ಬದುಕು ಹಸಿರಾಗಿರಿಸಲು ಹತ್ತು ಸೂತ್ರಗಳು

– ವೆಂಕಟೇಶ ಚಾಗಿ.

happy and sad, life, ಬದುಕು, ನೋವು-ನಲಿವು, ಸುಕ-ದುಕ್ಕ, ಕಶ್ಟ-ಸುಕ

ಬದುಕು ಹರಿಯುವ ನದಿ, ನಿಂತ ನೀರಲ್ಲ. ಬದುಕು ಪ್ರತಿದಿನವೂ ಹೊಸತನವನ್ನು ಹಂಬಲಿಸುತ್ತದೆ. ಬದುಕಿಗೆ ನೋವು-ನಲಿವುಗಳು ತಪ್ಪಿದ್ದಲ್ಲ. ಹೊಸತನಕ್ಕೆ ಹೊಂದಿಕೊಳ್ಳುವಾಗ ಸುಕ-ದುಕ್ಕಗಳೂ ಸಹಜ. ಬದುಕು ಎಂದಿಗೂ ಸುಕವನ್ನೇ ಬಯಸುವುದಿಲ್ಲ‌, ಕಶ್ಟವನ್ನೂ ಬಯಸುವುದಿಲ್ಲ. ಸುಕದೊಂದಿಗೆ ಕಶ್ಟವೂ ಅದನ್ನು ಹಿಂಬಾಲಿಸಿಕೊಂಡು ಬರುತ್ತದೆ. ಸುಕವನ್ನಶ್ಟೇ ಸ್ವೀಕರಿಸಿ ಕಶ್ಟವನ್ನು ದೂರ ತಳ್ಳಲು ಸಾದ್ಯವೇ ಇಲ್ಲ. ನೋವು-ನಲಿವು ಎರಡನ್ನೂ ಸಮನಾಗಿ ಕಂಡು, ಬದುಕಿ ತೋರಿಸುವುದು ನಮ್ಮ ಕೈಯಲ್ಲಿದೆ.

ಬದುಕನ್ನು ಸದಾ ಹಸಿರಾಗಿರಿಸಲು ಹತ್ತು ಸೂತ್ರಗಳು

 1. ಬದುಕಿನಲ್ಲಿ ಕಶ್ಟ-ಸುಕಗಳು ಸಹಜ ಎಂಬ ಸತ್ಯ ಮೊದಲು ಅರಿತಿರಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಸಿಕೊಳ್ಳಬೇಕು. ಕಶ್ಟಗಳು ಬಂದಾಗ ಕುಗ್ಗದೆ, ಸುಕ ಬಂದಾಗ ಹಿಗ್ಗದೆ ಬದುಕುವುದನ್ನ ಕಲಿಯಬೇಕು.
 2. ಬದುಕಿನಲ್ಲಿ ನಾಳಿನ ಹೊಸತನಕ್ಕೆ ಇಂದು ಶ್ರಮ ಪಡಬೇಕಾಗಿರುವುದು ಅನಿವಾರ‍್ಯ. ಶ್ರಮದಲ್ಲಿಯೂ ಸಂತಸದ ಅನುಬವ ಕಾಣುವಂತಹ ಮನೋಬಾವ ಬೆಳೆಸಿಕೊಳ್ಳಬೇಕು.
 3. ಬದುಕನ್ನು ಹಸಿರಾಗಿಸಿಕೊಂಡವರ ಜೀವನ ನಮಗೆ ನಿದರ‍್ಶನವಾಗಲಿ. ಬದುಕಿನ ಅರ‍್ತವನ್ನು ಕಂಡುಕೊಂಡವರ ನುಡಿಗಳು ನಮ್ಮ ಬದುಕಿಗೆ ದಾರಿದೀಪವಾಗಲಿ. ಅದರೊಂದಿಗೆ ಅವರು ಅನುಬವಿಸಿದ ಕಶ್ಟಗಳೂ ನಮ್ಮ ಗಮನಕ್ಕೆ ಬರಲಿ.
 4. ಬದುಕಿನಲ್ಲಿ ಬರುವುದೆಲ್ಲವನ್ನೂ ಸಂತೋಶದಿಂದ ಸ್ವೀಕರಿಸಿ, ಪಾಲಿಗೆ ಬಂದದ್ದು ಪಂಚಾಮ್ರುತ ಎಂದುಕೊಳ್ಳಬೇಕು. ಹರಿಯುವ ನದಿಗೆ ಮೈದಾನವೂ ಎದುರಾಗಬಹುದು, ಬೆಟ್ಟ ಗುಡ್ಡಗಳೂ ಎದುರಾಗಬಹುದು. ಆದರೆ ನದಿ ಎಂದಿಗೂ ಹಿಂದಕ್ಕೆ ಹರಿಯುವುದಿಲ್ಲ. ಮುನ್ನಡೆಯುವುದೊಂದೇ ಅದರ ಗುರಿ. ಇದೇ ಗುರಿ ನಮ್ಮ ಬದುಕಿಗಿರಬೇಕು.
 5. ಬದುಕಿನಲ್ಲಿ ಕೆಟ್ಟದ್ದನ್ನು ಆದಶ್ಟು ದೂರವಿಡಬೇಕು. ಕೆಟ್ಟ ಸ್ನೇಹ, ಕೆಟ್ಟ ಚಟ, ಕೆಟ್ಟ ವಿಚಾರ… ಹೀಗೆ ಕೆಟ್ಟ ವಿಶಯಗಳಿಂದ ದೂರವಿದ್ದಾಗ ಬದುಕು ಹಸನಾಗಿರುತ್ತದೆ.
 6. ಸದಾ ಒಳಿತನ್ನೇ ಬಯಸುವ ಮನಸ್ಸು ಬದುಕಿಗಿರಬೇಕು. ಒಳಿತನ್ನೇ ಹರಡಿಸಿ, ಒಳಿತನ್ನೇ ಚಿಂತಿಸಿ. ಒಳಿತನ್ನು ಗೌರವಿಸಿ, ಒಳಿತಿಗಾಗಿ ಶ್ರಮಿಸಿ. ಒಳಿತಿನ ಸುಗಂದವನ್ನು ಎಲ್ಲೆಡೆಯೂ ಪಸರಿಸಿ.
 7. ಬದುಕಿನಲ್ಲಿ ಹಿಂದೆ ನಡೆದ ತಪ್ಪುಗಳ ಬಗ್ಗೆ ಎಚ್ಚರವಿರಲಿ. ಮರಳಿ ಅದೇ ತಪ್ಪುಗಳನ್ನು ಮಾಡಿ ಪಶ್ಚಾತ್ತಾಪ ಪಡದಿರಿ. ಬೇರೆಯವರಿಗೂ ಅವರ ತಪ್ಪುಗಳನ್ನು ಅವರ ಅರಿವಿಗೆ ತನ್ನಿ. ಇದರಿಂದ ಮುಂದಿನ ದಿನಗಳಲ್ಲಿ ಬದುಕಿನಲ್ಲಿ ಎದುರಾಗಬಹುದಾದ ಹಲವಾರು ತಪ್ಪುಗಳನ್ನು ತಡೆಯಬಹುದು.
 8. ಬದುಕಿನ ಕುಶಿಗಳನ್ನು ಗುರುತಿಸಿಟ್ಟುಕೊಳ್ಳಿ. ಸಮಯ ಸಿಕ್ಕಾಗ ಮನನ ಮಾಡಿಕೊಳ್ಳಿ. ಇವು ಮುಂದಿನ ಬದುಕಿಗೆ ಚೈತನ್ಯ ನೀಡಬಹುದು, ಹಾಗೆಯೇ ಇವು ದಾರಿದೀಪಗಳು ಕೂಡ.
 9. ಇತರರ ಕಶ್ಟದಲ್ಲಿ ನೆರವಾಗಿ. ಸಹಾಯ-ಸಹಕಾರದ ಮನೋಬಾವ ತುಂಬಾ ಒಳ್ಳೆಯದು. ಇದು ಮನಸ್ಸಿಗೆ ನೆಮ್ಮದಿ ತಂದುಕೊಡುತ್ತದೆ. ಅಲ್ಲದೆ ಸಂಬಂದಗಳನ್ನು ಗಟ್ಟಿಗೊಳಿಸುತ್ತದೆ. ಮುಂದೊಂದು ದಿನ ಅದೇ ಸಲಹೆ-ಸೂಚನೆ, ಸಹಕಾರ ನಿಮಗೂ ಬೇಕಾಗಬಹುದು.
 10. ಬದುಕಿಗೆ ಕಾಲಕಾಲಕ್ಕೆ ಏನೇನು ಕೊಡಬೇಕೋ ಅದನ್ನು ಕೊಟ್ಟುಬಿಡಿ. ಬಾಲ್ಯ, ಯೌವನ, ಮುಪ್ಪು ಹೀಗೆ ಆಯಾ ಹಂತಗಳಲ್ಲಿ ಸಿಗಬೇಕಾದ್ದನ್ನು ತಪ್ಪಿಸದಿರಿ. ಮುಂದೊಂದು ದಿನ ಅದೇ ಬದುಕಲ್ಲಿ ಕೊರಗಾಗಬಾರದು, ಅಲ್ಲವೇ?

ಒಮ್ಮೆ ಕಳೆದುಹೋದ ಬದುಕು ಮತ್ತೆ ತರುವಂತಹದಲ್ಲ; ಮತ್ತೆ ಬರುವಂತಹದೂ ಅಲ್ಲ. ಕಳೆದುಹೋದ ಬದುಕಿಗೆ ಹಿಂದಿರುಗಲೂ ಸಾದ್ಯವಿಲ್ಲ. ಅದನ್ನು ಇರುವಶ್ಟು ದಿನ ಅನುಬವಿಸಬೇಕಶ್ಟೆ. ಅದು ಹೇಗೆ ಎಂಬುದು ನಮ್ಮ ಕೈಯಲ್ಲಿದೆ. ಬದುಕಿ, ಬದುಕಲು ಬಿಡಿ, ಬದುಕನ್ನು ಹಸಿರಾಗಿಸಿ.

(ಚಿತ್ರ ಸೆಲೆ: wikimedia.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

 1. C P Nagaraja says:

  ಮತ್ತೆ ಮತ್ತೆ ಓದಿದಂತೆಲ್ಲಾ ಮನಸ್ಸಿಗೆ ಹೊಸ ಬಗೆಯ ಅರಿವನ್ನು ಮೂಡಿಸುವಂತಿದೆ ಈ ಬರಹ.

ಅನಿಸಿಕೆ ಬರೆಯಿರಿ: