ಯಾದಗಿರಿ ನಗರದ ಕಿರುಪರಿಚಯ

– ನಾಗರಾಜ್ ಬದ್ರಾ.

yadagiri

ಯಾದಗಿರಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಹಾಗೂ ನಾಡಿನ ಗಡಿಬಾಗದ ದೊಡ್ಡ ನಗರಗಳಲ್ಲಿ ಒಂದಾಗಿದೆ. ನಗರವು ಸಮುದ್ರ ಮಟ್ಟಕ್ಕಿಂತ 389 ಮೀಟರ್ ಮೇಲ್ಬಾಗದಲ್ಲಿದ್ದು, ಸುಮಾರು 5.6 ಚದರ ಕಿಲೋಮೀಟರ್ ವಿಸ್ತೀರ‍್ಣವನ್ನು ಹೊಂದಿದೆ. ಕಲಬುರಗಿ ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದ್ದ ಯಾದಗಿರಿ ನಗರವನ್ನು 30 ನೆ ಡಿಸೆಂಬರ್ 2009 ರಂದು ಜಿಲ್ಲಾ ಕೇಂದ್ರವನ್ನಾಗಿ ಮಾಡಲಾಯಿತು. ಇದು ಈ ಬಾಗದ ಜನರ ದಶಕಗಳ ಬೇಡಿಕೆ ಕೂಡ ಆಗಿತ್ತು. ಹೊಸದಾಗಿ ರೂಪುಗೊಂಡ ಜಿಲ್ಲೆಗೆ ಕಲಬುರಗಿ ಜಿಲ್ಲೆಯ ಶಹಾಪೂರ, ಸುರಪುರ ಹಾಗೂ ಯಾದಗಿರಿ ತಾಲ್ಲೂಕುಗಳನ್ನು ಸೇರಿಸಲಾಯಿತು. ಯಾದಗಿರಿಯು ಕರ‍್ನಾಟಕ ರಾಜ್ಯದ 2 ನೇ ಚಿಕ್ಕ ಜಿಲ್ಲೆಯಾಗಿದೆ.

ನಗರದ ಒಳಗೆ ಹಾಗೂ ಸುತ್ತಮುತ್ತ ಹಲವಾರು ಬೆಟ್ಟಗಳಿದ್ದು, ಇದನ್ನು ಗಿರಿಗಳ ನಗರವೆಂದು ಕೂಡ ಕರೆಯುತ್ತಾರೆ. ಯಾದಗಿರಿಯು ಹಲವಾರು ಹಿನ್ನಡವಳಿಯ ತಾಣಗಳಿಂದ ಕೂಡಿದ್ದು, ಬೆಟ್ಟಗಳ ನಡುವೆ ನೆಲೆಗೊಂಡಿರುವ ರಾಜವಂಶದ ಮೂರು ಸುತ್ತಿನ ದೊಡ್ಡದಾದ ಕೋಟೆಯನ್ನು ಹೊಂದಿದೆ. ಬೀಮಾ ಹಾಗೂ ಕ್ರುಶ್ಣಾ ನದಿಗಳು ಯಾದಗಿರಿಯ ಮೂಲಕ ಹರಿಯುತ್ತವೆ.

ಜಿಲ್ಲೆಯು ಪಲವತ್ತಾದ ಕಪ್ಪು ಮಣ್ಣಿನಿಂದ ಕೂಡಿದ್ದು, ಇಲ್ಲಿ ಬೆಳೆಯುವ ತೊಗರಿ ಹಾಗೂ ಜೋಳದ ಬೆಳೆ ಏಶ್ಯಾದ್ಯಂತ ಹೆಸರುವಾಸಿಯಾಗಿದೆ. ಹಾಗೆಯೇ ಯಾದಗಿರಿ ಜಿಲ್ಲೆಯು ಯುರೇನಿಯಂ ಹಾಗೂ ಸಿಮೆಂಟ್ ಕೈಗಾರಿಕೆಗಳಿಗೆ ಬೇಕಾಗುವ ಕಲ್ಲುಗಳು ಮುಂತಾದ ನೈಸರ‍್ಗಿಕ ನಿಕ್ಶೇಪಗಳಿಗೆ ಹೆಸರುವಾಸಿಯಾಗಿದೆ. ಬೇಳೆಕಾಳುಗಳ ಮಿಲ್‍ಗಳು, ಹತ್ತಿಯ ಮಿಲ್‍ಗಳು ಮತ್ತು ಸಣ್ಣ ಕೈಗಾರಿಕೆಗಳು ಈ ನಗರದಲ್ಲಿ ನೆಲೆಸಿರುವ ಪ್ರಮುಕ ಕೈಗಾರಿಕೆಗಳಾಗಿವೆ.

ಯಾದಗಿರಿ ಎಂಬ ಹೆಸರಿನ ಹಿನ್ನಲೆ

ಯಾದಗಿರಿ ನಗರವನ್ನು ಯಾಟಗಿರಿ ಎಂದೂ ಕರೆಯುತ್ತಾರೆ. ಈ ನಗರವನ್ನು ಆಳಿದ ನಡುಗಾಲದ(medieval) ಯಾದವರಿಂದ ಯಾದಗಿರಿ ಎಂಬ ಹೆಸರು ಬಂದಿದೆ. ಕ್ರಿ.ಶ 1347 ರಿಂದ 1425 ವರೆಗೆ ಈ ನಗರವನ್ನು ಯಾದವರು ತಮ್ಮ ರಾಜದಾನಿಯನ್ನಾಗಿ ಮಾಡಿಕೊಂಡಿದ್ದರು. ಮಂದಿಯು ಆಗ ಈ ನಗರವನ್ನು ಯಾದವಗಿರಿ ಎಂದು ಕರೆಯುತ್ತಿದ್ದರು. ಕ್ರಮೇಣ ಈ ನಗರವು ಜನಸಾಮಾನ್ಯರಲ್ಲಿ ಬಾಯಲ್ಲಿ ಯಾದಗಿರಿ ಆಯಿತು. ಯಾದಗಿರಿ ಹೆಸರಿನಲ್ಲಿರುವ ಯಾದ ಎಂಬ ಪದವು ನಗರವನ್ನು ಆಳಿದ ಯಾದವರಿಂದ ಬಂದಿದೆ, ಇನ್ನು ಗಿರಿ ಎಂಬ ಪದವು ನಗರದಲ್ಲಿರುವ ಬೆಟ್ಟಗಳಿಂದ ಬಂದಿದೆ. ಯಾದಗಿರಿಯು ಬೆಟ್ಟದ ನಡುವೆ ಇರುವ ಯಾದವ ರಾಜವಂಶದ ಕೋಟೆಯ ಒಳಗಡೆ ನೆಲೆಸಿರುವ ಊರು ಎಂಬ ಅರ‍್ತ ನೀಡುತ್ತದೆ.

ಮಂದಿಯೆಣಿಕೆ ಹಾಗೂ ಕಲಿಕೆ (2011 ರ ಜನಗಣತಿಯ ಪ್ರಕಾರ) :

ಯಾದಗಿರಿ ನಗರ

ಒಟ್ಟು

ಗಂಡಸರು

ಹೆಂಗಸರು

ಮಂದಿಯಣಿಕೆ

74,294

37,008

37,286

ಕಲಿತವರು

47,000

26,000

21,000

ಸರಾಸರಿ ಕಲಿಕೆ

74.4%

82%

66.9%

ಯಾದಗಿರಿ ನಗರದ ಹಿನ್ನಡವಳಿ

ಶಾತವಾಹನರು, ಬಾದಾಮಿಯ ಚಾಲುಕ್ಯರು, ಚೋಳರು, ಬಹುಮನಿ ಸುಲ್ತಾನರು, ರಾಶ್ಟ್ರಕೂಟ, ಯಾದವರು, ಶಾಹಿಗಳು, ಆದಿಲ್ ಶಾ, ನಿಜಾಮ್ ಮತ್ತು ದಕ್ಶಿಣದ ಕೆಲವು ಪ್ರಸಿದ್ದ ರಾಜ ಮನೆತನಗಳು ಯಾದಗಿರಿ ಜಿಲ್ಲೆಯಲ್ಲಿ ಆಳ್ವಿಕೆ ಮಾಡಿದ್ದಾರೆ. ಯಾದಗಿರಿಯು 10 ನೆಯ ಶತಮಾನದಿಂದ 12 ನೆಯ ಶತಮಾನದವರೆಗೆ ಬಾದಾಮಿ ಚಾಲುಕ್ಯರ ವಶದಲ್ಲಿತ್ತು. ನಂತರ ಕ್ರಿ.ಶ 1347 ರಿಂದ 1425 ವರೆಗೆ ಯಾದವರು ಯಾದಗಿರಿ ನಗರವನ್ನು ತಮ್ಮ ರಾಜದಾನಿಯನ್ನಾಗಿ ಆಯ್ಕೆ ಮಾಡಿಕೊಂಡು ಆಳ್ವಿಕೆ ಮಾಡಿದರು. ಯಾದವರನ್ನು ಸೋಲಿಸಿ ತುಂಬಾ ವರ‍್ಶಗಳ ಕಾಲ ಆಳಿದ ಮಹಮ್ಮದ ಕಾಸೀಮನು ಅತ್ಯಂತ ಬಲಶಾಲಿ ದೊರೆಯಾಗಿದ್ದನು ಎಂದು ಹಿನ್ನಡವಳಿಕಾರರು ಹೇಳುತ್ತಾರೆ.

1504 ರಲ್ಲಿ ಯಾದಗಿರಿಯನ್ನು ವಿಜಯಪುರದ ಆದಿಲ್ ಶಾಹಿ ಸಾಮ್ರಾಜ್ಯದವರು ತಮ್ಮ ತೆಕ್ಕೆಗೆ ತೆಗೆದುಕೊಂಡರು. ನಂತರ 1657 ರಲ್ಲಿ ಮೀರ್ ಜುಮ್ಲಾನ( Mir Jumla ) ದಾಳಿಯಿಂದ ಈ ನಗರವು ಮೊಗಲರ ಕೈ ಸೇರಿತ್ತು. ಬಳಿಕ ಹೈದರಾಬಾದಿನ ಆಸಪ್ ಜಾಹಿ (ನಿಜಾಮ್) ರಾಜ ಮನೆತನದ ಆಳ್ವಿಕೆಯಿಂದ ಯಾದಗಿರಿಯು 1724 ರಿಂದ 1948 ವರೆಗೆ ಅವರ ವಶದಲ್ಲಿತ್ತು. 1863 ರಲ್ಲಿ ನಿಜಾಮ್ ಸರಕಾರವು ಜಿಲ್ಲಾಬಂದಿಯನ್ನು ರೂಪಿಸಿದ ನಂತರ ಸುರಪುರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿತು. ಅದಕ್ಕೆ ಯಾದಗಿರಿ ಸೇರಿದಂತೆ ಒಟ್ಟು ಒಂಬತ್ತು ತಾಲ್ಲೂಕುಗಳನ್ನು ಸೇರಿಸಲಾಗಿತ್ತು. ಅನಂತರ 1873 ರಲ್ಲಿ ಕಲಬುರಗಿಯನ್ನು ಏಳು ತಾಲ್ಲೂಕುಗಳನ್ನು ಒಳಗೊಂಡ ಒಂದು ಬೇರೆ ಜಿಲ್ಲೆಯನ್ನಾಗಿ ರಚಿಸಲಾಯಿತು.

1956 ರಲ್ಲಿ ರಾಜ್ಯಗಳ ಪುನರ‍್ವಿಂಗಡಣೆ ಸಮಯದಲ್ಲಿ ಕಲಬುರಗಿ ಜಿಲ್ಲೆಯು ಕರ‍್ನಾಟಕದ ರಾಜ್ಯದ ಬಾಗವಾಯಿತು. ಹಾಗೆಯೇ ಕಲಬುರಗಿ ಜಿಲ್ಲೆಗೆ ಯಾದಗಿರಿ ಸೇರಿದಂತೆ ಶಹಾಪೂರು, ಸುರಪುರ ಇನ್ನೂ ಎರಡು ತಾಲ್ಲೂಕುಗಳನ್ನು ಸೇರಿಸಲಾಯಿತು. ಕೊನೆಗೆ 30 ನೆ ಡಿಸೆಂಬರ್ 2009 ರಂದು ಯಾದಗಿರಿ, ಶಹಾಪುರ ಹಾಗೂ ಸುರಪುರ ತಾಲ್ಲೂಕುಗಳನ್ನು ಸೇರಿಸಿಕೊಂಡು ಯಾದಗಿರಿ ಎಂಬ ಹೊಸ ಜಿಲ್ಲಾ ಕೇಂದ್ರವನ್ನಾಗಿ ರೂಪಿಸಿಲಾಯಿತು.

ಯಾದಗಿರಿ ನಗರದ ಕೋಟೆ

yadagiri3

ಇದು ಕರ‍್ನಾಟಕ ರಾಜ್ಯದಲ್ಲಿನ ಅತ್ಯಂತ ದೊಡ್ಡದಾದ ಕೋಟೆಗಳಲ್ಲೊಂದು. ಯಾದಗಿರಿ ಕೋಟೆಯನ್ನು ಗಾತ್ರ ಹಾಗೂ ಗಟ್ಟಿತನದ ವಿಶಯದಲ್ಲಿ ಮದುಗಿರಿ, ಚಿತ್ರದುರ‍್ಗ, ಶಹಾಪೂರ ಮತ್ತು ಬಳ್ಳಾರಿ ಕೋಟೆಗಳಿಗೆ ಹೋಲಿಸಬಹುದಾಗಿದೆ. ಈ ಎಲ್ಲಾ ಕೋಟೆಗಳನ್ನು ಕಲ್ಲಿನ ಬೆಟ್ಟಗಳ ಮೇಲೆ ಕಟ್ಟಲಾಗಿದ್ದು, ಹಲವು ಸುತ್ತು ಗೋಡೆಗಳನ್ನು ಹೊಂದಿವೆ. ಯಾದಗಿರಿ ಕೋಟೆಯನ್ನು ಸುಮಾರು 850 ಮೀಟರ್ ಉದ್ದ, 500 ಮೀಟರ್ ಅಗಲ ಹಾಗೂ 100 ಮೀಟರ್ ಎತ್ತರವಿರುವ ಬಾರೀ ದೊಡ್ಡದಾದ ಒಂದು ಕಲ್ಲಿನ ಮೇಲೆ ಕಟ್ಟಲಾಗಿದೆ. ಈ ಕೋಟೆಯು ಜೈನ್, ಮುಸ್ಲಿಂ ಹಾಗೂ ಶೈವ ಮಿಶ್ರಿತ ಶೈಲಿಯ ವಾಸ್ತುಶಿಲ್ಪಗಳಿಂದ ಕೂಡಿದೆ.

ಯಾದಗಿರಿ ಕೋಟೆಯಲ್ಲಿ ಒಟ್ಟು 5 ಕಲ್ಬರಹಗಳಿವೆ. ಕೋಟೆಯ ಬಾಗಿಲ ಹತ್ತಿರ ಇರುವ ಒಂದು ಕಲ್ಬರಹದ ಪ್ರಕಾರ ಈ ಕೋಟೆಯನ್ನು ಬಾದಾಮಿ ಚಾಲುಕ್ಯರ ಕಾಲದಲ್ಲಿ, ಶಹಾಪೂರ ತಾಲ್ಲೂಕಿನ ಸಾಗರ ಹಳ್ಳಿಯ ಜಗನ್ನಾತ ಅವರು ಕಟ್ಟಿದ್ದಾರೆ ಎಂದು ತಿಳಿಯುತ್ತದೆ. ಬಳಿಕ ಯಾದವರು ಈ ಕೋಟೆಯನ್ನು ಬಲಪಡಿಸಿದ್ದಾರೆ ಎಂದು ಇತಿಹಾಸಕಾರರು ಹೇಳುತ್ತಾರೆ. ಬಹುಮನಿ ಸುಲ್ತಾನರು, ಆದಿಲ್ ಶಾಹಿ ಹಾಗೂ ನಿಜಾಮರ ಕಾಲದಲ್ಲಿ ಕೋಟೆಯನ್ನು ಇನ್ನೂ ವಿಸ್ತರಿಸಲಾಯಿತು.
ಎರಡು ಕಲ್ಬರಹಗಳು ಜೈನ ತೀರ‍್ತಂಕರರ ಗವಿಯಲ್ಲಿ ಸಿಕ್ಕಿದ್ದು, ಇವುಗಳು ಬಸದಿಗೆ ಸಂಬಂದಿಸಿವೆ. ಈ ಕಲ್ಬರಹಗಳು 10 ರಿಂದ 11ನೆ ಶತಮಾನಕ್ಕೆ ಸೇರಿವೆ.
ಕೋಟೆಯ ಒಳಗಡೆಯಿರುವ ಮೋತಿ ತಲಾಬಿನ ಗೋಡೆಗಳ ಮೇಲೆ ಸಿಕ್ಕಿರುವ ನಾಲ್ಕನೆಯ ಕಲ್ಬರಹವು ಕ್ರಿ.ಶ 1546 ರ ಒಂದನೇ ಇಬ್ರಾಹಿಂ ಆದಿಲ್ ಶಹಾ ಅವರಿಗೆ ಸೇರಿದೆ ಎಂದು ತಿಳಿದುಬರುತ್ತದೆ.
ಆತರ್ ಮಸೀದಿಯ ಗೋಡೆ ಮೇಲಿರುವ ಐದನೆಯ ಕಲ್ಬರಹವು 1573 ರ ಒಂದನೇ ಇಬ್ರಾಹಿಂ ಶಹಾ ಅವರಿಗೆ ಸಂಬಂದಿಸಿದ್ದು. ಈ ಕಲ್ಬರಹದ ಪ್ರಕಾರ ಮಸೀದಿಯನ್ನು ಮಿರ‍್ಜಾ ಅಲಿ ಅವರ ಕ್ವಾಜಾ ಕಿರ‍್ಮಾನಿಯ ಕಾಲದಲ್ಲಿ ಕಟ್ಟಿಸಲಾಗಿದೆ ಎಂದು ತಿಳಿದುಬರುತ್ತದೆ.

ಕೋಟೆಯ ಮೂಲೆಗಳಲ್ಲಿ ಹಲವು ಗೋಪುರಗಳಿದ್ದು, ಈ ಗೋಪುರಗಳಲ್ಲಿ ಪಿರಂಗಿ ತೋಪುಗಳಿವೆ. ಕೋಟೆಯು ಮೂರು ಸುತ್ತಿನ ಕಲ್ಲಿನ ಗೋಡೆಗಳನ್ನು ಹೊಂದಿದೆ. ಕೋಟೆಯ ಒಳಗಡೆ ತಾಯಿ ಬುವನೇಶ್ವರಿ ದೇವಿ ಗುಡಿ, ರಾಮಲಿಂಗೇಶ್ವರ ಗುಡಿ ಹಾಗೂ ಜೈನ ತೀರ‍್ತಂಕರರ ಒಟ್ಟು ಮೂರು ಬಸದಿಗಳಿವೆ. ಇವುಗಳಲ್ಲದೆ ಕೋಟೆಯ ಒಳಗಡೆ ತೋಪುಗಳು ಮತ್ತು ಹಲವಾರು ಐತಿಹಾಸಿಕ ಸ್ಮಾರಕಗಳಿವೆ.

(ಮಾಹಿತಿಸೆಲೆ: indikosh.comcensus2011.co.inyadgir.nic.inen.wikipedia.orgwikipedia.org/wiki/Yadgirexploremytrip.comyoutube.comdeccanherald.com)

(ಚಿತ್ರ ಸೆಲೆ: panoramio.comkarnatakatravel.blogspot.in)Categories: ನಾಡು

ಟ್ಯಾಗ್ ಗಳು:, , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s