ನಮ್ಮೂರಿನ ಬೆಳಕಿನ ಹಬ್ಬದ ಸೊಗಡು

– ರತೀಶ ರತ್ನಾಕರ.

belakina-habba-1

ನಾಡಿನುದ್ದಕ್ಕೂ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯೂ ಒಂದು. ಸಾಲು ಸಾಲು ದೀಪಗಳು, ಹೂವು-ಹಸಿರು ತೋರಣಗಳು, ಸಿಡಿಮದ್ದುಗಳು, ಹೊಸಬಟ್ಟೆ ಹಾಗೂ ಬಗೆಬಗೆಯ ಹಬ್ಬದ ಅಡುಗೆಗಳು… ಇವು ಬೆಳಕಿನ ಹಬ್ಬದಲ್ಲಿ ಸಾಮಾನ್ಯವಾಗಿ ಕಂಡುಬರುವಂತವು. ಇವುಗಳಶ್ಟೇ ಅಲ್ಲದೆ ನಾಡಿನ ಉದ್ದಗಲದಲ್ಲಿ ಈ ಬೆಳಕಿನ ಹಬ್ಬದ ಆಚರಣೆಯಲ್ಲಿ ಹಲತನವಿದೆ. ಅದಕ್ಕೆ ಒಂದು ಸಣ್ಣ ಎತ್ತುಗೆ ಎಂದರೆ, ಕರ‍್ನಾಟಕದ ಬಡಗಣದಲ್ಲಿ ಹಟ್ಟಿಹಬ್ಬ, ಕರಾವಳಿ ಹಾಗು ಮಲೆನಾಡಿನಲ್ಲಿ ತುಳಸಿ ದೀಪ ಮತ್ತು ಪಂಜಿನ ಹಬ್ಬಗಳನ್ನು ದೀಪಾವಳಿಯಾಗಿ ಆಚರಿಸುತ್ತಾರೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಹತ್ತಿರದಲ್ಲಿರುವ ನಮ್ಮೂರಿನ ದೀಪಾವಳಿ ಆಚರಣೆಯೂ ಕರ‍್ನಾಟಕದ ಉಳಿದ ಬಾಗದ ಆಚರಣೆಗಿಂತ ಹಲವಾರು ಬಗೆಯಲ್ಲಿ ಬೇರೆಯಾಗಿದೆ. ಇಲ್ಲಿನ ಆಚರಣೆಯ ಒಂದು ಕಿರುನೋಟ ಇಲ್ಲಿದೆ.

ಲಕ್ಕೆ ಹಬ್ಬ:

ಲಕ್ಕೆ ಹಾಕಲು ಬಳಸುವ ಗಿಡಗಳನ್ನು ಪೂಜೆ ಮಾಡುತ್ತಿರುವುದು

ಲಕ್ಕೆ ಹಾಕಲು ಬಳಸುವ ಗಿಡಗಳನ್ನು ಪೂಜೆ ಮಾಡುತ್ತಿರುವುದು

ಇದು ದೀಪಾವಳಿ ಹಬ್ಬದ ಮೊದಲ ದಿನ. ನಮ್ಮ ಸುತ್ತಮುತ್ತ ಸಿಗುವ ಮುಂಡುಗದ ಗಿಡ, ಲಕ್ಕೆ ಸೊಪ್ಪು, ಉತ್ರಾಣಿ ಕಡ್ಡಿ, ಚೆಂಡು ಹೂವಿನ ಗಿಡ ಹಾಗು ಬತ್ತದ ತೆನೆಗಳನ್ನು ತಂದು ಮನೆಯ ಎದುರುಗಿರುವ ತುಳಸಿ ಕಟ್ಟೆ ಇಲ್ಲವೇ ಮನೆಯ ಜಗುಲಿಯಲ್ಲಿ ಪೂಜೆಗೆ ಇಟ್ಟುಕೊಳ್ಳಲಾಗುವುದು (ಬತ್ತವನ್ನು ಬೆಳೆಯುವವರು ಮಾತ್ರ ಬತ್ತದ ತೆನೆಯನ್ನು ತಂದುಕೊಳ್ಳುವರು). ಇದರ ಪೂಜೆಗೆ ನೆನೆಯಕ್ಕಿ-ನೆನೆಗಡ್ಲೆಯನ್ನು ಮಾಡಲಾಗುವುದು. ಒಂದು ಹಿಡಿ ಅಕ್ಕಿ ಹಾಗು ಕಡ್ಲೆಕಾಳನ್ನು ಕೊಂಚಹೊತ್ತು ನೀರಿನಲ್ಲಿ ನೆನಸಿಟ್ಟು, ಬಳಿಕ ಅದನ್ನು ತೆಗೆದು ಬೆಲ್ಲದ ಪುಡಿಯನ್ನು ಸೇರಿಸಿದರೆ ನೆನೆಯಕ್ಕಿ-ನೆನೆಗಡ್ಲೆ ಸಿದ್ದವಾದಂತೆ. ಇದನ್ನು ಗಿಡಗಳ ರಾಶಿಯ ಎದುರಿಗಿಟ್ಟು ಮನೆಯ ಹಿರಿಯರು ಪೂಜೆಯನ್ನು ಮಾಡುವರು. ಈ ದಿನದಂದು ಮನೆಯಲ್ಲೊಬ್ಬರು ಉಪವಾಸ ಇರುವುದು ವಾಡಿಕೆ (ಎಳನೀರು, ಹಣ್ಣು ಹಾಗು ಸೌತೆಕಾಯಿಗಳನ್ನು ತಿನ್ನಬಹುದು). ಉಪವಾಸ ಇದ್ದವರು ಈ ದಿನದ ಪೂಜೆಗಳನ್ನು ಮಾಡುವರು.

ಪೂಜೆ ಮುಗಿಸಿದ ಮೇಲೆ ಮುಂಡುಗ, ಲಕ್ಕೆ ಸೊಪ್ಪು, ಉತ್ರಾಣಿ ಕಡ್ಡಿ, ಚೆಂಡು ಹೂವಿನ ಗಿಡ ಹಾಗು ಬತ್ತದ ತೆನೆಯ ಒಂದೊಂದು ಎಳೆಯನ್ನು ಸೇರಿಸಿ ಹಲವಾರು ಕಟ್ಟುಗಳನ್ನಾಗಿ ಮಾಡಲಾಗುವುದು. ಈ ಕಟ್ಟುಗಳನ್ನು ಮನೆಯ ಮುಂಬಾಗಿಲು, ಹಿತ್ತಲ ಬಾಗಿಲು, ಗದ್ದೆ, ತೋಟ, ಕೊಟ್ಟಿಗೆ ಹಾಗು ಗೊಬ್ಬರದ ಗುಂಡಿಗಳಿಗೆ ಇಡಲಾಗುವುದು. ಹೀಗೆ ಐದು ಬಗೆಯ ಗಿಡದ ಕಟ್ಟು ಇಡುವುದನ್ನು “ಲಕ್ಕೆ ಹಾಕುವುದು” ಎನ್ನುತ್ತಾರೆ. ಕೆಲವರು “ಮುಂಡುಗ ಇಡುವುದು” ಎಂದೂ ಕರೆಯುತ್ತಾರೆ. ಚೌಡಮ್ಮ, ಪಂಜರವಳ್ಳಿ, ಬೂತಪ್ಪ, ಮುಂತಾದ ಮನೆಯ ದೇವರುಗಳಿಗೆ ಒಂದೊಂದು ವರುಶವೂ ಹರಕೆ ಕೊಡಲೆಂಡು ತೋಟದ ನಡುವೆ ಜಾಗವನ್ನು ನಿಗದಿ ಮಾಡಿರಲಾಗುತ್ತದೆ. ಈ ಜಾಗವನ್ನು ‘ಚೌಡಮ್ಮನ ಗದಿಗೆ, ಪಂಜರವಳ್ಳಿ ಗದಿಗೆ ಎಂದು ಆಯಾ ದೇವರ ಹೆಸರಿನಿಂದ ಕರೆಯಲಾಗುತ್ತದೆ. ಈ ಎಲ್ಲಾ ಗದಿಗೆಗಳಿಗೂ ಹಬ್ಬದ ಹೊತ್ತಿನಲ್ಲಿ ಲಕ್ಕೆ ಹಾಕಲಾಗುವುದು. ಲಕ್ಕೆ ಹಾಕುವುದನ್ನು ಸಾಮಾನ್ಯವಾಗಿ ಬೆಳಗಿನ ಹೊತ್ತಿಗೆ ಮುಗಿಸುತ್ತಾರೆ.

belakina-habba-3

ಎಡದಿಂದ ಬಲಕ್ಕೆ – ಚೆಂಡು ಹೂವಿನ ಗಿಡ, ಉತ್ರಾಣಿ ಕಡ್ಡಿ, ಮುಂಡುಗದ ಗಿಡ ಹಾಗೂ ಲಕ್ಕೆ ಸೊಪ್ಪು

ಸಂಜೆಯ ಹೊತ್ತಿಗೆ ಹಬ್ಬದ ಅಡುಗೆಗಳನ್ನು ಮಾಡಲಾಗುವುದು. ಇದರಲ್ಲಿ ಆರತಿ ಎತ್ತಲು ಅಣಿಮಾಡುವ ಹಣತೆಯನ್ನು ಮಾಡುವುದೇ ಒಂದು ವಿಶೇಶ. ಈ ಹಣತೆಯನ್ನು ಮಾಡಲು, ಮೊದಲು ಅಕ್ಕಿಯನ್ನು ಕೆಲವು ನಿಮಿಶಗಳ ಕಾಲ ನೆನಸಿಟ್ಟು ಬಳಿಕ ಅದರ ನೀರನ್ನು ತೆಗೆದು ಅಕ್ಕಿಯನ್ನು ಕುಟ್ಟಿ ಪುಡಿಮಾಡಿಲಾಗುವುದು. ಪುಡಿಮಾಡಿದ ಅಕ್ಕಿಯನ್ನು ಜರಡಿಯಲ್ಲಿ ಜಲಿಸಿ(ಜಾಲಿಸಿ) ಅದರ ಹಿಟ್ಟನ್ನು ತೆಗೆದು, ಅದಕ್ಕೆ ಬೆಲ್ಲ ಮತ್ತು ಏಲಕ್ಕಿಯನ್ನು ಹಾಕಿ ಮತ್ತೆ ಕುಟ್ಟಲಾಗುವುದು. ಆಗ ಅದು ಅಂಟಂಟಾಗಿ ಹಿಟ್ಟಿನ ಉಂಡೆಯಂತಾಗುತ್ತದೆ. ಇದರಿಂದ ಹಣತೆಯ ಆಕಾರವನ್ನು ಮಾಡಿ ಅದಕ್ಕೆ ತುಪ್ಪ ಇಲ್ಲವೇ ಎಣ್ಣೆಯನ್ನು ಹಾಕಿ, ತಟ್ಟೆಯಲ್ಲಿಟ್ಟು ಸಿಂಗರಿಸಿ ಆರತಿಗೆ ಅಣಿಮಾಡಲಾಗುತ್ತದೆ.

belakina-habba-4

ಹಿಟ್ಟಿನ ಹಣತೆಯಿಂದ ಅಣಿಯಾದ ಆರತಿ ತಟ್ಟೆ

ಕತ್ತಲಾಗುತ್ತಿದ್ದಂತೆ ಹಿತಾರಿಗೆ  ಇಟ್ಟು ಹಬ್ಬದ ಅಡುಗೆಗಳನ್ನು ಬಡಿಸಲಾಗುವುದು. ಆರತಿ ತಟ್ಟೆಯಲ್ಲಿರುವ ಹಿಟ್ಟಿನ ಹಣತೆಯನ್ನು ಹಚ್ಚಿ, ಮೊದಲು ಮನೆಯಿಂದ ಹೊರಗೆ ತಂದು ಆರತಿಯನ್ನು ಬೆಳಗಲಾಗುವುದು. ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಬೆಟ್ಟಗಳ ಸಾಲಿನಲ್ಲಿರುವ ದೇವಿರಮ್ಮ ನಮ್ಮೆಲ್ಲರ ಆರಾದ್ಯ ದೈವ. ದೇವಿರಮ್ಮನ ಬೆಟ್ಟದ ದಿಕ್ಕಿನ ಕಡೆ ತಿರುಗಿ ಆ ಬೆಟ್ಟಕ್ಕೆ ಆರತಿ ಎತ್ತಿ, ‘ನಮ್ಮೆಲ್ಲರನ್ನು ಹರಸು ತಾಯೇ’ ಎಂದು ಬೇಡಲಾಗುವುದು. ಬೆಳಗಿನಿಂದ ಉಪವಾಸ ಇದ್ದವರೇ ಆರತಿಯನ್ನು ಬೆಳಗಬೇಕು. ಬೆಟ್ಟಕ್ಕೆ ಆರತಿ ಎತ್ತಿದ ಮೇಲೆ ಮನೆಯ ಒಳಗಿಟ್ಟ ಹಿತಾರಿಗೆ ಆರತಿಯನ್ನು ಬೆಳಗುತ್ತಾರೆ. ಬಳಿಕ ಮನೆಯಲ್ಲಿರುವ ಎಲ್ಲರೂ ಹಿತಾರಿಗೆ ದೂಪ ಹಾಕಿ ಹಬ್ಬದ ಊಟವನ್ನು ಸವಿಯುತ್ತಾರೆ. ಬೆಳಗಿನಿಂದ ಉಪವಾಸ ಇದ್ದವರು ಹಬ್ಬದ ಊಟವನ್ನು ಮೊದಲುಮಾಡಬೇಕು. ಅಲ್ಲಿಗೇ ಮೊದಲ ದಿನದ ಹಬ್ಬ ಮುಗಿದಂತೆ.

belakina-habba-5

ಗಿಂಡಿಯ ಹಿತಾರು – ಎರಡು ಎಲೆಗಳಲ್ಲಿ ಎಡೆಯನ್ನಿಟ್ಟು ಪೂಜೆ ಮಾಡಿರುವುದು

ಎರಡನೇ ದಿನ ಅಂಗಡಿ ಪೂಜೆ:

ಹೆಸರೇ ಹೇಳುವಂತೆ ಇದು ವ್ಯಾಪಾರಿಗಳ ಹಬ್ಬ. ಅಂಗಡಿಗಳನ್ನು ಚೊಕ್ಕಮಾಡಿ ಕಳಶವಿಟ್ಟು ಪೂಜೆಮಾಡಲಾಗುವುದು. ಪೂಜೆ ಮುಗಿದ ಮೇಲೆ ಬಂದ ಗಿರಾಕಿಗಳಿಗೆ ಸಿಹಿ ಹಂಚುತ್ತಾರೆ. ಈ ದಿನ ನಮ್ಮೂರಿನ ಮನೆಯಲ್ಲಿ ಯಾವ ಆಚರಣೆಗಳಿರುವುದಿಲ್ಲ.

ಮೂರನೇ ದಿನದ ಜಾನುವಾರು ಪೂಜೆ:

ಮನೆಯಲ್ಲಿ ಹಸು ಎತ್ತುಗಳನ್ನು ಸಾಕಿರುವವರು ಅವುಗಳ ಪೂಜೆ ಮಾಡುವರು. ಬೆಳಗ್ಗೆಯೇ ಜಾನುವಾರುಗಳ ಮೈತೊಳೆದು, ಕೊಟ್ಟಿಗೆಯನ್ನು ಚೊಕ್ಕಮಾಡಿ, ಕೊಟ್ಟಿಗೆಗೆ ಹಸಿರು ತೋರಣ ಕಟ್ಟುವರು. ಜೇಡಿಮಣ್ಣು ಹಾಗು ಕೆಮ್ಮಣ್ಣನ್ನು ನೀರಿನಲ್ಲಿ ಕರಗಿಸಿ ಅಕ್ಕಿ ಅಳೆಯಲು ಬಳಸುವ ಪಾವು (ಸಿದ್ದೆ ಎಂದೂ ಕರೆಯುವರು) ತೆಗೆದುಕೊಂಡು, ಪಾವಿನ ಬಾಯನ್ನು ಕರಗಿಸಿಟ್ಟ ನೀರಿಗೆ ಅದ್ದಿ ಜಾನುವಾರಗಳ ಮೈಗೆ ಅಚ್ಚು ಹಾಕಲಾಗುವುದು. ಇದರಿಂದ ಜಾನುವಾರಗಳ ಮೈಯಲ್ಲಿ ಉಂಗುರದ ಆಕಾರದಲ್ಲಿ ಜೇಡಿಮಣ್ಣು ಹಾಗು ಕೆಮ್ಮಣ್ಣಿನ ಬಣ್ಣಗಳು ಮೂಡುವುದು, ಇದನ್ನು ‘ಹಂಡುಂಡು’ ಎಂದು ಕರೆಯುತ್ತಾರೆ.

belakina-habba-6

ಈ ಹೊತ್ತಿನಲ್ಲಿ ಹಸು ಎತ್ತುಗಳಿಗೆ ಹಾಕುವ ಹಾರ ವಿಶೇಶವಾದದ್ದು. ವೀಳ್ಯದೆಲೆ, ಬಾಳೆಹಣ್ಣು, ಹಲಸಿನ ಸೊಪ್ಪು, ಮಾವಿನ ಸೊಪ್ಪು, ಅಡಿಕೆ ಹಿಂಗಾರ, ಹಸಿ ಅಡಿಕೆ ಕಾಯಿ, ಉತ್ರಾಣಿ ಕಡ್ಡಿ, ಚಕ್ಕೋತ ಸೊಪ್ಪು ಹಾಗೂ ಚಪ್ಪೆ ರೊಟ್ಟಿ (ಉಪ್ಪನ್ನು ಹಾಕದೆ ಬರೀ ಅಕ್ಕಿಹಿಟ್ಟಿನಲ್ಲಿ ಮಾಡಿರುವ ಚಿಕ್ಕ ಚಿಕ್ಕ ರೊಟ್ಟಿಗಳು) ಹೀಗೆ ಒಟ್ಟು ಒಂಬತ್ತು ಬಗೆಯ ವಸ್ತುಗಳನ್ನು ಸೇರಿಸಿ ಹಾರ ಮಾಡಿ ಜಾನುವಾರಗಳ ಕುತ್ತಿಗೆಗೆ ಕಟ್ಟುವರು. ಇದರ ಜೊತೆಗೆ ಒಂದು ಚೆಂಡು ಹೂವಿನ ಹಾರ ಮತ್ತು ಉಗಣೆ ಬಳ್ಳಿಯ (ಮಲೆನಾಡಿನಲ್ಲಿ ಸಿಗುವ ಒಂದು ಬಗೆಯ ಬಳ್ಳಿ) ಹಾರಗಳನ್ನೂ ಹಾಕುತ್ತಾರೆ. ಹಾರಗಳಿಂದ ಸಿಂಗಾರಗೊಂಡ ಜಾನುವಾರಗಳಿಗೆ ಅರಿಸಿನ ಕುಂಕುಮ ಹಚ್ಚಿ ಪೂಜೆ ಮಾಡುವರು. ಪೂಜೆ ಮುಗಿದ ಮೇಲೆ ಜಾನುವಾರುಗಳನ್ನು ಮೇಯಲು ಹೊರಗೆ ಬಿಡುವರು. ಅವು ಸಂಜೆ ಹಿಂದಿರುಗಿ ಬರುವ ಹೊತ್ತಿಗೆ ಕೊಟ್ಟಿಗೆಯ ಬಾಗಿಲಿಗೆ ಒನಕೆಯನ್ನು ಅಡ್ಡಲಾಗಿ ಇಟ್ಟು, ಅವುಗಳನ್ನು ಕೊಟ್ಟಿಗೆಯ ಬಾಗಿಲಲ್ಲೇ ನಿಲ್ಲಿಸಿಕೊಂಡು, ಆರತಿ ಎತ್ತಿ, ಕಣ್ಣು ತೆಗೆದು (ಕುಂಕುಮದ ನೀರು ಹಾಗು ಮಸಿ ನೀರನ್ನು ತಟ್ಟೆಯಲ್ಲಿಟ್ಟು ಹಸುಗಳಿಗೆ ಸುಳಿದು ಆ ನೀರನ್ನು ಹೊರಗೆ ಚೆಲ್ಲುವುದು) ಕೊಟ್ಟಿಗೆಯ ಒಳಗೆ ಬರಮಾಡಿಕೊಳ್ಳಲಾಗುವುದು.

ಮೂರನೇ ದಿನದ ಪಂಜಿನ ಹಬ್ಬ:

ಅಣಿಮಾಡಿರುವ ಪಂಜಿನ ಕೋಲುಗಳು

ಅಣಿಮಾಡಿರುವ ಪಂಜಿನ ಕೋಲುಗಳು

ಪಂಜಿನ ಕೋಲುಗಳನ್ನು ಮಾಡುವ ಕೆಲಸ ಬೆಳಗಿನಿಂದಲೇ ಮೊದಲಾಗುವುದು. ಒಣಗಿದ ಬಿದಿರು, ಒಣಗಿದ ಅಡಿಕೆ ಮರ, ವಾಟೆ ಬಿದಿರು, ಇಲ್ಲವೇ ಕೆಂದಾಳು ಮರದ ಗೆಲ್ಲುಗಳನ್ನು ತಂದು 4 ರಿಂದ 5 ಅಡಿ ಎತ್ತರದ ಕೋಲುಗಳನ್ನು ಮಾಡಿಕೊಳ್ಳಲಾಗುವುದು. ಹತ್ತಿ ಬಟ್ಟೆಯನ್ನು ಅಂಗೈಯಗಲ ತುಂಡುಗಳನ್ನಾಗಿ ಮಾಡಿ ಹರಳೆಣ್ಣೆಯಲ್ಲಿ ನೆನೆಸಿಕೊಂಡು, ಪಂಜಿನ ಕೋಲಿನ ತುದಿಗೆ ಸುತ್ತಿ, ಒಂದೆರಡು ಚೆಂಡು ಹೂವನ್ನು ಕೋಲಿಗೆ ಸಿಕ್ಕಿಸಿ ಸಿಂಗರಿಸುತ್ತಾರೆ.

ಮನೆಯ ಅಂಗಳದಲ್ಲಿರುವ ತುಳಸಿ ಕಟ್ಟೆಯ ಸುತ್ತ ನಾಲ್ಕು ಚಿಕ್ಕ ಕಂಬಗಳನ್ನಿಟ್ಟು, ಬಿದಿರು ಇಲ್ಲವೇ ಅಡಕೆಯ ದಬ್ಬೆಗಳನ್ನು ಅಡ್ಡಲಾಗಿ ಕಟ್ಟಿ, ಮಣ್ಣಿನ ಹಣತೆಗಳನ್ನಿಡಲು ಆಗುವಂತೆ ಅಣಿಮಾಡಲಾಗುವುದು. ಅಡ್ಡಲಾಗಿರುವ ದಬ್ಬೆಯ ಮೇಲೆ ಹಣತೆಗಳನ್ನು ಸಾಲಾಗಿ ಇಟ್ಟು ಹೂವು, ಮಾವಿನ ತೋರಣ, ಬಾಳೆ ಕಂದು (ಎಳೆಯ ಬಾಳೆ ಗಿಡ) ಹಾಗೂ ರಂಗೋಲಿಯಿಂದ ತುಳಿಸಿ ಕಟ್ಟೆಯನ್ನು ಸಿಂಗರಿಸುತ್ತಾರೆ. ಕಟ್ಟೆಯ ಸುತ್ತ ಪಂಜಿನ ಕೋಲುಗಳನ್ನು ಊರಲಾಗುವುದು. ಮನೆಯ ಹೊರಗೆ ಇಶ್ಟೆಲ್ಲಾ ಕೆಲಸಗಳು ಆಗುತ್ತಿರುವಾಗ ಒಳಗೆ ಹಬ್ಬದ ಅಡುಗೆ ಅಣಿಯಾಗುತ್ತಿರುತ್ತದೆ.

ತೋಟದಲ್ಲಿ ಹಚ್ಚಿರುವ ಪಂಜು ಹಾಗೂ ಲಕ್ಕೆ

ತೋಟದಲ್ಲಿ ಹಚ್ಚಿರುವ ಪಂಜು ಹಾಗೂ ಲಕ್ಕೆ

ಸಂಜೆ ಆಗುತ್ತಿದ್ದಂತೆ ಪಂಜಿನ ಕೋಲುಗಳನ್ನು ತುಳಸಿ ಕಟ್ಟೆಯ ಎದುರಿಗಿಟ್ಟು ಮನೆಯ ಹಿರಿಯರು ಪೂಜೆ ಮಾಡುವರು. ಪಂಜಿನ ಪೂಜೆ ಆದಮೇಲೆ ಪಂಜಿನ ಕೋಲುಗಳನ್ನು ತೆಗೆದುಕೊಂಡು ಮನೆಯ ಮುಂಬಾಗಿಲು, ಹಿಂಬಾಗಿಲು, ಗದ್ದೆ, ತೋಟ ಹೀಗೆ ಮೊದಲ ದಿನದ ಹಬ್ಬದಲ್ಲಿ ಎಲ್ಲೆಲ್ಲಿ ಲಕ್ಕೆ ಹಾಕಿರುತ್ತಾರೋ ಅಲ್ಲೆಲ್ಲಾ ಪಂಜಿನ ಕೋಲುಗಳನ್ನು ನೆಟ್ಟು, ಪಂಜನ್ನು ಹೊತ್ತಿಸಿ, ಕೈ ಮುಗಿದು ಬರಲಾಗುತ್ತದೆ. ಮನೆ, ಗದ್ದೆ ಹಾಗು ತೋಟವನ್ನು ಕೇಡುಗಳಿಂದ ಈ ಲಕ್ಕೆ ಹಾಗು ಪಂಜು ಕಾಪಾಡುವುದು ಎಂಬುದು ನಂಬಿಕೆ. ದೇವರ ಗದಿಗೆಗಳಿಗೆ ಲಕ್ಕೆ ಹಾಗು ಪಂಜನ್ನು ಹಾಕುವುದು ಮನೆಯ ದೇವರಿಗೆ ಗೌರವ ಸೂಚಿಸುವ ಒಂದು ಕ್ರಮವಾಗಿದೆ. ಹಾಗೆಯೇ, ಹಬ್ಬದ ಹೊತ್ತಿನಲ್ಲಿ ಮನೆಯವರು ಗದಿಗೆಯ ದೇವರನ್ನು ಮರೆತರೆ ಆ ದೇವರೂ ಈ ಮನೆ ಕಾಪಾಡುವುದನ್ನು ಮರೆಯುವುದು. ಲಕ್ಕೆ ಮತ್ತು ಪಂಜನ್ನು ಹಾಕಿ ನಮ್ಮನ್ನು ಕಾಪಾಡುವುದನ್ನು ಮರೆಯಬೇಡಿ ಎಂದು ಬೇಡಿಕೊಳ್ಳುವುದಾಗಿದೆ.

ಕತ್ತಲಾಗುತ್ತಿದ್ದಂತೆ ಮನೆಯ ಒಳಗೆ ಹಿತಾರಿಗೆ ಇಟ್ಟು (ಈ ದಿನ ಹಲವಾರು ಮನೆಗಳಲ್ಲಿ ಕೇಲು ಕಂದಲನ್ನು ಹಿತಾರಿಗೆ ಇಡುತ್ತಾರೆ.) 5 ಬಾಳೆಯ ಎಲೆಗಳಲ್ಲಿ ಹಬ್ಬದೂಟವನ್ನು ಬಡಿಸಿ ಎಡೆ ಇಡುವರು. ನಮ್ಮೂರಿನ ಹೆಚ್ಚಿನವರ ಮನೆಯಲ್ಲಿ ಈ ಹಬ್ಬಕ್ಕೆ ಬಾಡೂಟವನ್ನು ಮಾಡುವರು. ಬಾಡೂಟವನ್ನೇ ಹಿತಾರಿನ ಎಡೆಗೆ ಬಡಿಸಲಾಗುವುದು. ಈ ದಿನದಂದು ಕೂಡ ಎರಡು ಹಣತೆಗಳನ್ನು ಬಳಸಿ ಆರತಿ ತಟ್ಟೆಯನ್ನು ಅಣಿಮಾಡಲಾಗುವುದು.

belakina-habba-10

ಕೇಲು ಕಂದಲಿನ ಹಿತಾರು – ಐದು ಎಲೆಗಳಲ್ಲಿ ಹಬ್ಬದಡುಗೆಯನ್ನು ಬಡಿಸಿರುವುದು

ಮೊದಲು ಹಿತಾರು ಮತ್ತು ಆರತಿ ತಟ್ಟೆಯ ಹಣತೆಗಳನ್ನು ಹಚ್ಚಿ, ಮನೆಯವರೆಲ್ಲರೂ ಸೇರಿ ತುಳಸಿ ಕಟ್ಟೆಯ ಸುತ್ತಲಿನ ಹಣತೆಗಳು ಹಾಗು ಪಂಜನ್ನು ಹಚ್ಚುವರು. ಆರತಿ ತಟ್ಟೆಯನ್ನು ತಂದು ತುಳಸಿ ಹಾಗು ದೇವಿರಮ್ಮನ ಬೆಟ್ಟದ ಕಡೆಗೆ ಬೆಳಗಿ, ಒಳಗೆ ತೆಗೆದುಕೊಂಡು ಹೋಗಿ ಹಿತಾರಿನ ಎದುರಿಗೆ ಇಡುವರು. ಈ ಹೊತ್ತಿನಲ್ಲಿ ಮನೆಯ ಮುಂದೆಲ್ಲಾ ಬೆಳಗುತ್ತಿರುವ ಹಣತೆಗಳನ್ನು ನೋಡಲು ಕಣ್ಣೆರಡು ಸಾಲದು.

belakina-habba-11

ಹಣತೆ ಹಾಗೂ ಪಂಜಿನ ಬೆಳಕಿನಿಂದ ಕಂಗೊಳಿಸುವ ತುಳಸಿ ಕಟ್ಟೆ

ಮನೆಯವರೆಲ್ಲಾ ಹೊರಗಿನ ದೀಪಗಳನ್ನು ನೋಡಿ ನಲಿದ ಮೇಲೆ, ಒಳಬಂದು ಎಲ್ಲರೂ ಹಿತಾರಿಗೆ ಆರತಿಯನ್ನು ಎತ್ತುತ್ತಾರೆ. ಬಳಿಕ ಎಲ್ಲರೂ ಒಟ್ಟಾಗಿ ಊಟಕ್ಕೆ ಕೂರುವರು. ಊಟಕ್ಕೆ ಕುಳಿತವರ ಎದುರಿಗೆ ಒಬ್ಬರು ಆರತಿ ತಟ್ಟೆಯನ್ನು ತಂದು ಹಿಡಿಯುವರು, ಅದಕ್ಕೆ ನಮಸ್ಕರಿಸಿ ಊಟವನ್ನು ಶುರುಮಾಡುತ್ತಾರೆ. ಮೂರು ದಿನಗಳ ಬೆಳಕಿನ ಹಬ್ಬದ ಆಚರಣೆಗೆ ಅಂದು ತೆರೆ ಬೀಳುತ್ತದೆ.

(ಚಿತ್ರ ಸೆಲೆ: srigokarna.org, ರತೀಶ ರತ್ನಾಕರ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: