‘ಅಮೆಜಾನ್ ಗೋ’ – ಕೊಳ್ಳುವಿಕೆಯ ನಾಳೆಗಳು

 ವಿಜಯಮಹಾಂತೇಶ ಮುಜಗೊಂಡ.

amazon-go

ವಾರಪೂರ‍್ತಿ ಬಿಡುವಿಲ್ಲದೆ ಕೆಲಸಮಾಡಿ ವಾರದ ಕೊನೆಯಲ್ಲಿ ಹಾಯಾಗಿ ಇರೋಣವೆಂದರೆ ಮನೆಗೆ ಸಾಮಾನುಗಳನ್ನು ಕೊಂಡು ತರುವುದು ದೊಡ್ಡ ಕೆಲಸವೇ ಅನಿಸುತ್ತದೆ. ಇತ್ತೀಚಿಗೆ ಹಲವು ಮಿಂದಾಣಗಳು ಆನ್‍ಲೈನ್‍ನಲ್ಲಿ ಕೊಳ್ಳಲು ಅನುವುಮಾಡಿ ಮನೆಗೆ ಸಾಮಾನು ತರುವ ಕೆಲಸವನ್ನು ಸುಳುವಾಗಿಸಿವೆ. ನಿಮಗೇನೇ ಬೇಕೆಂದರೂ ಮನೆಯಿಂದಲೇ ಕೊಂಡುಕೊಳ್ಳುವ ಆಯ್ಕೆ ಇದೀಗ ಹಲವು ಕಡೆ ಸಿಗುತ್ತಿದೆ. ಒಂದೆರೆಡು ದಿನ ಅತವಾ ಕೆಲವೇ ಗಂಟೆಗಳಲ್ಲಿ ಬೇಕಾದ ವಸ್ತು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಆದರೂ ಆನ್‍ಲೈನ್‍ನಲ್ಲಿ ಕರೀದಿ ಮಾಡಲು ಹಲವು ತೊಂದರೆಗಳಿವೆ. ವಸ್ತುಗಳ ಗುಣಮಟ್ಟ ಹಲವು ಸಲ ನೀವಂದುಕೊಂಡಶ್ಟು ಒಳ್ಳೆಯದಾಗಿರುವುದಿಲ್ಲ, ಅದು ನಿಮ್ಮ ಕೈ ಸೇರಿದ ಮೇಲೆಯೇ ಸರಿಯಿಲ್ಲ ಎಂದು ಗೊತ್ತಾಗುತ್ತದೆ. ಅದರಲ್ಲೂ ಹಣ್ಣು ಅತವಾ ತರಕಾರಿಗಳ ವಿಶಯದಲ್ಲಿ ತುಸು ಹೆಚ್ಚಾಗಿಯೇ ಎಚ್ಚರವಹಿಸಬೇಕು. ಕಾಯಿಪಲ್ಲೆಗಳನ್ನು ಆನ್‍ಲೈನ್‍‍ನಲ್ಲಿ ಕೊಳ್ಳುವುದು ತುಂಬ ಕಶ್ಟ. ಕೊಳೆತ ಅತವಾ ಹಳೆಯದನ್ನು ತಂದುಕೊಟ್ಟರೆ ಏನು ಮಾಡುವುದು? ಎನ್ನುವ ತಲೆನೋವು ಯಾವಾಗಲೂ ಇದ್ದಿದ್ದೇ. ಹೀಗಾಗಿ ಅಂಗಡಿ ಅತವಾ ಸಂತೆಮಾಳಕ್ಕೆ ಹೋಗಿ, ಮನೆಗೆ ಬೇಕಾದ ವಸ್ತುಗಳನ್ನು ಕೊಂಡು ತರುವುದೊಂದೇ ದಾರಿ. ಆದರೆ ಅದರ ತಲೆನೋವೇ ಬೇರೆ. ರಸೀದಿ ಮಾಡಿಸಿ, ದುಡ್ಡುಕೊಡಲು ಹನುಮನ ಬಾಲದಂತೆ ಬೆಳೆದ ಉದ್ದನೆಯ ಸಾಲುಗಳು. ಅದರಲ್ಲೂ ವಾರದ ಕೊನೆ ಅಂದರೆ ಕೇಳಬೇಕೇ?

ಹಲವರ ಮೆಚ್ಚಿನ ಆನ್‍ಲೈನ್ ಕರೀದಿಯ ಮಿಂದಾಣ ಅಮೆಜಾನ್ ಈಗ ಇದಕ್ಕೆಲ್ಲ ಕೊನೆ ಹಾಡುತ್ತಿದೆ. ಇಲ್ಲಿಯವರೆಗೂ ಬರೀ ಆನ್‍ಲೈನ್ ಕರೀದಿಗಶ್ಟೇ ಸೀಮಿತವಾಗಿದ್ದ ಅಮೆಜಾನ್ ಇದೀಗ ಹೊಸಬಗೆಯ ಚಿಲ್ಲರೆ ವ್ಯಾಪಾರದ(retail) ಅಂಗಡಿಗಳನ್ನು ತೆರೆಯಲಿದೆ. ‘ಅಮೆಜಾನ್ ಗೋ’ ಹೆಸರಿನ ಈ ಅಂಗಡಿಗಳು, ಕೊಳ್ಳುಗರ ಉದ್ದನೆಯ ಸಾಲುಗಳನ್ನು ತೊಡೆದುಹಾಕಲಿವೆ. ಈಗಿರುವ ಡಿ-ಮಾರ‍್ಟ್, ಬಿಗ್ ಬಜಾರ್ ಅತವಾ ವಾಲ್‍ಮಾರ‍್ಟ್ ಅಂಗಡಿಗಳಿಗಿಂತ ಬೇರೆಯದೇ ಬಗೆಯ ಶಾಪಿಂಗ್ ಅನುಬವ ‘ಅಮೆಜಾನ್ ಗೋ’ ಅಂಗಡಿಗಳಲ್ಲಿ ಸಿಗಲಿದೆ. ಇಲ್ಲಿ ಉದ್ದನೆಯ ಸಾಲಿನಲ್ಲಿ ನಿಂತು ರಸೀದಿ ಮಾಡಿಸಬೇಕಾಗಿಲ್ಲ ಅತವಾ ದುಡ್ಡು-ಕಾರ‍್ಡು ಕೊಡಬೇಕಾಗಿಯೂ ಇಲ್ಲ. ನಿಮ್ಮ ಚೂಟಿಯುಲಿಯಲ್ಲಿ(smartphone) ‘ಅಮೆಜಾನ್ ಗೋ’ ಬಳಕವನ್ನು(application) ಅಳವಡಿಸಿಕೊಂಡಿರಬೇಕಶ್ಟೆ!

ನಿಮ್ಮ ಚೂಟಿಯುಲಿಯ ‘ಅಮೆಜಾನ್ ಗೋ’ ಬಳಕ ಉಪಯೋಗಿಸಿ ಅಂಗಡಿಯ ಬಾಗಿಲಲ್ಲಿ ಕೋಡ್‌ ಅನ್ನು ಸ್ಕ್ಯಾನ್ ಮಾಡಿ ಒಳನಡೆಯಬೇಕು. ನಿಮಗಿಶ್ಟವಾದ ಸಾಮಾನುಗಳನ್ನು ನಿಮ್ಮ ಬುಟ್ಟಿಗೆ ಸೇರಿಸುತ್ತಾ ಹೋದರೆ ಸಾಕು, ಅಂಗಡಿಯಲ್ಲಿರುವ ಎಣ್ಣುಕಗಳು ನಿಮ್ಮ ಕರೀದಿಯ ಲೆಕ್ಕ ಇಡುತ್ತವೆ. ಅಮೆಜಾನ್‍ನ ಬಿಣಿಗೆಗಳ ಕಲಿಕೆಯ ಅಳವನ್ನು ಬಳಸುವ ಚಳಕ (machines learning technology) ನೀವು ಅಟ್ಟಣಿಗೆಯಿಂದ ಎತ್ತಿಕೊಂಡ ಎಲ್ಲ ಸಾಮಾನುಗಳ ಪಟ್ಟಿಮಾಡುತ್ತ ಹೋಗುತ್ತದೆ. ನಿಮಗಿಶ್ಟವಾದ ತಿಂಡಿ ತಿನಿಸು, ದಿನಸಿ, ಹಾಲು-ಹಣ್ಣು ಎಲ್ಲವುಗಳನ್ನೂ ಬುಟ್ಟಿಗೆ ಸೇರಿಸಿದ ಬಳಿಕ ನೀವು ರಸೀದಿ ಮಾಡಿಸಿ ದುಡ್ಡು ಕೊಡಬೇಕಿಲ್ಲ ಅತವಾ ಕಾರ‍್ಡ್ಅನ್ನೂ ಉಜ್ಜಬೇಕಿಲ್ಲ. ಅಂಗಡಿಯಿಂದ ಹೊರನಡೆದ ಬಳಿಕ ನೀವು ತೆಗೆದುಕೊಂಡ ಸಾಮಾನುಗಳಿಗೆ ಲೆಕ್ಕ ಮಾಡಿ ದುಡ್ಡನ್ನು ನಿಮ್ಮ ಅಮೆಜಾನ್ ಕಾತೆಯಿಂದ ಕಳೆಯಲಾಗುತ್ತದೆ. ರಸೀದಿ ನಿಮ್ಮ ಚೂಟಿಯುಲಿಗೇ ಬರುತ್ತದೆ. ಈ ಎರ‍್ಪಾಡಿನಲ್ಲಿ ನಿಮಗಿಶ್ಟವಾದ ಸಾಮಾನುಗಳನ್ನು ಬುಟ್ಟಿಗೆ ಹಾಕಿಕೊಂಡು ಹೋಗುವುದಶ್ಟೇ ನಿಮ್ಮ ಕೆಲಸ.

 

ಈ ಬಗೆಯ ಮೊದಲ ಅಂಗಡಿ ವಾಶಿಂಗ್ಟನ್‍ಸಿಯಾಟಲ್‍ನಲ್ಲಿ 2017ರ ಶುರುವಿನಲ್ಲಿಯೇ ತೆರೆಯಲಿದೆ ಎಂದು ಅಮೆಜಾನ್ ಹೇಳಿಕೊಂಡಿದೆ. ಮೊದಲೇ ತಯಾರಿಸಿದ ತಿಂಡಿ, ಹಾಲು-ಬ್ರೆಡ್ಡು ಮತ್ತು ಇತರೆ ದಿನಸಿ ಸಾಮಾನುಗಳು ಇಲ್ಲಿ ಸಿಗಲಿವೆಯಂತೆ. ಸುಮಾರು 1800 ಚದರ ಅಡಿ ಹರವಿನ ಈ ಅಂಗಡಿಗಳು ಬೇರೆ ದೊಡ್ಡ-ಮಾರುಮಳಿಗೆಗಳಿಗೆ(supermarkets) ಹೋಲಿಸಿ ನೋಡಿದರೆ  ಕೊಂಚ ಚಿಕ್ಕದಾಗಿರಲಿವೆ.

ಅಟ್ಟಣಿಗೆಯ ಮೇಲಿನಿಂದ ನೀವು ಎತ್ತಿಕೊಂಡ ಸಾಮಾನೊಂದನ್ನು ನೀವು ಬೇರೆಡೆ ಇಟ್ಟರೆ ಹೇಗೆ? ಕಳ್ಳತನ ಆಗುವುದಿಲ್ಲವೇ? ಎನ್ನುವ ಕೇಳ್ವಿಗಳು ಮೂಡುವುದು ಸಹಜ. ಅಂಗಡಿ ತೆರದ ಬಳಿಕವೇ ಇದಕ್ಕ್ಕೆಲ್ಲ ಉತ್ತರ ಸಿಗಬೇಕು! ಅದೇನೇ ಆದರೂ ಉದ್ದನೆಯ ಸಾಲುಗಳಿಲ್ಲದೇ ಅತೀ ಕಡಿಮೆ ಹೊತ್ತಿನಲ್ಲಿ ನಿಮ್ಮ ಕರೀದಿ ಮುಗಿಸಿಕೊಂಡು ಹೊರಡಲು ನೆರವಾಗುವ ಈ ಏರ‍್ಪಾಟು ಸಕ್ಕತ್ ಅಲ್ಲವೇ?

(ಮಾಹಿತಿ ಮತ್ತು ಚಿತ್ರ ಸೆಲೆ: weforum.org, businessinsider.in, youtube.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: