ಅವಳಪ್ಪುಗೆಯ ಮುದ ಸಾಕೆನ್ನ ಬದುಕಿಗೆ

– ಹರ‍್ಶಿತ್ ಮಂಜುನಾತ್.

boy-girl-couple-in-sunset-12101

ಯಾರವಳು ಅಲಂಕಾರಕೆ ಅಡಿಯಿಟ್ಟವಳು
ಯಾರವಳು ಬಣ್ಣ ಬೆಡಗ ಮೆರುಗೆಂದವಳು
ಅವಳು ಬಲ್ಲಳೇ ಎನ್ನವಳ ಲಾವಣ್ಯವ
ಕಣ್ ಕಾಡಿಗೆ ಹೆಚ್ಚಿಸುವ ತಾರುಣ್ಯವ ?

ನೋಟದೊಳಗದೇನ ಇಟ್ಟನೋ ಪರಶಿವ
ತಾನ್ ಮರುನುಡಿಗೆ ಎಡೆ ಕೊಡದೆ ಸೆಳೆವ
ಅವಳ ಕಣ್ಣಾಟಕೆ ಪಾಲು ಕೇಳುವ ಹಟದಿ
ಮರುಹುಟ್ಟ ಬಯಸಿವೆ ಕಮಲದೆಸಳುಗಳು

ಅವಳ ಜೊತೆ ಬಯಸುವ ಮನದಪರಾದಕೆ
ಕನ್ನಡಿಯೊಂದ ಹಿಡಿದು ನೋಡೇ ಬೆಳಕೆ
ಮೂಡುವುದಲ್ಲಿ ನೆರಳುಗಳ ಚಿತ್ತಾರ
ನನ್ನಲ್ಲಿ ಅವಳು, ಅವಳಲ್ಲಿ ನಾನು!

ಹೂವ ಕಂಪದು ದುಂಬಿಯ ಪಾಲಿಗಿರಲೆಂದು
ಜಗ ಬಯಸುವುದೆಂತು ಬರೆಯದ ಬರಿಗೆಗಳ
ಕಿವಿಗೊಡದೆ ಸರಿದಾಡಿದೆ ಹುಡುಕಾಟದಿ
ನಿನ್ನಡೆಗೆ ಜಾರಿದೆ ಒಡನೆ ಮನ ಒಲವರಸಿ

ಅದಾವ ದೇವನು ಸಲಹಿ ಪೊರೆದಿಹನೋ
ಸಲ್ಲದ ಮನಕೆ ಒಲವ ಸುರಿವ ಸಿಹಿ ಕಲೆಯ
ನಾ ಅರೆ ಕಾಲ ಇಡುವೆ ಬಿನ್ನಹ ಅವನಲಿ
ಅವಳಪ್ಪುಗೆಯ ಮುದ ಸಾಕೆನ್ನ ಬದುಕಿಗೆ

(ಚಿತ್ರಸೆಲೆ: araspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: