ಹ್ಯಾಂಪ್ಟನ್ ಕೋರ‍್ಟ್ ಅರಮನೆಯ ಅದ್ಬುತ ಅಲಂಕಾರಿಕ ಚಿಮಣಿಗಳು

– ಕೆ.ವಿ.ಶಶಿದರ.

ಕೊರೆಯುವ ಚಳಿಯಿಂದ ತತ್ತರಿಸುವ ಯೂರೋಪಿನ ಪ್ರದೇಶಗಳಲ್ಲಿ ಬೆಚ್ಚಗಿನ ಮನೆ ಎಲ್ಲರ ಮೊದಲ ಅವಶ್ಯಕತೆ ಆಗಿತ್ತು. ಮನೆಯ ಒಳಗಿನ ತಾಪಮಾನವನ್ನು ಸಹಿಸುವಶ್ಟು ಬಿಸಿಯಾಗಿಡುವ ಪ್ರಯತ್ನದಲ್ಲಿ ಎಲ್ಲಾ ಕೆಲಸವನ್ನೂ ಮನೆಯ ನಡುಬಾಗದಲ್ಲೇ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. ಬಿಸುಪನ್ನು ಕಾಪಾಡಲು ಅಡುಗೆಯನ್ನೂ ಸಹ ಅಲ್ಲೇ ಮಾಡುತ್ತಿದ್ದುದರಿಂದ ಕೋಣೆಯ ತುಂಬೆಲ್ಲಾ ಹೊಗೆ ಆವರಿಸಿಕೊಂಡು ಆರೋಗ್ಯದಲ್ಲಿ ಏರುಪೇರಾಗುವ ಸಮಸ್ಯೆ ಕಾಡಲಾಂಬಿಸಿತು. ಈ ಸಮಸ್ಯೆಯನ್ನು ಬಗೆಹರಿಸಲು ಕಂಡುಹಿಡಿದಿದ್ದೇ ಚಿಮಣಿಗಳು.

ನಡುಯುಗದ ಜನರಿಗೆ ಚಿಮಣಿಗಳು ಹೊಸದು. ಆ ಕಾಲದಲ್ಲಿ ಎಲ್ಲಾ ಮನೆಗಳೂ ಚಿಮಣಿಯನ್ನು ಹೊಂದಿರಲಿಲ್ಲ. ಮನೆಗಳ ಮೇಲೆ ಚಿಮಣಿ ಹೊಂದುವುದೇ ಅಂದಿನ ದಿನದ ಪ್ಯಾಶನ್. ಅಲ್ಲಿನ ಜನರ ಶ್ರೀಮಂತಿಕೆಯ ಕುರುಹು. ಈ ಸುಂದರ ಅಲಂಕಾರಿಕ ಚಿಮಣಿಗಳು ಐಶ್ವರ‍್ಯ ಮತ್ತು ಪ್ರಬಾವಿ ವ್ಯಕ್ತಿಗಳ ಸ್ವತ್ತಾಗಿತ್ತು. ಇಂತಹ ಐಶಾರಾಮಿ ಚಿಮಣಿಗಳ ಅತ್ಯುನ್ನತ ಉದಾಹರಣೆಯಂದರೆ ಹ್ಯಾಂಪ್ಟನ್ ಕೋರ‍್ಟ್ ಅರಮನೆಯ ಮೇಲೆ ರಾರಾಜಿಸುತ್ತಿರುವ ಅದ್ಬುತ ಅಲಂಕಾರಿಕ ಚಿಮಣಿಗಳು. ಹ್ಯಾಂಪ್ಟನ್ ಕೋರ‍್ಟ್ ಅರಮನೆಯಲ್ಲಿ ನೂರಾರು ಸುಂದರ ಚಿಮಣಿಗಳಿವೆ. ಲಂಡನ್ನಿನ ಹೊರವಲಯದಲ್ಲಿ ತೇಮ್ಸ್ ನದಿ ದಂಡೆಯಲ್ಲಿರುವ ಈ ಪ್ಯಾಲೆಸ್ ಅದ್ಬುತ ಅಲಂಕಾರಿಕ ಚಿಮಣಿಗಳಿಂದಾಗಿ ಹೆಸರುವಾಸಿಯಾಗಿದೆ. ಚಿಮಣಿಗಳ ಈ ನೋಟ ಕಣ್ಸೆಳೆಯುವಂತಿದೆ, ನೋಡುಗರನ್ನು ತನ್ನತ್ತ ಸೆಳೆಯುವಲ್ಲಿ ಗೆದ್ದಿದೆ.

ಹ್ಯಾಂಪ್ಟನ್ ಕೋರ‍್ಟ್ ಅರಮನೆ ಬ್ರಿಟನ್ನಿನ ಅತ್ಯಂತ ಹಳೆಯ ಹಾಗೂ ಅತ್ಯಂತ ವೈಬವೋಪೇತ ಅರಮನೆಗಳಲ್ಲಿ ಒಂದು. 1515 ಮತ್ತು 1525ರ ನಡುವೆ ಇದನ್ನು ಕಟ್ಟಲಾಯಿತು. ಈ ಅರಮನೆಯಲ್ಲಿ ವಾಸಿಸುತ್ತಿದ್ದವ ತಾಮಸ್ ವೋಲ್ಸಿ. ಈತನೇ ಈ ಅರಮನೆಯ ರೂವಾರಿಯೂ ಸಹ. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಈತ ಚರ‍್ಚ್‍ನ ಕಾರ‍್ಡಿನಲ್ ಸ್ತಾನಕ್ಕೆ ಏರಿದ. ಕಿಂಗ್ ಹೆನ್ರಿ III ರೊಂದಿಗೆ ನಿಕಟ ಸ್ನೇಹ ಹೊಂದಿದ್ದ ಕಾರಣ ಹಲವು ವರ‍್ಶಗಳ ನಂತರ ಲಾರ‍್ಡ್ ಚಾನ್ಸಲರ್ ಅಗಿಯೂ ನೇಮಕಗೊಂಡ.

ಹ್ಯಾಂಪ್ಟನ್ ಕೋರ‍್ಟ್ ಅರಮನೆಯನ್ನು ಕಟ್ಟಲು ವೋಲ್ಸಿ ಬಹಳಶ್ಟು ಕರ‍್ಚು ಮಾಡಿದ. ಅಂದಿನ ಕಾಲದ ಬಹುತೇಕ ಅರಮನೆಗಳಂತೆ ಈ ಅರಮನೆ ಕಲ್ಲಿನಿಂದ ಕಟ್ಟಿದ್ದಲ್ಲ. ಬದಲಿಗೆ ಅಂದಿನ ಕಾಲದಲ್ಲಿ ಅತ್ಯಂತ ಪ್ಯಾಶನಬಲ್ ಹಾಗೂ ದುಬಾರಿಯಾಗಿದ್ದ ಕೆಂಪು ಇಟ್ಟಿಗೆಯಿಂದ ಕಟ್ಟಿದ್ದು.

ಹ್ಯಾಂಪ್ಟನ್ ಕೋರ‍್ಟ್ ಅರಮನೆ 36 ಸಾವಿರ ಚದರ ಅಡಿ ವಿಸ್ತಾರವಾಗಿದ್ದು ಇದರಲ್ಲಿ ಸಾವಿರಾರು ರೂಂಗಳಿವೆ. 67 ಬೆಡ್ ರೂಂಗಳಿವೆ. ಇವುಗಳ ನಿರ‍್ಮಾಣದಲ್ಲಿ ಬಳಸಿದ್ದ ಬೇರೆಲ್ಲಾ ವಸ್ತುಗಳಿಗಿಂತ ಮುಗಿಲೆತ್ತರಕ್ಕೆ ಎದ್ದು ನಿಂತ ಅದ್ಬುತ ಅಲಂಕಾರಿಕ ಚಿಮಣಿಗಳು ಎಲ್ಲರ ಗಮನವನ್ನು ಸೆರೆಹಿಡಿಯುವಲ್ಲಿ ಪ್ರಮುಕವಾಗಿದೆ.

ಚಿಮಣಿಗಳ ನಿರ‍್ಮಾಣ ಸಹ ವೈವಿದ್ಯಮಯವಾಗಿದೆ. ಹ್ಯಾಂಪ್ಟನ್ ಕೋರ‍್ಟ್ ಅರಮನೆಯಲ್ಲಿ ಒಟ್ಟಾರೆ 241 ಚಿಮಣಿಗಳಿವೆ. 16ನೇ ಶತಮಾನದಲ್ಲಿ ಕಟ್ಟಲಾದ ಈ ಚಿಮಣಿಗಳು ಒಂದೊಂದೂ ಆಕಾರದಲ್ಲಿ ಕಟ್ಟಿರುವುದು ಇಲ್ಲಿನ ವಿಶೇಶ. ಒಂದು ಸುರಳಿಯಾಕಾರದಲ್ಲಿದ್ದರೆ ಮತ್ತೊಂದು ಅನೇಕಾನೇಕ ತಿರುವುಗಳನ್ನು ಹೊಂದಿದೆ. ರೇಕಾಗಣಿತದಲ್ಲಿ ಕಂಡುಬರುವ ಎಲ್ಲಾ ರೀತಿಯ ವಿನ್ಯಾಸಗಳನ್ನು ನಾವಿಲ್ಲಿ ಕಾಣಬಹುದು. ಇಲ್ಲಿರುವ ಚಿಮಣಿಗಳಲ್ಲಿ ಯಾವುದೇ ಎರಡು ಚಿಮಣಿಗಳು ಒಂದೇ ರೀತಿಯಾಗಿಲ್ಲ ಎಂಬ ವದಂತಿಯೂ ಇದೆ.

(ಮಾಹಿತಿ ಸೆಲೆ: wanderingarchitect.wordpress.comamusingplanet.com)
(ಚಿತ್ರ ಸೆಲೆ: wikimedia, geograph.org.uk)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: