ಸವಾಲನ್ನು ಎದುರಿಸಿ ಬದುಕುತ್ತಿರುವ ಮೈನಾ ಹಕ್ಕಿ

– ನಾಗರಾಜ್ ಬದ್ರಾ.

ಪಟ್ಟಣಗಳು ಬೆಳೆದಂತೆ ಸುತ್ತಮುತ್ತಲ ಪರಿಸರದಲ್ಲಿನ ಗಿಡ, ಮರ, ಕೆರೆ ಮುಂತಾದವುಗಳು ಹಾಳಾಗಿ ಹೋಗಿದ್ದು, ಇವುಗಳನ್ನೇ ನಂಬಿರುವ ಹಲವಾರು ಹಕ್ಕಿ ಹಾಗೂ ಪ್ರಾಣಿಗಳು ಅಳಿದು ಹೋಗಿವೆ. ಕೆಲವೊಂದು ಅಳಿವಿನ ಅಂಚಿನಲ್ಲಿವೆ. ಮುಂಚೆ ಹೆಜ್ಜೆ ಹೆಜ್ಜೆಗೂ ಗುಬ್ಬಚ್ಚಿಗಳು ಕಾಣುತ್ತಿದ್ದವು ಆದರೀಗ ಅವು ಕಾಣೆಯಾಗಿವೆ! ಬೆಳೆಯುತ್ತಿರುವ ಪಟ್ಟಣಗಳು, ಬದಲಾಗುತ್ತಿರುವ ಗಾಳಿಪಾಡು, ಹೆಚ್ಚುತ್ತಿರುವ ಪರಿಸರದ ಮೈಲಿಗೆಗೆ ಅವೆಶ್ಟು ಉಸಿರಿಗಳು ಅಳಿದು ಹೋಗಿವೆಯೋ ಎಣಿಸುವುದು ಕಶ್ಟ. ಆದರೆ ಮೈನಾ ಹಕ್ಕಿ ಇವೆಲ್ಲವನ್ನೂ ಎದುರಿಸಿ ಬೆಳೆಯುತ್ತಿದೆ. ಇದು ಬದಲಾಗುತ್ತಿರುವ ಪರಿಸರಕ್ಕೆ ತಕ್ಕ ಮಾರ‍್ಪಾಟುಗಳನ್ನು ಮಾಡಿಕೊಂಡು, ಅಳಿಯದೇ ಉಳಿದು ತನ್ನ ಸಂತತಿಯನ್ನು ಹೆಚ್ಚಿಸುತ್ತಿದೆ. ಇದು ಇಡೀ ಇಂಡಿಯಾ ಸೇರಿದಂತೆ ತೆಂಕಣ ಏಶಿಯಾದ ಹೆಚ್ಚಿನ ಕಡೆ ಕಂಡುಬರುವ ಹಕ್ಕಿ. ಗುಬ್ಬಚ್ಚಿಯಶ್ಟೇ ಹೆಚ್ಚು ಪರಿಚಿತವಾದ ಹಕ್ಕಿ ಎಂದರೆ ತಪ್ಪಾಗಲಾರದು.

ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಮೈನಾ ಹಕ್ಕಿ ಮಾಡಿಕೊಂಡಿರುವ ಮಾರ‍್ಪಾಡುಗಳೇನು?

ಗೂಡು ಕಟ್ಟುವ ಬಗೆಯನ್ನೇ ಬದಲಿಸಿದೆ!

ಈ ಹಕ್ಕಿ ಮಾಡಿಕೊಂಡಿರುವ ಮಾರ‍್ಪಾಡುಗಳಲ್ಲಿ ಪ್ರಮುಕವಾದದ್ದು ಎಂದರೆ ಅದು ತನ್ನ ವಾಸಿಸುವ ಜಾಗ. ಮೊದಲು ಮರ, ಗಿಡಗಳ ಕೊಂಬೆಗಳ ಮೇಲೆ ಗೂಡು ಕಟ್ಟುತ್ತಿದ್ದ ಹಕ್ಕಿ ಇಂದು ಮನೆ, ಕಟ್ಟಡಗಳ ಗೋಡೆ, ಚರಂಡಿ ಪೈಪು, ಕಂಬ ಮುಂತಾದವುಗಳ ಮೇಲೆ ಗೂಡನ್ನು ಕಟ್ಟುತ್ತಿದೆ. ಮೊದಲು ಗೂಡನ್ನು ಕಟ್ಟಲು ಎಲೆ, ಹುಲ್ಲು, ಮಣ್ಣು ಮುಂತಾದ ವಸ್ತುಗಳನ್ನು ಬಳಸುತ್ತಿತ್ತು. ಆದರೆ ಇಂದು ಪ್ಲಾಸ್ಟಿಕ್, ಹಾಳೆ, ಬಟ್ಟೆ, ಹೀರು ಹಾಳೆ (tissue paper), ತೆಳುಹಾಳೆ (tin foil), ಎಲೆಕ್ಟ್ರಿಕ್ ತಂತಿ ಮುಂತಾದ ವಸ್ತುಗಳನ್ನು ಗೂಡುಕಟ್ಟಲು ಬಳಸುತ್ತಿದೆ.

ಕಾಡಿನ ಊಟವನ್ನು ಮರೆತು ಊರಿನ ತಿನಿಸನ್ನು ನೆಚ್ಚಿಕೊಂಡಿದೆ

ಸಾಮಾನ್ಯವಾಗಿ ಮರಿಹುಳ, ಜೀರುಂಡೆ, ಹೂವು, ಚಿಕ್ಕ ಚಿಕ್ಕ ಹುಳ, ಬೆನ್ನೆಲುಬಿಲ್ಲದ ಉಸಿರುಗ (invertebrates), ಬೀಜ ಮುಂತಾದವುಗಳು ಮೈನಾ ಹಕ್ಕಿಯ ಊಟವಾಗಿದ್ದವು. ಇಂದು ಊರಿನ ನಡುವೆಯೇ ಗೂಡುಕಟ್ಟಲು ಕಲಿತ ಹಕ್ಕಿಯು ನಾವು ತಿನ್ನುವ ತಿಂಡಿತಿನಿಸುಗಳನ್ನು ತಿನ್ನಲು ಕಲಿತುಕೊಂಡಿದ್ದು, ಕೆಲವೊಂದು ಬಾರಿ ನಾವು ಎಸೆದ ಕಸ, ಸಾಕುಪ್ರಾಣಿಗಳ ಆಹಾರ ಮುಂತಾದವುಗಳನ್ನು ತಿಂದೂ ಬದುಕು ಸಾಗಿಸುತ್ತವೆ.

ಬದಲಾದ ಪರಿಸರಕ್ಕೆ ಹೊಂದಿಕೊಳ್ಳಲು ಮೈನಾ ಹಕ್ಕಿ ಮೇಲೆ ತಿಳಿಸಿದ ಕೆಲವು ಮಾರ‍್ಪಾಟುಗಳನ್ನು ಮಾಡಿಕೊಂಡಿರುವುದೇನೋ ದಿಟ. ಇದರ ಜೊತೆಗೆ ಹಕ್ಕಿಯ ಕೆಲವು ವಿಶೇಶ ಗುಣಗಳೂ ಅವುಗಳ ಬೆಳವಣಿಗೆಗೆ ಇನ್ನಿಲ್ಲದಂತೆ ನೆರವಾಗಿವೆ.

ಬಿರುಬಿಸಿಲಿಗೂ ಸೈ ಚುಮು ಚುಮು ಚಳಿಗೂ ಸೈ!

ಪರಿಸರದಲ್ಲಿನ ಬಿಸುಪು(temperature) ಅಲ್ಲಿನ ಉಸಿರುಗಗಳ ಅಳಿವು ಉಳಿವಿಗೆ ನೇರವಾದ ಸಂಬಂದವನ್ನು ಹೊಂದಿದೆ. ಪಟ್ಟಣಗಳು ಬೆಳೆದಂತೆ ಬಿಸುಪಳತೆಯಲ್ಲಿ ತುಂಬಾ ಏರುಪೇರಾಗಿದ್ದು, ಮನುಶ್ಯನೇ ಅದನ್ನು ತಡೆದುಕೊಳ್ಳಲಾಗದೆ ಇಂದು ನರಳಾಡುತ್ತಿದ್ದಾನೆ. ಇದರಿಂದ ಹಲವಾರು ಹಕ್ಕಿಗಳು ಅಳಿವಿನ ಅಂಚಿಗೆ ಸಿಲುಕಿಕೊಂಡಿವೆ. ಆದರೆ ಮೈನಾ ಹಕ್ಕಿ ಈ ಬಿಸುಪನ್ನು ತಡೆದುಕೊಂಡು ಬದುಕುತ್ತಿರುವುದು ಅಚ್ಚರಿ ಮೂಡಿಸಿದೆ. ಇವು ತುಂಬಾ ಚಳಿಯಿರುವ ಜಾಗದಿಂದ ಹಿಡಿದು ಬಿರುಬಿಸಿಲಿನ ಜಾಗಯಲ್ಲಿಯು ಕಂಡುಬರುತ್ತವೆ. ಉದಾಹರಣೆಗೆ, ಇವು ಆಸ್ಟ್ರೇಲಿಯಾದ ಕ್ಯಾನ್ಬೆರಾ (Canberra) ಪಟ್ಟಣದ -4 ಡಿಗ್ರಿಯಲ್ಲಿಯು ಬದುಕುತ್ತವೆ. ಹಾಗೆಯೇ ಅದೇ ದೇಶದ ಕೇರ‍್ನ್ಸ್(Cairns) ಪಟ್ಟಣದ 23 ಡಿಗ್ರಿಯ ಬಿರುಬಿಸಿಲಿನಲ್ಲಿಯು ಕಂಡುಬರುತ್ತವೆ.

ಯಾರಿಗೂ ತಲೆಬಾಗದ ಆಕ್ರಮಣಕಾರಿ ನಡತೆ

ಮೈನಾ ಹಕ್ಕಿ ತುಂಬಾ ಆಕ್ರಮಣಕಾರಿಯಾಗಿದ್ದು, ಸುತ್ತಮುತ್ತಲಿನ ತನ್ನ ಪೋಟಿಗಾರ (competitors) ಹಕ್ಕಿಗಳ ಮೇಲೆ ಹಲ್ಲೆ ಮಾಡುತ್ತದೆ. ಇತರೆ ಹಕ್ಕಿ ಗೂಡುಗಳ ಮೇಲೆ ಆಕ್ರಮಣ ಮಾಡಿ ಅವುಗಳ ಮರಿಗಳನ್ನು ಹೊರ ಎಸೆಯುತ್ತದೆ. ಐಯುಸಿಎನ್ ಸ್ಪೀಸೀಸ್ ಸರ‍್ವೈವಲ್ ಆಯೋಗವು (IUCN Species Survival Commission) ಜೀವವೈವಿದ್ಯ, ಉಳುಮೆ ಹಾಗೂ ಮನುಶ್ಯನ ಮೇಲೆ ಪರಿಣಾಮವನ್ನು ಉಂಟುಮಾಡುವ ಪ್ರಪಂಚದ ಅತ್ಯಂತ 100 ಆಕ್ರಮಣಕಾರಿ ಪಂಗಡಗಳನ್ನು ಪ್ರಕಟಿಸುತ್ತದೆ. ಅದರಂತೆ 2000 ನೇ ಇಸವಿಯಲ್ಲಿ ಈ ಆಯೋಗವು ಪ್ರಪಂಚದ ಅತ್ಯಂತ 100 ಆಕ್ರಮಣಕಾರಿ ಪಂಗಡಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಮೈನಾ ಹಕ್ಕಿಯ ಪಂಗಡವು ಒಂದಾಗಿದೆ.

1863 ಮತ್ತು 1872 ರ ನಡುವೆ ಆಸ್ಟ್ರೇಲಿಯಾದ ಮೆಲ್ಬರ‍್ನ್ ನ ತೋಟಗಳಲ್ಲಿ ಕೀಟಗಳ ಹಾವಳಿ ತುಂಬಾ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಆಸ್ಟ್ರೇಲಿಯಾ ಸರಕಾರವು ಕೀಟಗಳ ಹಾವಳಿಯನ್ನು ಹತ್ತಿಕ್ಕಲು ಮೈನಾ ಹಕ್ಕಿಗಳನ್ನು ಒಳತರಿಸಿದ್ದರು. ಹೀಗೆ ಅದನ್ನು ಆಸ್ಟ್ರೇಲಿಯಾ ದೇಶಕ್ಕೆ ಮೊದಲ ಬಾರಿ ಪರಿಚಯಿಸಲಾಗುತ್ತದೆ. ಆದರೆ ಕೆಲವೇ ವರ‍್ಶಗಳಲ್ಲಿ ಅವು ಅಲ್ಲಿನ ನೆಲಸಿಗ ಹಕ್ಕಿ ಗೂಡುಗಳ ಮೇಲೆ ಆಕ್ರಮಣ ಮಾಡಿ ನಾಶ ಮಾಡತೊಡಗಿದ್ದವು. ಮೈನಾ ಹಕ್ಕಿಗಳ ಕಾಟದಿಂದ ತಪ್ಪಿಸಿಕೊಳ್ಳಲು ಹಲವಾರು ನೆಲಸಿಗ ಹಕ್ಕಿಗಳು ಬೇರೆ ದಾರಿ ಇಲ್ಲದೇ ತಮ್ಮ ಗೂಡಗಳ ಜಾಗವನ್ನು ಬದಲಾಯಿಸಿದ್ದವು. ಇದು ನೆಲಸಿಗ ಹಕ್ಕಿಗಳ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರಿ, ಅವುಗಳ ಎಣಿಕೆ ಕಡಿಮೆಯಾಗತೊಡಗಿತು. ಆದ್ದರಿಂದ 2008 ರಲ್ಲಿ ಆಸ್ಟ್ರೇಲಿಯಾದಲ್ಲಿ ಮೈನಾ ಹಕ್ಕಿಯ ಕುರಿತು ಒಂದು ಜನಮತ ಕೈಗೊಳ್ಳಲಾಯಿತು. ಅದರಲ್ಲಿ ಅಲ್ಲಿನ ಜನರು ಮೈನಾ ಹಕ್ಕಿಯನ್ನು ಅತ್ಯಂತ ಮುಕ್ಯವಾದ ಕೇಡುಗ ಅತವಾ ಸಮಸ್ಯೆ ಎಂದು ಒಮ್ಮತದಿಂದ ಹೇಳಿದರು. ಬಳಿಕ ಆಸ್ಟ್ರೇಲಿಯಾ ಸರಕಾರವು ಮೈನಾ ಹಕ್ಕಿಗಳ ಹಾವಳಿಯನ್ನು ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿದೆ!

ಕಲಿಕೆಯಲ್ಲಿ ತುಂಬಾ ಚುರುಕು

ಮೈನಾ ಹಕ್ಕಿ ಕಲಿಕೆಯಲ್ಲಿ ತುಂಬಾ ಚುರುಕು, ಯಾವುದೇ ಚಳಕವನ್ನು ಕೂಡಲೇ ಕಲಿಯುವ ಅಳವು ಹೊಂದಿದೆ. ಹಾಗೆಯೇ ಇದು ಒಂದು ನೆಲೆಯಲ್ಲಿ ಬದುಕಲು ಬೇಕಾಗುವ ಮಾರ‍್ಪಾಡುಗಳ ಬಗ್ಗೆ ಬೇಗನೆ ಅರಿತುಗೊಂಡು ಅದಕ್ಕೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಿಕೊಂಡು ಆ ನೆಲೆಗೆ ಹೊಂದಿಕೊಳ್ಳುತ್ತದೆ. ಈ ವಿಶೇಶ ಗುಣವೇ ಅವುಗಳ ಇಂದಿನ ಗೆಲುವಿಗೆ ಕಾರಣವಾಗಿದೆ.

ಹಿಂಡುಗಳಲ್ಲಿ ಬದುಕುತ್ತವೆ!

ಇನ್ನೊಂದು ವಿಶೇಶ ಗುಣವೆಂದರೆ ಇವು ಹಿಂಡುಗಳಲ್ಲಿ ಬದುಕುತ್ತವೆ. ತಮ್ಮ ಜಾತಿಯ ಹಕ್ಕಿಗಳಲ್ಲದೇ ಕಾಗೆ ಮುಂತಾದ ಹಕ್ಕಿಗಳ ಜೊತೆಗೂ ಸಾಮೂಹಿಕವಾಗಿ ಕಾಣಿಸಿಕೊಳ್ಳುತ್ತವೆ. ಒಂದು ಹಿಂಡಿನಲ್ಲಿ ನೂರರಿಂದ ಹಿಡಿದು ಸಾವಿರದವರೆಗೆ ಹಕ್ಕಿಗಳು ಇರುತ್ತವೆ. ಸಾಮಾನ್ಯವಾಗಿ ಹೊತ್ತುಮೂಡುವ ಮುಂಚೆಯೇ ಹೊರಗಡೆ ಬಂದು, ಹೊತ್ತುಮುಳುಗುವ ಬಳಿಕ ಗೂಡು ಸೇರುತ್ತವೆ. ಹಿಂಡುಗಳಲ್ಲಿ ಬದುಕುವುದರಿಂದ ತಮ್ಮನ್ನು ಬೇಟೆಯಾಡಲು ಬರುವ ಉಸಿರಿಗಳಿಂದ ತಪ್ಪಿಸಿಕೊಳ್ಳಲು ನೆರವಾಗುತ್ತದೆ. ಇದಲ್ಲದೇ ಯಾವುದಾದರೂ ಒಂದು ಹಕ್ಕಿಗೆ ತಿಂಡಿತಿನಿಸುಗಳ ಬಗ್ಗೆ ಮಾಹಿತಿಯನ್ನು ಸಿಕ್ಕರೆ, ಅದು ಹಿಂಡಿನಲ್ಲಿರುವ ಎಲ್ಲಾ ಹಕ್ಕಿಗಳೊಂದಿಗೆ ಹಂಚಿಕೊಳ್ಳಬಹುದು. ಹಾಗೆಯೇ ಅಪಾಯದ ಹೊತ್ತಿನಲ್ಲಿ ಒಬ್ಬರಿಗೊಬ್ಬರು ನೆರವಿಗೆ ಕೂಡ ಬರಬಹುದು.

ಮೊಟ್ಟೆಗೆ ಬರವಿಲ್ಲ, ಮರಿಗಳಿಗೆ ಕೊರೆಯಿಲ್ಲ!

ಮೈನಾ ಹಕ್ಕಿಯು ಒಂದು ವರ‍್ಶದಲ್ಲಿ ಹಲವಾರು ಬಾರಿ ಮೊಟ್ಟೆ ಇಡುತ್ತದೆ, ಆದ್ದರಿಂದ ಇವುಗಳ ಎಣಿಕೆ ದಿನದಿಂದ ದಿನಕ್ಕೆ ಬೇಗನೆ ಹೆಚ್ಚಾಗುತ್ತದೆ. ಒಂದು ಬಾರಿಗೆ 4 ರಿಂದ 6 ಮೊಟ್ಟೆಗಳನ್ನು ಇಟ್ಟು, 17 ರಿಂದ 18 ದಿನಗಳವರೆಗೂ ಕಾವು ಕೊಡುತ್ತವೆ. 22 ರಿಂದ 27 ದಿನಗಳ ನಂತರ ಮರಿ ಹಕ್ಕಿಗಳು ಗೂಡನ್ನು ಬಿಟ್ಟು ಸ್ವತಂತ್ರವಾಗಿ ಬದುಕಲು ಆರಂಬಿಸುತ್ತವೆ.

ಪರಿಸರದಲ್ಲಿನ ಬದಲಾವಣೆಗಳಿಗೆ ಹೊಂದಿಕೊಂಡು, ಅವುಗಳಿಂದ ಹೆಚ್ಚಿನ ಪ್ರಯೋಜನ ಪಡೆದಿರುವ ಕೆಲವೇ ಜಾತಿಯ ಹಕ್ಕಿಗಳಲ್ಲಿ ಮೈನಾ ಒಂದಾಗಿದೆ. ಮನುಶ್ಯನು ರಚಿಸಿದ ನೆಲೆಗಳಿಗೆ ಇವು ಹೊಂದಿಕೊಂಡಿರುವ ರೀತಿ ಎಲ್ಲರಿಗೆ ಅಚ್ಚರಿ ಮೂಡಿಸಿದ್ದು, ಮೈನಾ ಹಕ್ಕಿಯ ಈ ಗೆಲುವು ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ.

(ಮಾಹಿತಿ ಸೆಲೆ: indianwildlifeclub.com, en.wikipedia, encyclopedia.com, animals.mom.me, wired.com)
(ಚಿತ್ರ ಸೆಲೆ: pixabay, wiki )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: