ಮಂಜುಗಡ್ಡೆ ಮೈದಾನದಲ್ಲಿ ಕ್ರಿಕೆಟ್!

– ಕೆ.ವಿ.ಶಶಿದರ.

ಐಸ್ ಕ್ರಿಕೆಟ್

ಕೊಂಚ ಮಳೆ ಬಂದು ಮೈದಾನದಲ್ಲಿ ತೇವಾಂಶವಿದ್ದರೆ ಅಂತಹ ಮೈದಾನದಲ್ಲಿ ಕ್ರಿಕೆಟ್ ಆಟವನ್ನು ಆಡದಿರುವುದು ಸಾಮಾನ್ಯ. ಮೈದಾನದಿಂದ ಮಳೆನೀರು ಬೇಗನೆ ಹರಿದುಹೋಗಿ, ತೇವಾಂಶವು ಬೇಗನೆ ಆರಿ ಹೋಗುವಂತೆ ಮಾಡಲು ಹಲವಾರು ವಿದಾನಗಳನ್ನು ಅನುಸರಿಸುವುದನ್ನು ನಾವು ಕಂಡಿದ್ದೇವೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕಟ್ ಅಂಗಣಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಕರ‍್ಚು ಮಾಡಿ ಸಬ್-ಏರ್ ಸಬ್-ಸರ‍್ಪೇಸ್ ಒಳಚರಂಡಿ ಏರ‍್ಪಾಟನ್ನು ಮಾಡಲಾಗಿದೆ. ಇದರಿಂದಾಗಿ ಮಳೆನಿಂತ ಹಲವು ನಿಮಿಶಗಳಲ್ಲಿ ಸಂಪೂರ‍್ಣವಾಗಿ ನೀರನ್ನು ಹೀರಿಕೊಂಡು ಮೈದಾನವನ್ನು ಒಣಗಿಸಲು ಸಾದ್ಯ. ಇಂತಹ ಏರ‍್ಪಾಟನ್ನು ಕ್ರಿಕೆಟ್ ಆಡುವ ಎಲ್ಲಾ ಮೈದಾನದಲ್ಲೂ ಜಾರಿಗೆ ತರುವ ಚಿಂತನೆ ನಡೆದಿರುವಾಗಲೇ ಮಂಜುಗಡ್ಡೆ ಮೈದಾನದಲ್ಲಿ ಕ್ರಿಕೆಟ್ ಆಡುವ ಪರಿಕಲ್ಪನೆ ಮೂಡಿರುವುದು ಸೋಜಿಗವಲ್ಲವೆ!

ನಿಜ, ಬೂಲೋಕದ ಸ್ವರ‍್ಗ ಎಂದೇ ಹೆಸರು ಪಡೆದಿರುವ ಸ್ವಿಡ್ಜರ್‍ಲ್ಯಾಂಡ್ ದೇಶದ ಸೆಂಟ್ ಮೊರಿಟ್ಜ್ ನಲ್ಲಿ ಹೊಸ ಮಾದರಿಯ ಟ್ವೆಂಟಿ-ಟ್ವೆಂಟಿ ಕ್ರಿಕೆಟ್ ಪಂದ್ಯವನ್ನು ನಡೆಸಲಾಗಿದೆ.

ಐಸ್ ಮೇಲೆ ಕ್ರಿಕೆಟ್ ಪಂದ್ಯವನ್ನು ಆಡಿಸುವುದು ಬ್ರಿಟಿಶ್ ಕ್ರಿಕೆಟ್ ಉತ್ಸಾಹಿಗಳ ಕನಸಿನ ಕೂಸು. ಈ ಕನಸಿನ ಕೂಸು ಮೊಳಕೆಯೊಡೆದದ್ದು 1988ರಲ್ಲಿ. ವಿಶ್ವದಲ್ಲಿನ ಹಲವು ಕ್ರೀಡೆಗಳು ಕೆಲವೊಂದು ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದು ಅವುಗಳನ್ನು ಎಲ್ಲಾ ಕಡೆ ಹರಡಲು ಇದು ಮೊದಲ ಹೆಜ್ಜೆ.

ಕೆಲವೊಂದು ಬ್ರಿಟೀಶ್ ಕ್ರಿಕೆಟಿಗರು ಲೈಸಿಯಮ್ ಆಲ್ಪಿನಮ್ ಜುವಾಜ್ನು ಅಂತರರಾಶ್ಟ್ರೀಯ ಶಾಲೆಯ ವಿದ್ಯಾರ‍್ತಿಗಳಿಗೆ ತಮ್ಮೊಡನೆ ಕ್ರಿಕೆಟ್ ಪಂದ್ಯವಾಡುವಂತೆ ಪೈಪೋಟಿಗೆ ಕರೆದಾಗ, ಮೊದಲಬಾರಿಗೆ ಈ ಕಲ್ಪನೆ ರೂಪುಗೊಂಡಿತು ಎನ್ನುತ್ತಾರೆ ಸಂಗಟಕರು.

ಸಮುದ್ರ ಮಟ್ಟದಿಂದ 5910 ಅಡಿ ಎತ್ತರದಲ್ಲಿರುವ ಸ್ವಿಡ್ಜರ್‍ಲ್ಯಾಂಡ್‍ನ  ಎಂಗಾಡಿನ್ನಲ್ಲಿರುವ ಹೈ ಆಲ್ಪೈನ್ ವ್ಯಾಲಿಯ ರೆಸಾರ‍್ಟನಲ್ಲಿ ಕ್ರಿಕೆಟ್ ಪಂದ್ಯಕ್ಕಾಗಿಯೇ ಐಸ್ ಮೇಲೆ ವಿಶೇಶವಾದ ಮೈದಾನವನ್ನು ಮಾಡಲಾಗಿದೆ. ಕ್ರಿಕೆಟ್‍ಗೆ ಮೂಲವಾಗಿ ಅವಶ್ಯವಿರುವ 22 ಗಜ ಅಂಕಣವನ್ನು ಸಮತಟ್ಟು ಪ್ರದೇಶದಲ್ಲಿ ನಿರ‍್ಮಿಸಿ ಕ್ರುತಕ ಹುಲ್ಲು ಹಾಸನ್ನು ಅದರ ಮೇಲೆ ಹೊದಿಸಲಾಗಿದೆ.

ಕ್ರಿಕೆಟ್ ಆಟದಲ್ಲಿ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಮಾಜಿ ದಿಗ್ಗಜರಾದ ವಿರೇಂದ್ರ ಸೆಹ್ವಾಗ್, ಮೊಹಮದ್ ಕೈಪ್, ಶೋಯಬ್ ಅಕ್ತರ್, ಜಯವರ‍್ದನೆ, ಲಸಿತ್ ಮಾಲಿಂಗ, ಗ್ರೇಮ್ ಸ್ಮಿತ್, ಮೈಕೇಲ್ ಹಸ್ಸಿ ಇವರುಗಳು 2018ರ ಪೆಬ್ರವರಿ 8 ಮತ್ತು 9 ರಂದು ನಡೆದ ಎರಡು 20-20 ಪಂದ್ಯಗಳಲ್ಲಿ ತಮ್ಮ ಚಳಕವನ್ನು ತೋರಿದ್ದಾರೆ.

ಸೆಂಟ್ ಮೊರಿಟ್ಜ್ ನಲ್ಲಿ ಈಗಾಗಲೇ ಎರಡು ಬಾರಿ ಚಳಿಗಾಲದ ಒಲಂಪಿಕ್ಸ್ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಇಳಿಜಾರಿನ ಮಂಜುಗಡ್ಡೆಯ ಮೇಲೆ ಜಾರುವ ಸ್ಪರ‍್ದೆ, ನೈಸರ‍್ಗಿಕ ಮಂಜುಗಡ್ಡೆಯ ಮೇಲೆ ಗಾಲಿಯ ಮೋಟಾರ್ ಓಟದ ಸ್ಪರ‍್ದೆ, ಸ್ಕೇಟಿಂಗ್ ಮಾಡಲು ಬೇಕಾಗಿರುವ ಒಳಾಂಗಣ ಹಾಗೂ ಐಸ್ ರಿಂಕ್ ಸ್ಪರ‍್ದೆಗಳು ನಡೆಯಲು ಬೇಕಿರುವ ಕ್ರಿಡಾಂಗಣದ ಸೌಲಬ್ಯವನ್ನು ಹೊಂದಿದೆ.

ಕ್ರಿಕೆಟ್ ಜೊತೆಗೆ ಮಂಜುಗಡ್ಡೆಯ ಮೇಲೆ ಪೊಲೊ ಮತ್ತು ಕುದುರೆ ಓಟದ ಸ್ಪರ‍್ದೆಗಳನ್ನೂ ಸಹ ಇಲ್ಲಿ ಆಯೋಜಿಸಲಾಗುತ್ತದೆ. ಮಂಜುಗಡ್ಡೆ ಮೇಲಿನ ಕ್ರಿಕೆಟ್ ಹೆಸರುವಾಸಿಯಾದರೆ ಕ್ರಿಕೆಟ್ ಆಟ ಮತ್ತಶ್ಟು ನಾಡುಗಳಿಗೆ ಹಬ್ಬಲಿದೆ.

(ಮಾಹಿತಿ ಸೆಲೆ: cricket-on-ice.com )
(ಚಿತ್ರ ಸೆಲೆ: india.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications