ಪತಂಗಗಳು ದೀಪದ ಹತ್ತಿರ ಹೋಗುವುದೇಕೆ?

– ನಾಗರಾಜ್ ಬದ್ರಾ.

ಪತಂದ, ದೀಪ, Moth, Flame

ಪತಂಗಗಳು ಬೆಳಗುತ್ತಿರುವ ಬಲ್ಬ್, ದೀಪ ಅತವಾ ಮೇಣದಬತ್ತಿ ಕಡೆಗೆ ಹಾರಿ ಬರುವುದನ್ನು, ಅವುಗಳ ಸುತ್ತ ಸುತ್ತುವುದನ್ನು ನಾವೆಲ್ಲರೂ ನೋಡಿರುತ್ತೇವೆ. ಪತಂಗಗಳು ಮಾತ್ರವಲ್ಲದೇ ಬೇರೆ ಕೆಲವು ಕೀಟಗಳೂ ಕೂಡ ಹೀಗೆ ದೀಪಗಳಿದ್ದ ಕಡೆಗೆ ನುಗ್ಗುವುದನ್ನು ಕಂಡಿರುತ್ತೇವೆ. ದೀಪದೆಡೆಗಿನ ಈ ಸೆಳೆತವು ಅವುಗಳ ಜೀವಕ್ಕೆ ಅಪಾಯ ಉಂಟು ಮಾಡಬಹುದು ಕೂಡ!. ಹಾಗಿದ್ದರೂ ಪತಂಗಗಳು ಯಾಕೆ ದೀಪದ ಹತ್ತಿರಕ್ಕೆ ಹೋಗುತ್ತವೆ ಎಂಬ ಪ್ರಶ್ನೆ, ಕುತೂಹಲ ಮೂಡುವುದು ಸಹಜವೇ. ಆದರೆ ಈ ಕುತೂಹಲಕ್ಕೆ ಉತ್ತರವು ಸರಳವಿಲ್ಲ. ಯಾಕೆಂದರೆ, ಕೀಟಗಳ ಈ ನಡವಳಿಕೆಗೆ ಹಲವಾರು ಕಾರಣಗಳನ್ನು ಮುಂದಿಡಲಾಗಿದೆ.

ಪತಂಗದ ಹಾರಾಟಕ್ಕೆ ಬೆಳಕು ದಿಕ್ಸೂಚಿ

ಅರಿಮೆಗಾರರ(scientists) ಪ್ರಕಾರ ಪತಂಗಗಳು ಬೆಳಕು ಹಾಗೂ ಬೆಳಕು ಹೊಮ್ಮಿಸುವ ಸಾದನವನ್ನು ನೆಲೆಯಾಗಿರಿಸಿಕೊಂಡು ಹಾರಾಟ ನಡೆಸುತ್ತವೆ. ಇವು ಬೆಳಕನ್ನು ದಿಕ್ಸೂಚಿಯಂತೆ (compass) ಬಳಸುತ್ತವೆ ಎಂದು ಹೇಳಲಾಗುತ್ತದೆ. ಬೆಳಕಿನ ಮೂಲವು ಸೂರ‍್ಯ ಅತವಾ ಚಂದ್ರನಾಗಿದ್ದಾಗ,ಬೆಳಕಿನ ಕದಿರುಗಳು ತುಂಬಾ ದೂರದಿಂದ, ಪರಸ್ಪರ ಸಮಾನಾಂತರವಾಗಿ (parallel) ನೆಲವನ್ನು ತಲುಪುತ್ತವೆ. ಬೆಳಕಿನ ಕಿರಣಗಳಿಗೆ ಸರಿಯಾಗಿ, ಮಾರ‍್ಪಡದ ಕೋನವೊಂದರಲ್ಲಿ (constant angle) ಪತಂಗಗಳು ಮುನ್ನಡೆಯುತ್ತವೆ. ಹೀಗಿದ್ದಾಗ ಅವುಗಳ ಚಲನೆ ಹೆಚ್ಚು ಕಡಿಮೆ ನೇರವಾದ ಗೆರೆಯಲ್ಲಿ ಇರುತ್ತಿದ್ದು, ಕಣ್ಣಿನ ಒಂದು ಬಾಗದಲ್ಲಿ ಸ್ತಿರವಾಗಿ ಬೆಳಕನ್ನು ಪಡೆದುಕೊಳ್ಳುತ್ತವೆ. ಇದರಿಂದ ಪತಂಗಗಳು ದಿಕ್ಕುಗಳನ್ನು ಕಂಡುಹಿಡಿದುಕೊಂಡು ಹಾರಾಟ ನಡೆಸಲು ಸುಳುವಾಗುತ್ತದೆ ಎಂದು ಹೇಳಲಾಗುತ್ತದೆ.

ಆದರೆ ಬೆಳಕಿನ ಮೂಲವು ಹತ್ತಿರದ ಬಲ್ಬ್, ದೀಪ ಅತವಾ ಮೇಣದಬತ್ತಿ  ಆಗಿದ್ದರೆ, ಬೆಳಕಿನ ಕಿರಣಗಳು ಸಮಾನಾಂತರವಾಗಿರುವುದಿಲ್ಲ. ಪತಂಗ ಬೆಳಕನ್ನು ಪಡೆದುಕೊಳ್ಳುವ  ಕೋನ (angle) ಬದಲಾಗುತ್ತಿರುತ್ತದೆ. ಆದ್ದರಿಂದ ಪತಂಗವು ಗೊಂದಲಕ್ಕೀಡಾಗುತ್ತದೆ. ನೇರವಾದ ಗೆರೆಯಲ್ಲಿ ಹಾರಾಟ ನಡೆಸಲು ಹೋಗಿ, ಕಡೆಗೆ ದೀಪಕ್ಕೇ ಅಪ್ಪಳಿಸಿ ಜೀವಕ್ಕೆ ಅಪಾಯ ತಂದುಕೊಳ್ಳುತ್ತದೆ.

ಜೀವಕ್ಕೆ ಕುತ್ತು ಒದಗುವಂತಿದ್ದರೂ ಪತಂಗವೇಕೆ ತಪ್ಪಿಸಿಕೊಳ್ಳುವುದಿಲ್ಲ?

ತನ್ನ ಜೀವಕ್ಕೆ ಅಪಾಯ ಎದುರಾಗುತ್ತಿದ್ದರೂ ಪತಂಗವು ದೀಪದಿಂದ ತಪ್ಪಿಸಿಕೊಳ್ಳಲು ಯಾಕೆ ಪ್ರಯತ್ನಿಸುವುದಿಲ್ಲ? ಎಂಬ ಪ್ರಶ್ನೆ ಮೂಡದೇ ಇರದು. ಮನುಶ್ಯರ ಕಣ್ಣುಗಳಂತೆ ಪತಂಗಗಳ ಕಣ್ಣುಗಳು ಕೂಡ ಬೆಳಕಿನ ಅರಿವುಕಗಳನ್ನು (sensor) ಹೊಂದಿದ್ದು, ಇವು ಕಣ್ಣುಗಳಿಗೆ ಸರಿಯಾದ ಪ್ರಮಾಣದ ಬೆಳಕನ್ನು ಒದಗಿಸುವ ಕೆಲಸ ಮಾಡುತ್ತವೆ. ಕೆಲವೊಂದು ಸಂದರ‍್ಬಗಳಲ್ಲಿ ಹೆಚ್ಚು ಪ್ರಕಾಶಮಾನವಾದ ಬೆಳಕು ನಮ್ಮ ಕಣ್ಣಿನ ಮೇಲೆ ಬಿದ್ದ ಕೂಡಲೇ ನಮಗೇನೂ ಕಾಣುವುದಿಲ್ಲ. ಹಾಗೆಯೇ ಕತ್ತಲೆಯಿಂದ ಒಮ್ಮೆಲೇ ಹೆಚ್ಚು ಬೆಳಕಿನ ಕಡೆಗೆ ಬಂದಾಗ ಇಲ್ಲವೇ ಬೆಳಕಿನಿಂದ ಕತ್ತಲೆಡೆಗೆ ಹೋದಾಗ ಕೂಡ ಇದೇ ರೀತಿಯ ಅನುಬವವಾಗುತ್ತದೆ. ಕುತೂಹಲಕಾರಿ ವಿಶಯವೆಂದರೆ ಪತಂಗಗಳೂ ಕೂಡ ಇಂತದ್ದೇ ಏರ‍್ಪಾಟು ಹೊಂದಿವೆ. ಆದರೆ ಅವು ಬೆಳಕಿನಿಂದ ಕತ್ತಲಿಗೆ ಮತ್ತು ಕತ್ತಲಿನಿಂದ ಬೆಳಕಿಗೆ ಹೊಂದಿಕೊಳ್ಳಲು ನಮಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ತೊಂದರೆಗೀಡಾಗುತ್ತವೆ.

ಪೋಟೊಟ್ಯಾಕ್ಟಿಕ್ ನಡವಳಿಕೆ

ಇನ್ನು ಕೆಲವರ ಪ್ರಕಾರ ಕೀಟಗಳು ಪೋಟೊಟ್ಯಾಕ್ಸಿಸ್ (phototaxis) ಎಂಬ ನಡವಳಿಕೆಯನ್ನು ತೋರುತ್ತವೆ. ಕೀಟಗಳು ಬೆಳಕಿನ ಕಡೆಗೆ ಅತವಾ ಬೆಳಕಿನಿಂದ ದೂರ ಹೋಗುವುದನ್ನು ಪೋಟೊಟ್ಯಾಕ್ಸಿಸ್ ಎಂದು ಹೇಳಲಾಗುತ್ತದೆ. ಕೆಲವು ಕೀಟಗಳು ಕತ್ತಲೆಯಲ್ಲಿ ಬದುಕಲು ಇಶ್ಟಪಡುತ್ತವೆ, ಉದಾಹರಣೆಗೆ ಜಿರಳೆ. ರಾತ್ರಿಯ ಹೊತ್ತಿನಲ್ಲಿ ದೀಪ ಹಾಕಿದ ಕೂಡಲೇ ಜಿರಳೆಗಳು ಓಡಿ ಹೋಗಿ ಕೋಣೆಯ ಮೂಲೆ ಹಾಗೂ ಬಿರುಕುಗಳಲ್ಲಿ ಸೇರಿಕೊಳ್ಳುವುದನ್ನು ಗಮನಿಸಿರಬಹುದು. ಇದು ನೆಗೆಟಿವ್  ಪೋಟೊಟ್ಯಾಕ್ಟಿಕ್ ನಡವಳಿಕೆ. ಇನ್ನು ಕೆಲವು ಕೀಟಗಳು ಬೆಳಕಿನ ಕಡೆಗೆ ಹೋಗುತ್ತವೆ. ಇದು ಪಾಸಿಟಿವ್ ಪೋಟೊಟ್ಯಾಕ್ಟಿಕ್ ನಡವಳಿಕೆ. ಪತಂಗಗಳು ಪಾಸಿಟಿವ್ ಪೋಟೊಟ್ಯಾಕ್ಟಿಕ್ ಗಳಾಗಿದ್ದು, ಬೆಳಕಿನ ಕಡೆಗೆ ಆಕರ‍್ಶಿತವಾಗುತ್ತವೆ.

ಕಡುನೇರಳೆ ಕಿರಣಗಳನ್ನು ಗುರುತಿಸಬಲ್ಲ ಪತಂಗ

ಕಡುನೇರಳೆ(ultraviolet) ಬೆಳಕಿನ ಕಿರಣಗಳು ಮನುಶ್ಯರಿಗೆ ಕಾಣುವುದಿಲ್ಲ. ಕಡುನೇರಳೆ ಬೆಳಕು ಪತಂಗಗಳನ್ನು ತನ್ನತ್ತ ಸೆಳೆಯುತ್ತದೆ. ಹಲವಾರು ಹೂವುಗಳು ಕಡುನೇರಳೆ ಗುರುತುಗಳನ್ನು ಹೊಂದಿದ್ದು, ಈ ಗುರುತುಗಳಿಂದ ಬಂಡುಮುಟ್ಟಿಸುವ(pollination) ಕೆಲಸಕ್ಕಾಗಿ ಕೀಟಗಳನ್ನು ತಮ್ಮತ್ತ ಸೆಳೆಯುತ್ತವೆ. ಕಡುನೇರಳೆ ಕಿರಣಗಳನ್ನು ಗುರುತಿಸಬಲ್ಲ ಪತಂಗದಂತ ಕೀಟಗಳು, ಕಡುನೇರಳೆ ಕಿರಣಗಳನ್ನು ಹೊಮ್ಮಿಸುವ ಬೆಳಕಿನ ಮೂಲವನ್ನು ಹೂವುಗಳೆಂದು ತಪ್ಪಾಗಿ ತಿಳಿದು ಆ ಕಡೆಗೆ ಸಾಗುತ್ತವೆ ಎಂಬ ಮತ್ತೊಂದು ವಾದವನ್ನೂ ಮುಂದಿಡಲಾಗಿದೆ.

ಹೀಗೆ ಹಲವಾರು ವಾದಗಳನ್ನು ಮುಂದಿಡಲಾಗಿದ್ದು, ದೀಪದತ್ತ ಸಾಗುವ ಪತಂಗಗಳ ನಡವಳಿಕೆ ಬಗ್ಗೆ ಸರಿಯಾದ ಉತ್ತರ ಇನ್ನೂ ಸಿಕ್ಕಿಲ್ಲ.

( ಮಾಹಿತಿ ಮತ್ತು ಚಿತ್ರಸೆಲೆ: earthsky.org, minnesota.cbslocal.com, sciencelearn.org.nz, animals.howstuffworks.com )

7 ಅನಿಸಿಕೆಗಳು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.