ಹಟ್ಟಿ ಹಬ್ಬ – ಬುಡಕಟ್ಟು ಆಚರಣೆಯ ಕುರುಹು

– ಚಂದ್ರಗೌಡ ಕುಲಕರ‍್ಣಿ.

hatti-habba

ನಮ್ಮ ಬದುಕು ಪರಂಪರೆಯ ವಿಶಿಶ್ಟವಾದ ಪಳೆಯುಳಿಕೆಗಳನ್ನು ಒಳಗೊಂಡು ಗತಿಶೀಲ ನಡೆಯಲ್ಲಿ ಮುನ್ನಡೆಯುತ್ತದೆ. ಬೇರೆ ಬೇರೆ ಕಾಲಗಟ್ಟಗಳ ಪ್ರದಾನ ಅಂಶಗಳನ್ನು ಆಚರಣೆಯ ಸ್ವರೂಪದಲ್ಲಿ ಜೀವಂತವಾಗಿರಿಸಿ ಕೊಂಡಿರುತ್ತದೆ. ಇಂತಹ ಚಲನ ಶೀಲ ಬದುಕನ್ನು, ಅಲ್ಲಿ ಬರುವ ಆಚರಣೆಗಳನ್ನು ಸೂಕ್ಶ್ಮವಾಗಿ ಅವಲೋಕಿಸಿದರೆ ಮಾತ್ರ ಪರಂಪರೆಯ ದಿಟ ಸ್ವರೂಪ ಗೋಚರಿಸುತ್ತದೆ.

ಹಟ್ಟಿ ಹಬ್ಬದ ಆಚರಣೆಯಲ್ಲಿ ಬುಡಕಟ್ಟು ಮತ್ತು ಕ್ರುಶಿ ಸಂಸ್ಕ್ರುತಿಯ ದಿಟವಾದ ಪಳೆಯುಳಿಕೆಗಳಿವೆ.

ಹಟ್ಟಿ ಎಂಬ ಪದವು ಬುಡಕಟ್ಟು ಜನಸಮುದಾಯದ ನೆಲೆ ಎಂಬ ಅರ‍್ತಹೊಂದಿದೆ. ಕುರಿಸಾಕಣೆ, ಪಶುಸಾಕಣೆ ಮಾಡುತ್ತಿದ್ದ ಮಾನವ ವರುಶದಲ್ಲಿ ಒಂದು ಸಲ ಒಂದೆಡೆ ಸೇರುತ್ತಿದ್ದ. ಹಲವು ಸಮುದಾಯಗಳಲ್ಲಿ ಹರಡಿ ಹೋದವರು ಅಂದು ತಪ್ಪದೇ ಕೂಡುತ್ತಿದ್ದರು. ತಮ್ಮ ಪಶುವಿಗೆ ರೋಗ ರುಜಿನ ಬರದಂತೆ ಕಾಪಾಡೆಂದು ದೈವ ಶಕ್ತಿಯನ್ನು ಬೇಡಿಕೊಳ್ಳುತ್ತಿದ್ದರು. ಅನಂತರ ಕಾಲದಲ್ಲಿ ಕ್ರುಶಿ ಮಾಡುವುದನ್ನು ಕಲಿತ. ಒಂದೆಡೆ ನೆಲೆ ನಿಲ್ಲಹತ್ತಿದ. ತನ್ನ ಸುರಕ್ಶತೆಗಾಗಿ ಹಟ್ಟಿ ಕಟ್ಟಿಕೊಳ್ಳತೊಡಗಿದ. ಕುರಿ ಪಶುಗಳಿಗೆ ಹಾಕುವ ದಡ್ಡಿಯಂತೆಯೇ ಮುಳ್ಳ ಬೇಲಿಗಳಿಂದ ಹಟ್ಟಿ ನಿರ‍್ಮಿಸಿದ. ಇನ್ನೂ ಮುಂದುವರೆದು ಮಣ್ಣು ಕಟ್ಟಿಗೆ ಬಳಸಿ ಗೋಡೆಯನ್ನು ಕಟ್ಟತೊಡಗಿದ.

ಹಟ್ಟಿಹಬ್ಬದಲ್ಲಿ ಕೋಟೆಯಾಕಾರದಲ್ಲಿ (ಚೌಕ) ಸಗಣಿಯ ಆಕ್ರುತಿಗಳನ್ನು ಜೋಡಿಸಿ ಒಂದು ಕಡೆ ಬಾಗಿಲು ಬಿಟ್ಟಿರುತ್ತಾರೆ. ಸಗಣಿಯ ಆಕ್ರುತಿಗಳಿಗೆ ಪಾಂಡವರು ಎನ್ನುವರು. ಪಾಂಡವರು ಅಡವಿಯಲ್ಲಿಯೇ ತಮ್ಮ ಕೋಟೆಯನ್ನು ಕಟ್ಟಿಕೊಂಡ ಸಂದರ‍್ಬ ಬುಡಕಟ್ಟು ನೆಲೆಯನ್ನು ಸೂಚಿಸುತ್ತದೆ. ಮನೆಯ ಒಳಗಿನ ಈ ಕೋಟೆಗೆ ಮತ್ತು ಮನೆ ಬಾಗಿಲ ಮುಂದಿಟ್ಟ ಪಾಂಡವರಿಗೆ ಹೆಜ್ಜೆ ಮೂಲಕ ಸಂಪರ‍್ಕ ಕಲ್ಪಿಸಿರುತ್ತಾರೆ. ಕ್ರುಶ್ಣ ಇಂದ್ರಪ್ರಸ್ತಕ್ಕೆ ಬಂದ ಸಂಕೇತವೂ ಇಲ್ಲಿ ಸೇರಿದೆ. ಇಲ್ಲಿ ಕ್ರುಶ್ಣ ಮತ್ತು ಗೊಲ್ಲರು ಎಂಬ ಬುಡಕಟ್ಟು ನೆಲೆಯನ್ನು ಕಾಣಬಹುದು. ಸಗಣಿಯ ಆಕ್ರುತಿಗಳು ಪಂಚಬೂತಗಳಾದ ಗಾಳಿ, ಆಕಾಶ, ನೀರು, ಬೆಂಕಿ ಮತ್ತು ಮಣ್ಣಿನ ಪ್ರತೀಕವಾಗಿರಬಹುದು. ಐದು ಅಂಕಿ ಸಾಮ್ಯತೆ ಇರುವುದರಿಂದ ಪಾಂಡವರ ಕತೆಗೆ ಒಳಸಂಬಂದವನ್ನು ಹೊಂದಿರುವುದರಿಂದ ಆ ಹೆಸರು ಬಳಕೆಯಲ್ಲಿ ಬಂದಿರಬಹುದು. ಎಳ್ಳ ಅಮವಾಸ್ಯೆಯ ದಿನ ಬೂಮಿತಾಯಿಯ ಸೀಮಂತ ಕಾರಣವನ್ನು ಮಾಡುವ ರೈತರು ಬನ್ನಿ ಗಿಡದ ಬುಡದಲ್ಲಿ ಐದು ಕಲ್ಲುಗಳನ್ನಿಟ್ಟು ಪೂಜಿಸುತ್ತಾರೆ. ಅಲ್ಲಿ ಐದೂ ಪಂಚಬೂತಗಳನ್ನು ಆರಾದಿಸುವ ನೆಲೆ ಇದೆ.

hatti-habba-2

ಪಾಂಡವರಿಗೆ ಏರಿಸುವ ಹೂ, ಹೊನ್ನಂಬರಿ, ಹೊನ್ನ ಅವರಿ ಮತ್ತು ಉತ್ರಾಣಿ ಕಡ್ಡಿಗಳು ಒಕ್ಕಲಿಗನಿಗೆ ಸಹಜವಾಗಿ ಸಿಗುವ ವಸ್ತುಗಳಿವು. ಹೊನ್ನಂಬರಿ ನಲಿವಿಗೆ, ಉತ್ರಾಣಿ ನೋವಿಗೆ ಸಂಕೇತವಾಗಿರಬಹುದು. ದನಗಳಿಗೆ ರೋಗ ಬರಬಾರದೆಂಬ ಆಶಯದಲ್ಲಿ ಅಂಟೋಳಿ-ಪಂಟೋಳಿ ಎಂಬ ಆಚರಣೆಯೂ ರೈತ ಸಮುದಾಯದಲ್ಲಿದೆ.

ಹಂಡ ಆಕಳ
ಬಂಡ ಆಕಳ
ಗುಡದನ್ನ ಹೋರಿ ಮೇದಿರಬೇಕ
ಮಡ್ಯಾಗ ಬಂದು ಈದಿರಬೇಕ
ಮಾರ ಮಾರ ಹುಲ್ಲು, ಜೋರು ಜೋರು ಹಾಲು
ಜೋರು ಜೋರು ಹಾಲಿಗೆ ಕೆನಿ ಕೆನಿ ಮೊಸರು,
ಕೆನಿ ಕೆನಿ ಮೊಸರಿಗೆ ಗಮ ಗಮ ತುಪ್ಪ
ಗಮ ಗಮ ತುಪ್ಪಕ್ಕ ಬಳ್ಳ ಬಳ್ಳ ರೊಕ್ಕ
ಅಂಟಿಗೊ ಪಂಟಿಗೊ
ಎಣ್ಣಿ ರೊಟ್ಟಿ ಗಾಣಿಗೊ
ರೊಟ್ಟಿ ಬುತ್ತಿ ಜಾಣಿಗೊ
ನಿಮ್ಮ ಎತ್ತಿನ ಪೀಡ ಹೊಳಿಯಾಚೆಗೊ
ನಿಮ್ಮ ಆಕಳ ಪೀಡ ಹೊಳಿಯಾಚೆಗೊ

ಯುವಕರು ಹಣಜಿ ಹುಲ್ಲಿನ ನಾಗಪ್ಪನ ಹೆಡೆ ಮಾಡಿ, ಹೆಡೆ ನಡುವೆ ದೀಪದ ಪಣತಿ ಹಚ್ಚಿ, ತಲೆ ಮೇಲೆ ಹೊತ್ತು ಮನೆ ಮನೆಗೆ ಹಟ್ಟಿ ಹಟ್ಟಿಗೆ ಹೋಗಿ ಈ ಹಾಡು ಹಾಡಿ ಸಂತಸಪಡುವರು.

ಪಾಂಡವರನ್ನು ಸಗಣಿಯಿಂದಲೇ ಮಾಡುವುದು ಯಾಕೆ?

ಸಗಣಿ ಸಹಜವಾಗಿ ಸಿಗುವ ವಸ್ತು, ಪೂಜನೀಯವೂ ಹೌದು. ಪಾಂಡವರ ಆಕಾರ ಮೇಟಿ ಸುತ್ತಲಿನ ರಾಶಿಯಂತೆ, ಮೊದಲ ರೈತ ಗಣಪತಿಯಂತೆ ಇರುವುದನ್ನೂ ಗಮನಿಸಬೇಕು. ಮುಂಜಾನೆ ತಲೆಬಾಗಿಲ ಮುಂದೆ ಮತ್ತು ಮನೆಯ ಒಳಗೆ ಹಕ್ಕಿಯ ಹತ್ತಿರ ಇರಿಸಿದ ಪಾಂಡವರನ್ನು ಸಾಯಂಕಾಲ ಮಾಳಿಗೆಯ ಮೇಲೆ ಕುಂಬಿಯಲ್ಲಿ ಸಾಲಾಗಿ ಜೋಡಿಸುವರು. ತೊಟ್ಟಿಲನ್ನು ಮಾಡುವ ವಿದಾನ ಬಳಕೆಯಲ್ಲಿದೆ. ಪಾಂಡವರಿಗೆ ಬೆಳಕು ಮಾಡಲು ಎತ್ತರದ ಕಂಬ ನೆಡಿಸಿ ಶಿವನ ಪುಟ್ಟಿಯನ್ನು ಏರಿಸುತ್ತಾರೆ. ಇದೇ ಸಂದರ‍್ಬದಲ್ಲಿ ಆಕಾಶ ಪುಟ್ಟಿಯನ್ನೂ ಮಾಡಿ ಹಾರಿಸುತ್ತಾರೆ.

ಮಾನವನ ನಾಗರಿಕತೆಯ ಹಾದಿಯಲ್ಲಿ ಪುರಾಣ ಕಾಲಕ್ಕಿಂತಲೂ ಮೊದಲು ಬುಡಕಟ್ಟು ಜನರ ಹಬ್ಬ ತನ್ನ ಪಳಯುಳಿಕೆಯನ್ನು ಈಗಲೂ ಜೀವಂತವಾಗಿರಿಸಿಕೊಂಡಿದೆ. ನಾಗರಿಕತೆ ಬೆಳೆದಂತೆ ಪುರಾಣದ ಅಂಶಗಳು ಸೇರಿಕೊಂಡಿವೆ. ಅದೇ ರೀತಿ ವರ‍್ತಕರ ಹಬ್ಬವಾಗಿ ಪರಿವರ‍್ತನೆ ಹೊಂದುತ್ತ ಸಾಗುತ್ತಲಿದೆ. ಜಾನಪದವು ಪುರಾಣಕ್ಕೆ ಪ್ರೇರಣೆ ನೀಡಿರುತ್ತದೆ. ಮತ್ತೊಮ್ಮೆ ಪುರಾಣದಿಂದ ಅನೇಕ ಸಂಗತಿಗಳನ್ನು ಜಾನಪದ ಮರಳಿ ಪಡೆಯುತ್ತದೆ.

(ಚಿತ್ರ ಸೆಲೆ: ಉದಯವಾಣಿ)Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s