ಜಲಿಪಿ – ಚಿತ್ರಕಲೆಯ ದೊಡ್ಡ ಕಣಜ
– ಕೆ.ವಿ.ಶಶಿದರ.
ಜಲಿಪಿ. ಇಲ್ಲಿ ಪಂಚತಾರಾ ಹೋಟೆಲ್‍ಗಳಿಲ್ಲ, ದೊಡ್ಡ ದೊಡ್ಡ ಗಾಜಿನ ಮನೆಗಳಿಲ್ಲ, ಮುಗಿಲು ಮುಟ್ಟುವ ಕಟ್ಟಡಗಳಿಲ್ಲ, ದೊಡ್ಡ ಕೈಗಾರಿಕೆಗಳಿಲ್ಲ ಬದಲಾಗಿ ಇಲ್ಲಿರುವುದು ಪುಟ್ಟ ಪುಟ್ಟ ಮರದ ಕುಟೀರಗಳು ಮಾತ್ರ. ಏನಿಲ್ಲದಿದ್ದರೂ ಇದು ದೇಶದ ಪ್ರಮುಕ ಪ್ರವಾಸಿ ಆಕರ‍್ಶಣೆಗಳಲ್ಲಿ ಒಂದಾಗಿದೆ ಎಂದರೆ ನಿಜವಾಗಿಯೂ ಅಚ್ಚರಿಯಲ್ಲವೆ?
ಸಾವಿರಾರು ಪ್ರವಾಸಿಗರು ಎಡತಾಕುವ ಪುಟ್ಟ ಪ್ರಾಚೀನ ಹಳ್ಳಿ ಜಲಿಪಿ ಇರುವುದು ಆಗ್ನೇಯ ಪೋಲೆಂಡಿನಲ್ಲಿ. ಇಲ್ಲಿರುವ ಪ್ರತಿಯೊಂದು ಮನೆ, ಹಾಗೂ ನಾಯಿ, ಕೋಳಿ, ಹಂದಿಗೂಡುಗಳು ಎಲ್ಲವೂ ಬಣ್ಣ ಬಣ್ಣದ ಚಿತ್ರಗಳಿಂದ ಅಲಂಕ್ರುತವಾಗಿದೆ. ಇದೇ ಪ್ರವಾಸಿಗರ ಆಕರ‍್ಶಣೆಗೆ ಮೂಲ.
ಸ್ವಚ್ಚ ಬಾರತ ಅಬಿಯಾನ ಇತ್ತೀಚಿಗಶ್ಟೇ ಪ್ರಾರಂಬವಾದರೂ ಪೋಲೆಂಡಿನ ಜಲಿಪಿ ಗ್ರಾಮವನ್ನು ಸುಂದರವಾಗಿಡುವ ಸಂಪ್ರದಾಯಕ್ಕೆ ನೂರು ವರ‍್ಶಕ್ಕೂ ಹೆಚ್ಚಿನ ಇತಿಹಾಸವಿದೆ. ಇಲ್ಲಿನ ಎಲ್ಲಾ ಮನೆಯ ಗೋಡೆಯ ಒಳಬಾಗ ಹಾಗೂ ಹೊರಬಾಗ ಸುಂದರ ಚಿತ್ರಗಳಿಂದ ಕೂಡಿದೆ. ಮನೆ ಗೋಡೆಯ ಮೇಲಿನ ಕೆಲವು ನಿರ‍್ದಿಶ್ಟ ದೋಶಗಳನ್ನು ಮುಚ್ಚಲು ಜಲಿಪಿಯ ಹೆಂಗಸರು ಕಂಡುಕೊಂಡ ಉಪಾಯ ಇದು. ಇದೇ ಅವರ ಏಳಿಗೆ ಹಾಗೂ ಆರ‍್ತಿಕ ಸ್ವಾವಲಂಬನೆಗೆ ನಾಂದಿಯಾಯಿತೆಂದರೆ ತಪ್ಪಿಲ್ಲ.
ಹಸುವಿನ ಬಾಲದ ಕೂದಲುಗಳಿಂದ ಬಿಡಿಸಿದ ಚಿತ್ರಗಳಿವು
ಹಳ್ಳಿಯ ಹೆಂಗಸರು ಮನೆಯ ಹೊರಗೋಡೆಯ ಮೇಲಿನ ತೂತುಗಳನ್ನು ಮುಚ್ಚಿಡುವ ಹುನ್ನಾರದಲ್ಲಿ ಅಲ್ಲಿ ಹೂವಿನ ಚಿತ್ತಾರ ಬಿಡಿಸಿದ್ದು ಈಗ ಇತಿಹಾಸ. ವ್ರುತ್ತಿಪರ ಚಿತ್ರಕಾರರು ಬಳಸುವ ಸಾದನಗಳು ಇಲ್ಲವಾದ ಕಾರಣ ಸ್ತಳೀಯವಾಗಿ ಸಿಗುತ್ತಿದ್ದ ಹಸುವಿನ ಬಾಲದ ಕೂದಲುಗಳಿಂದ ಬ್ರಶ್ ತಯಾರಿಸಿಕೊಂಡರು. ಚಿತ್ತಾರ ಬಿಡಿಸಲು ಬೇಕಿರುವ ಬಣ್ಣಗಳನ್ನು ಹೆಂಗಸರು ತಾವೇ ಕಣಕದಲ್ಲಿನ ಕೊಬ್ಬಿನಿಂದ ತಯಾರಿಸಿಕೊಂಡರು.
ಪ್ರತಿ ವರ‍್ಶವೂ ಈ ಸುಂದರ ಚಿತ್ತಾರಗಳನ್ನು ಮತ್ತೆ ಸ್ರುಶ್ಟಿಸುವ ಸಂಪ್ರದಾಯ ಜಲಿಪಿದು. ಕಾರ‍್ಪಸ್ ಕ್ರಿಸ್ಟಿ ಹಬ್ಬದ ಬಳಿಕ ಬೇಸಾಯದ ಕೆಲಸಗಳು ಇಲ್ಲದಿರುವಾಗ ಹೆಂಗೆಳೆಯರು ಈ ಕೆಲಸವನ್ನು ಮಾಡಿ ಮುಗಿಸುತ್ತಿದ್ದರು. ತಲೆತಲಾಂತರಗಳಿಂದ ನಡೆದು ಬಂದ ಕಾರಣ ಇದು ಇಂದು ಸಂಪ್ರದಾಯವಾಗಿ ಮಾರ‍್ಪಾಟಾಗಿದೆ. ಪ್ರಕ್ರುತಿಯಲ್ಲಿನ ಸೊಬಗು ಹಾಗೂ ಸ್ತಳೀಯ ಜಾನಪದದ ಸ್ಪೂರ‍್ತಿ ಅವರುಗಳು ಬಿಡಿಸಿದ ಬಣ್ಣದ ಚಿತ್ರಗಳಲ್ಲಿ ಪ್ರದಾನವಾಗಿ ಕಾಣಬರುತ್ತದೆ.
ಜಲಿಪಿ ಗ್ರಾಮದ ಪೆಲಿಜಾ ಕ್ಯುರಿಲೋವಾ ಎಂಬ ಹೆಂಗಸಿಗೆ ಗೋಡೆಗಳ ಮೇಲೆ ಚಿತ್ತಾರ ಬಿಡಿಸುವ ಸಂಪ್ರದಾಯ ಗೀಳಾಯಿತು. ಆಕೆ ತನ್ನ ಮನೆಯ ಪ್ರತಿ ಚದರವನ್ನೂ ಸುಂದರ ಚಿತ್ರಗಳಿಂದ ಅಲಂಕರಿಸಿದಳು. ಜಾಗ ಎಶ್ಟೇ ಚಿಕ್ಕದಿರಲಿ ಅತವಾ ದೊಡ್ಡದಿರಲಿ ಅಕೆಗೆ ಅದು ಸಮಸ್ಯೆಯೇ ಆಗಲಿಲ್ಲ. 1974ರಲ್ಲಿ ಆಕೆಯ ಸಾವಿನ ಬಳಿಕ ಸುಂದರ ಚಿತ್ರಗಳನ್ನು ಹೊಂದಿದ್ದ ಆಕೆಯ ಮೂರು ಬೆಡ್-ರೂಮ್ ಮನೆ ಪರಿವರ‍್ತನೆಗೊಂಡು ವಸ್ತು ಸಂಗ್ರಹಾಲಯವಾಯಿತು. ಜಲಿಪಿಗೆ ಬರುವ ಪ್ರವಾಸಿಗರಿಗೆ ಇದೇ ಮೂಲ ಆಕರ‍್ಶಣೆ.
ಇಲ್ಲಿಗೆ ಬರುವ ಪ್ರವಾಸಿಗರ ಎಣಿಕೆ ಕಡಿಮೆ
ಪ್ರಸ್ತುತ ಜಲಿಪಿ ಗ್ರಾಮ ಪೋಲೆಂಡಿನ ಅತ್ಯಂತ ಚಿತ್ರಸದ್ರುಶ ಹಳ್ಳಿಯಾಗಿದೆ. ಈ ಪುಟ್ಟ ಹಳ್ಳಿಯಲ್ಲಿನ ಎಲ್ಲಾ ಗೋಡೆಗಳು ಕಿಟಕಿ-ಬಾಗಿಲುಗಳೂ ಚಿತ್ರ ಸದ್ರುಶವಾಗಿದ್ದರೂ ಇಲ್ಲಿಗೆ ಬರುವ ಪ್ರವಾಸಿಗರ ಎಣಿಕೆ ಕಡಿಮೆ. ಹಾಗಾಗಿ ಇದು ಇನ್ನೂ ತನ್ನ ಅನನ್ಯ ಸೌಂದರ‍್ಯ ಮತ್ತು ಸಂಪ್ರದಾಯವನ್ನು ಕಳೆದುಕೊಂಡಿಲ್ಲ.
ಜಲಿಪಿಯನ್ನು ಚಿತ್ರಕಲೆಯ ದೊಡ್ಡ ಕಣಜ ಎನ್ನಬಹುದು. ಇಡೀ ಹಳ್ಳಿಯೇ ಬಣ್ಣದ ಚಿತ್ತಾರಗಳ ಆಗರ. ನಾಯಿ, ಕೋಳಿಗೂಡುಗಳು, ಗಿಳಿಯ ಪಂಜರ, ಹಳೆ ಕಾರಂಜಿಗಳು, ಬೇಲಿಗಳು, ಮನೆಯ ಒಳಾಂಗಣ ಗೋಡೆಗಳು ಎಲ್ಲೆಲ್ಲಿ ಕಣ್ಣು ಹಾಯಿಸಲು ಸಾದ್ಯವೋ ಅಲ್ಲೆಲ್ಲಾ ಚಿತ್ರ ಕಲೆ ಮೂಡಿದೆ. ಇದು ಕಣ್ಣಿಗೆ ಹಬ್ಬ.
ಜಲಿಪಿಗೆ ಬೇಟಿ ನೀಡಲು ಪ್ರಶಸ್ತವಾದ ಸಮಯ ವಸಂತ ಕಾಲ. ಈ ಸಮಯದಲ್ಲಿ ಹಳ್ಳಿಯಲ್ಲಿ ಅತ್ಯಂತ ಪ್ರಮುಕ ಪೈಪೋಟಿಯೊಂದು ನಡೆಯುತ್ತದೆ. ಅದೇ ‘ಮಲನೋವಾ ಚಟಾ’ ಅತವಾ ‘ಪೈಂಟೆಡ್ ಕಾಟೇಜ್ ಕಾಂಪಿಟೇಶನ್’. ಈ ಪೈಪೋಟಿ 1948ರಿಂದ ಅಂದರೆ ಎರಡನೇ ಮಹಾ ಯುದ್ದ ಮುಗಿದ ಮೇಲೆ ಪ್ರಾರಂಬವಾಯಿತು. ಮಹಾಯುದ್ದದಿಂದಾದ ಹಾನಿಯನ್ನು ಮುಚ್ಚುವ ಸಲುವಾಗಿ ಹಾಗೂ ಅದರಲ್ಲಿ ಸಾವಿಗೀಡಾದ ಶೇಕಡಾ 17 ಪೊಲೆಂಡಿಗರ ಸವಿನೆನಪಿಗಾಗಿ ಈ ಪೈಪೋಟಿ ಎನ್ನುತ್ತಾರೆ ಸ್ತಳೀಯ ಅದಿಕಾರಿಗಳು.
(ಮಾಹಿತಿ ಸೆಲೆ: countryliving.com, boredpanda.com, atlasobscura.com, curbed.com)
(ಚಿತ್ರ ಸೆಲೆ: wiki/zalipie, wiki/zalipie_Museum)
ಇತ್ತೀಚಿನ ಅನಿಸಿಕೆಗಳು