ವಿಶ್ವ ದೇಹ ಚಿತ್ರ ಕಲೆ ಉತ್ಸವ

– ಕೆ.ವಿ. ಶಶಿದರ.

Body Painting, ದೇಹ ಚಿತ್ರ ಕಲೆ, ಬಾಡಿ ಪೇಂಟಿಂಗ್

ಚಿತ್ರ ಬಿಡಿಸುವ ಕ್ಯಾನ್ವಾಸ್ ನಂತೆ ಬಣ್ಣ ಬಣ್ಣದ ಚಿತ್ರ ಮೂಡಿಸಲು ಮಾನವನ ದೇಹವನ್ನು ಕಲಾವಿದರು ಹಿಂದಿನಿಂದಲೂ ಬಳಸಿರುವುದು ದಾಕಲಾತಿಗಳಿಂದ ಕಂಡು ಬರುತ್ತದೆ. ಕೈ ಮತ್ತು ಕಾಲುಗಳಿಗೆ ಮೆಹಂದಿ ಹಾಕುವುದು, ಟ್ಯಾಟೂ ಹಾಕಿಸಿಕೊಳ್ಳುವುದು ಇದರ ಪ್ರತಿರೂಪವೇ ಹೌದು. ನಮ್ಮ ದೇಶದಲ್ಲೂ ಇಂತಹ ಆಚರಣೆಯನ್ನ ಕಾಣಬಹುದು. ವಿಶೇಶವಾಗಿ ಹೆಣ್ಣಿನ ಸೌಂದರ‍್ಯ ಹೆಚ್ಚಿಸಲು ಈ ರೀತಿಯ ಅಲಂಕಾರ ಮಾಡುತ್ತಿದ್ದುದು ಇದೆ. ವಿವಾಹ, ಸಾಂಸ್ಕ್ರುತಿಕ ಸಮಾರಂಬಗಳಲ್ಲಿ ಈ ಕಲೆ ಅತಿ ಹೆಚ್ಚು ಉಪಯೋಗವಾಗುವುದನ್ನು ಕಾಣಬಹುದು.

ಜಗತ್ತಿನಲ್ಲಿ ಅತ್ಯಂತ ಚಿತ್ರ ವಿಚಿತ್ರ ಎನ್ನಿಸುವ ಆಚರಣೆಗಳಿವೆ. ಅದರಲ್ಲಿ ದೇಹದ ಮೇಲೆ ಬಣ್ಣ ಬಳಿದುಕೊಳ್ಳುವ ಚಿತ್ರ ಮೂಡಿಸಿಕೊಳ್ಳುವ ಬಾಡಿ ಪೇಂಟಿಂಗ್ ಆಚರಣೆಯೂ ಒಂದು. ಇಂತಹ ಒಂದು ಆಚರಣೆ ಆಸ್ಟ್ರಿಯಾದಲ್ಲಿ ನಡೆಯುತ್ತದೆ. 1998ರಿಂದ ಈ ವೈವಿದ್ಯಮಯ ಆಚರಣೆ ನಡೆದುಕೊಂಡು ಬಂದಿದೆ. ಇದು ದೇಹದ ಮೇಲೆ ರಚಿಸುವ ಚಿತ್ರಕಲೆಯನ್ನು ಮರುವ್ಯಾಕ್ಯಾನಿಸಲು ನೆರವಾಗಿದೆ. ವಿಶ್ವ ದೇಹ ಚಿತ್ರಕಲೆ (World Body Paining Festival) ಉತ್ಸವದಲ್ಲಿ ಐವತ್ತಕ್ಕೂ ಹೆಚ್ಚು ದೇಶದ ಕಲಾವಿದರುಗಳು ಸೇರುತ್ತಾರೆ. ಅಶ್ಟೇ ಅಲ್ಲ ಕಲಾವಿದರಿಗೆ ಕ್ಯಾನ್ವಾಸ್ ಆಗಿ ಕೆಲಸ ನಿರ‍್ವಹಿಸುವ ರೂಪದರ‍್ಶಿಗಳಿಗೆ ಈ ಆಚರಣೆಯಲ್ಲಿ ಅಯೋಜಕರು ಆತಿತ್ಯ ವಹಿಸುತ್ತಾರೆ. ಇವರುಗಳೆಲ್ಲಾ ದೇಹದ ಮೇಲೆ ಚಿತ್ರಕಲೆಯನ್ನು ಅರಳಿಸುವುದರಲ್ಲಿ ಪರಿಣಿತರು. ದೇಹದ ಮೇಲೆ ರಚನೆಗೊಂಡ ಚಿತ್ರಕಲೆ ಮನರಂಜನೆ ನೀಡುವುದರ ಜೊತೆಗೆ, ಕಲಾವಿದರ ಸ್ರುಜನ ಶೀಲತೆಯನ್ನು ಎತ್ತಿ ತೋರಿಸುತ್ತದೆ.

ಇದು ಕೇವಲ ಆಚರಣೆಯಶ್ಟೇ ಅಲ್ಲದೇ ಒಂದು ಸ್ಪರ‍್ದೆಯಾಗಿಯೂ ನಡೆಯುತ್ತದೆ. ಕಲಾವಿದರು ಇಲ್ಲಿ ಹಲವು ಬಗೆಬಗಯೆ ಸ್ಪರ‍್ದೆಗಳಲ್ಲಿ ಬಾಗವಹಿಸುತ್ತಾರೆ. ಬ್ರಶ್/ಸ್ಪಾಂಜ್, ಏರ‍್‌ ಬ್ರಶದ, ಕ್ರಿಯೆಟೀವ್ ಮೇಕಪ್, ಸ್ಪೆಶಲ್ ಎಪೆಕ್ಟ್ ಮೇಕಪ್, ಪೇಸ್ ಪೇಂಟಿಂಗ್ ಗುಂಪುಗಳಲ್ಲಿ ಪ್ರಶಸ್ತಿಗಾಗಿ ಸೆಣಸಾಟ ನಡೆಯುತ್ತದೆ. ಈ ಸ್ಪರ‍್ದೆಯಲ್ಲಿ ಪುರುಶ ಮತ್ತು ಸ್ತ್ರೀ ರೂಪದರ‍್ಶಿಗಳನ್ನು ಆಯ್ಕೆ ಮಾಡಿಕೊಳ್ಳುವ ಅದಿಕಾರ ಕಲಾವಿದರದ್ದು. ಆಯ್ಕೆಯಾದ ರೂಪದರ‍್ಶಿಗಳಿಗೆ ಹಲವಾರು ನಿಯಮಗಳಿರುತ್ತವೆ. ಇಲ್ಲಿ ರೂಪದರ‍್ಶಿಗಳಾಗಿ ಕೆಲಸ ನಿರ‍್ವಹಿಸುವ ಬಹುಪಾಲು ರೂಪದರ‍್ಶಿಗಳಿಗೆ ಯಾವುದೇ ಬತ್ಯೆ ಇರುವುದಿಲ್ಲ. ಇಲ್ಲಿ ಬಾಗವಹಿಸುವುದರಿಂದಲೇ ವಿಶ್ವದಲ್ಲೆಡೆ ಅವರ ಬೇಡಿಕೆ ಹೆಚ್ಚಾಗುತ್ತದೆ, ಕ್ಯಾತಿ ಮತ್ತು ಪ್ರಸಿದ್ದಿಯನ್ನು ಇದು ತಂದುಕೊಡುತ್ತದೆ ಎಂಬ ನಂಬಿಕೆ ಅವರುಗಳು ಈ ವಿಲಕ್ಶಣ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಹುರುಪು ನೀಡುತ್ತದೆ. ಸ್ವಯಂ ಪ್ರೇರಣೆ ಇದಕ್ಕೆ ಮೂಲ ಕಾರಣ.

ಜೀವಂತ ಕ್ಯಾನ್ವಾಸ್ ಮೇಲಿನ ಕಲೆ ತಾಳ್ಮೆ, ಕೌಶಲ್ಯ ಮತ್ತು ಹೆಚ್ಚಿನ ಏಕಾಗ್ರತೆಯ ಅಗತ್ಯತೆಯನ್ನು ಬೇಡುತ್ತದೆ. ದೇಹದ ಮೇಲೆ ಬರೆದ ಚಿತ್ರಗಳನ್ನು ಹೊತ್ತ ರೂಪದರ‍್ಶಿಗಳು ನೆರೆದಿದ್ದ ಅಬಿಮಾನಿಗಳು ಮುಂದೆ, ತಮ್ಮ ವಿಶಿಶ್ಟ ಶೈಲಿಯ ನಡಿಗೆಯಲ್ಲಿ, ಕಲೆಯ ಪ್ರದರ‍್ಶನವನ್ನು ಮಾಡುತ್ತಾರೆ. ಸ್ಪರ‍್ದೆಯ ಕೊನೆಯಲ್ಲಿ ಮೂರು ಅತ್ಯುತ್ತಮ ಚಿತ್ರಗಳಿಗೆ ಹಾಗೂ ಮೂರು ವಿಜೇತ ಕಲಾವಿದರಿಗೆ ದೊಡ್ಡ ಮೊತ್ತದ ಬಹುಮಾನದ ಹಣ ಲಬ್ಯವಿದೆ. ಅತ್ಯತ್ತಮ ಕೋನದಲ್ಲಿ ರೂಪದರ‍್ಶಿಗಳ ವಿವಿದ ಬಂಗಿಯನ್ನು ತಮ್ಮ ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿಯಲು ಪೊಟೋಗ್ರಾಪರ‍್‌ಗಳು ಪಡುವ ಹರಸಾಹಸ ತಮಾಶೆಯಂತೆ ಕಾಣುತ್ತದೆ.

2019ರಲ್ಲಿ ನಡೆದ 22ನೇ ದೇಹ ಚಿತ್ರ ಕಲಾ ಸ್ಪರ‍್ದೆಯಲ್ಲಿ ಹಲವಾರು ದೇಶಗಳಿಂದ ನೂರಾರು ಕಲಾವಿದರುಗಳು ಬಾಗವಹಿಸಿದ್ದರು. ಮೂರು ದಿನಗಳ ಕಾಲ ನಡೆಯುವ ಈ ಸ್ಪರ‍್ದೆಯನ್ನು ನೋಡಲು ಪ್ರತಿದಿನ ಸರಿಸುಮಾರು ಇಪ್ಪತ್ತೈದರಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಜನ ಬೇಟಿ ನೀಡುತ್ತಾರೆ. ಇದರಲ್ಲಿ ಹವ್ಯಾಸಿ ಕಲಾವಿದರೂ ಸಹ ಬಾಗವಹಿಸಿ ತಮ್ಮದೇ ಆದ ಚಾಪನ್ನು ಒತ್ತಿ, ಅಸಾಮಾನ್ಯ ಕಲಾಕ್ರುತಿಗಳನ್ನು ಹಾಗೂ ಹಲವು ಮೇರು ಕ್ರುತಿಗಳನ್ನು ಪ್ರದರ‍್ಶಿಸುವ ಮೂಲಕ ವಿಶ್ವದ ಗಮನ ಸೆಳೆಯಲು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ.

ಆಸ್ಟ್ರಿಯಾದಲ್ಲಿ ಈ ಉತ್ಸವ ಪ್ರಾರಂಬವಾಗಿದ್ದು ಸುತ್ತಾಡುಗರನ್ನು ಸೆಳೆದು ಪ್ರವ್ರಾಸೋದ್ಯಮವನ್ನು ಬೆಳೆಸುವ ಮೂಲ ಉದ್ದೇಶದಿಂದ. ಇಂದು ಬ್ರುಹದಾಕಾರವಾಗಿ ಬೆಳೆದಿರುವ ಇದು, ಇಪ್ಪತ್ತೊಂದು ವರ‍್ಶಗಳ ಹಿಂದೆ ಶುರುವಾಯಿತು. ಮೊದಲ ಸಲ ಈ ಸ್ಪರ‍್ದೆ ನಡೆದಾಗ ದಕ್ಶಿಣ ಆಸ್ಟ್ರಿಯಾದಲ್ಲಿ ಅತ್ಯಂತ ದೊಡ್ಡ ಹೆಸರನ್ನು ಮಾಡಿತು ಎಂದು ಹೇಳಲಾಗುತ್ತದೆ. ಕಿಮ್ ಕಾರ‍್ದಶಿಯಾನ್. ಪ್ಯಾರಿಸ್ ಹಿಲ್ಟನ್, ಡೆಮಿ ಮೂರ್ ಮುಂತಾದ ಅಂತರರಾಶ್ಟ್ರೀಯ ಪ್ರಕ್ಯಾತರು ದೇಹ ಕಲೆಗೆ ತಮ್ಮ ದೇಹವನ್ನು ಕ್ಯಾನ್ವಾಸ್ ಆಗಿ ನೀಡಿದ್ದಾರೆ.

(ಮಾಹಿತಿ ಮತ್ತು ಚಿತ್ರ ಸೆಲೆ: youthincmag.com, everfest.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: