ಡಾಬರ್‍ಮನ್ – ಚುರುಕುತನಕ್ಕೆ ಮತ್ತೊಂದು ಹೆಸರು

– ನಾಗರಾಜ್ ಬದ್ರಾ.

ಡಾಬರ‍್ಮನ್‍‍ Dobermann

ಜಗತ್ತಿನಾದ್ಯಂತ ಹಲವಾರು ನಾಯಿಗಳು ಬೇಟೆಗಾಗಿ ಹೆಸರುವಾಸಿ ಆಗಿದ್ದು, ಅವುಗಳಲ್ಲಿ ಡಾಬರ‍್ಮನ್‍‍ ನಾಯಿಯು ಪ್ರಮುಕವಾಗಿದೆ. ಈ ತಳಿಯು ಮೊದಲಬಾರಿಗೆ ಕಂಡುಬಂದಿದ್ದು ಜರ‍್ಮನಿಯ ಅಪೊಲ್ಡಾ (Apolda) ಪಟ್ಟಣದಲ್ಲಿ. ಅದು 1890ರ ದಶಕ ಪ್ರಾಂಕೋ-ಪ್ರಶ್ಯನ್ ಯುದ್ದದ (Franco-Prussian War) ನಂತರ ಕಾರ‍್ಲ್ ಪ್ರೆಡ್ರಿಕ್ ಲೂಯಿಸ್ ಡಾಬರಮನ್ (Karl Friedrich Louis Dobermann) ಎಂಬುವರು ಅಪೊಲ್ಡಾ ಪಟ್ಟಣದಲ್ಲಿ ತೆರಿಗೆ ವಸೂಲಿಗಾರರಾಗಿ ಕೆಲಸ ಮಾಡುತ್ತಿದ್ದರು. ಇದರ ಜೊತೆಯಲ್ಲಿಯೇ ಅವರು ಅಪೊಲ್ಡಾ ಡಾಗ್ ಪೌಂಡ್ ಎಂಬ ಹೆಸರಿನ ಸಂಸ್ತೆಯೊಂದನ್ನು ನಡೆಸುತ್ತಿದ್ದರು.

ಆ ಹೊತ್ತಿನಲ್ಲಿ ಅಪೊಲ್ಡಾ ಪಟ್ಟಣದಲ್ಲಿ ಡಕಾಯಿತರ ಸಮಸ್ಯೆ ತುಂಬಾ ಇತ್ತು. ಇದರಿಂದ ಬೇಸತ್ತ ಲೂಯಿಸ್ ಅವರು ತಮ್ಮನ್ನು ತಾವು ಕಾಪಾಡಿಕೊಳ್ಳಲು ಚುರುಕು ಹಾಗೂ ಬಿರುಸಾಗಿ ಓಡಬಲ್ಲ ಒಂದು ವಿಶೇಶವಾದ ನಾಯಿ ತಳಿಯನ್ನು ಹುಟ್ಟು ಹಾಕಲು ಯೋಚಿಸಿದರು. ಬಳಿಕ ಅವರು ತಮ್ಮ ಅಪೊಲ್ಡಾ ಡಾಗ್ ಪೌಂಡ್ ಸಂಸ್ತೆಯಲ್ಲಿನ ಹಲವಾರು ತಳಿಯ ನಾಯಿಗಳನ್ನು ಒಂದಾಗಿಸಿ ಒಂದು ಹೊಸ ತಳಿಯನ್ನು ಹುಟ್ಟು ಹಾಕುವ ಪ್ರಕ್ರಿಯೆಯನ್ನು ಆರಂಬಿಸಿದರು.

ಹಲವಾರು ದಿನಗಳ ಬಳಿಕ ಒಂದು ಹೊಸ ತಳಿಯನ್ನು ಹುಟ್ಟುಹಾಕಿದರು, ಅದುವೇ ಡಾಬರ‍್ಮನ್‍‍ ತಳಿ. ಇವುಗಳ ಮೂಲ ತಳಿ ಯಾವುದೆಂದು ನಿಕರವಾಗಿ ತಿಳಿದು ಬಂದಿಲ್ಲ. ಆದಾಗ್ಯೂ ರಾಟ್ವೀಲರ್, ಜರ‍್ಮನ್ ಶಾರ‍್ಟ್ ಹೇರ‍್ಡ್ ಪಾಯಿಂಟರ್, ವೀಮರನೇರ್, ಮ್ಯಾಂಚೆಸ್ಟರ್ ಟೆರಿಯರ್, ಬ್ಯುಸೆರಾನ್, ಗ್ರೇಟ್ ಡೇನ್, ಬ್ಲ್ಯಾಕ್ ಹಾಗೂ ಟ್ಯಾನ್ ಟೆರಿಯರ್, ಗ್ರೇಹೌಂಡ್ ಮುಂತಾದ ತಳಿಯ ನಾಯಿಗಳನ್ನು ಬಳಸಿರಬಹುದು ಎಂದು ಹೇಳಲಾಗುತ್ತದೆ. ಬಳಿಕ ಒಟ್ಟೊ ಗೊಲ್ಲರ್ ಮತ್ತು ಪಿಲಿಪ್ ಗ್ರೀನಿಗ್ (Otto Goeller and Philip Greunig) ಎಂಬವರು ಇದೇ ತಳಿಯನ್ನು ಕೊಂಚ ಮಾರ‍್ಪಡಿಸಿದರು. ಇಂದು ಕಂಡುಬರುವ ಡಾಬರ‍್ಮನ್‍‍ ನಾಯಿಗಳು ಒಟ್ಟೊ ಹಾಗೂ ಪಿಲಿಪ್ ಅವರು ಮಾರ‍್ಪಡಿಸಿದ ಡಾಬರ್‍ಮನ್ ತಳಿಗಳೇ ಆಗಿವೆ.

ಕಪ್ಪು ಹಾಗೂ ಕಂದು ಬಣ್ಣದ ಸೆಳೆಯುವ ಮೈಮಾಟ

ಡಾಬರ‍್ಮನ್ ನಾಯಿಯ ಮೈಮಾಟವು ಮದ್ಯಮ ಗಾತ್ರದಾಗಿದ್ದು, ಚೌಕಾಕಾರವನ್ನು ಹೊಂದಿದೆ. ಇವು ತುಂಬಾ ಕಸುವುಳ್ಳ ನರಕಟ್ಟು ಹೊಂದಿದ್ದು, ಇದು ಅವುಗಳ ಉರುಬನ್ನು ಹೆಚ್ಚಿಸಿದೆ. ಸಾಮಾನ್ಯವಾಗಿ ಈ ತಳಿಯ ನಾಯಿಗಳ ಮೈ ಕಪ್ಪು ಹಾಗೂ ಕಂದು ಬಣ್ಣದಾಗಿರುತ್ತದೆ. ಡಾಬರ‍್ಮನ್ ಸುಮಾರು 68 ರಿಂದ 72 ಸೆಂಟಿಮೀಟರಶ್ಟು ಉದ್ದ ಹಾಗೂ 40 ರಿಂದ 45 ಕೆಜಿಯಶ್ಟು ತೂಕವಿರುತ್ತದೆ. ಇವು ಸಾಮಾನ್ಯವಾಗಿ 10 ರಿಂದ 12 ವರ‍್ಶಗಳ ಕಾಲ ಬದುಕುತ್ತವೆ.

ಡಾಬರ‍್ಮನ್‍ಗಳ ಬಾಲವು ಇತರೆ ನಾಯಿಗಳಿಗೆ ಹೋಲಿಸಿದರೆ ಅಳತೆಯಲ್ಲಿ ಚಿಕ್ಕದು ಹಾಗೂ ತೆಳುವಾಗಿರುತ್ತದೆ. ಇನ್ನು ಕಿವಿಗಳು ಕೂಡ ಒಂದು ವಿಶೇಶವಾದ ರಚನೆಯನ್ನು ಹೊಂದಿದ್ದು, ಹಲವಾರು ರೋಗಗಳಿಂದ ತಮ್ಮನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ. ಕಿವಿಗಳು ತುಂಬಾ ಚುರುಕಾಗಿದ್ದು, ಸುಮಾರು 250 ಗಜದಶ್ಟು ದೂರದಿಂದ ಸಪ್ಪಳವನ್ನು ಕೇಳಿಸಿಕೊಳ್ಳಬಲ್ಲವು.

ಪ್ರದರ‍್ಶನಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ತಳಿ

ಡಾಬರ‍್ಮನ್ ನಾಯಿಯು ತನ್ನ ಜಾಣ್ಮೆ, ಕಾವಲುಗಾರಿಕೆ ಮುಂತಾದ ವಿಶೇಶ ಗುಣಗಳಿಂದ ಜನರ ನಡುವೆ ಬೇಗನೆ ಹೆಸರುವಾಸಿ ಆಯಿತು. ಇದಲ್ಲದೇ ಎರಡನೇ ವಿಶ್ವ ಯುದ್ದದಲ್ಲಿ ಇವು ಮುಕ್ಯ ಪಾತ್ರವಹಿಸಿದ್ದು ಕೂಡ ಒಂದು ಕಾರಣವಾಗಿದೆ. 2017 ರಲ್ಲಿ ಅಮೆರಿಕನ್ ಕೆನೆಲ್ ಕ್ಲಬ್ (American Kennel Club) ನವರು ಜಗತ್ತಿನ ಅತಿ ಹೆಚ್ಚು ಹೆಸರುವಾಸಿ ನಾಯಿ ತಳಿಗಳ ಪಟ್ಟಿ ಬಿಡುಗಡೆಮಾಡಿದ್ದರು. ಅದರಲ್ಲಿ ಡಾಬರ‍್ಮನ್ ತಳಿಯು 16 ನೇ ಸ್ತಾನ ಪಡೆದಿದೆ.

ಡಾಬರ‍್ಮನ್ ತಳಿಯು ಅಮೆರಿಕನ್ ಕೆನೆಲ್ ಕ್ಲಬ್‍ನೊಂದಿಗೆ ಹಲವಾರು ವರ‍್ಶಗಳ ನಂಟು ಹೊಂದಿದ್ದು, 1980 ರಲ್ಲಿ ಈ ತಳಿಯನ್ನು ಮೊದಲಬಾರಿಗೆ ಕ್ಲಬ್‍ಗೆ ಸೇರಿಸಿಕೊಳ್ಳಲಾಯಿತು. ಬಳಿಕ ಕೆಲವೇ ವರ‍್ಶಗಳಲ್ಲಿ ರೋಡ್ ಐಲೆಂಡ್ ನಲ್ಲಿ ನಡೆದ ನಾಯಿಗಳ ಪ್ರದರ‍್ಶನ ಕಾರ‍್ಯಕ್ರಮದಲ್ಲಿ ಕ್ಲಬ್ ನ ಪರವಾಗಿ ಬಾಗವಹಿಸಿ ಅಸಾಮಾನ್ಯ ನಾಯಿ ತಳಿ ಎಂಬ ಪ್ರಶಸ್ತಿಗೆ ಪಾತ್ರವಾಯಿತು. ಹೀಗೆಯೇ ಇವು ಜಗತ್ತಿನಾದ್ಯಂತ ಆಯೋಜಿಸಲ್ಪಡುವ ಹಲವಾರು ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡು, ಪ್ರಶಸ್ತಿಗಳನ್ನು ಪಡೆದುಕೊಂಡು ಹೆಸರುವಾಸಿ ಆದವು. ಡಾಬರ‍್ಮನ್‍ಗಳು ನಾಯಿ ಪ್ರದರ‍್ಶನಗಳಲ್ಲಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ತಳಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಡಾಬರ‍್ಮನ್‍ ಸಿನೆಮಾ ಸ್ಟಾರ್ ಕೂಡ ಹೌದು. 1920 ದಿ ಡಾಬರ‍್ಮನ್‍ ಗ್ಯಾಂಗ್ (The Doberman Gang) ಎಂಬ ಹೆಸರಿನ ಚಲನಚಿತ್ರವೊಂದು ಬಿಡುಗಡೆಗೊಂಡು ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಮೊದಲಬಾರಿಗೆ 6 ಡಾಬರ‍್ಮನ್‍ ನಾಯಿಗಳು ಮುಕ್ಯ ಪಾತ್ರದಲ್ಲಿ ನಟಿಸಿ, ಸೈ ಎನಿಸಿಕೊಂಡವು. ಚಿತ್ರದ ಎರಡನೇ ವರಸೆ ಕೂಡ ಬಿಡುಗಡೆಗೊಂಡು ಸುದ್ದಿ ಮಾಡಿತು. ಡಾಬರ‍್ಮನ್‍‍ಗಳು ಹೀಗೆ ಹಲವಾರು ಚಿತ್ರಗಳಲ್ಲಿ ನಟಿಸಿ ಮೆಚ್ಚುಗೆ ಪಡೆದಿವೆ.

ಡಾಬರ‍್ಮನ್‍‍  Dobermann and puppy

ಡಾಬರ‍್ಮನ್‍‍ಗಳ ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು

  • ಡಾಬರ‍್ಮನ್‍ ಜಗತ್ತಿನಾದ್ಯಂತ ಚುರುಕುತನಕ್ಕೆ ಹೆಸರುವಾಸಿ ಆಗಿದ್ದು, ವಿಶ್ವದ ಅತ್ಯಂತ ಚುರುಕಿನ ನಾಯಿಗಳ ಪಟ್ಟಿಯಲ್ಲಿ 5 ನೇ ಸ್ತಾನ ಪಡೆದುಕೊಂಡಿದೆ.
  • 20 ನೇ ಶತಮಾನದುದ್ದಕ್ಕೂ ಡಾಬರ‍್ಮನ್‍‍ಗಳನ್ನು ಮಿಲಿಟರಿ ಹಾಗೂ ಪೊಲೀಸ್ ಇಲಾಕೆಗಳಲ್ಲಿ ಅತಿ ಹೆಚ್ಚಾಗಿ ಬಳಸಿಕೊಳ್ಳಲಾಯಿತು.
  • ಅಮೆರಿಕಾದ ಅತ್ಯಂತ ಹೆಸರುವಾಸಿ ನಾಯಿಗಳ ಪಟ್ಟಿಯಲ್ಲಿ ಡಾಬರ‍್ಮನ್‍ 14 ನೇ ಸ್ತಾನ ಪಡೆದುಕೊಂಡಿದೆ.
  • ಎರಡನೇ ವಿಶ್ವ ಯುದ್ದದ ಸಮಯದಲ್ಲಿ ಡಾಬರ‍್ಮನ್‍ ತಳಿಗಳು ಅಮೆರಿಕಾ ನೌಕಾದಳದ ಅದಿಕ್ರುತ ಯುದ್ದ ನಾಯಿ ಆಗಿತ್ತು.
  • ಇವು ತಂಪಾದ ವಾತಾವರಣಕ್ಕೆ ಅಶ್ಟೊಂದು ಹೊಂದಿಕೊಳ್ಳುವುದಿಲ್ಲ, ಆದ್ದರಿಂದ ಮಳೆಯಲ್ಲಿ ಹೊರಗೆ ಹೋಗಲು ಒಪ್ಪುವುದಿಲ್ಲ.
  • ಡಾಬರ‍್ಮನ್‍‍ಗಳು ಆಕ್ರಮಣಕಾರಿ ನಾಯಿಗಳು, ಅವನ್ನು ಪ್ರೀತಿ ಹಾಗೂ ಎಚ್ಚರಿಕೆಯಿಂದ ಆರಯ್ಕೆ ಮಾಡಬೇಕು.
  • ಇವು ಬೇಗನೆ ಮನುಶ್ಯನೊಂದಿಗೆ ಬೆರೆಯುತ್ತವೆ. ಹಾಗೆಯೇ ತಮ್ಮ ಒಡೆಯನಿಗೆ ನಿಯತ್ತಾಗಿರುತ್ತವೆ.

(ಮಾಹಿತಿ ಸೆಲೆ: wiki, metalfloss.com, pawedin, allbigdogbreeds)
(ಚಿತ್ರ ಸೆಲೆ: wiki/dobermann, wiki/dobermann_and_puppy)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *