ಕಾಡು ಹಕ್ಕಿಯ ಕತೆ

– ಶಾಂತ್ ಸಂಪಿಗೆ.

bird, bird family, children's poem. ಕಾಡು ಹಕ್ಕಿಯ ಕತೆ

ದೂರದ ಊರಿನ ಕಾಡಿನ ನಡುವೆ
ಎತ್ತರವಾದ ಮರವಿತ್ತು
ಜೋಡಿ ಹಕ್ಕಿಯು ಕೂಡಿ ಬಾಳಲು
ಸುಂದರವಾದ ಗೂಡಿತ್ತು

ಗೂಡಿನ ಒಳಗೆ ಚಿಲಿಪಿಲಿ ಸದ್ದು
ಮಾಡುವ ಸಣ್ಣ ಮರಿಯಿತ್ತು
ಸಂಜೆ ಸಮಯ ಹೊಟ್ಟೆ ಹಸಿದು
ಅಮ್ಮನ ಹಾದಿ ಕಾದಿತ್ತು

ಜೋಡಿ ಹಕ್ಕಿಯು ಅನ್ನವ ಹುಡುಕಿ
ಊರ ಒಳಗಡೆ ಬಂದಿತ್ತು
ತುಂಬಿದ ಮನೆಯ ಅಂಗಳದಲ್ಲಿ
ಮಗುವು ರೊಟ್ಟಿ ಹಿಡಿದಿತ್ತು

ಹಕ್ಕಿಯ ಕಂಡು ಮಗುವು ನಗುತ
ರೊಟ್ಟಿಯ ಚೂರು ಎಸೆದಿತ್ತು
ರೊಟ್ಟಿಯ ಕಚ್ಚಿ ಹಾರಿತು ಹಕ್ಕಿ
ಮಗುವು ಚೆಂದದಿ ನಗುತಿತ್ತು

ಮಗುವಿನ ನಗುವಲಿ ಹಕ್ಕಿಗೆ ತನ್ನ
ಸುಂದರ ಮರಿಯು ನೆನಪಾಯ್ತು
ಪ್ರೀತಿಯ ಕುಡಿಯ ಕಾಣುವ ಹಂಬಲ
ಹಕ್ಕಿಯ ಮನದಲಿ ಹೆಚ್ಚಾಯ್ತು

ಬೇಟೆಗಾರನ ಹದ್ದಿನ ಕಣ್ಗಳು
ಹಕ್ಕಿಯ ಮೇಲೆ ಬಿದ್ದಿತ್ತು
ಮುಂಜಾನೆಯಿಂದ ಬೇಟೆ ಸಿಗದೆ
ಬಾಣವು ತುಂಬ ಹಸಿದಿತ್ತು

ಬೇಟೆಗಾರನ ಬಿಲ್ಲಿನ ಗುರಿಗೆ
ಒಂದು ಹಕ್ಕಿ ಬಲಿಯಾಯ್ತು
ರೊಟ್ಟಿ ಹಿಡಿದು ಕಣ್ಣೀರು ಸುರಿಸುತ
ಒಂಟಿ ಹಕ್ಕಿ ಸಾಗಿತ್ತು

ಬಾಶೆಯ ಮೀರಿದ ವಿರಹ ಬಾವನೆ
ಹಕ್ಕಿಯ ಕಣ್ಣಲಿ ತುಂಬಿತ್ತು
ಗೂಡನು ತಲುಪಲು ಉರಗನು ಸಣ್ಣ
ಹಕ್ಕಿಯ ಮರಿಯ ತಿಂದಿತ್ತು

ಮೂಕ ವೇದನೆ ಮುಗಿಲು ಮುಟ್ಟಿತು
ಹಕ್ಕಿಯು ರೆಕ್ಕೆ ಮುಚ್ಚಿತ್ತು
ಒಂದು ಜೀವವು ಬದುಕಲು ಇಲ್ಲಿ
ಇನ್ನೊಂದು ಜೀವವು ಬಲಿಯಾಯ್ತು

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: