ರೊಬೋಟ್‍ಗಳ ಜಗತ್ತಿನಲ್ಲಿ 2016 ಹೇಗಿತ್ತು?

ವಿಜಯಮಹಾಂತೇಶ ಮುಜಗೊಂಡ.

atlas-ieee

ಬೋಸ್ಟನ್ ಡೈನಮಿಕ್ಸ್ ತಯಾರಿಸಿರುವ ‘ಅಟ್ಲಾಸ್’

ಚಳಕದರಿಮೆಯ ಸುತ್ತ ಎಡೆಬಿಡದೆ ನಡೆಯುತ್ತಿರುವ ಅರಕೆಗಳಿಂದಾಗಿ ಹಲವು ಕೆಲಸಗಳು ಸುಳುವಾಗಿವೆ. ಮನುಶ್ಯ ಮಾಡಬಲ್ಲ ಹಲವು ಕೆಲಸಗಳನ್ನು ಇಂದು ರೊಬೋಟ್‍ಗಳು ಮಾಡುತ್ತಿವೆ. ರೊಬೋಟ್‍ಗಳು ಮಾಡಬಲ್ಲ ಕೆಲಸಗಳು ಹೆಚ್ಚುತ್ತಿರುವ ಜೊತೆಯಲ್ಲೇ ಅವುಗಳಿಂದ ಆಗುವ ತೊಂದರೆಗಳ ಪಟ್ಟಿಯೂ ಬೆಳೆಯುತ್ತಲೇ ಇದೆ. ನಾಳೆ ಎಲ್ಲಾ ಕೆಲಸಗಳನ್ನು ರೊಬೋಟ್‍ಗಳೇ ಮಾಡಹತ್ತಿದರೆ ಮಂದಿಯ ಗತಿ ಏನು? ಎನ್ನುವ ಕೇಳ್ವಿ ಮೂಡುತ್ತಿದೆ. ಇನ್ನೊಂದೆಡೆ ಇಂತಹ ಯಂತ್ರಗಳ ಬೆಳವಣಿಗೆ ಅದೆಶ್ಟು ಅಪಾಯಕಾರಿಯಾಗಬಹುದು ಎಂಬುದನ್ನು ತೋರಿಸಿರುವ ಬಹಳಶ್ಟು ಹಾಲಿವುಡ್ ಸಿನೆಮಾಗಳು ಬಂದಿವೆ.

ವರುಶದಿಂದ ವರುಶಕ್ಕೆ ಆಗುತ್ತಿರುವ ಬದಲಾವಣೆ ಮತ್ತು ಬೆಳವಣಿಗೆಗಳಿಗೆ ರೊಬೋಟ್‍ಗಳು ಕೂಡ ಹೊರತಾಗಿಲ್ಲ. 2016ರಲ್ಲಿ ರೊಬೋಟ್‍ಗಳ ಜಗತ್ತಿನಲ್ಲಿ ಆದ ಬದಲಾವಣೆಗಳು ಇಲ್ಲಿವೆ.

ಮೆದು ತೊಗಲಿನ ರೊಬೋಟ್‍ಗಳು

ರೊಬೋಟಿಕ್ಸ್ ಜಗತ್ತಿಗೆ ಮೆದು ತೊಗಲಿನ ರೊಬೋಟ್‍ಗಳು ಹೊಸ ಸೇರ‍್ಪಡೆ. 2016ರ ಮೊದಲಿನವರೆಗೆ ಗಡಸು ಮಯ್ಯುಳ್ಳ ರೊಬೋಟ್‍ಗಳಶ್ಟೇ ಇದ್ದವು. ಆದರೆ ಕಳೆದ ವರುಶ ಅರಕೆಗಾರರು ತಯಾರಿಸಿದ ರೊಬೋಟ್‍ ಮೆದು ಮಯ್ಯನ್ನು ಹೊಂದಿವೆ. ಆಕ್ಟೊಬೋಟ್ ಎನ್ನುವ ರೊಬೋಟ್ ಆಕ್ಟೋಪಸ್‍ನಂತೆ ಮೆದುವಾಗಿದ್ದು ಮುಂದೆ ತೆವಳಿಕೊಂಡು ಹೋಗಬಲ್ಲುದಾಗಿದೆ. ಸಿಲಿಕೋನ್‍ನಿಂದ ತಯಾರಾದ ಇದು ಹೈಡ್ರೊಜೆನ್ ಪೆರಾಕ್ಸೈಡ್‍ ಅನ್ನು ತನ್ನ ಕಸುವಿಗೆ ಉರುವಲಾಗಿ ಬಳಸುತ್ತದೆ.

ಮಯ್ಯಾರೈಕೆಯಲ್ಲಿ ರೊಬೋಟ್‍ನ ಕೆಲಸ

ಜಗತ್ತಿನಲ್ಲಿಯೇ ಮೊದಲ ಸಲ ರೊಬೋಟ್‍ಅನ್ನು ಬಳಸಿ ಕೊಯ್ಯಾರೈಕೆಯನ್ನು(Surgery) ಮಾಡಲಾಗಿದೆ. ಹಂದಿಯ ಕರುಳಿನ ಮೇಲೆ ನಡೆಸಿದ ಈ ಕೊಯ್ಯಾರೈಕೆಯಲ್ಲಿ ರೊಬೋಟ್ ಮನುಶ್ಯರಿಗಿಂತ ಚೆನ್ನಾಗಿ ಹೊಲಿಗೆಗಳನ್ನು ಹಾಕಿ ತೋರಿಸಿದೆ. ಮಾಂಜರಿಮೆಯಲ್ಲಿ(Medical Science) ಈಗಾಗಲೇ ಮನುಶ್ಯರ ಹತೋಟಿಯಲ್ಲಿ ಕೆಲಸ ಮಾಡುವ ರೋಬೋಟ್‍ಗಳನ್ನು ಈ ಮೊದಲೇ ಬಳಸಿದ್ದರು. ಆದರೆ ಹಂದಿಯ ಮೇಲೆ ಬಳಸಿದ ಈ ರೊಬೋಟ್‍ನ ವಿಶೇಶ ಎಂದರೆ ಅದಕ್ಕೆ ಮನುಶ್ಯರ ಹಿಡಿತ ಬೇಕಿಲ್ಲ, ತನ್ನಂಕೆಯಿಂದ(self-controll) ಕೆಲಸ ಮಾಡಬಲ್ಲುದು. ಇನ್ನೊಂದು ಅರಕೆಯಲ್ಲಿ ಮೈಯೊಳಗೆ ಸೇರಿಕೊಳ್ಳಬಲ್ಲ ರೊಬೋಟ್ ಒಂದನ್ನು ತಯಾರಿಸಲಾಗಿದೆ. ಮಯ್ಯ ಒಳಗಿನ ಸೀಳು ಅತವಾ ಗಾಯಗಳನ್ನು ಇದು ಮುಚ್ಚಬಲ್ಲದು ಎಂದು ಅರಕೆಗಾರರು ಹೇಳುತ್ತಾರೆ.

ಒಂಟಿಕಾಲಿನಲ್ಲಿ ನಿಲ್ಲಬಲ್ಲ ರೊಬೋಟ್

ರೊಬೋಟ್‍ಗಳು ಈಗ ತಗ್ಗುದಿಣ್ಣೆಗಳಿರುವ ನೆಲದ ಮೇಲೆ ನಡೆಯಬಲ್ಲವು. ಮನುಶ್ಯನ ಅಂಗಾಲಿನಂತಹ ಇಟ್ಟಳವನ್ನು(structure) ಪಡೆದ ರೊಬೋಟ್‍ಗಳು ಈಗ ಎಲ್ಲಿ ಬೇಕಾದರೂ ನಡೆಯಬಲ್ಲವು ಅಲ್ಲದೇ ಒಂಟಿಕಾಲಿನಲ್ಲಿ ನಿಲ್ಲಬಲ್ಲವು. ಇಂತಹ ಒಂದು ರೊಬೋಟನ್ನು ಬೋಸ್ಟನ್ ಡೈನಮಿಕ್ಸ್ ತಯಾರಿಸಿದ್ದು ಅದಕ್ಕೆ ಅಟ್ಲಾಸ್ ಎಂದು ಹೆಸರಿಸಿದೆ. ಇದನ್ನು ನೂಕಿ ನೆಲಕ್ಕೆ ಕೆಡವಿದರೂ ಮನುಶ್ಯರಂತೆಯೇ ನೆಲಕ್ಕೆ ಮೊಣಕಾಲು ಮತ್ತು ಕೈ ಊರಿ ಎದ್ದು ನಿಲ್ಲಬಲ್ಲುದು. ದೊಂಬರಾಟದವರು ಹಗ್ಗದ ಮೇಲೆ ನಡೆಯುವಂತೆ ಇದು ಸಳಿಯ(beam) ಮೇಲೆ ಸರಿದೂಗಬಲ್ಲುದು.

ಈ ರೊಬೋಟ್‍ಗೆ ನೋವಾಗುತ್ತದೆ

ತಡೆಯಲಾಗದ ಯಂತ್ರಗಳು(unstoppable machines) ಎಂದೇ ಕರೆಯಿಸಿಕೊಳ್ಳುವ ರೊಬೋಟ್‍ಗಳು ಕೆಲವೊಮ್ಮೆ ಕುತ್ತು ತರುವುದು ಅತವಾ ಅಪಾಯಕ್ಕೆ ಸಿಕ್ಕಿಕೊಳ್ಳುವುದು ಆತಂಕದ ಸಂಗತಿ. ಇದನ್ನು ಹಲವು ಹಾಲಿವುಡ್ ಸಿನೆಮಾಗಳಲ್ಲಿ ನೋಡಿರುತ್ತೇವೆ. ಈಗ ರೊಬೋಟ್‍ಗಳೂ ಕೂಡ ಪೆಟ್ಟು ತಿಂದು ನೋವು ಅನುಬವಿಸುವ ಹಾಗೆ ಅವುಗಳನ್ನು ಮಾಡಲಾಗಿದೆ. ಈಗ ಮನುಶ್ಯರ ತೊಗಲಿನಂತೆ ಕಾವಳತೆ(temperature) ಮತ್ತು ಒತ್ತಡವನ್ನು ತಿಳಿದು ಕೆಡುಕುಂಟುಮಾಡುವ ಕೆಲಸದಿಂದ ದೂರ ಉಳಿಯುಲಿವೆ. ಜರ‍್ಮನಿಯ ಲೆಬ್ನಿಜ್ ಕಲಿಕೆವೀಡಿನ ತಿಳಿವಿಗರು ನೋವನ್ನು ಅನುಬವಿಸಲು ನೆರವಾಗುವಂತೆ ನರಗಳ ಏರ‍್ಪಾಟು ಹೊಂದಿರುವ ರೊಬೋಟ್‍ವೊಂದನ್ನು ತಯಾರಿಸುತ್ತಿದ್ದಾರೆ.

ಎಲ್ಲೆಂದರಲ್ಲಿ ನೇತಾಡಬಲ್ಲ ರೊಬೋಟ್‍ಗಳು

ಹೆಚ್ಚು ತೂಕ ಹೊಂದಿರುವ, ಹಾರುವ ರೊಬೋಟ್‍ಗಳಿಗೆ ಉರುವಲು ಅತವಾ ಕಸುವಿನ ಮಿತಿಯಿಂದ ಹೆಚ್ಚಿನ ದೂರ ಸಾಗಲು ಆಗುವುದಿಲ್ಲ. ಅಲ್ಲಲ್ಲಿ ಬಿಡುವು ತೆಗೆದುಕೊಂಡು ಮುಂದೆ ಸಾಗಿದರೆ ಇವುಗಳ ಸಾಮರ‍್ತ್ಯ ಹೆಚ್ಚುತ್ತದೆ. ಆದರೆ, ಬಿಡುವು ಪಡೆಯಲು ಸೂಕ್ತ ಜಾಗ ಸಿಗುವುದು ಕಶ್ಟ. ನಿಲ್ಮೆಮಿಂಚು(Static Electricity) ಬಳಸಿಕೊಂಡು ಇವು ಯಾವುದೇ ಮೇಲ್ಮೈಗೆ ಅಂಟಿಕೊಳ್ಳಬಲ್ಲವು. ಹಾರ‍್ವರ‍್ಡ್ ಕಲಿಕೆವೀಡು ತಯಾರಿಸಿರುವ ಕೀಟದಳತೆಯ ಇಂತಹ ಒಂದು ರೊಬೋಟ್‍ನ ಹೆಸರು ರೊಬೋ-ಬೀ(RoboBee).

ಲಕ್ವ ಹೊಡೆದವರನ್ನು ನಡೆಸುವ ರೊಬೋಟ್‍ಗಳು

ಮರವೆಯಿಂದ(paralysis) ಕಾಲು ಕಳೆದುಕೊಂಡವರು ನಡೆಯಲು ನೆರವಾಗುವ ರೊಬೋಟ್ ಒಂದು ಮಾರುಕಟ್ಟೆಗೆ ಬಂದಿದೆ. ಕ್ಯಾಲಿಪೋರ‍್ನಿಯಾದ ಸ್ಯೂಟ್ಎಕ್ಸ್(SuitX) ಎನ್ನುವ ಕಂಪನಿ ಪೀನಿಕ್ಸ್(Pheonix) ಎನ್ನುವ ರೊಬೋಟ್ ಒಂದನ್ನು ತಯಾರಿಸಿದೆ. ಒಂದು ಬಗೆಯ ತೊಡುಗೆಯಂತೆ ಕಾಣುವ ಇದು ತೊಟ್ಟವರ ಸೊಂಟ ಮತ್ತು ಮೊಳಕಾಲುಗಳ ನಡೆಯನ್ನು ನಿಯಂತ್ರಿಸುತ್ತಾ ನಡೆಯಲು ನೆರವಾಗುತ್ತದೆ. 27 ಪೌಂಡ್ ತೂಕದ ಈ ರೊಬೋಟ್ 40,000 ಅಮೆರಿಕನ್ ಡಾಲರ್ ಬೆಲೆ ಹೊಂದಿದೆ. ಕಾಲಿನ ಶಕ್ತಿ ಕಳೆದುಕೊಂಡವರಿಗೆ ನಡೆಯಲು ಅನುವು ಮಾಡಿಕೊಡುವ, ಮೈಯ ಹೊರಗಿನ ಎಲುಬುಗೂಡಿನಂತಹ ಏರ‍್ಪಾಟು. ಕಡಿಮೆ ಬೆಲೆಯುಳ್ಳ ಮತ್ತು ಹಗುರವಾದ ಎಲುಬುಗೂಡಿನೇರ‍್ಪಾಟು ಇದಾಗಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: livescience.com, ieee.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: