಲದವ್ವಳ ನೆಮ್ಮದಿ!
( ಚಿತ್ರಸೆಲೆ: templeofara.net )
ಇತ್ತೀಚಿನ ಅನಿಸಿಕೆಗಳು