ಬ್ರಿಟನ್ನಿನ ಅತಿ ಪುಟ್ಟ ಪೊಲೀಸ್ ಟಾಣೆ

– ಕೆ.ವಿ.ಶಶಿದರ.

ಬ್ರಿಟನ್ನಿನ ರಾಜದಾನಿ ಲಂಡನ್ ಅನೇಕ ವಿಸ್ಮಯಗಳಿಗೆ ಹೆಸರುವಾಸಿ. ಲಂಡನ್ ನೆಲದಡಿಯ ರೈಲು ಜಾಲ ಹೊಂದಿದ ವಿಶ್ವದ ಮೊದಲ ನಗರ ಎಂಬ ಹೆಗ್ಗಳಿಕೆಯಿಂದ ಹಿಡಿದು ಯುರೋಪ್‍ನ ಅತಿ ದೊಡ್ಡ ನಗರಗಳಲ್ಲಿ ಒಂದು ಎಂದೂ ಹೆಸರು ಮಾಡಿದೆ. ಇದರೊಂದಿಗೆ ಬಹಳ ಜನಕ್ಕೆ ತಿಳಿಯದಿರುವ ಮತ್ತೊಂದು ವಿಚಿತ್ರಕ್ಕೆ ಸಹ ಈ ನಗರ ಪ್ರಕ್ಯಾತಿ. ಅದೇ ವಿಶ್ವದ ಅತಿ ಪುಟ್ಟ ಪೊಲೀಸ್ ಟಾಣೆ. ಹಾಲಿ ಇದು ಟಾಣೆಯಾಗಿ ಉಳಿಯದಿರುವುದೇ ಒಂದು ವಿಪರ‍್ಯಾಸ!

ಲಂಡನ್ನಿನ ಹಲಬಗೆಯ ಪೊಲೀಸರು

ಲಂಡನ್ ನಗರ ಅನೇಕ ರೀತಿಯ ಪೊಲೀಸ್ ಆದಿಕಾರಿಗಳನ್ನು ಹೊಂದಿದೆ. ಕುದುರೆ ಸವಾರಿ ಪೊಲೀಸರು, ನಡೆದಾಡುವ ಪೊಲೀಸರು, ಮೋಟಾರ್ ಬೈಕ್ ಪೊಲೀಸರು – ಹೀಗೆ. ಇಲ್ಲಿ ಸುಮಾರು 75 ಪೊಲೀಸ್ ಟಾಣೆಗಳಿವೆ. ಈ ಎಲ್ಲಾ ಟಾಣೆಗಳ ಕಟ್ಟಡಗಳು ವಿಸ್ತೀರ‍್ಣದಲ್ಲಾಗಲಿ, ಆಕಾರದಲ್ಲಾಗಲಿ ವಿಬಿನ್ನ, ಒಂದೊಕ್ಕೊಂದು ತಾಳೆ ಮಾಡುವಂತಿಲ್ಲ. ಆಡಳಿತ ಹಾಗೂ ಉತ್ತಮ ನಿರ‍್ವಹಣೆಗಾಗಿ ಸಿಟಿ ಆಪ್ ಲಂಡನ್ ಪೊಲೀಸ್ ‘ಸ್ಕ್ವೇರ್ ಮೈಲ್’ ಪ್ರದೇಶವನ್ನು ತಮ್ಮ ಸುಪರ‍್ದಿಯಲ್ಲಿ ಇಟ್ಟುಕೊಂಡು ಗ್ರೇಟರ್ ಲಂಡನ್ನಿನ ಉಳಿದ ಬಾಗವನ್ನು ಮೆಟ್ರೋಪಾಲಿಟನ್ ಪೊಲೀಸರಿಗೆ ವಹಿಸಿದೆ.

ಇಬ್ಬರು ಕೈದಿಗಳನ್ನು ಕೂಡಿ ಹಾಕಿದರೆ ಪೊಲೀಸ್ ಅದಿಕಾರಿಗೇ ಜಾಗವಿರುತ್ತಿರಲಿಲ್ಲ!

ಬ್ರಿಟನ್ನಿನ ಹಾಗೂ ವಿಶ್ವದ ಅತ್ಯಂತ ಪುಟ್ಟ ಪೊಲೀಸ್ ಟಾಣೆ ಎಂಬ ದಾಕಲೆ ಲಂಡನ್ನಿನ ಟ್ರಪಲ್ಗಾರ್ ಚೌಕದ(Trafalgar Square) ಆಗ್ನೇಯ ಮೂಲೆಯಲ್ಲಿರುವ ಒಂದಾನೊಂದು ಕಾಲದ ಪೊಲೀಸ್ ಟಾಣೆಯ ಹೆಸರಿನಲ್ಲಿತ್ತು. ಇದು ಎಶ್ಟು ಪುಟ್ಟದಾಗಿತ್ತು ಎಂದರೆ ಇದರಲ್ಲಿ ಇಬ್ಬರು ಕೈದಿಗಳ ಕೂಡಿ ಹಾಕಿದರೆ ಅಲ್ಲಿ ಪೊಲೀಸ್ ಆದಿಕಾರಿಗೇ ಜಾಗವಿಲ್ಲದಶ್ಟು!!! ಕೈದಿಗಳೂ ಸಹ ನಿಂತಿರಬೇಕಶ್ಟೆ. ಅವರಿಗೂ ಕುಳಿತುಕೊಳ್ಳಲು ಅವಕಾಶವಿರಲಿಲ್ಲ.

ಪೊಲೀಸರು ಸಿ ಸಿ ಟಿ ವಿ ಹಾಗೆ ಕೆಲಸ ಮಾಡಬೇಕಿತ್ತು!

ಈ ಅತ್ಯಂತ ಪುಟ್ಟ ಪೊಲೀಸ್ ಟಾಣೆಯ ನಿರ‍್ಮಾಣ ಕಾರ‍್ಯ ಸಹ ಬಹಳ ರಹಸ್ಯವಾಗಿತ್ತು. ಮೊದಲ ವಿಶ್ವ ಸಮರದ ನಂತರ ಟ್ರಪಲ್ಗರ್ ಚೌಕದ ಟ್ಯೂಬ್ ನಿಲ್ದಾಣದ ಹೊರಗಿದ್ದ ತಾತ್ಕಾಲಿಕ ಪೊಲೀಸ್ ಬಾಕ್ಸ್ ದುರಸ್ತಿಗೆ ಬಂದ ಹಿನ್ನಲೆಯಲ್ಲಿ ಅಲ್ಲೇ ಕಾಯಂ ಕಟ್ಟಡವನ್ನು ನಿರ‍್ಮಿಸಲು ಯೋಜನೆ ಹಾಕಲಾಗಿತ್ತು. ಸಾರ‍್ವಜನಿಕರ ಆಕ್ಶೇಪಣೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಕಾಯಂ ಕಟ್ಟಡದ ನಿರ‍್ಮಾಣವನ್ನು ಕೈ ಬಿಟ್ಟರು. ಬದಲಿಗೆ ಅಲಂಕಾರಿಕ ದೀಪದ ಕಂಬದ ಕೆಳಬಾಗದಲ್ಲಿ ಒಬ್ಬರು ಕುಳಿತುಕೊಳ್ಳುವಶ್ಟು ಮಾತ್ರ ಸ್ತಳಾವಕಾಶವಿದ್ದ ಜಾಗವನ್ನು ಪೊಲೀಸ್ ಟಾಣೆಯನ್ನಾಗಿ ಪರಿವರ‍್ತಿಸಲಾಯಿತು. ಗಾಳಿ ಮತ್ತು ಬೆಳಕಿಗಾಗಿ ಸುತ್ತಲೂ ಉದ್ದನೆಯ ಸಪೂರ ಕಿಟಕಿಗಳನ್ನು ಇಡಲಾಗಿತ್ತು. ಇದರ ಸ್ತಾಪನೆಯ ಮೂಲ ಉದ್ದೇಶ ಸುತ್ತಮುತ್ತಲಿನ ಆಗುಹೋಗುಗಳನ್ನು ಗಮನಿಸುವುದಾಗಿತ್ತು. ಒಬ್ಬ ಪೊಲೀಸ್ ಆದಿಕಾರಿ ಇದರಲ್ಲಿ ಕುಳಿತು ಇಂದಿನ ಸಿಸಿಟಿವಿಯಂತೆ ಕೆಲಸ ನಿರ‍್ವಹಿಸುತ್ತಿದ್ದರು.

ಕಣ್ಗಾವಲಿಗೆ ಹೇಳಿ ಮಾಡಿಸಿದಂತಹ ಸ್ತಳವಾಗಿತ್ತು

ಈ ಪುಟ್ಟ ಪೊಲೀಸ್ ಟಾಣೆಯ ನಿರ‍್ಮಾಣವಾಗಿದ್ದು 1926ರಲ್ಲಿ. ಟಪಲ್ಗರ್ ಚೌಕ ಲಂಡನ್ನಿನಲ್ಲಿ ನಡೆಯುವ ಬಹುತೇಕ ಪ್ರತಿಬಟನೆಗಳಿಗೆ, ಮುಶ್ಕರಗಳಿಗೆ ಹಾಗೂ ಉಪವಾಸ ಸತ್ಯಾಗ್ರಹಗಳಿಗೆ, ಸರ‍್ಕಾರಿ ವಿರೋದಿಗಳ ಸಬೆಗಳಿಗೆ ಕೇಂದ್ರ ಸ್ತಳ. ಹಾಗಾಗಿ ಈ ಸ್ತಳದ ಮೇಲೆ ಸದಾಕಾಲ ಪೊಲೀಸರ ಕಣ್ಗಾವಲಿರುವುದು ತೀರಾ ಅವಶ್ಯ. ಕಣ್ಗಾವಲಿಗೆ ಹೇಳಿ ಮಾಡಿಸಿದಂತಹ ಸ್ತಳವೇ ಈ ಪುಟ್ಟ ಪೊಲೀಸ್ ಟಾಣೆ. ಯಾವುದಾದರೂ ಅಹಿತಕರ ಗಟನೆ ಸಂಬವಿಸುವ ಮುನ್ಸೂಚನೆ ಸಿಕ್ಕ ಕೂಡಲೇ ತ್ವರಿತವಾಗಿ ಪೊಲೀಸ್ ಬಂದೋಬಸ್ತ್ ಮಾಡಬೇಕಿರುವುದು ಅಗತ್ಯ ಕ್ರಮ. ಇದಕ್ಕಾಗಿ ಲಬ್ಯವಿದ್ದ ಪೊಲೀಸ್ ಸಿಬ್ಬಂದಿಯನ್ನು ಬಲಪಡಿಸಬೇಕು. ಹೆಚ್ಚುವರಿ ಸಿಬ್ಬಂದಿಯನ್ನು ಬೇಗನೇ ಗಟನಾ ಸ್ತಳಕ್ಕೆ ಕರೆಸಲು ಮೇಲದಿಕಾರಿಗಳನ್ನು ಸಂಪರ‍್ಕಿಸಬೇಕಿದ್ದು, ಅದಕ್ಕಾಗಿ ಇದ್ದ ಏಕೈಕ ಮಾದ್ಯಮವೇ ದೂರವಾಣಿ. ತುರ‍್ತು ಸಮಯದಲ್ಲಿ  ಸ್ಕಾಟ್ಲೆಂಡ್ ಯಾರ‍್ಡ್ ಪೊಲೀಸರಿಗೆ ದೂರವಾಣಿಯ ಮೂಲಕ ಕರೆ ಮಾಡುವ ಏರ‍್ಪಾಟು ಕೂಡ ಮಾಡಲಾಗಿತ್ತು. ಈ ದೂರವಾಣಿ ರಿಂಗಣಿಸಿದಾಗ ಟಾಣೆಯ ಮೇಲಿರುವ ಅಲಂಕಾರಿಕ ದೀಪವು ಮಿನುಗುತ್ತಿತ್ತು. ದೀಪದ ಮಿನುಗುವಿಕೆ ಟ್ರಪಲ್ಗಾರ್ ಚೌಕದ ಸುತ್ತ ಮುತ್ತ ಎಲ್ಲಿದ್ದರೂ ಕಾಣುವ ಹಾಗಿತ್ತು. ಮಿನುಗುವ ದೀಪದ ಮೂಲಕ ದೂರವಾಣಿ ಕರೆ ಬಂದಿರುವ ಸಂಕೇತವನ್ನು ಗಸ್ತಿನಲ್ಲಿರುವ ಪೊಲೀಸರು ಗ್ರಹಿಸಿ ಕೂಡಲೇ ಟಾಣೆಗೆ ಹಿಂದಿರುಗುತ್ತ್ತಿದ್ದರು.

ಇಶ್ಟು ಇತಿಹಾಸ ಹೊಂದಿರುವ ಈ ಪುಟ್ಟ ಪೊಲೀಸ್ ಟಾಣೆ ಇಂದು ಪೊರಕೆ, ಬಕೆಟ್ ಗಳನ್ನು ಇಡಲು ಕಪಾಟಿನಂತೆ ಬಳಕೆ ಆಗುತ್ತಿರುವುದು ಅಚ್ಚರಿ!

( ಮಾಹಿತಿ ಸೆಲೆ: fotostrasse.comhistoric-uk.comlondonist.com )

( ಚಿತ್ರ ಸೆಲೆ: wikimedia )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: