ರಾಯಚೂರಿನ ಪೌರಾಣಿಕ ಹಿನ್ನಲೆಯ ಹೆಸರುವಾಸಿ ತಾಣಗಳು

– ನಾಗರಾಜ್ ಬದ್ರಾ.

ಕ್ರಿ.ಪೂ 3ನೇ ಶತಮಾನದ ಹಿನ್ನಡವಳಿಯ ತಾಣಗಳನ್ನು ಹೊಂದಿರುವ ರಾಯಚೂರು ಜಿಲ್ಲೆಯು ಹಲವಾರು ಪೌರಾಣಿಕ ಹಿನ್ನಲೆಯ ತಾಣಗಳನ್ನು ಕೂಡ ಹೊಂದಿದೆ.

ಪಂಚಮುಕಿ ಹನುಮಾನ ದೇವಾಲಯ:

pic1

ಈ ದೇವಾಲಯವು ರಾಯಚೂರು ನಗರದಿಂದ ಮಂತ್ರಾಲಯ ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ ಹಾದಿಯಲ್ಲಿ ಬರುವ ಗಾಣದಾಳ ಎಂಬ ಊರಿನಲ್ಲಿದೆ. ಗಾಣದಾಳವು ರಾಯಚೂರು ನಗರದಿಂದ ಸುಮಾರು 36 ಕಿಲೋ ಮೀಟರ್ ದೂರದಲ್ಲಿದೆ. ಈ ದೇವಾಲಯದ ಗುಹೆಯಲ್ಲಿ ಶ್ರೀ ರಾಗವೇಂದ್ರ ಸಾಮ್ವಿಯವರು ಸುಮಾರು 12 ವರ‍್ಶಗಳ ತಪಸ್ಸು ಮಾಡಿದ್ದಾರೆ ಎಂಬ ನಂಬಿಕೆಯಿದೆ. ಅನಂತರ ಹನುಮಂತನು ಪಂಚಮುಕಿ ಅವತಾರದಲ್ಲಿ ಶ್ರೀ ರಾಗವೇಂದ್ರ ಸ್ವಾಮಿ ಅವರಿಗೆ ದರ‍್ಶನ ನೀಡಿ, ಮಂಚಲ್ ಹಳ್ಳಿಯಲ್ಲಿ ಜೀವಂತ ಸಮಾದಿಯಾಗು ಎಂದು ಹೇಳಿದ್ದಾನೆಂದು ಪುರಾಣಗಳಲ್ಲಿ ಹೇಳಲಾಗುತ್ತದೆ. ಹಾಗೆಯೇ ಕಲಿಯುಗದಲ್ಲಿ ಹನುಮಂತನು ಕೇವಲ ಶ್ರೀ ರಾಗವೇಂದ್ರ ಸ್ವಾಮಿ ಹಾಗೂ ಸಂತ ತುಳಸಿದಾಸರರಿಗೆ ಮಾತ್ರ ದರ‍್ಶನ ನೀಡಿದ್ದಾನೆಂದು ಕೂಡ ಪುರಾಣಗಳಲ್ಲಿ ಹೇಳಲಾಗುತ್ತದೆ.

ಈ ದೇವಾಲಯದಲ್ಲಿರುವ ಗುಹೆ ಒಳಗೆ ಹನುಮಂತನ ಐದು ಮುಕಗಳ ಅಚ್ಚು ಗಂದದ ಕಣಕದಲ್ಲಿ ಮೂಡಿದ್ದು. ಹಾಗೆಯೇ ಹೊರಗಡೆ ಮಣ್ಣಿನ ಮೇಲೆ ಹನುಮಂತನ ಪಾದದ ಅಚ್ಚು ಮೂಡಿದೆ. ಪಂಚಮುಕಿಯಲ್ಲಿ ಶ್ರೀ ಹನುಮಂತನು ಅಂದು ಬಳಿಸಿದ ನೈಸರ‍್ಗಿಕ ಪುಶ್ಪಕ ವಿಮಾನ, ಹಾಸಿಗೆ, ತಲೆದಿಂಬು, ಗದೆ ಮತ್ತು ಚಪ್ಪಲಿಗಳಿವೆ. ಆದರೆ ಪುಶ್ಪಕ ವಿಮಾನ, ಹಾಸಿಗೆ, ತಲೆದಿಂಬುಗಳೆಲ್ಲವೂ ಇಂದು ಕಲ್ಲುಗಳಾಗಿ ರೂಪಗೊಂಡಿವೆ ಎಂಬ ನಂಬಿಕೆಯಿದೆ.

pic5

ಹನುಮಂತನು ಪಂಚಮುಕಿ ಅವತಾರವೆತ್ತಲು ಕಾರಣವೇನು?

ಶ್ರೀ ರಾಮ ಮತ್ತು ರಾವಣನ ನಡುವೆ ನಡೆಯುವ ಯುದ್ದದ ಸಮಯದಲ್ಲಿ ರಾವಣನು ತನ್ನ ತಮ್ಮನಾದ ಪಾತಾಳ ಲೋಕದ ದೊರೆ ಮಹಿರಾವಣನಿಗೆ ಸಹಾಯ ಕೇಳುತ್ತಾನೆ. ಮಹಿರಾವಣನು ವಿಬೀಶಣನ ಮಾರುವೇಶದಲ್ಲಿ ಬಂದು ಶ್ರೀ ರಾಮ ಮತ್ತು ಲಕ್ಶ್ಮಣನನ್ನು ವಂಚನೆಯಿಂದ ಪಾತಾಳ ಲೋಕಕ್ಕೆ ಕರೆದುಕೊಂಡು ಹೋಗಿ ಕೈದಿಗಳನ್ನಾಗಿ ಇಟ್ಟುಕೊಳ್ಳುತ್ತಾನೆ. ನಿಜವಾದ ವಿಬೀಶಣನು ಬಂದ ನಂತರ ಹನುಮಂತನಿಗೆ ಇದರ ಬಗ್ಗೆ ಅರಿವಾಗುತ್ತದೆ. ಹನುಮಂತನು ವಿಬೀಶಣನಿಗೆ ನಡೆದ ಗಟನೆಯನ್ನು ವಿವರಿಸುತ್ತಾನೆ. ಬಳಿಕ ವಿಬೀಶಣನು, ಪಾತಾಳ ಲೋಕಕ್ಕೆ ಹೋಗಲು ಕೇವಲ ಎರಡೇ ದಾರಿಗಳಿದ್ದು ಒಂದು ರಾವಣನ ಅರಮನೆಯ ಮೂಲಕ, ಇನ್ನೊಂದು ದಂಡಕಾರಣ್ಯದಲ್ಲಿನ ಯೆರುಕಲಾಂಬ ದೇವಿ ಎಂಬ ಹೆಸರಿನ ದೇವತೆ ಕಾವಲಿನಲ್ಲಿರುವ ಗುಹೆಯ ಮೂಲಕ ಎಂದು ಹನುಮಂತನಿಗೆ ತಿಳಿಸುತ್ತಾನೆ. ಹನುಮಂತನು ದಂಡಕಾರಣ್ಯದಲ್ಲಿನ ಯೆರುಕಲಾಂಬ ದೇವಿಯನ್ನು ಹುಡುಕಿಕೊಂಡು ಹೋಗಿ ನಡೆದ ಗಟನೆಯನ್ನು ವಿವರಿಸಿ, ಮಹಿರಾವಣನು ಸಂಹಾರ ಮಾಡಲು ಸಹಾಯ ಕೇಳುತ್ತಾನೆ. ಯೆರುಕಲಾಂಬ ದೇವಿಯು ಶ್ರೀ ರಾಮನ ಬಕ್ತ ಹಾಗೂ ಒಂದು ಕಾಲದಲ್ಲಿ ಮಹಿರಾವಣನ ಬಂದಿಯಾಗಿದ್ದ ಚಂದ್ರಸೇನಾನ ಸಹಾಯ ಪಡೆಯಲು ತಿಳಿಸುತ್ತಾಳೆ.

ಚಂದ್ರಸೇನನು ದೇವಿಯ ಆಜ್ನೆಯಂತೆ ಮಹಿರಾವಣನು ಕೊಲ್ಲಲು ಅವನ ಪೂಜಾ ಜಾಗದಲ್ಲಿ ಹಚ್ಚಿರುವ ಐದು ದೀಪಗಳನ್ನು ಒಂದೇ ಸಮಯದಲ್ಲಿ ಆರಿಸಬೇಕೆಂದು ಹನುಮಂತನಿಗೆ ಹೇಳುತ್ತಾನೆ. ಅನಂತರ ಹನುಮಂತನು ಶ್ರೀ ರಾಮರನ್ನು ಮನಸ್ಸಿನಲ್ಲಿ ಪ್ರಾರ‍್ತಿಸಿ ಈ ಸಮಸ್ಯೆಗೆ ಪರಿಹಾರವನ್ನು ಕೇಳುತ್ತಾರೆ. ಅದಕ್ಕೆ ಶ್ರೀ ರಾಮನು ನೀನು ಐದು ಮುಕಗಳ ಅವತಾರವನ್ನು ಹೊಂದುವ ಅಗತ್ಯವಿದೆ ಎಂದು ಹೇಳುತ್ತಾರೆ. ನಂತರ ಹನುಮಂತನು ಪ್ರಬು ಶ್ರೀ ರಾಮನು ಸೂಚಿಸಿದಂತೆ ಗುಹೆಯ ಮೂಲಕ ಪಾತಾಳ ಲೋಕಕ್ಕೆ ಹೋಗಿ ಪಂಚಮುಕಿ ಅವತಾರವನ್ನು ತಾಳಿ ಮಹಿರಾವಣನ ಸಂಹಾರ ಮಾಡಿ, ರಾಮ ಲಕ್ಶ್ಮಣರನ್ನು ಅವನಿಂದ ಕಾಪಾಡುತ್ತಾರೆ.

ಬಳಿಕ ಹನುಮಂತನು ಯೆರುಕಲಾಂಬ ದೇವಿಯನ್ನು ಅಬಿನಂದಿಸಿ, ಈ ಜಾಗವು ಇನ್ನು ಮುಂದೆ ಪಂಚಮುಕಿ ಎಂದು ಪ್ರಸಿದ್ದವಾಗುವುದು, ಹಾಗೆಯೇ ನಾನು ಇಲ್ಲಿಗೆ ಬರುವ ಬಕ್ತರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವೆ ಎಂದು ಹೇಳುತ್ತಾನೆ.

ಪಂಚಮುಕಿ ಅವತಾರದಲ್ಲಿರುವ ಹನುಮಂತನ ಪ್ರತಿ ಮುಕವು ಒಂದೊಂದು ಮಹತ್ವವನ್ನು ಹೊಂದಿದೆ.

1) ಪೂರ‍್ವ ದಿಕ್ಕಿನಲ್ಲಿ ಶ್ರೀ ಹನುಮಂತನ ಮೂಲ ರೂಪದ ಮುಕವಿದ್ದು ಈ ಮುಕವು ಮನಸ್ಸಿನ ಶುದ್ದತೆ ಮತ್ತು ಯಶಸ್ಸಿನ ಪ್ರತೀಕವಾಗಿದೆ.
2) ದಕ್ಶಿಣ ದಿಕ್ಕಿನಲ್ಲಿ ಶ್ರೀ ನರಸಿಂಹ ಸ್ವಾಮಿಯ ರೂಪವು ವಿಜಯ ಮತ್ತು ನಿರ‍್ಬಯತೆಯ ಪ್ರತೀಕವಾಗಿದೆ.
3) ಪಶ್ಚಿಮ ದಿಕ್ಕಿನಲ್ಲಿ ಗರುಡ ರೂಪವು ಮಾಟ ಮಂತ್ರ ಮತ್ತು ವಿಶವನ್ನು ತೆಗೆದುಹಾಕುತ್ತದೆ.
4) ಉತ್ತರ ದಿಕ್ಕಿನಲ್ಲಿ ವರಾಹ ರೂಪವು ಏಳಿಗೆ ಮತ್ತು ಸಂಪತ್ತಿನ ಪ್ರತೀಕವಾಗಿದೆ.
5) ಇನ್ನೊಂದು ಆಕಾಶದ ಕಡೆಗೆ ನೋಡುತ್ತಿರುವ ಹಯಗ್ರೀವ ರೂಪವಿದ್ದು. ಈ ಮುಕವು ಅರಿವು ಮತ್ತು ಒಳ್ಳೆಯ ಮಕ್ಕಳನ್ನು ಪಡೆಯುವಂತೆ ಹಾರೈಸುತ್ತದೆ ಎಂಬ ನಂಬಿಕೆಯಿದೆ.

ಯೆರುಕಲಾಂಬ ದೇವಾಲಯ: ಪಂಚಮುಕಿ ದೇವಾಲಯದ ಹಿಂಬದಿಯಲ್ಲಿ ಯೆರುಕಲಾಂಬ ದೇವಿಯ ದೇವಾಲಯವಿದೆ. ಇಲ್ಲಿ ಯೆರುಕಲಾಂಬ ದೇವಿಯು ಕಲ್ಲಿನ ಮೇಲೆ ಮೂಡಿದ್ದಾಳೆ. ಈ ದೇವಾಲಯಕ್ಕೆ ಸಹಸ್ರಾರು ಬಕ್ತರು ತಮ್ಮ ಬೇಡಿಕೆಗಳನ್ನು ವಿನಂತಿಸಿಕೊಳ್ಳಲು ಬರುತ್ತಾರೆ. ಯೆರುಕಲಾಂಬ ದೇವಿಯು ನಂಬಿದ ಬಕ್ತರ ಸಕಲ ಬೇಡಿಕೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆಯಿದೆ.

ಶ್ರೀಪಾದ ಶ್ರೀವಲ್ಲಬ ಸ್ವಾಮಿ ದೇವಾಲಯ:

pic2

ಈ ದೇವಾಲಯವು ರಾಯಚೂರು ನಗರದಿಂದ ಚಂದ್ರಬಂಡ ಊರಿನ ಕಡೆಗೆ ಹೋಗುವ ರಸ್ತೆಯಲ್ಲಿ ಬರುವ ಕುರವಾಪುರ ಎಂಬ ಹಳ್ಳಿಯಲ್ಲಿದೆ. ಇದು ರಾಯಚೂರು ನಗರದಿಂದ ಸುಮಾರು 38 ಕಿಲೋಮೀಟರ್ ದೂರದಲ್ಲಿದೆ. ಕುರವಾಪುರವು ಕ್ರುಶ್ಣಾ ನದಿ ತೀರದಲ್ಲಿರುವ ಒಂದು ಪುಟ್ಟ ಹಳ್ಳಿ. ಹಾಗೆಯೇ ಸುತ್ತಲೂ ಕ್ರುಶ್ಣ ನದಿ ಸುತ್ತುವರೆದಿರುವ ಒಂದು ಪುಟ್ಟ ದ್ವೀಪ. ದ್ವೀಪದ ಒಂದು ಕೊನೆಯಲ್ಲಿ ಕುರವಾಪುರ ಹಳ್ಳಿ ಹಾಗೂ ಇನ್ನೊಂದು ಕೊನೆಯಲ್ಲಿ ಶ್ರೀಪಾದ ಶ್ರೀವಲ್ಲಬ ಸ್ವಾಮಿಯವರ ದೇವಾಲಯವಿದೆ.

ಈ ದೇವಾಲಯಕ್ಕೆ ಹೋಗಲು ಜನರು ತೆಪ್ಪಗಳನ್ನು ಉಪಯೋಗಿಸುತ್ತಾರೆ. ಶ್ರೀಪಾದ ಶ್ರೀವಲ್ಲಬ ಸ್ವಾಮಿಯವರು ಕಲಿಯುಗದಲ್ಲಿ ಶ್ರೀ ದತ್ತಾತ್ರೇಯ ದೇವರ ಮೊದಲ ಅವತಾರ ಎಂಬ ನಂಬಿಕೆಯಿದೆ. ಅವರು ಕ್ರಿ.ಶ 1320 ರಿಂದ 1350 ರವರೆಗೆ ಸುಮಾರು 30 ವರ‍್ಶಗಳ ಕಾಲ ಕುರವಾಪುರದಲ್ಲಿ ಜ್ನಾನ, ವೈರಾಗ್ಯ ಸಿದ್ದಿ ಪಡೆಯಲು ತಪಸ್ಸು ಮಾಡಿದ್ದಾರೆ. ಈ ದೇವಾಲಯವನ್ನು ಹೇಮದ್ ಪಂಡಿತ ಶೈಲಿಯಲ್ಲಿ ಕಟ್ಟಲಾಗಿದ್ದು, ಇಲ್ಲಿ ಸುಮಾರು 1000 ವರ‍್ಶ ಹಳೆಯಾದದ ಒಂದು ಆಲದ ಮರ, ಔದುಂಬರ್ (Audumbar), ಗಾಯತ್ರಿ ಸೂರ‍್ಯದರ‍್ಶನ ಹಾಗೂ ಶ್ರೀಪಾದ ಶ್ರೀವಲ್ಲಬ ಸ್ವಾಮಿಯವರು ತಪಸ್ಸು ಮಾಡಿರುವ ಒಂದು ಗುಹೆಯಿದೆ. ಶ್ರೀಪಾದ ಶ್ರೀವಲ್ಲಬ ಸ್ವಾಮಿಯವರು ಅಶ್ವಿಜ ಬಹುಳ ದ್ವಾದಶಿ ದಿನದಂದು ಲಿಂಗೈಕ್ಯರಾಗಿದ್ದು. ಈ ದಿನವನ್ನು ಗುರುದ್ವಾದಶಿ ದಿನವೆಂದು ಬಕ್ತರು ಕರೆಯುತ್ತಾರೆ.

ಶ್ರೀಪಾದ ಶ್ರೀವಲ್ಲಬ ಸ್ವಾಮಿಯ ಹಿನ್ನಡವಳಿ:

pic3

ಇವರು ಶ್ರೀ ಅಪ್ಪಲರಾಜ ಸರ‍್ಮಾ ಹಾಗೂ ಸುಮತಿ ದೇವಿಯವರ ಮೂರನೆಯ ಮಗನಾಗಿ ಆಂದ್ರಪ್ರದೇಶದ ಪಿತಾಪುರಂನಲ್ಲಿ ಹುಟ್ಟಿದ್ದರು. ಆದರೆ ಇವರ ಕಾರ‍್ಯಕ್ಶೇತ್ರ ಹಾಗೂ ತಪೋ ಬುಮಿ ಮಾತ್ರ ರಾಯಚೂರು ಜಿಲ್ಲೆಯ ಕುರವಾಪುರ. ಈ ದಂಪತಿಗಳಿಗೆ ಮೊದಲ ಇಬ್ಬರೂ ಮಕ್ಕಳು ಕುರುಡ ಹಾಗೂ ಕುಂಟುಕಾಲುಗಳನ್ನು ಹೊಂದಿದ್ದರು. ಶ್ರೀ ದತ್ತಾತ್ರೇಯ ಅವರ ಆಶಿರ‍್ವಾದದಿಂದ ಈ ದಂಪತಿಗಳಿಗೆ ಶ್ರೀಪಾದ ಶ್ರೀವಲ್ಲಬ ಸ್ವಾಮಿಯವರು ಮೂರನೆಯ ಮಗನಾಗಿ ಹುಟ್ಟಿದ್ದರು. ಇವರು ತಮ್ಮ ಏಳನೆಯ ವಯಸ್ಸಿನಲ್ಲಿಯೇ ವೇದ, ಶಾಸ್ತ್ರ ಹಾಗೂ ಉಪನಿಶತ್‍ಗಳ ಕಲಿಕೆಯನ್ನು ಮುಗಿಸಿದರು. ಉಪಯನದ ನಂತರ ಅವರು ವೇದ, ಶಾಸ್ತ್ರಗಳ ಬಗ್ಗೆ ಜನರಿಗೆ ಉಪನ್ಯಾಸವನ್ನು ನೀಡಲಾರಂಬಿಸಿದರು. ಇದನ್ನು ಗಮನಿಸಿದ ಅವರ ತಂದೆತಾಯಿಯವರು ಶ್ರೀಪಾದ ಶ್ರೀವಲ್ಲಬ ಸ್ವಾಮಿಯವರ 16 ನೆಯ ವಯಸ್ಸಿನಲ್ಲಿಯೇ ಮದುವೆ ಮಾಡಬೇಕೆಂದು ಬಾವಿಸಿದರು. ಆದರೆ ಸ್ವಾಮಿಯವರು ನಾನು ಈಗಾಗಲೇ ವೈರಾಗ್ಯ ಸ್ತ್ರೀಯನ್ನು ಮದುವೆಯಾಗಿರುವೆ ಎಂದು ಹೇಳಿದ್ದರು. ಆದ್ದರಿಂದಲೇ ಅವರನ್ನು ಶ್ರೀಪಾದ ಶ್ರೀವಲ್ಲಬ ಎಂದು ಕರೆಯುತ್ತಾರೆ.

ಅನಂತರ ಅವರು ಮನೆಯನ್ನು ಬಿಟ್ಟು ಕಾಶಿ, ಬದ್ರಿನಾತ, ಕೇದರನಾತ ಕಡೆಗೆ ಹೊರಟರು. ಅನಂತರ ಅಲ್ಲಿಂದ ಅವರು ಗೋಕರ‍್ಣ, ಮಹಾಬಲೇಶ್ವರ ಕಡೆಗೆ ಹೋಗಿ, ಮಹಾಬಲೇಶ್ವರದಲ್ಲಿ 3 ವರ‍್ಶಗಳ ಕಾಳ ಉಳಿದು, ನಂತರ ಅಲ್ಲಿಂದ ಶ್ರೀಶೈಲದ ಕಡೆಗೆ ಹೋದರು. ಕಡೆಗೆ ಕೆಲವು ತಿಂಗಳ ನಂತರ ಶ್ರೀಶೈಲದಿಂದ ಹೊರಟು ಕುರವಾಪುರದಲ್ಲಿ ಬಂದು ನೆಲೆಸಿದರು.

ಬಬ್ರುವಾಹನನ ಸ್ತಂಬ

pic5

ಇದು ರಾಯಚೂರಿಂದ ಬೀದರ್ ಕಡೆಗೆ ಹೋಗುವ ರಾಜ್ಯ ಹೆದ್ದಾರಿ 15 ರಲ್ಲಿ ರಾಯಚೂರಿನಿಂದ ಸುಮಾರು 41 ಕಿಲೋಮೀಟರ್ ದೂರದಲ್ಲಿರುವ ಗಬ್ಬೂರ ನಗರದಲ್ಲಿದೆ. ಗಬ್ಬೂರನ್ನು ರಾಯಚೂರು ಜಿಲ್ಲೆಯ ದೇವಾಲಯಗಳ ನಗರವೆಂದು ಕರೆಯುತ್ತಾರೆ. ಈ ನಗರದಲ್ಲಿ ಸುಮಾರು 30 ಐತಿಹಾಸಿಕ ದೇವಾಲಯಗಳು ಹಾಗೂ 28 ಕಲ್ಬರಹಗಳಿವೆ. ಇಲ್ಲಿನ ಅನೇಕ ದೇವಾಲಯಗಳು ಬಾದಾಮಿ ಚಾಲುಕ್ಯರ ಕಾಲದಲ್ಲಿ ಕಟ್ಟಲಾಗಿವೆ.

ಹಳೇಕಾಲದಲ್ಲಿ ಈ ನಗರವನ್ನು ಮಣಿಪುರ, ಗರ‍್ಬಾಪೂರ ಮತ್ತು ಗೋಪುರಗ್ರಾಮ ಎಂದೂ ಕರೆಯಲಾಗುತ್ತಿತ್ತು. ಹಾಗೆಯೇ ಈ ನಗರವು ಆಗಿನ ಕಲಿಕೆಯ ಕೇಂದ್ರವಾಗಿತ್ತು. ಪಾಂಡವರ ಶ್ರೇಶ್ಟ ಬಿಲ್ಲುಗಾರ, ಮಹಾಬಾರತದ ದಂತಕತೆ ಅರ‍್ಜುನನ ಮಗನಾದ ಬಬ್ರುವಾಹನನ ರಾಜದಾನಿಯಾಗಿ ಈ ಗಬ್ಬೂರು ಹೆಸರುವಾಸಿಯಾಗಿತ್ತು. ಪಾಂಡವರ ಅಶ್ವಮೇದ ಯಜ್ನದ ಕುದುರೆಯನ್ನು ಬಬ್ರುವಾಹನನು ಒಂದು ಕಲ್ಲಿನ ಸ್ತಂಬಕ್ಕೆ ಇಲ್ಲಿಯೇ ಕಟ್ಟಿಹಾಕಿದನು ಎಂದು ಪುರಾಣದಲ್ಲಿ ಹೇಳಲಾಗಿದೆ. ಇದನ್ನು ಬಬ್ರುವಾಹನ ಸ್ತಂಬವೆಂದು ಕರೆಯಲಾಗುತ್ತದೆ.

ಪಾಂಡವರು ಕೌರವರ ಮೇಲೆ ಯುದ್ದ ಮಾಡಿ ಗೆದ್ದ ನಂತರ ಹಸ್ತಿನಾಪುರವನ್ನು ವಶಪಡಿಸಿಕೊಳ್ಳುತ್ತಾರೆ. ತಮ್ಮ ಪೂರ‍್ವಜರ ಅವಿಬಿಜಿತ ರಾಜ್ಯದಲ್ಲಿ ಯುದಿಶ್ಟಿರನು ಅರ‍್ಜುನನ್ನು ಹಸ್ತಿನಾಪುರದ ಯುವರಾಜನೆಂದು ನೇಮಿಸುತ್ತಾನೆ. ಅನಂತರ ಯುದಿಶ್ಟಿರನು ಅರ‍್ಜುನನಿಗೆ ಚಕ್ರವರ‍್ತಿ ಎಂದು ಬಿರುದು ನೀಡಲು ಅಶ್ವಮೇದ ಯಜ್ನ ನಡೆಸಲು ನಿರ‍್ದರಿಸುತ್ತಾನೆ. ಅದರಂತೆ ಸಶಸ್ತ್ರ ಯೋದರ ಮುಂದಾಳ್ತನದಲ್ಲಿ ಕುದುರೆಯನ್ನು ಕಟ್ಟಲೆಯಿಲ್ಲದ ತಿರುಗಾಟಕ್ಕೆ ಕಳುಹಿಸುತ್ತಾನೆ. ಅನೇಕ ರಾಜರುಗಳು ಅರ‍್ಜುನನ್ನು ಎದುರಿಸಲಾಗದೆ ಶರಣಾದರೆ, ಇನ್ನೂ ಕೆಲವರು ಯುದ್ದ ಮಾಡಿ ಸೋತು ಶರಣಾಗುತ್ತಾರೆ. ಕಡೆಗೆ ಬಬ್ರುವಾಹನು ಪಾಂಡವರ ಅಶ್ವಮೇದ ಯಜ್ನದ ಕುದುರೆಯನ್ನು ಕಟ್ಟಿ ಹಾಕಿ ಸವಾಲನ್ನು ಸ್ವೀಕರಿಸುತ್ತಾನೆ. ಅದನಂತರ ತಂದೆ ಮಗನ ನಡುವೆ ಯುದ್ದ ನಡೆಯುತ್ತದೆ. ಅದರಲ್ಲಿ ಅರ‍್ಜುನನು ಸಾವನ್ನಪ್ಪುವುದು, ಬಳಿಕ ಶ್ರೀ ಕ್ರುಶ್ಣ ನ ನೆರವಿನಿಂದ ಬದುಕಿ ಬರುವುದು ತುಂಬಾ ಹೆಸರುವಾಸಿಯಾದ ಪುರಾಣದ ಕತೆಯಾಗಿದೆ.

(ಮಾಹಿತಿ ಸೆಲೆ : raghavendraswamy.wordpress.comvayusutha.inaalayamkanden.blogspot.intourmet.comen.wikipedia.org, wiki/Shripad_Shri_Vallabakuruvapur.orgagnihotrausa.netsreepadasreevallabhapithapuram.in)

(ಚಿತ್ರ ಸೆಲೆ: deodurga.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications