ಸಿರಿದಾನ್ಯದ ರೊಟ್ಟಿ – ಸಜ್ಜೆ ರೊಟ್ಟಿ
– ಸವಿತಾ.
ಬೇಕಾಗುವ ಸಾಮಾನುಗಳು
- ಸಜ್ಜೆ ಹಿಟ್ಟು – 1 1/2 ಕಪ್
- ನೀರು – ಅಂದಾಜು 2 ಕಪ್
- ಉಪ್ಪು – ಅಂದಾಜು 1/4 ಚಮಚ
- ಅರಿಶಿಣ – 1/4 ಚಮಚ
- ಕರಿ ಮತ್ತು ಬಿಳಿ ಎಳ್ಳು – 1 ಟೀ ಚಮಚ
ಮಾಡುವ ಬಗೆ
ಅಗಲ ಪಾತ್ರೆಯಲ್ಲಿ 1 ಕಪ್‌ನಶ್ಟು ಸಜ್ಜೆ ಹಿಟ್ಟನ್ನು ಸಾಣಿಗೆ ಹಿಡಿದು ಇಟ್ಟುಕೊಳ್ಳಿ. ಅರ‍್ದ ಕಪ್ ನೀರನ್ನು ಕುದಿಯಲು ಇಡಿ. ಕುದಿ ಬಂದ ಮೇಲೆ ಹಿಟ್ಟಿನ ನಡುವೆ ಜಾಗ ಮಾಡಿ ನೀರು ಹಾಕಿ, ಒಂದು ತಟ್ಟೆ ಮುಚ್ಚಿ ಸ್ವಲ್ಪ ಹೊತ್ತು ಇಡಿ. ಆಮೇಲೆ ಉದ್ದ ಚಮಚದಿಂದ ಹಿಟ್ಟು ನೀರು ಒಂದಾಗುವಂತೆ ತಿರುಗಿಸಿ, ಮುದ್ದೆಯ ಹಾಗೆ ಬರುತ್ತೆ. ಇದಕ್ಕೆ ಸ್ವಲ್ಪ ಒಣ ಹಿಟ್ಟು ಮತ್ತು ಸ್ವಲ್ಪ ತಣ್ಣೀರು ಸೇರಿಸಿ. ಉಪ್ಪು ಮತ್ತು ಅರಿಶಿಣ ಹಾಕಿ ಚೆನ್ನಾಗಿ ನಾದಿ, ರೊಟ್ಟಿ ತಟ್ಟಿರಿ. ಮೇಲೆ ಎಳ್ಳು ಉದುರಿಸಿ ಇನ್ನೊಮ್ಮೆ ತಟ್ಟಿ, ಬಿಸಿ ತವೆ ಮೇಲೆ ಹಾಕಿ. ಒಂದು ಬಟ್ಟೆ ತುಂಡನ್ನು ತಣ್ಣೀರಿನಲ್ಲಿ ಅದ್ದಿ ರೊಟ್ಟಿಯ ಮೇಲೆ ಸವರಿ, ನೀರು ಆರಿದ ನಂತರ ತಿರುವಿ ಹಾಕಿ ಎರಡೂ ಬದಿ ಬೇಯಿಸಿರಿ. ಈಗ ಸಜ್ಜೆ ರೊಟ್ಟಿ ತಯಾರು.
ಸಜ್ಜೆ ರೊಟ್ಟಿಯನ್ನು ಬದನೆಕಾಯಿ ಎಣ್ಣೆಗಾಯಿ ಅತವಾ ಯಾವುದೇ ಪಲ್ಯ, ಮೊಸರು ಚಟ್ನಿ ಪುಡಿಯೊಂದಿಗೆ ಸವಿಯಬಹುದು. ರೊಟ್ಟಿ ಮಾಡುವಾಗ ಸ್ವಲ್ಪ ಕಡಕ್ ಆಗುವವರೆಗೆ ಬೇಯಿಸಿ ಒಣಗಿಸಿದರೆ ತಿಂಗಳು ಕಳೆದರೂ ತಿನ್ನಬಹುದು.
(ಚಿತ್ರ ಸೆಲೆ: reddit.com)
ಇತ್ತೀಚಿನ ಅನಿಸಿಕೆಗಳು