ಒಂದೆಲಗದ ತಂಬುಳಿ
– ಕಲ್ಪನಾ ಹೆಗಡೆ.
ಈ ತಂಬುಳಿ ಕಡುಬಿಸಿಲಿಗೆ ತುಂಬಾ ತಂಪಾಗಿರತ್ತೆ. ದೇಹವನ್ನು ತಂಪಾಗಿಡುವುದಲ್ಲದೆ ಆರೋಗ್ಯದ ಸುದಾರಣೆಗೆ ಔಶದಿಯಾಗಿಯೂ ಉಪಯೋಗಿಸುತ್ತಾರೆ. ದಿನಾಲು ಒಂದು ಎಲೆ ಜೊತೆಗೆ ಒಂದು ಕಾಳುಮೆಣಸು ತಿಂದರೆ ಬುದ್ದಿ ಚುರುಕು ಆಗತ್ತೆ, ನೆನಪಿನ ಶಕ್ತಿ ತುಂಬಾ ಚೆನ್ನಾಗಿರತ್ತೆ ಅಂತಲೂ ಹೇಳುತ್ತಾರೆ. ಒಂದೆಲಗದ ಮಹತ್ವ ತುಂಬಾನೆ ಇದೆ.
ಏನೇನು ಬೇಕು?
ಒಂದೆಲಗ(ಬ್ರಾಹ್ಮಿ)
ಕಾಲು ಚಮಚ ಜೀರಿಗೆ
೨ ಹಸಿಮೆಣಸಿನ ಕಾಯಿ
೨ ಕಾಳುಮೆಣಸು
ಅರ‍್ದ ಹೋಳು ತೆಂಗಿನಕಾಯಿ ತುರಿ
ಒಗ್ಗರಣೆಗೆ
ಎಣ್ಣೆ
ಸಾಸಿವೆ
ಕಾಲು ಚಮಚ ಎಳ್ಳು
1 ಒಣಮೆಣಸಿನಕಾಯಿ
ಮಾಡುವ ಬಗೆ
- ಮೊದಲು ಒಂದೆಲಗವನ್ನು ಚೆನ್ನಾಗಿ ತೊಳೆದು ಎಲೆ ಹಾಗೂ ದಂಟನ್ನು ಹಸನುಮಾಡಿಕೊಳ್ಳಿ.
- ಬಳಿಕ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಒಂದೆಲಗದ 4 ಎಲೆ (ದಂಟಿನ ಜೊತೆಗೆ), ಜೀರಿಗೆ, ಹಸಿಮೆಣಸಿನಕಾಯಿ ಹಾಗೂ 2 ಕಾಳುಮೆಣಸು ಹಾಕಿ ಹುರಿದುಕೊಂಡು, ಅರ‍್ದ ಹೋಳು ಕಾಯಿತುರಿ ಹಾಕಿ ನುಣುಪಾಗಿ ರುಬ್ಬಿಕೊಳ್ಳಿ.
- ರುಬ್ಬಿಕೊಂಡ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ರುಚಿಗೆ ತಕ್ಕಶ್ಟು ಉಪ್ಪು, ಬೆಲ್ಲ ಹಾಗೂ ತೆಳ್ಳಗೆ ಆಗುವಶ್ಟು ನೀರು ಹಾಕಿ ಹದ ಮಾಡಿಕೊಳ್ಳಿ.
- ಆಮೇಲೆ ಒಗ್ಗರಣೆಗೆ ಸ್ವಲ್ಪ ಎಣ್ಣೆ, ಸಾಸಿವೆ, 1 ಒಣಮೆಣಸಿನಕಾಯಿ. ಕಾಲು ಚಮಚ ಎಳ್ಳು ಹಾಕಿ ಒಗ್ಗರಣೆ ಮಾಡಿಕೊಳ್ಳಿ.
ಇದನ್ನು ಅನ್ನದೊಂದಿಗೆ ತಿನ್ನಬಹುದು ಇಲ್ಲವೇ ಹಾಗೆಯೇ ಕುಡಿಯಲೂ ಬಹುದು.
(ಚಿತ್ರ ಸೆಲೆ: ಕಲ್ಪನಾ ಹೆಗಡೆ)
ಇತ್ತೀಚಿನ ಅನಿಸಿಕೆಗಳು