ಪಿಜ್ಜಾ ಬಗ್ಗೆ ಗೊತ್ತಿರದ ಹಲವು ಸಂಗತಿಗಳು

– ಕೆ.ವಿ.ಶಶಿದರ.

ಪಡುವಣ ರಾಶ್ಟ್ರಗಳಿಂದ ಬಾರತಕ್ಕೆ ಲಗ್ಗೆ ಹಾಕಿದ ಅನೇಕ ಲಗುಪಾನೀಯಗಳಿವೆ. ಕೋಕಾ ಕೋಲ, ಪೆಪ್ಸಿ ಮುಂತಾದವುಗಳು ನಿಂಬೆಪಾನಕದಂತಹ ಸ್ತಳೀಯ ಪಾನೀಯವನ್ನು ಮೂಲೆಗುಂಪಾಗಿಸಿತು. ಇದು ಲಗುಪಾನೀಯಗಳ ಇತಿಹಾಸವಾದರೆ ಇತ್ತೀಚಿನ ದಿನದಲ್ಲಿ ದೇಶದ ಉದ್ದಗಲಕ್ಕೂ ತನ್ನ ಕಬಂದ ಬಾಹುಗಳನ್ನು ಚಾಚಿ ಯುವಜನತೆಯನ್ನು ಮರಳುಮಾಡಿರುವ ತಿಂಡಿ ಪಿಜ್ಜಾ. ಅನಾದಿಕಾಲದಿಂದ ರಾಜರಂತೆ ಮೆರೆಯುತ್ತಿದ್ದ ದಕ್ಶಿಣ ಬಾರತದ ಇಡ್ಲಿ, ವಡೆ, ದೋಸೆ, ಪೊಂಗಲ್ ಮದ್ಯ ಬಾರತದ ಪಾವ್ ಬಾಜಿ, ಡೋಕ್ಲಾ ಹಾಗೂ ಮಂಚೂಣಿಯಲ್ಲಿದ್ದ ಉತ್ತರ ಬಾರತದ ರೋಟಿ, ಸಮೋಸ, ಆಲೂ ಪರೋಟ ಮುಂತಾದವುಗಳ ಮೇಲೆ ಸವಾರಿ ಮಾಡುತ್ತಾ ತನ್ನ ಚಾಪನ್ನು ಒತ್ತಿರುವುದು ಪಿಜ್ಜಾ. ಪಿಜ್ಜಾ ತಿಂದೆ ಎನ್ನುವುದೇ ಇಂದಿನ ಯುವ ಜನತೆಗೆ ಹೆಮ್ಮೆಯ ವಿಶಯ ಹಾಗೂ ತಮ್ಮ ಅಂತಸ್ತಿನ ದ್ಯೋತಕ.

‘ಪಿಜ್ಜಾ’ ಹುಟ್ಟಿದ್ದು ಇಟಲಿಯ ಗೀಟಾ ನಗರದಲ್ಲಿ, 997ನೇ ಇಸವಿಯಲ್ಲಿ. ಎಂಟು ಶತಮಾನಗಳ ಕಾಲ ಸ್ತಳೀಯವಾಗಿದ್ದ ಇದು ವಾಣಿಜ್ಯವಾಗಿ ಮರುಹುಟ್ಟು ಕಂಡಿದ್ದು 18ನೇ ಶತಮಾನದಲ್ಲಿ. ಪಿಜ್ಜಾದ ಹುಟ್ಟಿನ ಪ್ರಮುಕ ಕಾರಣ ಬಹಳ ಜನಕ್ಕೆ ಊಹಿಸುವುದೂ ಅಸಾದ್ಯ. ಮೂಲಬೂತವಾಗಿ ಇದು ಹುಟ್ಟಿದ್ದು ಬಡಜನರ ಊಟವಾಗಿ. ಬೀದಿ ಬದಿಯ ಗೂಡಂಗಡಿಗಳಿಂದ ಪ್ರಾರಂಬವಾದ ಪಿಜ್ಜಾ ಮಾರಾಟ ಇಂದು ಹವಾನಿಯಂತ್ರಿತ ಮಳಿಗೆಯವರೆಗೆ ಹಾಗೂ ಮನೆಮನೆಗೆ ನಿಗದಿತ ಸಮಯದಲ್ಲಿ ಸರಬರಾಜು ಮಾಡುವಶ್ಟು ಎತ್ತರಕ್ಕೆ ಬೆಳೆದು ನಿಂತಿದೆ.

ಹುಟ್ಟಂದಿನಿಂದ ಪಿಜ್ಜಾ ಸಮಾಜದ ಮೇಲ್ವರ‍್ಗದ ಹಾಗೂ ಶ್ರೀಮಂತರ ಊಟವಾಗಿರಲಿಲ್ಲ! ಇದಕ್ಕೆ ವ್ಯತಿರಿಕ್ತವಾಗಿ ಇಂದು ಪಿಜ್ಜಾ ಶ್ರೀಮಂತ ವರ‍್ಗದ ಅಪ್ಯಾಯಮಾನ ತಿಂಡಿಯಾಗಿದೆ.

ಇಟಲಿಯ ನೇಪಲ್ಸ್ ನಲ್ಲಿನ ಹಿಂದುಳಿದ ಜಿಲ್ಲೆಯ ಕಡಿಮೆ ದರ‍್ಜೆಯ ಊಟವಾಗಿದ್ದ ಪಿಜ್ಜಾ ಇಂದು ವಿಶ್ವದಲ್ಲೇ ಅತಿ ಪ್ರಸಿದ್ದ ತಿನಿಸಾಗಿ ಬೆಳದಿದ್ದೇ ಒಂದು ರೋಚಕ ಅದ್ಯಾಯ. ಪಿಜ್ಜಾ ಆದುನಿಕ ಸಮಾಜದಲ್ಲಿ ಇಂತಹ ಜನಪ್ರಿಯತೆ ಗಳಿಸಲು ಸಾದ್ಯವಾಗಿದ್ದಾದರೂ ಹೇಗೆ ಎಂದು ಯೋಚಿಸಿದರೆ ಇದಕ್ಕೆ ಉತ್ತರ ಅತಿ ಸರಳ. ಒಂದು, ಪಿಜ್ಜಾ ತಯಾರಿಕೆ ಬಹಳ ಸುಲಬ. ಎರಡು, ಇದರ ತಯಾರಿಕೆಯಲ್ಲಿ ಕ್ರಸ್ಟ್ ಗಳನ್ನಾಗಲಿ, ಟಾಪಿಂಗ್ಸ್ ಗಳನ್ನಾಗಲಿ, ಚೀಸ್‍ಗಳನ್ನಾಗಲಿ, ಮತ್ತು ಸಾಸ್‍ಗಳನ್ನಾಗಲಿ ಉಪಯೋಗಿಸಲು ಅನಂತಾನಂತ ಸಾದ್ಯತೆಗಳಿವೆ. ಯುವಜನತೆಯ ಆಸೆ, ಆಕಾಂಕ್ಶೆ, ರುಚಿ, ವೈವಿದ್ಯತೆಗಳ ಅವಶ್ಯಕತೆಗೆ ತಕ್ಕಂತೆ ಮಾರ‍್ಪಾಟು ಮಾಡಿ ಬಗೆಬಗೆಯ ಪಿಜ್ಜಾ ತಯಾರಿಸಬಹುದು.

ಪಿಜ್ಜಾಗಳ ಟಾಪಿಂಗ್ ವೈವಿದ್ಯಮಯವಾಗಿದ್ದು ಆಯಾ ದೇಶದ ಪ್ರದೇಶದ ಬಾಗವಾಗಿದೆ. ಜಪಾನಿನಲ್ಲಿ ಸ್ಕ್ವಿಡ್ ಎಂಬ ಒಂದು ಬಗೆಯ ಮೀನಿನ ಟಾಪಿಂಗ್‍ಗೆ ಅಗ್ರಗಣ್ಯವಾಗಿದೆ. ಇದಕ್ಕೆ ಇಲ್ಲಿ ಅತ್ಯದಿಕ ಬೇಡಿಕೆ. ಪಿಜ್ಜಾಗಳನ್ನು ಅತಿ ಕೆಂಪಾಗಿ ಎಣ್ಣೆಯಲ್ಲಿ ಕರಿಯುವುದು ಸ್ಕಾಟ್ಲೆಂಡಿನವರ ವಿಶೇಶ.

ಜಗತ್ತಿನ ಅತಿ ಉದ್ದದ ಪಿಜ್ಜಾ

ಪಿಜ್ಜಾದ ಕ್ಯಾತಿ ಅಂತರರಾಶ್ಟ್ರೀಯ ಬಾಹ್ಯಾಕಾಶ ನಿಲ್ದಾಣದವರೆಗೂ ಪಸರಿಸಿತ್ತು ಎಂದರೆ ಅದನ್ನು ಬಯಸುವವರು ಎಲ್ಲೆಲ್ಲಿದ್ದಾರೆ ಎಂದು ಕಲ್ಪಿಸಿಕೊಳ್ಳಲೂ ಅಸಾದ್ಯ. 2001ರಲ್ಲಿ ಪಿಜ್ಜಾ ಹಟ್‍ನಲ್ಲಿ ತಯಾರಾದ ಪಿಜ್ಜಾವನ್ನು ರಶ್ಯಾ ದೇಶವು ಒಂದು ಮಿಲಿಯನ್ ಡಾಲರ್ ಹಣವನ್ನು ಸಾಗಾಣಿಕಾ ವೆಚ್ಚವಾಗಿ ಪಡೆದು ಅಂತರರಾಶ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಿಸಿತ್ತು. ಈ ವ್ಯವಹಾರವನ್ನು ವಾಣಿಜ್ಯ ಜಾಹಿರಾತಿಗಾಗಿ ಸಹ ಬಳಸಿಕೊಂಡಿದ್ದು ವಿಶೇಶ.

ಪಿಜ್ಜಾವನ್ನು ಮೊದಲ ಬಾರಿಗೆ ಪಡೆಯುವ ವಿಶೇಶ ಗೌರವ ಮಹಾರಾಜ ಉಂಬರ‍್ಟೋ ಮತ್ತು ಮಹಾರಾಣಿ ಮಾರ‍್ಗರಿಟಾ ಅವರದಾಗಿತ್ತು. 1889ರಲ್ಲಿ ನೇಪಲ್ಸ್ ನ ಅತ್ಯಂತ ಪ್ರಕ್ಯಾತ ಪಿಜ್ಜಾ ಬಾಣಸಿಗ ರಪೇಲೆ ಎಸ್ಪೊಸಿಟೋ ತಯಾರಿಸಿದ ಪಿಜ್ಜಾವನ್ನು ಪಡೆದಿದ್ದರು. ಇಟಲಿಯ ರೆನಾಟೊ ವಿಯೋಲಾ ಸ್ರುಶ್ಟಿಯ ಲೂಯಿಸ್ ಗಿIII ಪಿಜ್ಜಾ ವಿಶ್ವದಲ್ಲೇ ಅತಿ ದುಬಾರಿ ಪಿಜ್ಜಾ ಎಂದು ದಾಕಲೆ ಸ್ತಾಪಿಸಿದೆ. ಇದರ ಬೆಲೆ ಬರೋಬ್ಬರಿ 12,000 ಡಾಲರ್.

1261.65 ಚದರ ಮೀಟರ್ ಅಗಲದ ಪಿಜ್ಜಾ ಅತ್ಯಂತ ವಿಸ್ತಾರವಾದ ಪಿಜ್ಜಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2012ರ ಡಿಸೆಂಬರ್‍ನಲ್ಲಿ ಇದನ್ನು ತಯಾರಿಸಿದ್ದು ಪಿಯೆರಾ ರೋಮಾದಲ್ಲಿನ ಓಐಪಿ ಪುಡ್‍ನ ಡೋವಿಲಿಯೋ ನಾರ‍್ಡಿ, ಮ್ಯಾಟೊ ನಾರ‍್ಡಿ, ಮಾರ‍್ಕೊ ನಾರ‍್ಡಿ, ಆಂಡ್ರಿಯಾ ಮನ್ನೋಚ್ಚಿ ಮತ್ತು ಮ್ಯಾಟೊ ಗಿಯನ್ನೋಟೆ ಎಂಬ ಇಟಲಿಯ ಬಾಣಸಿಗರು.

ಜಗತ್ತಿನ ಅತಿದೊಡ್ಡ ಪಿಜ್ಜಾ

ಅತಿ ದುಬಾರಿ ಮತ್ತು ಅತಿ ವಿಸ್ತಾರವಾದ ಪಿಜ್ಜಾಗಳನ್ನು ದಾಕಲಾತಿಗಾಗಿ ಮಾತ್ರ ತಯಾರಿಸಿದರೆ ವಾಣಿಜ್ಯಕವಾಗಿ ಸಾರ‍್ವಜನಿಕರಿಗೆ ಲಬ್ಯವಿರುವ ಅತಿ ದೊಡ್ಡ ಪಿಜ್ಜಾದ ಅಳತೆ 1.37 ಚದರ ಮೀಟರ್. ಕ್ಯಾಲಿಪೋರ‍್ನಿಯಾದ ಬಿಗ್ ಮಾಮಾ’ಸ್ ಮತ್ತು ಪಾಪಾ’ಸ್ ಪಿಜ್ಜೇರಿಯಾ ತಯಾರಿಕೆಯ ಇದು 50 ರಿಂದ 100 ಜನರಿಗೆ ಹಂಚಬಹುದಾದಶ್ಟು ದೊಡ್ಡದು.

ಮದ್ಯಮ ಗಾತ್ರದ ಪಿಜ್ಜಾ ಸೇವಿಸಿದಲ್ಲಿ ಕನಿಶ್ಟ 220 ರಿಂದ 370 ಕ್ಯಾಲೋರಿ ದೇಹ ಸೇರುವುದು ಗ್ಯಾರಂಟಿ. ಟಾಪಿಂಗ್‍ನಲ್ಲಿನ ಪದಾರ‍್ತದ ಮೇಲೆ ಕ್ಯಾಲೋರಿ ಪೂರ‍್ಣ ಅವಲಂಬಿತ. ಅತ್ಯಂತ ಕುತೂಹಲಕಾರಿ ವಿಶಯವೆಂದರೆ ವಿಶ್ವದಲ್ಲಿ ಪಿಜ್ಜಾ ಮಾರಾಟ ಗರಿಶ್ಟಕ್ಕೆ ತಲುಪುವುದು ವಾರದ ಕೊನೆಯಲ್ಲಂತೆ. ಅದರಲ್ಲೂ ಶನಿವಾರದ ರಾತ್ರಿಗಳಂತೆ!

(ಮಾಹಿತಿ ಸೆಲೆ: thepizzajoint.comhungryhowies.compizza.comfactslegend.org)
(ಚಿತ್ರ ಸೆಲೆ: npr.org, worldrecordacademy.com, istockphoto.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: